ಕೊಪ್ಪಳ: ಮಗು ಸತ್ತಿದೆ ಎಂದು ಸುಳ್ಳು ಹೇಳಿ ಮಾರಾಟ ಮಾಡಿದ್ರಾ ನರ್ಸ್? 5 ವರ್ಷ ಹಿಂದಿನ ಪ್ರಕರಣದ ತನಿಖೆ ಶುರು
9 ತಿಂಗಳು ಕಷ್ಟ ಪಟ್ಟು ಹೊಟ್ಟೆಯಲ್ಲಿ ಹೊತ್ತು ಭೂಮಿಗೆ ಹೆರುವ ತಾಯಿಯ ಮಮತೆಯಿಂದಲೇ ಇಲ್ಲಿ ಕಂದಮ್ಮಗಳು ಜೀವಂತವಿದ್ದರೂ ದೂರವಾಗುತ್ತಿವೆ. ಹುಟ್ಟುತ್ತಲೇ ತಂದೆ- ತಾಯಿ ಪ್ರೀತಿಯಿಂದ ವಂಚಿತರಾಗುವ ನವಜಾತ ಶಿಶುಗಳು ಇನ್ಯಾರದೋ ಆರೈಕೆಯಲ್ಲಿ ಬೆಳೆಯುತ್ತಿವೆ. ಕೊಪ್ಪಳ ಜಿಲ್ಲಾಸ್ಪತ್ರೆಯಲ್ಲಿ ನವಜಾತ ಶಿಶು ಮಾರಾಟ ದಂಧೆ ನಡೆಯುತ್ತಿರುವ ಗಂಭೀರ ಆರೋಪ ಕೇಳಿ ಬಂದಿದ್ದು, ಪ್ರಕರಣ ಮಹತ್ವ ಪಡೆದುಕೊಂಡಿದೆ.
ಕೊಪ್ಪಳ, ಫೆ.25: ಜಿಲ್ಲಾ ಆಸ್ಪತ್ರೆ (Koppal district hospital) ಗುಣಮಟ್ಟದ ಚಿಕಿತ್ಸೆಗೆ ಎಷ್ಟು ಹೆಸರುವಾಸಿಯಾಗಿದೆಯೋ ಅಷ್ಟೇ ಅನೇಕ ಬೇರೆ ರೀತಿಯ ಘಟನೆಗಳಿಂದ ಕೂಡಾ ಮೇಲಿಂದ ಮೇಲೆ ಸುದ್ದಿಯಲ್ಲಿರುತ್ತಿದೆ. ಇದೀಗ ಇದೇ ಆಸ್ಪತ್ರೆಯಲ್ಲಿ ನರ್ಸ್ ಮೇಲೆ ಮಗು ಮಾರಾಟ ಆರೋಪ ಕೇಳಿ ಬಂದಿದೆ. 9 ತಿಂಗಳು ಕಷ್ಟ ಪಟ್ಟು ಹೊಟ್ಟೆಯಲ್ಲಿ ಹೊತ್ತು ಭೂಮಿಗೆ ಹೆರುವ ತಾಯಿಯ ಮಮತೆಯಿಂದಲೇ ಇಲ್ಲಿ ಕಂದಮ್ಮಗಳು ಜೀವಂತವಿದ್ದರೂ ದೂರವಾಗುತ್ತಿವೆ.
ಹುಟ್ಟುತ್ತಲೇ ತಂದೆ- ತಾಯಿ ಪ್ರೀತಿಯಿಂದ ವಂಚಿತರಾಗುವ ನವಜಾತ ಶಿಶುಗಳು ಇನ್ಯಾರದೋ ಆರೈಕೆಯಲ್ಲಿ ಬೆಳೆಯುತ್ತಿವೆ. ನಗರದ ಜಿಲ್ಲಾಸ್ಪತ್ರೆಯಲ್ಲಿ ನವಜಾತ ಶಿಶು ಮಾರಾಟ ದಂಧೆ ನಡೆಯುತ್ತಿರುವ ಗಂಭೀರ ಆರೋಪ ಕೇಳಿ ಬಂದಿದ್ದು, ಪ್ರಕರಣ ಮಹತ್ವ ಪಡೆದುಕೊಂಡಿದೆ. ಅಲ್ಲದೆ, ತನಿಖೆಗಾಗಿ ಕೊಪ್ಪಳ ವೈದ್ಯಕೀಯ ವಿಜ್ಞಾನ ಸಂಸ್ಥೆ ತನಿಖಾ ಕಮಿಟಿ ರಚಿಸಿ ಆದೇಶಿಸಿದೆ.
ಪ್ರಕರಣದ ಹಿನ್ನೆಲೆ
ಕೊಪ್ಪಳ ಜಿಲ್ಲಾ ಆಸ್ಪತ್ರೆ, ಕೊಪ್ಪಳ ನಗರದಲ್ಲಿರುವ ಕೊಪ್ಪಳ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಅಧೀನದಲ್ಲಿ ನಡೆಯುತ್ತಿದೆ. ಇಲ್ಲಿ ತಾಯಿ ಮತ್ತು ಮಕ್ಕಳ ಪ್ರತ್ಯೇಕ ಆಸ್ಪತ್ರೆಯೇ ಇದ್ದು, ಗುಣಮಟ್ಟದ ಚಿಕಿತ್ಸೆ ಇರುವುದರಿಂದ ಅನೇಕ ಕಡೆಯಿಂದ ಗರ್ಭಿಣಿಯರು ಹೆರಿಗೆಗೆ ಕೊಪ್ಪಳ ಜಿಲ್ಲಾ ಆಸ್ಪತ್ರೆಗೆ ಬರುತ್ತಾರೆ.
ಇಂತಹ ಪ್ರತಿಷ್ಟಿತ ಆಸ್ಪತ್ರೆಯಲ್ಲಿ ಶೂಶ್ರೂಷಕಿಯೊಬ್ಬರು ಆಸ್ಪತ್ರೆಗೆ ದಾಖಲಾಗುವ ಬಡ ಗರ್ಭೀಣಿಯರ ಹೆರಿಗೆ ಆದ ಮೇಲೆ ಮಗು ಮರಣ ಹೊಂದಿದೆ ಎಂದು ಸುಳ್ಳು ಹೇಳುವುದರ ಜೊತೆಗೆ ಸುಳ್ಳು ದಾಖಲಾತಿಗಳನ್ನು ಸೃಷ್ಟಿಮಾಡಿ, ಅಂತಹ ಮಕ್ಕಳನ್ನು ತಾನೇ ಆರೈಕೆ ಮಾಡಿ, ನಂತರ ಬೇರೆಯವರಿಗೆ ಮಾರಾಟ ಮಾಡುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಆಸ್ಪತ್ರೆಯಲ್ಲಿ ತೈರುನ್ನೀಸಾ ಸೈಯದ್ ಅನ್ನೋ ನರ್ಸ್ ಇಂತಹದೊಂದು ಕೆಲಸ ಮಾಡುತ್ತಿದ್ದಾರೆ ಅಂತ ಆರೋಪಿಸಲಾಗಿದೆ.
ಇದನ್ನೂ ಓದಿ: ಯಾದಗಿರಿ: ಸರ್ಕಾರಿ ಆಸ್ಪತ್ರೆ ಸಿಬ್ಬಂದಿ ನಿರ್ಲಕ್ಷ್ಯಕ್ಕೆ ನವಜಾತ ಶಿಶು ಸಾವು ಆರೋಪ; ಮುಗಿಲು ಮುಟ್ಟಿದ ಕುಟುಂಬಸ್ಥರ ಆಕ್ರಂದನ
2017 ರ ಏಪ್ರಿಲ್ 25 ರಂದು ಹೆರಿಗೆಯಾದ ಗಂಡು ಮಗುವು ಮರಣ ಹೊಂದಿದೆ ಎಂದು ಪಾಲಕರಿಗೆ ತಿಳಿಸಿ, ಸದರಿ ಮಗುವನ್ನು ತಾನೇ ಆರೈಕೆ ಮಾಡುತ್ತಿದ್ದಾಳೆ ಎಂದು ದಾಖಲೆಗಳೊಂದಿಗೆ ಬೆಂಗಳೂರಿನ ಮಕ್ಕಳ ರಕ್ಷಣಾ ನಿರ್ದೇಶನಾಲಯದ ನಿರ್ದೇಶಕರಿಗೆ 2023 ರ ನ.20 ರಂದು ಅಪರಿಚಿರೊಬ್ಬರು ದೂರು ನೀಡಿದ್ದಾರೆ.
ಅಲ್ಲದೆ, ಈ ಶೂಶ್ರೂಷಕಿ ಮನೆಯಲ್ಲಿರುವ 23 ವರ್ಷದ ಯುವಕ ತನ್ನ ಸಹೋದರನೆಂದು ದಾಖಲಾತಿಗಳನ್ನು ಸೃಷ್ಟಿಸಿದ್ದಾರೆ. ಈ ಯುವಕ ಇವರ ಸಹೋದರನಲ್ಲ, ಅದು ಜಿಲ್ಲಾಸ್ಪತ್ರೆಯಲ್ಲಿಯೇ ಕಳವು ಮಾಡಿದ ಶಿಶುವಾಗಿದೆ. ಅಲ್ಲದೆ, ಇನ್ನೊಂದು ಮಗು ತನ್ನದೆಂದು ದಾಖಲಾತಿಗಳನ್ನು ಸೃಷ್ಟಿಸಿದ್ದಾಳೆ ಅಂತ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಈ ದೂರಿನ ಅನ್ವಯ ಕ್ರಮ ಜರುಗಿಸಿ 2023 ರ ಡಿ.11 ರಂದು ವರದಿ ನೀಡುವಂತೆ ಕೊಪ್ಪಳ ಜಿಲ್ಲಾಧಿಕಾರಿಗೆ 2023ರ ಡಿ.16 ರಂದು ಮಕ್ಕಳ ರಕ್ಷಣಾ ನಿರ್ದೇಶನಲಾಯದಿಂದ ಪತ್ರ ಬಂದಿದೆ. ನಂತರ ಜಿಲ್ಲಾಧಿಕಾರಿಗಳು 2023 ರ ಡಿ.20 ರಂದು ಸದರಿ ದೂರಿನ ಅನ್ವಯ ಕ್ರಮ ಕೈಗೊಂಡ ವರದಿ ನೀಡುವಂತೆ ಸೂಚಿಸಿ ಕಿಮ್ಸ್ ನಿರ್ದೇಶಕರಿಗೆ ಆದೇಶ ಹೊರಡಿಸಿದ್ದಾರೆ.
ಬಳಿಕ ಎಚ್ಚೆತ್ತ ಕಿಮ್ಸ್ ನಿರ್ದೇಶಕರು 2024 ರ ಜ.1 ರಂದು 6 ಜನರ ಒಳಗೊಂಡ ವಿಚಾರಣಾ ಸಮಿತಿ ರಚಿಸಿದ್ದಾರೆ. ಈ ಸಮಿತಿಯ ಅಧ್ಯಕ್ಷರಾಗಿ ಜಿಲ್ಲಾಸ್ಪತ್ರೆಯ ವೈದ್ಯಕೀಯ ಅಧೀಕ್ಷಕರು, ಸದಸ್ಯರಾಗಿ ಜಿಲ್ಲಾ ಶಸ್ತ್ರ ಚಿಕಿತ್ಸಕರು, ಒಬಿಜಿ ಸಹ ಪ್ರಾಧ್ಯಪಕಿ ಡಾ.ಸುರೇಖಾ ಎಸ್.ಎಂ, ಎಂಸಿಎಚ್ ಚಿಕ್ಕ ಮಕ್ಕಳ ವಿಭಾಗದ ಡಾ.ಸುಜಾತಾ ಎಸ್.ಸಜ್ಜನರ, ಕಿಮ್ಸ್ ನ ಸಹಾಯಕ ಆಡಳಿತಾಧಿಕಾರಿಗಳು, ಮುಖ್ಯ ಆಡಳಿತಾಧಿಕಾರಿಗಳನ್ನು ನೇಮಿಸಿ ಆದೇಶ ಹೊರಡಿಸಿದ್ದಾರೆ.
ಆದರೆ ತನಿಖಾ ತಂಡ ಇನ್ನು ವರದಿ ನೀಡಿಲ್ಲ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕಿಮ್ಸ್ ನಿರ್ದೇಶಕ ಡಾ.ವಿಜಯನಾಥ್ ಇಟಗಿ, ದೂರು ಬಂದ ಹಿನ್ನೆಲೆಯಲ್ಲಿ ಇದೀಗ ತನಿಖಾ ತಂಡ ರಚನೆ ಮಾಡಲಾಗಿದೆ. ತನಿಖೆ ನಂತರ ದೂರಿನಲ್ಲಿರುವ ಸತ್ಯಾಸತ್ಯತೆ ಗೊತ್ತಾಗಲಿದೆ ಅಂತ ಹೇಳಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 11:11 am, Sun, 25 February 24