Gadag News: ಮುಸ್ಲಿಮರ ಮನೆಯಲ್ಲಿ ಸ್ವರೂಪಾನಂದ ಭಾರತಿ ಸ್ವಾಮೀಜಿಗೆ ಪಾದಪೂಜೆ; ಗಮನ ಸೆಳೆದ ನಡೆ
ಕರ್ನಾಟಕದ ಸಹಜ ಬದುಕಾಗಿರುವ ಸಹಬಾಳ್ವೆಯ ಉದಾಹರಣೆಗೆ ಗದಗ ನಗರ ಸಾಕ್ಷಿಯಾಗಿದೆ.
ಗದಗ: ಸಹಬಾಳ್ವೆ ಕರ್ನಾಟಕದ ಸಹಜ ಸಂಸ್ಕೃತಿ. ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್ ಸಮುದಾಯಗಳಿಗೆ ಸೇರಿದವರು ಕರ್ನಾಟಕದ ಹಲವು ಹಳ್ಳಿ-ಪಟ್ಟಣಗಳಲ್ಲಿ ಕಂಡು ಬರುವ ಸಾಮಾನ್ಯ ದೃಶ್ಯ. ಇತ್ತೀಚೆಗೆ ರಾಜ್ಯ ವಿಧಾನಸಭಾ ಚುನಾವಣೆ ಹತ್ತಿರವಾದಂತೆ ಕೋಮು ಸಾಮರಸ್ಯ ಕದಡುವ ಅಪಾಯ ಕಂಡುಬಂದಿದೆ. ಹಿಜಾಬ್ ವಿವಾದದ ನಂತರ ಸಾಲುಸಾಲಾಗಿ ಇಂಥ ಸುದ್ದಿಯೇ ಮಾಧ್ಯಮಗಳಲ್ಲಿಯೂ ಪ್ರಸ್ತಾಪವಾಗುತ್ತಿತ್ತು. ಆದರೆ ಇದೀಗ ಕರ್ನಾಟಕದ ಸಹಜ ಬದುಕಾಗಿರುವ ಸಹಬಾಳ್ವೆಯ ಉದಾಹರಣೆಗೆ ಗದಗ ನಗರ ಸಾಕ್ಷಿಯಾಗಿದೆ.
ನಗರದ ಹುಡ್ಕೊ ಕಾಲೊನಿಯ ಸಿಕಂದರ್ ಬಡೆಖಾನ್ ಕುಟುಂಬದ ಸದಸ್ಯರು ಧಾರವಾಡ ಜಿಲ್ಲೆಯ ಕ್ಯಾರಕೊಪ್ಪದ ಓಂಕಾರ ಆಶ್ರಮದ ಸ್ವರೂಪಾನಾಂದ ಭಾರತಿ ಸ್ವಾಮೀಜಿಗೆ ಪಾದಪೂಜೆ ನೆರವೇರಿಸಿದ್ದಾರೆ. ಪಾದಪೂಜೆಯ ನಂತರ ಸ್ವಾಮಿಗಳು ಮತ್ತು ಭಕ್ತರು ‘ಓಂ ನಮ ಶಿವಾಯ’ ಮಂತ್ರ ಪಠಿಸಿದರು. ಗದಗ ಜಿಲ್ಲೆಯಲ್ಲಿ ಸ್ವರೂಪಾನಾಂದ ಸ್ವಾಮೀಜಿಗೆ ಸಾಕಷ್ಟು ಭಕ್ತರು ನಡೆದುಕೊಳ್ಳುತ್ತಾರೆ. ನಿವೃತ್ತ ಪ್ರಾಧ್ಯಾಪಕರಾದ ಸಿಕಂದರ್ ಬಡೆಖಾನ್ ಸಹ ಹಲವು ವರ್ಷಗಳಿಂದ ಶ್ರೀಗಳ ಭಕ್ತರು. ಪಾದಪೂಜೆಯ ನಂತರ ಸ್ವಾಮೀಜಿ ಬಡೆಖಾನ್ ಅವರ ಮನೆಯಲ್ಲಿಯೇ ಪ್ರಸಾದವನ್ನೂ ಸ್ವೀಕರಿಸಿದರು.
ಶೃಂಗೇರಿ ಸ್ವಾಮೀಜಿಗೆ ಮುಸ್ಲಿಂ ಭಕ್ತನ ಗೌರವ
ಶೃಂಗೇರಿ ಶಾರದಾ ಪೀಠದ ಕಿರಿಯ ಶ್ರೀಗಳಾದ ವಿಧುಶೇಖರ್ ಭಾರತೀ ಸ್ವಾಮೀಜಿ ಅವರು ಕರ್ನಾಟಕ, ತೆಲಂಗಾಣ ಮತ್ತು ಆಂಧ್ರ ಪ್ರದೇಶಗಳ ವಿಜಯ ಯಾತ್ರೆ ಮುಗಿಸಿ ಕ್ಷೇತ್ರಕ್ಕೆ ಹಿಂದಿರುಗುವ ಸಂದರ್ಭದಲ್ಲಿ ಬೇಲೂರಿನ ವ್ಯಕ್ತಿಯೊಬ್ಬರು ಸ್ವಾಮೀಜಿಗೆ ಫಲ ಸಮರ್ಪಿಸಿದ್ದು ಈ ಹಿಂದೆ ವೈರಲ್ ಆಗಿತ್ತು. ಅತ್ಯಂತ ಸಂತೋಷದಿಂದ ಸ್ವಾಮೀಜಿ ಫಲ ಸ್ವೀಕರಿಸಿ, ಮುಸ್ಲಿಂ ಭಕ್ತನಿಗೆ ಫಲ-ಮಂತ್ರಾಕ್ಷತೆ ಕೊಟ್ಟು ಆಶೀರ್ವದಿಸಿದ್ದರು.
ಬೇಲೂರಿನ ಚನ್ನಕೇಶವ ರಥೋತ್ಸವಕ್ಕೂ ಮುನ್ನ ಕುರಾನ್ನ ಕೆಲ ಸಾಲುಗಳನ್ನು ಸ್ಥಳೀಯ ಮಸೀದಿಯ ಪ್ರತಿನಿಧಿ ಓದುವ ಸಂಪ್ರದಾಯವೂ ರೂಢಿಯಲ್ಲಿರುವುದನ್ನು ಇಲ್ಲಿ ಸ್ಮರಿಸಬಹುದು.