ಬರಗಾಲದ ಪರಿಣಾಮ: ತುಂಗಭದ್ರಾ ನದಿ ಖಾಲಿ, ಹುಲಿಗೆಮ್ಮ ದೇವಸ್ಥಾನಕ್ಕೆ ಬಂದ ಭಕ್ತರಿಂದ ಸ್ನಾನಕ್ಕಾಗಿ ಪರದಾಟ!
ರಾಜ್ಯದೆಲ್ಲೆಡೆ ಬರಗಾಲದ ಪರಿಣಾಮ ಫೆಬ್ರವರಿ ತಿಂಗಳಲ್ಲೇ ಗೋಚರಿಸತೊಡಗಿದೆ. ಕೊಪ್ಪಳದ ಹುಲಿಗಿ ಗ್ರಾಮದಲ್ಲಿರುವ ಹುಲಿಗೆಮ್ಮ ದೇವಸ್ಥಾನಕ್ಕೆ ಬರುವ ಭಕ್ತರಿಗೂ ಬರಗಾಲದ ಬಿಸಿ ಮುಟ್ಟಿದೆ. ಸಮೀಪದಲ್ಲೇ ತುಂಗಭದ್ರಾ ನದಿ, ಜಲಾಶಯ ಇದ್ದರೂ ಪುಣ್ಯಸ್ನಾನಕ್ಕೆ ನೀರಿಲ್ಲದ ಸ್ಥಿತಿ ನಿರ್ಮಾಣವಾಗಿದೆ.
ಕೊಪ್ಪಳ, ಫೆಬ್ರವರಿ 24: ಅದು ಲಕ್ಷಾಂತರ ಭಕ್ತರ ಆರಾಧ್ಯ ಕೇಂದ್ರವಾಗಿರುವ ಹುಲಿಗೆಮ್ಮ ದೇವಸ್ಥಾನ (Huligemma Temple). ಅದರಲ್ಲೂ ಭರತ ಹುಣ್ಣಿಮೆಯ ದಿನ ಕೊಪ್ಪಳ ತಾಲೂಕಿನ ಹುಲಿಗಿ ಗ್ರಾಮದಲ್ಲಿರುವ ಹುಲಿಗೆಮ್ಮ ದೇವಿಯ ದೇವಸ್ಥಾನಕ್ಕೆ ಲಕ್ಷಾಂತರ ಭಕ್ತರು ಬರುತ್ತಾರೆ. ಆದರೆ ಈ ಬಾರಿ ಬರಗಾಲದ ಪರಿಣಾಮ ದೇವಸ್ಥಾನಕ್ಕೆ ಬರುವ ಭಕ್ತರ ಮೇಲೆ ಉಂಟಾಗಿದೆ. ಕೂಗಳತೆ ದೂರದಲ್ಲಿಯೇ ತುಂಗಭದ್ರಾ (Tungabhadra river) ಜಲಾಶಯವಿದ್ದರೂ ಕೂಡಾ ನದಿಗೆ ನೀರು ಬಿಡದ ಹಿನ್ನೆಲೆಯಲ್ಲಿ, ಭಕ್ತರು ನದಿಯಲ್ಲಿ ಸ್ನಾನ ಮಾಡಲು ಪರದಾಡಿದರು. ಕೊಳಚೆ ತುಂಬಿದ್ದ ಗುಂಡಿಯಲ್ಲಿದ್ದ ನೀರನ್ನೇ ಅನಿವಾರ್ಯವಾಗಿ ಸ್ನಾನ ಮಾಡಿದ್ದ ಭಕ್ತರಿಗೆ ಇದೀಗ ಚರ್ಮರೋಗದ ಭೀತಿ ಆರಂಭವಾಗಿದೆ.
ತುಂಗಭದ್ರಾ ನದಿ ಬರಿದಾಗಿದ್ದರಿಂದ ಸ್ನಾನಕ್ಕಾಗಿ ಜನರ ಸಂಕಷ್ಟ
ಭರತ ಹುಣ್ಣಿಮೆ ದಿನ, ಕೊಪ್ಪಳ ತಾಲೂಕಿನ ಹುಲಿಗಿ ಗ್ರಾಮದಲ್ಲಿರುವ ಹುಲಿಗೆಮ್ಮ ದೇವಸ್ಥಾನಕ್ಕೆ ರಾಜ್ಯ ಮತ್ತು ನೆರೆಯ ರಾಜ್ಯದ ವಿವಿಧ ಬಾಗಗಳಿಂದ ಲಕ್ಷಾಂತರ ಭಕ್ತರು ಬರುತ್ತಾರೆ. ಬಂದ ಭಕ್ತರು, ತುಂಗಭದ್ರಾ ನದಿಯಲ್ಲಿ ಸ್ನಾನ ಮಾಡಿ, ನಂತರ ದೇವಿ ದರ್ಶನ ಪಡೆದರೆ ಸಂಕಷ್ಟಗಳು ನಿವಾರಣೆಯಾಗುತ್ತವೆ ಅನ್ನೋ ನಂಬಿಕೆಯನ್ನು ಹೊಂದಿದ್ದಾರೆ. ನೂರಾರು ವರ್ಷಗಳಿಂದ ಇಂತಹದೊಂದು ಸಂಪ್ರದಾಯ ಕೂಡಾ ಆಚರಣೆಯಲ್ಲಿದೆ. ಆದ್ರೆ ಈ ಬಾರಿ ಹುಲಿಗೆಮ್ಮೆ ದೇವಿ ದರ್ಶನಕ್ಕೆ ಬಂದ ಭಕ್ತರು ಬರಗಾಲದಿಂದ ಸಂಕಷ್ಟಕ್ಕೆ ಸಿಲುಕಿದ್ದಾರೆ.
ದೇವಸ್ಥಾನದಿಂದ ಕೂಗಳತೆ ದೂರದಲ್ಲಿಯೇ ತುಂಗಭದ್ರಾ ಜಲಾಶಯವಿದೆ. ಆದ್ರೆ ಈ ಬಾರಿ ಬರಗಾಲದಿಂದಾಗಿ ಜಲಾಶಯ ಕೂಡಾ ಬೇಸಿಗೆ ಮೊದಲೇ ಭತ್ತುವ ಹಂತಕ್ಕೆ ಬಂದಿದೆ. ಈ ಹಿನ್ನೆಲೆಯಲ್ಲಿ ನದಿಗೆ ಬಿಡ್ತಿದ್ದ ನೀರನ್ನು ಬಂದ್ ಮಾಡಲಾಗಿದೆ. ನದಿಯಲ್ಲಿ ನೀರು ಇಲ್ಲದೇ ಇರೋದರಿಂದ ಭಕ್ತರು ಸ್ನಾನಕ್ಕಾಗಿ ಪರದಾಡುತ್ತಿದ್ದಾರೆ. ಹೌದು ತುಂಗಭದ್ರಾ ನದಿಗುಂಟಾ ಅನೇಕ ಕಡೆ ಸುತ್ತಾಡುತ್ತಿರುವ ಭಕ್ತರು, ಇರೋ ಅಲ್ಪಸ್ವಲ್ಪ ಗಲೀಜು ನೀರಲ್ಲಿಯೇ ಸ್ನಾನ ಮಾಡುತ್ತಿದ್ದಾರೆ.
ಚರ್ಮರೋಗದ ಭೀತಿಯಲ್ಲಿ ಭಕ್ತರು
ಭರತ ಹುಣ್ಣಿಮೆಗೆ ದೇವಿ ದರ್ಶನಕ್ಕೆ ಅಪಾರ ಪ್ರಮಾಣದ ಭಕ್ತರು ಬರೋದರಿಂದ, ಸ್ವಲ್ಪ ಮಟ್ಟಿಗೆ ಜಲಾಶಯದಿಂದ ನದಿಗೆ ನೀರು ಬಿಡುವಂತೆ ಭಕ್ತರು ಆಗ್ರಹಿಸಿದ್ದರು. ಸ್ವಲ್ಪ ನೀರನ್ನು ಬಿಟ್ಟರು ಕೂಡಾ ಭಕ್ತರಿಗೆ ಸ್ನಾನ ಸೇರಿದಂತೆ ಕುಡಿಯುವ ನೀರಿನ ವ್ಯವಸ್ಥೆ ಆಗುತ್ತಿತ್ತು. ಆದ್ರೆ ಭಕ್ತರ ಆಗ್ರಹಕ್ಕೆ ಜನಪ್ರತಿನಿಧಿಗಳು ಮತ್ತು ನೀರಾವರಿ ಇಲಾಖೆಯ ಅಧಿಕಾರಿಗಳು ಡೋಂಟ್ ಕೇರ್ ಅಂದಿದ್ದರಿಂದ, ನದಿಗೆ ನೀರನ್ನು ಹರಿಸಿಲ್ಲ. ಇದು ಭಕ್ತರ ಆಕ್ರೋಶಕ್ಕೆ ಕಾರಣವಾಗಿದೆ. ಇದೀಗ ಇರೋ ಗಲೀಜು ನೀರಲ್ಲಿಯೇ ಸ್ನಾನ ಮಾಡುವಂತಹ ದುಸ್ಥಿತಿ ಬಂದಿದೆ. ಸ್ನಾನ ಮಾಡಿದ ಅನೇಕರಿಗೆ ಚರ್ಮ ತುರಿಕೆ ಸೇರಿದಂತೆ ಅನೇಕ ತೊಂದರೆಗಳಾಗುತ್ತಿವೆ. ಸ್ವಲ್ಪ ನೀರನ್ನು ಬಿಟ್ಟರು ಕೂಡಾ ಭಕ್ತರಿಗೆ ಅನಕೂಲವಾಗುತ್ತಿತ್ತು ಅಂತ ಭಕ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ನೀರಿಗಾಗಿ ಹಾಹಾಕಾರ; ಜೀವಜಲಕ್ಕಾಗಿ ಮಹದೇವಪುರ, ವರ್ತೂರು ಜನ ಹೈರಾಣ
ಬೇಸಿಗೆ ಮುನ್ನವೇ ತುಂಗಭದ್ರಾ ನದಿ ನೀರು ಖಾಲಿಯಾಗಿದೆ. ಇದರಿಂದ ಒಂದಡೆ ಕುಡಿಯುವ ನೀರಿಗೆ ಆಹಾಕರ ಆರಂಭವಾದ್ರೆ ಮತ್ತೊಂದಡೆ ನದಿ ದಡದಲ್ಲಿರುವ ಅನೇಕ ಸುಪ್ರಸಿದ್ದ ದೇವಸ್ಥಾನಕ್ಕೆ ಬರೋ ಭಕ್ತರು ಕೂಡಾ ಕುಡಿಯುವ ನೀರು ಮತ್ತು ಸ್ನಾನಕ್ಕಾಗಿ ಪರದಾಡುವಂತಾಗಿದೆ. ಹೀಗಾಗಿ ನದಿಗೆ ಸ್ವಲ್ಪ ಪ್ರಮಾಣದ ನೀರನ್ನು ಬಿಟ್ಟರೆ ಭಕ್ತರಿಗೆ ಹೆಚ್ಚಿನ ಅನಕೂಲವಾಗಲಿದೆ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ