ಗದಗ, ಆ.03: ಉತ್ತರ ಕರ್ನಾಟಕದ ಭಾಗದ ರೈತರಿಗೆ ಮಳೆ ಬಂದರೂ ಕಷ್ಟ, ಬರದಿದ್ರೂ ಕಷ್ಟ ಎಂಬಂತಾಗಿದೆ. ಕಳೆದ ವರ್ಷ ಭೀಕರ ಬರಗಾಲ ರೈತರ ಜೀವ ಹಿಂಡಿದ್ರೆ, ಈ ವರ್ಷ ಪ್ರವಾಹ ರೈತರ ಬದುಕನ್ನೇ ನುಂಗಿ ಹಾಕಿದೆ. ಹೌದು, ಮಲೆನಾಡಿನಲ್ಲಿ ವ್ಯಾಪಕ ಮಳೆ ಸುರಿಯುತ್ತಿದೆ. ಇದರಿಂದ ತುಂಗಭದ್ರಾ ನದಿ(Tungabhadra River)ಯ ಪ್ರವಾಹಕ್ಕೆ ಜಮೀನುಗಳೆಲ್ಲಾ ಹೊಳೆಯಂತಾಗಿದ್ದು, ಬೆಳೆಗಳು ಸರ್ವನಾಶವಾಗಿವೆ. ಹೀಗಾಗಿ ಅನ್ನದಾತರು ಈಗ ಮತ್ತೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ಸರ್ಕಾರ ನಮ್ಮ ನೆರವಿಗೆ ಬರಬೇಕು ಎಂದು ಒತ್ತಾಯಿಸಿದ್ದಾರೆ. ಮತ್ತೊಂದೆಡೆ ಜೀವದ ಹಂಗು ತೊರೆದು ಮೀನು ಹಿಡಿಯುವ ದುಸ್ಸಾಹಸಕ್ಕೆ ಜನರು ಕೈ ಹಾಕಿದ್ದು, ಜನರ ಆಕ್ರೋಶಕ್ಕೆ ಕಾರಣವಾಗಿದೆ.
ತುಂಗಭದ್ರಾ ನದಿ ಅಪಾಯಮಟ್ಟ ಮೀರಿ ಹರಿಯುತ್ತಿದೆ. ಹೀಗಾಗಿ ನದಿಗೆ 2 ಲಕ್ಷಕ್ಕೂ ಅಧಿಕ ಕ್ಯೂಸೆಕ್ ನೀರು ಹರಿದು ಬರುತ್ತಿದ್ದು, ಸಿಂಗಟಾಲೂರ ಬ್ಯಾರೇಜ್ ಸಂಪೂರ್ಣ ಭರ್ತಿಯಾಗಿ, 2 ಲಕ್ಷ 9 ಸಾವಿರ ಕ್ಯೂಸೆಕ್ ನೀರು ನದಿಗೆ ಹರಿಬಿಡಲಾಗಿದೆ. ಇದರಿಂದ ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಹಮ್ಮಿಗಿ, ಸಿಂಗಟಾಲೂರ, ಕೊರ್ಲಹಳ್ಳಿ, ಕಕ್ಕೂರ, ಹೆಸರೂರ ಗ್ರಾಮದ ರೈತರು ತತ್ತರಿಸಿ ಹೋಗಿದ್ದಾರೆ. ಈ ಗ್ರಾಮಗಳ ರೈತರ ನೂರಾರು ಹೇಕ್ಟರ್ ಪ್ರದೇಶದ ಜಮೀನುಗಳಿಗೆ ಅಪಾರ ಪ್ರಮಾಣದಲ್ಲಿ ನೀರು ನುಗ್ಗಿದ್ದು, ಭತ್ತ, ಗೋವಿನಜೋಳ, ಕಬ್ಬು, ಸೂರ್ಯಕಾಂತಿ ಸೇರಿದಂತೆ ಸರ್ವಬೆಳೆಗಳು ತುಂಗಭದ್ರೆ ಆಹುತಿ ಪಡೆದಿದ್ದಾಳೆ.
ಇದನ್ನೂ ಓದಿ:ಬರಗಾಲದ ಪರಿಣಾಮ: ತುಂಗಭದ್ರಾ ನದಿ ಖಾಲಿ, ಹುಲಿಗೆಮ್ಮ ದೇವಸ್ಥಾನಕ್ಕೆ ಬಂದ ಭಕ್ತರಿಂದ ಸ್ನಾನಕ್ಕಾಗಿ ಪರದಾಟ!
ತುಂಗಭದ್ರಾ ನದಿ ಅಪಾಯಮಟ್ಟ ಮೀರಿ ಹರಿಯುತ್ತಿದೆ. ಇಂತಹ ಉಕ್ಕಿ ಹರಿಯುವ ನದಿಯಲ್ಲಿ ಜನ್ರು ಪ್ರಾಣದ ಹಂಗು ತೊರೆದು ಹುಚ್ಚಾಟ ನಡೆಸಿದ್ದಾರೆ. ರಭಸವಾಗಿ ಹರಿಯುವ ತುಂಗಭದ್ರಾ ನದಿಯಲ್ಲಿ ಕೆಲವರು ಮೀನು ಹಿಡಿಯುವ ದುಸ್ಸಾಹಸ ಮಾಡುತ್ತಿದ್ದಾರೆ. ಸ್ವಲ್ಪ ಯಾಮಾರಿದರೂ ದೊಡ್ಡ ದುರಂತ ಸಂಭವಿಸೋದು ಗ್ಯಾರಂಟಿ. ಶಿಂಗಟಾಲೂರ ಬ್ಯಾರೇಜ್ ಗೇಟ್ ಎದುರು ಧುಮ್ಮಿಕ್ಕಿ ಹರಿಯುವ ನೀರಲ್ಲೇ ದುಸ್ಸಾಹಸ ಮಾಡುತ್ತಿದ್ದು, ಇದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಇತ್ತ ಹುಚ್ಚಾಟಕ್ಕೆ ಕಡಿವಾಣ ಹಾಕಬೇಕಿದ್ದ ನೀರಾವರಿ ನಿಗಮದ ಅಧಿಕಾರಿಗಳು ಬೇಜವಾಬ್ದಾರಿ ತೋರುತ್ತಿದ್ದಾರೆ. ಅಷ್ಟೇ ಅಲ್ಲ ಜಿಲ್ಲಾಡಳಿತ ನದಿ ಪಾತ್ರಕ್ಕೆ ಇಳಿಯದಂತೆ ಎಚ್ಚರಿಕೆ ನೀಡಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ