AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮನೆಯಲ್ಲಿ ಆಳೆತ್ತರ ಬೆಳೆದು ನಿಂತ ಮಕ್ಕಳ ಎದುರು ಪತ್ನಿ ಜೊತೆ ಜಗಳ, ಸಿಟ್ಟು ಬಂದು ಅಪ್ಪನನ್ನು ಕೊಚ್ಚಿ ಕೊಂದ ಮಗ

ತಂದೆಯನ್ನು ಕೊಂದ ಪಾಪಪ್ರಜ್ಞೆ ಕಾಡಿತ್ತೋ ಏನೋ ಸಹೋದರಿಯನ್ನು ಅಪ್ಪಿಕೊಂಡು ಆರೋಪಿ ಮಗ ಕಣ್ಣೀರು ಹಾಕಿದ. ಇನ್ನು ತಾಯಿ, ಸಹೋದರಿಯರು ಪುತ್ರನಿಗೆ ಧೈರ್ಯ ತುಂಬಿದ ಘಟನೆಯೂ ನಡೆಯಿತು. ನೀನು ಉದ್ದೇಶಪೂರ್ವಕ ಕೊಂದಿಲ್ಲ. ಧೈರ್ಯ ತಂದುಕೋ ಎಂದು ಹೇಳಿದ ಪ್ರಸಂಗವೂ ನಡೆಯಿತು.

ಮನೆಯಲ್ಲಿ ಆಳೆತ್ತರ ಬೆಳೆದು ನಿಂತ ಮಕ್ಕಳ ಎದುರು ಪತ್ನಿ ಜೊತೆ ಜಗಳ, ಸಿಟ್ಟು ಬಂದು ಅಪ್ಪನನ್ನು ಕೊಚ್ಚಿ ಕೊಂದ ಮಗ
ಸಿಟ್ಟು ಬಂದು ಅಪ್ಪನನ್ನು ಕೊಚ್ಚಿ ಕೊಂದ ಮಗ
ಸಾಧು ಶ್ರೀನಾಥ್​
|

Updated on:Feb 22, 2023 | 6:15 PM

Share

ಅದು ಬಡತದಲ್ಲೂ ಪ್ರೀತಿ, ಮರ್ಯಾದೆಯಿಂದ ಬಾಳಿದ ಕುಟುಂಬ. ಮಕ್ಕಳು ಮದುವೆ ವಯಸ್ಸಿಗೆ ಬಂದಿದ್ದಾರೆ. ಆದ್ರೆ, ಮನೆ ಯಜಮಾನ ಕುಡಿತಕ್ಕೆ ದಾಸನಾಗಿ ಹಾದಿ ಬೀದಿಯಲ್ಲಿ ಪತ್ನಿ, ಮಕ್ಕಳ ಜೊತೆ ಜಗಳ, ಬೈಯೋದು ಮಾಡ್ತಾಯಿದ್ದ.ಈ ವಿಷಯ ಕುಟುಂಬದಲ್ಲಿ ಕಲಹ ಶುರುವಾಗುವಂತೆ ಮಾಡಿತ್ತು. ಪತಿ ಕುಡಿದು ಬಂದು ನಿತ್ಯ ಜಗಳ ಮಾಡ್ತಾಯಿದ್ದ. ಮಕ್ಕಳು ಮದುವೆಗೆ ಬಂದಿದ್ದಾರೆ ಈ ರೀತಿ ಊರಲ್ಲಿ ಮರ್ಯಾದೆ ತೆಗೆಯಬೇಡ ಅಂತ ಪತ್ನಿ, ಮಕ್ಕಳು ಹೇಳಿದ್ದರು. ಆದರೂ ತಂದೆ ತನ್ನ ಚಾಳಿ ಬಿಟ್ಟಿರಲಿಲ್ಲ. ಆದ್ರೆ, ಕೊನೆಗೆ ಆಗಿದ್ದು ಘನಘೋರ ಘಟನೆ. ಆಗಿದ್ದಾದ್ರೂ ಏನೂ ಅನ್ನೋ ಸ್ಟೋರಿ ಇಲ್ಲಿದೆ. ಗದಗ (gadag) ಜಿಲ್ಲೆಯ ನರಗುಂದ (nargund) ತಾಲೂಕಿನ ಹದ್ಲಿ ಗ್ರಾಮದಲ್ಲಿ ತಿಂಗಳ ಹಿಂದೆ ಕಿರಾತಕ ಶಿಕ್ಷಕನೊಬ್ಬ ಓರ್ವ ಶಿಕ್ಷಕಿ ಹಾಗೂ ವಿದ್ಯಾರ್ಥಿಯನ್ನು ಭೀಕರವಾಗಿ ಕೊಂದು ಅಟ್ಟಹಾಸ ಮೆರೆದಿದ್ದ. ಪುಟ್ಟ ಮಗುವಿನ ಕಾಲು ಹಿಡಿದು ಗೋಡೆಗೆ ಹೊಡೆದು ಮೊದಲ ಮಹಡಿಯಿಂದ ಕೆಳಗೆ ಎಸೆದು ಅಟ್ಟಹಾಸ ಮೆರೆದು ಬಳಿಕ ಶಿಕ್ಷಕಿಯನ್ನು ಮಾರಕಾಸ್ತ್ರದಿಂದ ಶಾಲೆಯ ಆವರಣದಲ್ಲೇ ರಕ್ತದೋಕಳಿ ಮಾಡಿದ್ದ. ಇದು ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಿತ್ತು. ಆದ್ರೆ, ಈಗ ಇದೇ ಗ್ರಾಮದಲ್ಲಿ ಮತ್ತೊಂದು ಭೀಕರ ಹತ್ಯೆಯಾಗಿದೆ. ಇಲ್ಲಿ ಪುತ್ರನೇ (son) ತನ್ನ ಹೆತ್ತ ತಂದೆಯನ್ನು (father) ಕೊಡಲಿಯಿಂದ ಕೊಚ್ಚಿ ಹಾಕಿದ್ದಾನೆ.

ಅದು ಫೆಬ್ರವರಿ 16 ರಾತ್ರಿ 10.30ರ ಸಮಯ. ತಂದೆ ಮಲಕಸಾಬ್ ಕುಡಿದು ಬಂದು ಪತ್ನಿ ಮಾಬುಬೀ ಜೊತೆ ಜಗಳ ಮಾಡ್ತಾಯಿದ್ದನಂತೆ. ಹೊಲಕ್ಕೆ ಹೋಗಬೇಡ ಅಂದಿದ್ದೆ. ಯಾಕೇ ಹೋಗಿದ್ದಿ? ಅಂತಾ ಪತ್ನಿಯ ಜೊತೆ ಜಗಳ ತೆಗೆದಿದ್ದಾನೆ. ಕುಡಿದು ಅವಾಚ್ಯ ಶಬ್ದಗಳಿಂದ ಬೈದಿದ್ದಾನೆ.

ಆಗ ಮಗ ಮೌಲಾಸಾಬ್ ಬಂದು ರಸ್ತೆಯಲ್ಲಿ ನಿಂತು ಬೈಬೇಡ ಮನೆಯಲ್ಲಿ ಮದುವೆ ವಯಸ್ಸಿಗೆ ಬಂದವರಿದ್ದಾರೆ. ಮರ್ಯಾದೆ ತೆಗೆಯಬೇಡ ಅಂತ ಹೇಳಿದ್ದಾರೆ. ಆಗ ಅಪ್ಪ ಹೊಲಸು ಬೈಗುಳ ಬೈದಿದ್ದಕ್ಕೆ ಮಗನಿಗೆ ಸಿಟ್ಟು ಬಂದು ಈ ರೀತಿ ಮಾಡಿದ್ದಾನೆ. ಮಗ ದುಡಕಬಾರದಿತ್ತು. ದುಡುಕಿ ಬಿಟ್ಟಿದ್ದಾನೆ. ನಮ್ಮ ಟೈಮೇ ಸುಮಾರ ಐತಿ ಸರ್ ಅಂತ ಪತ್ನಿ ಇದೀಗ ಕಣ್ಣೀರು ಹಾಕ್ತಾಯಿದ್ದಾಳೆ.

ಮನೆಯಲ್ಲಿ ಆಳೆತ್ತರ ಮಕ್ಕಳು ಬೆಳೆದು ನಿಂತಿದ್ದಾರೆ. ಮಕ್ಕಳ ಮದುವೆ ಬಗ್ಗೆ ವಿಚಾರ ಮಾಡಬೇಕಿದ್ದ ಮಲಕಸಾಬ್ ಕುಡಿದು ಬಂದು ನಿತ್ಯ ಪತ್ನಿ, ಮಕ್ಕಳ ಜೊತೆಗೆ ಜಗಳ ಆಡ್ತಾಯಿದ್ದನಂತೆ. ಫೆಬ್ರುವರಿ 16 ರಂದು ತಂದೆ ಮಲಕಸಾಬ್ ನಡುರಸ್ತೆಯಲ್ಲಿ ನಿಂತು ಪತ್ನಿಯನ್ನು ಬೈಯುತ್ತಿದ್ದ. ಆಗ ಪುತ್ರ ಮೌಲಾಸಾಬ್ನ ಪಿತ್ತ ನೆತ್ತಿಗೆರಿದೆ.

ಹೀಗಾಗಿ ಮನೆಯಲ್ಲಿದ್ದ ಕೊಡಲಿ ತಂದವನೇ ತಂದೆಯ ತಲೆಗೆ ಬಲವಾಗಿ ಹೊಡೆದಿದ್ದಾನೆ. ಬಲವಾದ ಹೊಡೆತಕ್ಕೆ ನೆಲಕ್ಕೆ ಉರುಳಿದ ತಂದೆ ಮಲಕಸಾಬ್ ರಕ್ತದ ಮಡುವಿನಲ್ಲಿ ಬಿದ್ದು ಒದ್ದಾಡಿದ್ದಾನೆ. ತಕ್ಷಣ ಕುಟುಂಬಸ್ಥರು ಆಸ್ಪತ್ರೆಗೆ ಸಾಗಿಸಿದ್ದಾರೆ. ಆದ್ರೆ, ಮಾರ್ಗಮಧ್ಯೆ ಪ್ರಾಣ ಬಿಟ್ಟಿದ್ದಾನೆ.

ನಿತ್ಯವೂ ತಂದೆ ಕುಡಿದು ಜಗಳ ಮಾಡೋದು ಇಡೀ ಕುಟುಂಬಕ್ಕೆ ಸಾಕು ಸಾಕಾಗಿ ಹೋಗಿತ್ತು. ಆದ್ರೆ, ತಂದೆಯನ್ನೇ ಕೊಂದು ಹಾಕುವಷ್ಟು ಕೋಪಗೊಂಡ ಪುತ್ರ ಭೀಕರ ಹತ್ಯೆ ಮಾಡಿದ್ದು, ಇಡೀ ಗ್ರಾಮವೇ ಬೆಚ್ಚಿಬೀಳಿಸಿದೆ. ತಂದೆ ಮಲಕಸಾಬ್ ಮಸಣ ಸೇರಿದ್ರೆ, ಇತ್ತ ಪುತ್ರ ಮೌಲಾಸಾಬ್ ಜೈಲು ಪಾಲಾಗಿದ್ದು, ಇಡೀ ಕುಟುಂಬ ಕಣ್ಣೀರು ಹಾಕ್ತಾ ಇದೆ. ಆರೋಪಿ ಸಹೋದರನ್ನು ಸಹೋದರಿಯರು ತಬ್ಬಿಕೊಂಡು ಕಣ್ಣೀರು ಹಾಕೋ ದೃಶ್ಯಗಳು ಮನಕಲುಕುವಂತಿತ್ತು.

ಫೆಬ್ರುವರಿ 18 ರಂದು ಆರೋಪಿಯನ್ನು ಹದ್ಲಿ ಗ್ರಾಮಕ್ಕೆ ಸ್ಥಳ ಮಹಜರಿಗೆ ಕರೆ ತಂದಿದ್ದಾರೆ. ಆಗ ತಂದೆಯನ್ನು ಕೊಂದ ಆರೋಪಿ ಮೌಲಾಸಾಬ್ ನನ್ನು ಸಹೋದರಿಯರು ತಬ್ಬಿಕೊಂಡು ಬಿಕ್ಕಿ ಬಿಕ್ಕಿ ಅತ್ತಿದ್ದಾರೆ. ಆರೋಪಿ ಕೂಡ ಸಹೋದರಿಯರನ್ನು ತಬ್ಬಿಕೊಂಡು ಕಣ್ಣೀರು ಹಾಕಿದ್ದಾನೆ. ಮಗನ ತಪ್ಪಿಲ್ಲ ಬಿಟ್ಟುಬಿಡಿ ಅಂತ ತಾಯಿ ಪೊಲೀಸ್ರ ಕಾಲಿಬಿದ್ದು ಬೇಡಿಕೊಳ್ತಾಯಿದ್ದಾಳೆ.

ಪಾಪಿ ಪುತ್ರ ಗ್ರಾಮದ ನಡುರಸ್ತೆಯಲ್ಲೇ ತಂದೆಯನ್ನು ಕೊಂದು ಹಾಕಿದ್ದಾನೆ. ನಿನ್ನೆ ಜಮೀನಿಗೆ ಹೋಗಬೇಡ ಅಂತ ಮಲಕಸಾಬ್ ಪತ್ನಿಗೆ ಹೇಳಿದ್ದನಂತೆ. ಅದ್ರೆ, ಬಡತನ ದುಡಿಯದಿದ್ರೆ ಊಟಕ್ಕೂ ಕಷ್ಟ. ಹೀಗಾಗಿ ಪತ್ನಿ ಮಾಬುಬೀ ಹೋಗಿದ್ದಾರೆ. ಹೀಗಾಗಿ ಪತ್ನಿ ಸಂಜೆ ಮನೆಗೆ ಬರುತ್ತಿದ್ದಂತೆ ಪತಿ ಮಲಕಸಾಬ್ ಪತ್ನಿ ಜೊತೆಗೆ ಜಗಳವಾಡಿದ್ದಾನೆ. ರಸ್ತೆಯಲ್ಲಿ ನಿಂತು ಪತ್ನಿಗೆ ಅವಾಚ್ಯ ಶಬ್ದಗಳಿಗೆ ಬೈದಿದ್ದಾನೆ.

ಇದು ಪುತ್ರರಿಗೆ ಸಹಿಸಿಕೊಳ್ಳಲು ಆಗಿಲ್ಲ. ಆಗ ಪುತ್ರ ಮೌಲಾಸಾಬ್ ನಡುರಸ್ತೆಯಲ್ಲಿ ಜಗಳ ಬೇಡ ಮರ್ಯಾದೆ ಪ್ರಶ್ನೆ ತಂದೆಗೆ ಹೇಳಿದ್ದಾನೆ. ಆಗ ಇದ್ಯಾವುದಕ್ಕೂ ಕಿವಿಗೊಡದ ತಂದೆ ಜಗಳ ಮಾಡಿದ್ದಾನೆ. ಆಗ ಸಿಟ್ಟಿಗೆದ್ದ ಪುತ್ರ ಮನೆಯಲ್ಲಿದ್ದ ಕೊಡಲಿಯಿಂದ ತಂದೆಯ ತಲೆಗೆ ಬಲವಾಗಿ ಹೊಡೆದು ಕೊಂದು ಹಾಕಿದ್ದಾನೆ.

ಮಲಕಸಾಬ್ ಗೆ ಮೂವರು ಗಂಡು ಮಕ್ಕಳು, ಇಬ್ಬರು ಹೆಣ್ಣು ಮಕ್ಕಳು, ಇಬ್ಬರು ಹೆಣ್ಣು ಮಕ್ಕಳ ಮದುವೆ ಮಾಡಿಕೊಟ್ಟಿದ್ದಾನೆ. ಮೂವರು ಗಂಡು ಮಕ್ಕಳಲ್ಲಿ ಮೌಲಾಸಾಬ್ ಎರಡನೇ ಪುತ್ರ. ಆರೋಪಿ ಮೌಲಾಸಾಬ್ ನ್ನು ಪೊಲೀಸ್ರು ಹದ್ಲಿ ಗ್ರಾಮಕ್ಕೆ ಸ್ಥಳ ಮಹಜರಿಗೆ ಕರೆತಂದಿದ್ರು. ಆಗ ಪುತ್ರನ ನೋಡಿ ತಾಯಿಯ ಆಕ್ರಂದನ ಮುಗಿಲುಮುಟ್ಟಿತ್ತು.

ಸಹೋದರಿಯನ್ನು ತಬ್ಬಿಕೊಂಡು ಆರೋಪಿ ಮೌಲಾಸಾಬ್ ಕಣ್ಣೀರು ಹಾಕಿದ್ದ. ತಂದೆಯನ್ನು ಕೊಂದ ಪಾಪಪ್ರಜ್ಞೆ ಕಾಡಿತ್ತೋ ಗೊತ್ತಿಲ್ಲ ಸಹೋದರಿಯನ್ನು ಅಪ್ಪಿಕೊಂಡು ಕಣ್ಣೀರು ಹಾಕಿದ. ಇನ್ನು ತಾಯಿ, ಸಹೋದರಿಯರು ಪುತ್ರನಿಗೆ ಧೈರ್ಯ ತುಂಬಿದ ಘಟನೆಯೂ ನಡೆಯಿತು. ನೀನು ಉದ್ದೇಶಪೂರ್ವಕ ಕೊಂದಿಲ್ಲ. ಹೆದರಬೇಡ ಅಂತ ಸಹೋದನಿಗೆ ಧೈರ್ಯ ಹೇಳಿದ ಪ್ರಸಂಗವೂ ನಡೆಯಿತು.

ತಂದೆ ನಿತ್ಯ ಕುಡಿದು ಬಂದು ನೀಡುತ್ತಿದ್ದ ಕಿರುಕುಳ ಕುಟುಂಬಸ್ಥರಿಗೆ ಸಾಕಾಗಿ ಹೋಗಿತ್ತು. ಆದ್ರೆ, ಈ ಕೊಲೆ ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ. ತಿಂಗಳ ಹಿಂದೆಯೇ ಶಾಲೆಯಲ್ಲಿ ಶಿಕ್ಷಕಿ ಹಾಗೂ ಮಗುವನ್ನು ಕೊಂದ ಸುದ್ದಿ ಗ್ರಾಮಸ್ಥರಲ್ಲಿ ಮನಸ್ಸಿಲ್ಲಿದೆ. ಈ ನಡುವೆ ನಡುರಸ್ತೆಯಲ್ಲಿ ತಂದೆಯ ಭೀಕರ ಕೊಲೆ ಗ್ರಾಮಸ್ಥರ ಕೋಪಕ್ಕೆ ಕಾರಣವಾಗಿದೆ.

ಗಂಡ ಹೆಂಡತಿ ಹಾಗೂ ಮಕ್ಕಳ ಜಗಳ ತಂದೆಯ ಕೊಲೆಯಲ್ಲಿ ಅಂತ್ಯವಾಗಿದೆ. ಕುಡಿದ ಅಮಲಿನಲ್ಲಿ ತಂದೆ ಜಗಳ ಮಾಡಿದ್ದಾನೆ. ಆದ್ರೆ, ಒಳ್ಳೆಯ ಮನುಷ್ಯ. ಹೆತ್ತ ತಂದೆಯನ್ನೇ ನಡುರಸ್ತೆಯಲ್ಲೀ ಈ ರೀತಿ ಹತ್ಯೆ ಮಾಡಿದ್ದು ಸರಿಯಲ್ಲ ಅಂತ ಗ್ರಾಮಸ್ಥರು ಕಿಡಿಕಾರಿದ್ದಾರೆ. ಅದೇನೆ ಇರಲಿ ಕ್ಷಣ ಮಾತ್ರದ ಸಿಟ್ಟು ತಂದೆಯನ್ನೇ ಭೀಕರ ಕೊಲೆ ಮಾಡುವಂತೆ ಮಾಡಿದ್ದು ಮಾತ್ರ ವಿಪರ್ಯಾಸ.

ವರದಿ: ಸಂಜೀವ ಪಾಂಡ್ರೆ, ಟಿವಿ 9, ಗದಗ

Published On - 4:42 pm, Wed, 22 February 23