ಗದಗ: 500 ಕೋಟಿ ರೂ. ಹಗರಣ ಆರೋಪ: ಶುದ್ಧ ಸುಳ್ಳು ಎಂದ ಮಾಜಿ ಸಚಿವ ಸಿಸಿ ಪಾಟೀಲ್
ಬಂಡಾಯದ ನಾಡಿನಲ್ಲಿ ರಾಜಕೀಯ ಯುದ್ಧ ಬಲು ಜೋರಾಗಿದೆ. ಮಾಜಿ ಸಚಿವರ ನಡುವೆ ಹಗರಣದ ಜಂಗಿ ಕುಸ್ತಿ ನಡೆದಿದೆ. ಮಾಜಿ ಸಚಿವ ಯಾವಗಲ್ ಲೋಕೋಪಯೋಗಿ ಇಲಾಖೆಯಲ್ಲಿ 500 ಕೋಟಿ ರೂ. ಹಗರಣದ ಆರೋಪಕ್ಕೆ ಸಿಸಿ ಪಾಟೀಲ್ ಕೆಂಡಾಮಂಡವಾಗಿದ್ದು, ಆರೋಪವನ್ನು ತಳ್ಳಿ ಹಾಕಿದ್ದಾರೆ. ಅಷ್ಟೇ ಅಲ್ಲ ಯಾವಗಲ್ ಕೂಡ ಸರ್ಕಾರದ ಹಣ ಲೂಟಿ ಮಾಡಿದ್ದಾರೆಂದು ಶಾಕ್ ನೀಡಿದ್ದಾರೆ.
ಗದಗ, ಅಕ್ಟೋಬರ್ 12: ಬಂಡಾಯದ ನಾಡಿನಲ್ಲಿ ರಾಜಕೀಯ ಯುದ್ಧ ಬಲು ಜೋರಾಗಿದೆ. ಮಾಜಿ ಸಚಿವರ ನಡುವೆ ಹಗರಣದ ಜಂಗಿ ಕುಸ್ತಿ ನಡೆದಿದೆ. ಮಾಜಿ ಸಚಿವ ಯಾವಗಲ್ (BR Yavagal) ಲೋಕೋಪಯೋಗಿ ಇಲಾಖೆಯಲ್ಲಿ 500 ಕೋಟಿ ರೂ. ಹಗರಣದ ಆರೋಪಕ್ಕೆ ಸಿಸಿ ಪಾಟೀಲ್ ಕೆಂಡಾಮಂಡವಾಗಿದ್ದಾರೆ. ಈಗಾಗಲೇ ಸರ್ಕಾರ 500 ಕೋಟಿ ಹಗರಣ ಆರೋಪ ಹಿನ್ನಲೆಯಲ್ಲಿ ತನಿಖೆ ಆರಂಭಿಸಿದೆ. ಮಾಜಿ ಸಚಿವ ಬಿಆರ್ ಯಾವಗಲ್ ಮಾಡಿದ ಆರೋಪ ಶುದ್ಧ ಸುಳ್ಳು, ಸತತ ಸೋಲಿನ ಹತಾಶೆಯಿಂದ ಆರೋಪ ಮಾಡಿದ್ದಾರೆ ಅಂತ ಕಿಡಿಕಾರಿದ್ದಾರೆ. ತನಿಖೆಗೆ ನನ್ನ ಸಂಪೂರ್ಣ ಸಹಕಾರವಿದೆ ಅಂತ ಹೇಳಿದ್ದಾರೆ. ಅಷ್ಟೇ ಅಲ್ಲ ಯಾವಗಲ್ ಕೂಡ ಸರ್ಕಾರದ ಹಣ ಲೂಟಿ ಮಾಡಿದ್ದಾರೆ ಅಂತ ಶಾಕ್ ನೀಡಿದ್ದಾರೆ.
ಅಕ್ಟೋಬರ್ 9ರಂದು ಬಿಆರ್ ಯಾವಗಲ್ ಸುದ್ಧಿಗೋಷ್ಠಿ ಮಾಡಿ ಗಂಭೀರ ಆರೋಪ ಮಾಡಿದ್ದರು. ಇದಕ್ಕೂ ಮೊದಲು ಸಿಎಂ ಸಿದ್ದರಾಮಯ್ಯಗೆ ಪತ್ರ ಬರೆದು ತನಿಖೆಗೆ ಆಗ್ರಹಿಸಿದ್ದರು. ಆದರೆ ಈ ಎಲ್ಲ ಆರೋಪ ಶುದ್ಧ ಸುಳ್ಳು ಎಂದ ಪಿಡ್ಲ್ಯೂಡಿ ಮಾಜಿ ಸಚಿವ ಸಿ.ಸಿ ಪಾಟೀಲ್ ಹೇಳಿದ್ದಾರೆ. ಹೀಗಾಗಿ ಮಾಜಿ ಸಚಿವರ ಮಾತಿನ ಸಮರ ಒಂದೆಡೆಯಾದರೆ ಮತ್ತೊಂದೆಡೆ ತನಿಖಾ ತಂಡ ನರಗುಂದ ಕ್ಷೇತ್ರದಲ್ಲಿ ಭರ್ಜರಿ ತನಿಖೆ ಆರಂಭಿಸಿದೆ.
ಮಾಜಿ ಸಚಿವ ಬಿ ಆರ್ ಯಾವಗಲ್ ಅಭಿವೃದ್ಧಿ ವಿರೋಧಿ ನಾಯಕ ಅಂತ ವಾಗ್ದಾಳಿ ಮಾಡಿದ್ದಾರೆ. ಸತತ ಸೋಲಿನ ಕಹಿ ಅನುಭವದಿಂದ ಹತಾಶೆಯಾಗಿ ಆರೋಪ ಮಾಡಿದ್ದಾರೆ. ನನ್ನ ವಿರುದ್ಧ ನಾಲ್ಕು ಬಾರಿ ಸೋಲು ಕಂಡಿದ್ದಾರೆ. 2013 ರಲ್ಲಿ ನನ್ನ ಮೇಲೆ ಗುಂಡಿನ ದಾಳಿ ಆದಾಗ ಅಪಪ್ರಚಾರ ಮಾಡಿ ಗೆಲವು ಸಾಧಿಸಿದ್ದಾರೆ. ಕಾಂಗ್ರೆಸ್ ಗಾಳಿಯಲ್ಲೂ ಸೋಲು ಕಂಡಿದ್ದಾರೆ. ಆ ಹತಾಶೆ ಮನೋಭಾವನೆಯಿಂದ ಸರ್ಕಾರಕ್ಕೆ ದೂರು ನೀಡಿದ್ದಾರೆ. ಇದೆಲ್ಲಾ ಸುಳ್ಳು ಆರೋಪ ನನ್ನ ಅವಧಿಯಲ್ಲಿ ನರಗುಂದ ಕ್ಷೇತ್ರಕ್ಕೆ 1800 ಕೋಟಿ ರೂ. ಅನುದಾನ ತಂದಿದ್ದೇನೆ. ಒಂದು ಕಪ್ಪು ಚುಕ್ಕೆ ಇಲ್ಲದಂತೆ ಕೆಲಸ ಮಾಡಿದ್ದಾನೆ. ಯಾವಗಲ್ ಅವರ ಅವಧಿಯಲ್ಲಿ ಏನೂ ಮಾಡಿದ್ದಾರೆ ಅಂತ ಪ್ರಶ್ನೆ ಮಾಡಿದ್ದಾರೆ. ಭೂತದ ಬಾಯಿಯಲ್ಲಿ ಭಗ್ವದ್ಗೀತೆ ಎಂಬಂತೆ. ನರಗುಂದದ ಭೂತ ಬಂದು ಪತ್ರಿಕಾಗೋಷ್ಠಿ ಮಾಡಿ ಹೋಗಿದೆ ಅಂತ ಯಾವಗಲ್ ಅವರಿಗೆ ಛೇಡಿಸಿದ್ದಾರೆ.
ಇದನ್ನೂ ಓದಿ: ಗದಗ ನಗರಸಭೆ ಕಚೇರಿಯಲ್ಲೇ ಕೈ ಕೈ ಮಿಲಾಯಿಸಿದ ಕಾಂಗ್ರೆಸ್-ಬಿಜೆಪಿ ಸದಸ್ಯರು
ಸಿಎಂ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದು ಕಾಮಗಾರಿ ಬಂದ ಮಾಡಿಸಿ ಗುತ್ತಿಗೆದಾರರ ಬಿಲ್ ಪೆಂಡಿಂಗ್ ಇಡಿಸುವ ಕೆಲಸ ಯಾವಗಲ್ ಮಾಡಿದ್ದಾರೆ. ಗುತ್ತಿಗೆದಾರರ ಬಿಲ್ ಏಕೆ ತಡೆ ಹಿಡಿಯುವಂತೆ ಹೇಳಿದ್ದೀರಿ ಗುತ್ತಿಗೆದಾರರ ಸಭೆ ಯಾಕೆ ಮಾಡಿದ್ದರು ಅಂತ ಪ್ರಶ್ನೆ ಮಾಡಿದ್ದಾರೆ. ನಾನು ಕೂಡ ಸಿಎಂ ಸಿದ್ದರಾಮಯ್ಯಗೆ ಪತ್ರ ಬರೆದಿದ್ದೇನೆ. ಹಗರಣ ಆರೋಪದ ಬಗ್ಗೆ ಸಂಪೂರ್ಣ ತನಿಖೆ ಆಗಲಿ. ನನ್ನ ಸಂಪೂರ್ಣ ಸಹಕಾರ ಇದೆ. ಆದ್ರೆ ಗುತ್ತಿಗೆದಾರರ ಬಿಲ್ ಪಾವತಿ ಮಾಡುವಂತೆ ಮನವಿಮಾಡಿದ್ದೇನೆ ಎಂದರು.
ನರಗುಂದ ಆಯಿಲ್ ಮಿಲ್ನಲ್ಲಿ ಗೌಪ್ಯವಾಗಿ ಗುತ್ತಿಗೆದಾರರನ್ನು ಕರೆಸಿ ಬಿ.ಆರ್. ಯಾವಗಲ್ ಸಭೆ ಮಾಡುತ್ತಿದ್ದಾರೆ. ಅವರ ಕುಟುಂಬಸ್ಥರು ಎಲ್ಲ ಇಲಾಖೆ ಮೇಲೆ ಪ್ರಭಾವ ಬೀರುತ್ತಿದ್ದಾರೆ. ಮರಳು, ಗುತ್ತಿಗೆದಾರರ ಮೇಲೆ ಪ್ರಭಾವ ಬೀರಿದ್ದಾರೆ ಎಂದು ಆರೋಪಿಸಿದರು. ಎರಡು ದಿನಗಳ ಹಿಂದೆ ಮಾಜಿ ಸಚಿವ ಬಿ ಆರ್ ಯಾವಗಲ್, ನರಗುಂದ ಕ್ಷೇತ್ರದಲ್ಲಿ ಪಿಡ್ಲ್ಯೂಡಿ ಇಲಾಖೆಯಿಂದ 500 ಕೋಟಿ ರೂ. ಹಗರಣವಾಗಿದೆ ಅಂತ ಆರೋಪಿಸಿದರು.
ಅರ್ಹತೆ ಇಲ್ಲದ ಗುತ್ತಿಗೆದಾರರಿಗೆ ಕೋಟ್ಯಾಂತರ ಮೊತ್ತದ ಟೆಂಡರ್ ನೀಡಿದ ಆರೋಪ ಸಿಸಿ ಪಾಟೀಲರ ವಿರುದ್ಧ ಕೇಳಿ ಬಂದಿದೆ. ನಕಲಿ ವರ್ಕ್ ಡನ್ ಸರ್ಟಿಫಿಕೇಟ್ ನೀಡಿ ಅರ್ಹತೆ ಇಲ್ಲದ ಗುತ್ತಿಗೆದಾರರು ಟೆಂಡರ್ ಪಡೆದಿದ್ದಾರೆ. ಕಡಿಮೆ ಮೊತ್ತಕ್ಕೆ ಟೆಂಡರ್ ಹಾಕಿದವರನ್ನು ಬಿಟ್ಟು ಹೆಚ್ಚಿನ ದರಕ್ಕೆ ಹಾಕಿದವರಿಗೆ ಟೆಂಡರ್ ನೀಡಿದ್ದಾರೆ. ಈ ಎಲ್ಲ ಕಾಮಗಾರಿಗಳು ಸಿ ಸಿ ಪಾಟೀಲ್ ತಮಗೆ ಬೇಕಾದವರಿಗೆ ಕೊಡಿಸಿದ್ದಾರೆ. ಒಟ್ಟು 500 ಕೋಟಿ ರೂ. ಹಗರಣ ಮಾಡಿದ್ದಾರೆ ಅಂತ ಬಿಆರ್ ಯಾವಗಲ್ ಸಚಿವ ಸಿಸಿ ಪಾಟೀಲ್ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.
ಇದನ್ನೂ ಓದಿ: ಕಾಂಗ್ರೆಸ್ ಸೇರ್ಪಡೆಯಾದ ಬಿಜೆಪಿ ಮಾಜಿ ಶಾಸಕ: ಕೇಸರಿ ಪಡೆಯ ಒಂದು ತಂಡ ಸಿನಿಮೀಯ ರೀತಿಯಲ್ಲಿ ಮಾತುಕತೆ: ಡಿಕೆಶಿ ಬಾಂಬ್
ಮಲಪ್ರಭಾ ಅಚ್ಚುಕಟ್ಟು ಪ್ರದೇಶ ಅಧ್ಯಕ್ಷರಾಗಿದ್ದ ಬಿ ಆರ್ ಯಾವಗಲ್ ಅಂದು ಕಾಮಗಾರಿಯಲ್ಲಿ 7 ಕೋಟಿ ರೂ. ಅಕ್ರಮ ಎಸಗಿದವರು ಯಾರು ಎಂದು ಮಾತಿನ ವಾಗ್ಭಾಣ ಬಿಟ್ಟರು. ಧಾರವಾಡ ಕೆಸಿಸಿ ಬ್ಯಾಂಕ್ ಹಾಳಾಗಲು ಬಿ.ಆರ್. ಯಾವಗಲ್ ಪಾತ್ರ ದೊಡ್ಡದಿದೆ. ಕೆಸಿಸಿ ಬ್ಯಾಂಕ್ ನಿಂದ ನರಗುಂದ ಆಯಿಲ್ ಮಿಲ್ ಗೆ ನೂರಾರು ಕೋಟಿ ರೂ. ಸಾಲ ಮಂಜೂರು ಮಾಡಿಕೊಂಡಿದ್ದಾರೆ. ಅದರಲ್ಲೂ ಅಕ್ರಮ ಎಸಗಿದ್ದಾರೆ. ಮುಂದಿನ ಅಧಿವೇಶನದಲ್ಲಿ ಈ ಬಗ್ಗೆ ಪ್ರಶ್ನೆ ಮಾಡುತ್ತೇನೆ ಎಂದರು.
ಮಾಜಿ ಸಚಿವರ ಹಗರಣ ಜಂಗಿ ಕುಸ್ತಿ ಭರ್ಜರಿಯಾಗಿ ನಡೆದಿದೆ. ಇತ್ತ ಸರ್ಕಾರ ತನಿಖೆಗೆ ಆದೇಶ ನೀಡಿದ ಹಿನ್ನಲೆಯಲ್ಲಿ ಬೆಂಗಳೂರ PWD ಗುಣ ಭರವಸೆ ವಲಯ ಮುಖ್ಯ ಇಂಜಿನಿಯರ್ ನೇತೃತ್ವದಲ್ಲಿ ತನಿಖಾ ತಂಡ ನಗರುಂದ ಕ್ಷೇತ್ರದಲ್ಲಿ ಇಂಚಿಂಚು ತನಿಖೆ ನಡೆಸಿದೆ. 30 ದಿನಗಳಲ್ಲಿ ವರದಿ ನೀಡುವಂತೆ ಸರ್ಕಾರ ಆದೇಶ ಮಾಡಿದೆ. ತನಿಖೆ ತಂಡ ವರದಿ ನೀಡಿದ ಬಳಿಕವೇ ಪಿಡ್ಲ್ಯೂಡಿ ಇಲಾಖೆಯಲ್ಲಿ 500 ಕೋಟಿ ರೂ. ನಡೆದಿದೆ ಎನ್ನಲಾದ ಹಗರಣ ಸತ್ಯವೋ ಸುಳ್ಳು ಅನ್ನೋದು ಗೋತ್ತಾಗಲಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.