ಗದಗ: ನಿರಂತರ ಮಳೆಗೆ ಕುಸಿಯುತ್ತಿದೆ ಭೂಮಿ; ಹೆಚ್ಚಿದ ಜನರ ಆತಂಕ

ಗದಗ ಜಿಲ್ಲೆಯಲ್ಲಿ ಎರಡು ವರ್ಷಗಳ ಹಿಂದೆ ನಿಂತಲ್ಲಿ, ಕುಂತಲ್ಲಿ ಭೂಮಿ ಕುಸಿಯುತ್ತಿತ್ತು. ಅಷ್ಟೇ ಅಲ್ಲ ಮನೆಗಳಲ್ಲೂ ನಿಂತ ನೆಲವೇ ಕುಸಿದು ಭಾರಿ ಆತಂಕ ಸೃಷ್ಠಿಸಿತ್ತು. ಈ ವೇಳೆ ಇಬ್ಬರು ಅದೃಷ್ಠವಶಾತ್ ಬಚಾವ್ ಆಗಿದ್ದರು. ಈಗ ಜಿಲ್ಲೆಯಲ್ಲಿ ನಿರಂತರ ಜಡಿ‌ ಮಳೆಗೆ ಮತ್ತೆ ನಿಂತ ಭೂಮಿ ಕುಸಿದಿದೆ. ಮಣ್ಣಿನ ಮನೆಗಳೇ ಹೆಚ್ಚಿರುವ ಈ ಪ್ರದೇಶದಲ್ಲಿ ಭೂಕುಸಿತ ಆಗಿದ್ದು, ಜನರು ಕಂಗಾಲಾಗಿದ್ದಾರೆ.

ಗದಗ: ನಿರಂತರ ಮಳೆಗೆ ಕುಸಿಯುತ್ತಿದೆ ಭೂಮಿ; ಹೆಚ್ಚಿದ ಜನರ ಆತಂಕ
ಗದಗದಲ್ಲಿ ನಿರಂತರ ಮಳೆಗೆ ಕುಸಿಯುತ್ತಿದೆ ಭೂಮಿ
Follow us
ಸಂಜೀವ ಕುಮಾರ್​ ಪಾಂಡ್ರೆ, ಗದಗ
| Updated By: ಕಿರಣ್ ಹನುಮಂತ್​ ಮಾದಾರ್

Updated on: Jul 26, 2024 | 6:06 PM

ಗದಗ, ಜು.26: ಎರಡು ವರ್ಷಗಳ ಹಿಂದೆ ಇದೇ ಜಿಲ್ಲೆಯ ನರಗುಂದ(Naragunda) ಪಟ್ಟಣದ ಕೆಲ ಭಾಗದಲ್ಲಿ ನಿಂತಲ್ಲಿ, ಕುಂತಲ್ಲೂ ಭೂಮಿ ಕುಸಿದಿತ್ತು. ಇಬ್ಬರು ವೃದ್ಧರು 10 ಅಡಿ ಆಳ ಕುಸಿದ ಭೂಮಿಯಲ್ಲಿ ಬಿದ್ದು ಬದುಕಿ ಬಂದಿದ್ದರು. ಈ ಆತಂಕ ಈಗ ಮತ್ತೆ ಶುರುವಾಗಿದೆ. ಗದಗ ನಗರದ ನರಿಭಾವಿ ಓಣಿಯಲ್ಲಿ ಇಂದು(ಶುಕ್ರವಾರ) ಬೆಳ್ಳಂಬೆಳ್ಳಗ್ಗೆ ಏಕಾಏಕಿ ಭೂ ಕುಸಿತವಾಗಿದೆ. ಬೆಳಗ್ಗೆ ಎದ್ದು ನೋಡಿದ್ರೆ ಸುಮಾರು 5 ಅಡಿ ಆಳ ಭೂಮಿ ಕುಸಿದಿದೆ. ಏಕಾಏಕಿ ಭೂ ಕುಸಿತದಿಂದ ಸ್ಥಳೀಯರಲ್ಲಿ ಆತಂಕ ಹೆಚ್ಚಾಗಿದೆ.

ಆತಂಕದಲ್ಲಿ ಗದಗ-ಬೆಟಗೇರಿ ಅವಳಿ ನಗರದ ಜನ

ಈ ಭಾಗದಲ್ಲಿ ರೈತರು ದವಸಧಾನ್ಯ ಸಂಗ್ರಹ ಮಾಡುವ ಹಗೇವು ಹೆಚ್ಚಾಗಿವೆ. ಹೀಗಾಗಿ ನಿರಂತರ ಜಿಟಿ ಮಳೆಗೆ ಹಳೇ ಕಾಲದ ಹಗೇವು ಕುಸಿದಿರಬೇಕು ಎಂದು ಸ್ಥಳೀಯರು ಹೇಳುತ್ತಿದ್ದಾರೆ. ಈ ಭೂಕುಸಿತದ ಪ್ರಕರಣ ಇಡೀ ಗದಗ-ಬೆಟಗೇರಿ ಅವಳಿ ನಗರದ ಜನರನ್ನು ಬೆಚ್ಚಿಬೀಳಿಸಿದೆ. ಈಗ ಮಕ್ಕಳು, ವೃದ್ಧರನ್ನು ಮನೆಯಿಂದ ಹೊರಬಿಡಲು ಕೂಡ ಹೆದರುತ್ತಿದ್ದಾರೆ. ಜನನಿಬಿಡ ಪ್ರದೇಶದಲ್ಲಿ ಭೂಕುಸಿತವಾಗಿದ್ದು, ಯಾರಾದರೂ ಹೋಗುವಾಗಿ ಘಟನೆ ಸಂಭವಿಸಿದ್ದರೆ, ದೊಡ್ಡ ಅನಾಹುತವೇ ಆಗುತ್ತಿತ್ತು. ಅದರಲ್ಲೂ ಭೂಕುಸಿತವಾದ ಪಕ್ಕದಲ್ಲೇ ಶಾಲೆಯೊಂದಿದೆ.

ಇದನ್ನೂ ಓದಿ:ಏಕಾಏಕಿ ಗದಗ ಸಂಗೀತ ಪರೀಕ್ಷಾ ಕೇಂದ್ರ ಹುಬ್ಬಳ್ಳಿಗೆ ಶಿಫ್ಟ್: ಹೋರಾಟಕ್ಕಿಳಿದ ಗವಾಯಿ ಮಠದ ಶ್ರೀಗಳು

ನೂರಾರು ಮಕ್ಕಳು ಇದೇ ಪ್ರದೇಶದಲ್ಲಿ ಓಡಾಡುತ್ತಾರೆ. ಆದ್ರೆ, ಬೆಳಗಿನ ಜಾವ ಭೂಕುಸಿತ ಆಗಿದ್ದರಿಂದ ಅನಾಹುತ ತಪ್ಪಿದಂತಾಗಿದೆ. ಇನ್ನು ಹಳೆ ಮನೆಗಳೇ ಹೆಚ್ಚಿರುವ ಪ್ರದೇಶದಲ್ಲಿ ಭೂಕುಸಿತ ಆಗಿರುವುದರಿಂದ ನರಿಬಾವಿ ಓಣಿ ಜನರು ಬೆಚ್ಚಿಬಿದ್ದಿದ್ದಾರೆ. ಭೂಕುಸಿತ ವಿಷಯ ತಿಳಿಯುತ್ತಿದ್ದಂತೆ ನಗರಸಭೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. 15 ದಿನಗಳ ಹಿಂದೆ ಇದೇ ಪ್ರದೇಶದಲ್ಲೇ ಇದೇ ರೀತಿ ಭೂಕುಸಿತವಾಗಿತ್ತು. ಹಳೇ ಕಾಲದ ಧಾನ್ಯಗಳು ಸಂಗ್ರಹ ಮಾಡುವ ಹಗೇವುಗಳು ಇವೆ ಎನ್ನಲಾಗಿದೆ. ಈ ಬಗ್ಗೆ ಸರ್ವೇ ಮಾಡಿ ಮುಂದೆ ಈ ರೀತಿ ಆಗದಂತೆ ಕ್ರಮ ವಹಿಸಲಾಗುವುದು. ಈಗ ಭೂಕುಸಿತ ಆಗಿರುವ ಪ್ರದೇಶಕ್ಕೆ ಮಣ್ಣು, ಕಲ್ಲು ಹಾಕಿ ಮುಚ್ಚಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ