ಅರೇ ತಿಂಗಳಲ್ಲಿ ಗದಗ ಡಿಸಿ ಗೋವಿಂದರೆಡ್ಡಿ ವರ್ಗಾವಣೆ: ಪ್ರಾಮಾಣಿಕತೆಗೆ ವರ್ಗಾವಣೆ ಶಿಕ್ಷೆಯ ಬಗ್ಗೆ ಚರ್ಚೆ

ಗದಗ ಜಿಲ್ಲಾಧಿಕಾರಿಗಳ ಹಠಾತ್ ವರ್ಗಾವಣೆ ಜಿಲ್ಲೆಯಲ್ಲಿ ಚರ್ಚೆಗೆ ಗ್ರಾಸವಾಗಿದೆ. ಯಾವುದೇ ಪೋಸ್ಟಿಂಗ್ ನೀಡದೆ ಡಿಸಿ ಗೋವಿಂದರೆಡ್ಡಿ ವರ್ಗಾವಣೆ ಮಾಡಲಾಗಿದ್ದು, ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಿದ್ದಕ್ಕೆ ಈ ಶಿಕ್ಷೆ ನೀಡಲಾಯಿತೇ ಎಂದು ಗದಗದಲ್ಲಿ ಗುಸುಗುಸು ಕೇಳಿಬರುತ್ತಿದೆ. ಸದ್ಯ ನೂತನ ಜಿಲ್ಲಾಧಿಕಾರಿಯಾಗಿ ಸಿಎನ್ ಶ್ರೀಧರ ಅವರನ್ನು ನೇಮಕ ಮಾಡಲಾಗಿದೆ.

ಅರೇ ತಿಂಗಳಲ್ಲಿ ಗದಗ ಡಿಸಿ ಗೋವಿಂದರೆಡ್ಡಿ ವರ್ಗಾವಣೆ: ಪ್ರಾಮಾಣಿಕತೆಗೆ ವರ್ಗಾವಣೆ ಶಿಕ್ಷೆಯ ಬಗ್ಗೆ ಚರ್ಚೆ
ಗೋವಿಂದರೆಡ್ಡಿ
Edited By:

Updated on: Jan 08, 2025 | 10:21 AM

ಗದಗ, ಜನವರಿ 8: ಗದಗ ಜಿಲ್ಲೆಯಲ್ಲಿ ಕೇವಲ ಆರು ತಿಂಗಳ ಹಿಂದಷ್ಟೇ ಅಧಿಕಾರ ವಹಿಸಿಕೊಂಡಿದ್ದ ಜಿಲ್ಲಾಧಿಕಾರಿ ಗೋವಿಂದರೆಡ್ಡಿ ಅವರನ್ನ ದಿಢೀರ್ ವರ್ಗಾವಣೆ ಮಾಡಿ ಸರ್ಕಾರ ಆದೇಶ ಮಾಡಿದೆ. ಆರು ತಿಂಗಳಲ್ಲಿ ಗದಗ ಜಿಲ್ಲಾಧಿಕಾರಿ ಗೋವಿಂದರೆಡ್ಡಿ ವರ್ಗಾವಣೆಗೊಂಡಿದ್ದು, ನೂತನ ಜಿಲ್ಲಾಧಿಕಾರಿಯನ್ನಾಗಿ ಸಿಎನ್ ಶ್ರೀಧರ ಅವರನ್ನು ನೇಮಕಗೊಳಿಸಿ ರಾಜ್ಯ ಸರ್ಕಾರ ಆದೇಶಿಸಿದೆ.

2024 ರ ಜೂನ್ 6 ರಂದು ಗೋವಿಂದರೆಡ್ಡಿ ಅವರು ಗದಗ ಜಿಲ್ಲಾಧಿಕಾರಿಯಾಗಿ‌ ಅಧಿಕಾರ ವಹಿಸಿದ್ದರು. ಆದರೆ ಮಂಗಳವಾರ ಸಂಜೆಯಷ್ಟೇ ಅವರನ್ನು ಬೇರೆ ಯಾವುದೇ ಹುದ್ದೆಗೆ ನೇಮಕಗೊಳಿಸದೇ ರಾಜ್ಯ ಸರ್ಕಾರ ವರ್ಗಾವಣೆಗೊಳಿಸಿದೆ. ಇನ್ನು ಜಿಲ್ಲಾಧಿಕಾರಿ ಇಷ್ಟು ಕಡಿಮೆ ಅವಧಿಯಲ್ಲಿ ವರ್ಗಾವಣೆಗೊಂಡಿದ್ದು ಸಾಕಷ್ಟು ಪ್ರಶ್ನೆಗಳನ್ನು ಹುಟ್ಟು ಹಾಕುವಂತೆ ಮಾಡಿದೆ.

ಜಿಡ್ಡು ಹಿಡಿದ ನಗರಸಭೆ ಆಡಳಿತಕ್ಕೆ ಬಿಸಿ

ಗದಗ-ಬೆಟಗೇರಿ ನಗರಸಭೆ ಆಡಳಿತ ಹದಗೆಟ್ಟು ಹೋಗಿತ್ತು. ಡಿಸಿ ಗೋವಿಂದರೆಡ್ಡಿ ಅವರು ಆಡಳಿತಾಧಿಕಾರಿಯಾಗಿ ನೇಮಕವಾದ ಬಳಿಕ ಸಾಕಷ್ಟು ಸುಧಾರಣೆ ತಂದಿದ್ದಾರೆ. ಏಜೆಂಟ್​ಗಳ ಹಾವಳಿಗೆ ಬ್ರೇಕ್ ಹಾಕಿ ಸಾರ್ವಜನಿಕರಿಗೆ ಸಾಕಷ್ಟು ಅನುಕೂಲ ಆಗುವ ಕೆಲಸ ಮಾಡಿದ್ದಾರೆ.

ಹತ್ತಾರು ವರ್ಷಗಳಿಂದ ಠಿಕಾಣಿ ಹೂಡಿದ ಕೆಲ ಸಿಬ್ಬಂದಿಗಳು ತೆರಿಗೆ ಸಂಗ್ರಹ ಮಾಡದೇ ನಿರ್ಲಕ್ಷ್ಯ ತೋರಿದ್ದರು. ಅಂಥ ಸೋಮಾರಿ ಸಿಬ್ಬಂದಿಗಳನ್ನು ಅಮಾನತು ಮಾಡುವ ಮೂಲಕ ಬಿಸಿ ಮುಟ್ಟಿಸಿದ್ದಾರೆ. ಈ ಮೂಲಕ ಹಿಂದೆಂದೂ ಸಂಗ್ರಹ ಆಗದ ನಗರಸಭೆ ಟ್ಯಾಕ್ಸ್ ದಾಖಲೆ‌ ಪ್ರಮಾಣದಲ್ಲಿ ಸಂಗ್ರಹ ಮಾಡಿಸುವ ಮೂಲಕ ನಗರಸಭೆಗೆ ಆರ್ಥಿಕ ಬಲ ತಂದು ಕೊಟ್ಟಿದ್ದಾರೆ.

ಒತ್ತಡ, ಪ್ರಭಾವಕ್ಕೆ ಸೊಪ್ಪು ಹಾಕದ ಡಿಸಿ

ಯಾವುದೇ ಕೆಲಸ ಇದ್ದರೂ ಕಾನೂನು ಚೌಕಟ್ಟಿನಲ್ಲಿ ಇದ್ದರೆ ಮಾತ್ರ ಅಸ್ತು ಎನ್ನುತ್ತಿದ್ದರು. ಯಾರ ಮಾತಿಗೂ ಅಷ್ಟು‌ ಸಲೀಸಾಗಿ ಸೊಪ್ಪು ಹಾಕುತ್ತಿರಲಿಲ್ಲ. ಪ್ರಭಾವಿ ಜನಪ್ರತಿನಿಧಿಗಳು ಏನೇ ಹೇಳಿದರೂ ತಮ್ಮ ಅಧಿಕಾರದ ಚೌಕಟ್ಟನ್ನು ಮೀರಿ ಯಾವುದೇ ಕೆಲಸಕ್ಕೆ ಮನಸ್ಸು ಮಾಡುತ್ತಿರಲಿಲ್ಲ. ಇದೇ ಕಾರಣಕ್ಕೆ ಅವರನ್ನ ಇಷ್ಟು ಬೇಗ ಜಿಲ್ಲೆಯಿಂದ ಎತ್ತಂಗಡಿ ಮಾಡಿರಬಹುದು ಎನ್ನುವ ಗುಸುಗುಸು ಜಿಲ್ಲೆಯಲ್ಲಿ ಕೇಳಿಬರುತ್ತಿದೆ.

ಇದನ್ನೂ ಓದಿ: ಬೆಂಗಳೂರು ಸೇರಿ ವಿವಿಧೆಡೆ ಲೋಕಾಯುಕ್ತ ದಾಳಿ: ಬೆಳ್ಳಂಬೆಳಗ್ಗೆಯೇ ಭ್ರಷ್ಟರಿಗೆ ಬಿಸಿ ಮುಟ್ಟಿಸಿದ ಲೋಕಾ

ಅದೇನೆ ಇರಲಿ, ಯಾವುದೇ ಪೋಸ್ಟಿಂಗ್ ನೀಡದೇ ಏಕಾಏಕಿ ಜಿಲ್ಲಾಧಿಕಾರಿ ವರ್ಗಾವಣೆಯಾಗಿರುವದು ಸಾಕಷ್ಟು ಅಚ್ಚರಿ ತಂದಿದ್ದು ಸುಳ್ಳಲ್ಲ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:18 am, Wed, 8 January 25