ಜನಿಸಿದ ಒಂದೇ ದಿನಕ್ಕೆ ಗಂಡು ಮಗು ಮಾರಾಟ: ತಾಯಿ ಸೇರಿ ಐವರು ಅರೆಸ್ಟ್ ಆದರು
ಮಗುವನ್ನ ಮಾರಾಟ ಮಾಡಲಾಗಿದೆ ಎಂದು ಹೇಳಲಾಗಿದ್ದು ಈ ಪ್ರಕರಣದಲ್ಲಿ ತಾಯಿ ಗಿರಿಜಾ, ಮಗುವನ್ನ ಕೊಂಡೊಯ್ದಿದ್ದ ಚಿಕ್ಕಮಗಳೂರು ಮೂಲದ ಮಹಿಳೆ ಉಷಾ, ಆಶಾ ಕಾರ್ಯಕರ್ತೆ ಸುಮಿತ್ರಾ ಹಾಗು ಮಾರಾಟಕ್ಕೆ ಕುಮ್ಮಕ್ಕು ನೀಡಿದ ಆರೋಪದಲ್ಲಿ ಸುಬ್ರಹ್ಮಣ್ಯ ಹಾಗು ಶ್ರೀಕಾಂತ್ ಎಂಬುವವರನ್ನು ಬಂಧಿಸಲಾಗಿದೆ.
ಮಕ್ಕಳಿಲ್ಲಾ ಅಂತಾ ಸಾಕಷ್ಟು ಜನ ಸಿಕ್ಕ ಸಿಕ್ಕ ದೇವರಿಗೆ ಹರಕೆ ಹೊತ್ತುಕೊಳ್ಲುತ್ತಾರೆ. ಊರೂರು ಅಲೆದು ಆಸ್ಪತ್ರೆ ಸುತ್ತಾಡಿ ಸಂತಾನ ಭಾಗ್ಯಕ್ಕಾಗಿ ಇನ್ನಿಲ್ಲದ ಪ್ರಯತ್ನ ಮಾಡ್ತಾರೆ, ಹೆಣ್ಣೊಬ್ಬಳು ತಾಯಿಯಾಗದಿದ್ದರೆ ಆಕೆಯ ಮುತ್ತೈದೆತನವೇ ಸಾರ್ಥಕ ಆಗೋದಿಲ್ಲ ಎಂದೂ ಮಾತನಾಡಿಕೊಳ್ತಾರೆ. ಇನ್ನು ಗಂಡು ಮಗುವೇ ಆಗಬೇಕು ಅಂತಾ ಮಾನವೀಯತೆ ಮರೆತ ಕೆಲ ಪೋಷಕರು, ಹೆಣ್ಣು ಭ್ರೂಣ ಹತ್ಯೆ ಮಾಡೋ ಪಾಪದ ಕೃತ್ಯವನ್ನು ಮಾಡಿಬಿಡ್ತಾರೆ. ಅಂತಾದ್ರಲ್ಲಿ ಇಲ್ಲೊಬ್ಬ ತಾಯಿ ( mother) ತನಗೆ ಹುಟ್ಟಿದ ಗಂಡು ಮಗುವನ್ನ ಜನಿಸಿದ ಒಂದೇ ದಿನಕ್ಕೆ ಅದ್ಯಾರದೋ ಒತ್ತಡಕ್ಕೆ ಸಿಲುಕಿ ಮಾರಾಟ ಮಾಡಿದ್ದಾಳೆ (baby boy sale) ಎನ್ನೋ ಆರೋಪ ಕೇಳಿ ಬಂದಿದೆ. ಪ್ರಕರಣದಲ್ಲಿ ತಾಯಿ ಸೇರಿ ಐವರ ಬಂಧನವಾಗಿದ್ದು (arrest) ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. ಹುಟ್ಟಿದ ಒಂದೇ ದಿನಕ್ಕೆ ಗಂಡು ಮಗು ಮಾರಾಟ ಆರೋಪ.. ಎರಡು ತಿಂಗಳು ಬಳಿಕ ಬಯಲಾದ ಮಗು ಮಾರಾಟ ಕೇಸ್. ತಾಯಿ, ಆಶಾಕಾರ್ಯಕರ್ತೆ ಸೇರಿ ಐವರು ಅರೆಸ್ಟ್ ಆಗಿದ್ದಾರೆ. ತಾಯಿಗೆ ಬೆದರಿಕೆ ಹಾಕಿ ಮಗುವನ್ನ ಮಾರಾಟ ಮಾಡಿದ ಬಗ್ಗೆಯೂ ಅನುಮಾನವಿದೆ. ಇದರ ಸಮಗ್ರ ತನಿಖೆಗೆ ಮುಂದಾದ ಪೊಲೀಸರು. ಹೌದು ಹಾಸನ ಜಿಲ್ಲೆ ಸಕಲೇಶಪುರ ತಾಲ್ಲೂಕಿನ ಹೊಸಳ್ಳಿ (in Hosalli village of Sakaleshpur taluk of Hassan) ಗ್ರಾಮದಲ್ಲಿ ಈ ಅಮಾನವೀಯ ಘಟನೆ ನಡೆದಿದೆ.
ತನ್ನ ಕರುಳ ಬಳ್ಳಿಯನ್ನೇ ಹುಟ್ಟಿದ ದಿನವೇ ಮಾರಾಟ ಮಾಡಿಕೊಂಡ ಪ್ರಕರಣದಲ್ಲಿ ತಾಯಿ ಸೇರಿ ಐವರನ್ನ ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ. ಹೊಸಳ್ಳಿಯ ಸುಬ್ರಹ್ಮಣ್ಯ ಎಂಬುವವರ ಕಾಫಿ ತೋಟದ ಲೈನ್ ಮನೆಯಲ್ಲಿ ನೆಲೆಸಿದ್ದ ಮಹಿಳೆ ಗಿರಿಜಾ ಎಂಬಾಕೆಗೆ ನವೆಂಬರ್ 15ರಂದು ಹೆತ್ತೂರು ಸರ್ಕಾರಿ ಆಸ್ಪತ್ರೆಯಲ್ಲಿ ಹೆರಿಗೆಯಾಗಿ ಗಂಡು ಮಗು ಜನಿಸಿದೆ.
ನವೆಂಬರ್ 16ರಂದು ಚಿಕ್ಕಮಗಳೂರು ಮೂಲದ ಮಹಿಳೆಯೊಬ್ಬರಿಗೆ ಮಗುವನ್ನ ಮಾರಾಟ ಮಾಡಲಾಗಿದೆ ಎನ್ನೋ ಬಗ್ಗೆ ಅನುಮಾನ ವ್ಯಕ್ತಪಡಿಸಿ ಹಾಸನದ ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳಿಗೆ ದೂರೊಂದು ಬಂದಿದೆ. ಈ ದೂರನ್ನ ಬೆನ್ನತ್ತಿ ಹೋದ ಮಕ್ಕಳ ರಕ್ಷಣಾ ಅಧಿಕಾರಿ ಕಾಂತರಾಜ್ ಅವರಿಗೆ ನಡೆದಿರೋ ಘಟನೆಯ ಬಗ್ಗೆ ಸುಳಿವು ಸಿಕ್ಕಿದೆ ಕೂಡಲೆ ಸಕಲೇಶಪುರ ಗ್ರಾಮಾಂತರ ಠಾಣೆಗೆ ದೂರು ನೀಡಿದ ಕಾಂತರಾಜು ತನಿಖೆಗೆ ಮನವಿ ಮಾಡಿದ್ದಾರೆ ಆರೋಪಿಗಳೆಲ್ಲರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಮಗುವನ್ನ ಕಾನೂನು ಬಾಹಿರವಾಗಿ ಹಸ್ತಾಂತರ ಮಾಡಲಾಗಿರೊ ಪ್ರಕರಣ ಬಯಲಾಗಿದೆ.
ಮಗುವನ್ನ ಮಾರಾಟ ಮಾಡಲಾಗಿದೆ ಎಂದು ಹೇಳಲಾಗಿದ್ದು ಈ ಪ್ರಕರಣದಲ್ಲಿ ತಾಯಿ ಗಿರಿಜಾ, ಮಗುವನ್ನ ಕೊಂಡೊಯ್ದಿದ್ದ ಚಿಕ್ಕಮಗಳೂರು ಮೂಲದ ಮಹಿಳೆ ಉಷಾ, ಆಶಾ ಕಾರ್ಯಕರ್ತೆ ಸುಮಿತ್ರಾ ಹಾಗು ಮಾರಾಟಕ್ಕೆ ಕುಮ್ಮಕ್ಕು ನೀಡಿದ ಆರೋಪದಲ್ಲಿ ಸುಬ್ರಹ್ಮಣ್ಯ ಹಾಗು ಶ್ರೀಕಾಂತ್ ಎಂಬುವವರನ್ನು ಬಂಧಿಸಲಾಗಿದೆ. ಪ್ರಕರಣ ಸಂಬಂದ ಸಕಳೇಶಫುರ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಾಗಿದ್ದು ಈ ಆರೋಪಿಗಳು ಕೇವಲ ಇದೊಂದೇ ಪ್ರಕರಣದಲ್ಲಿ ಭಾಗಿದಾರರೇ ಅಥವಾ ಇದೊಂದು ಜಾಲವೇ ಎನ್ನೋ ಬಗ್ಗೆ ಕೂಡ ತನಿಖೆ ನಡೆಸಲಾಗುತ್ತಿದೆ ಎಂದು ಹಾಸನ ಎಸ್ಪಿ ಮೊಹಮದ್ ಸುಜೀತಾ ಮಾಹಿತಿ ನೀಡಿದ್ದಾರೆ.
Also Read: ಹೊಸಕೋಟೆಯ ಕಲ್ಕುಂಟೆ ಅಗ್ರಹಾರದ ಬಳಿ ಒಂದೂವರೆ ವರ್ಷದ ಮಗು ಜತೆ ಕೆರೆಗೆ ಹಾರಿ ಗೃಹಿಣಿ ಆತ್ಮಹತ್ಯೆ
ಮದುವೆಯಾಗಿ ಈಗಾಗಲೆ ಎರಡು ಮಕ್ಕಳನ್ನು ಹೊಂದಿರೊ ಮಹಿಳೆಗೆ ಮತ್ತೊಂದು ಮಗು ಹುಟ್ಟಿದ್ದರಿಂದ ಅವರಿಗೆ ಪೋಷಿಸಲು ಸಮಸ್ಯೆ ಆಗಲಿದೆ ಎಂದು ತಾವೇ ಮಗುವನ್ನ ಬೇರೆಯವರಿಗೆ ಕೊಟ್ಟಿರೋದಾಗಿ ವಿಚಾರಣೆ ವೇಳೆ ಹೇಳಿದ್ದಾರೆ ಎನ್ನಲಾಗಿದೆ. ಆದ್ರೆ ಹಣಕ್ಕಾಗಿ ಮಗುವನ್ನ ಮಾರಾಟ ಮಾಡಲಾಗಿದೆ. ಈ ಪ್ರಕರಣದ ಹಿಂದೆ ಸುಬ್ರಹ್ಮಣ್ಯ ಹಾಗು ಶ್ರೀಕಾಂತ್ ಅವರ ಕೈವಾಡ ಇದೆ ಎಂದು ಆರೋಪಿಸಿ ಮಕ್ಕಳ ರಕ್ಷಣಾ ಘಟಕಕ್ಕೆ ಪತ್ರ ಬಂದಿದ್ದು ಈ ಬಗ್ಗೆ ಕೂಡ ತನಿಖೆ ನಡೆಸುವಂತೆ ಮನವಿ ಮಾಡಲಾಗಿದೆ.
ಸದ್ಯ ಆರೋಪಿಗಳು ವಿಚಾರಣೆ ವೇಳೆ ಮಗುವನ್ನ ಮಾರಾಟ ಮಾಡಿದ ಬಗ್ಗೆ ಯಾವುದೇ ಪ್ರಸ್ತಾಪ ಇಲ್ಲದ ಕಾರಣ ಕಾನೂನುಬಾಹಿರವಾಗಿ ಮಗು ಹಸ್ತಾಂತರ ಮಾಡಿದ ಬಗ್ಗೆ ಮಾತ್ರ ದೂರು ದಾಖಲು ಮಾಡಿಕೊಂಡು ಆರೋಪಿಗಳನ್ನ ಬಂಧಿಸಲಾಗಿದೆ. ಗರ್ಭಿಣಿ ಮಹಿಳೆಯರ ಅಹಾರ, ಅರೋಗ್ಯ, ಹೆರಿಗೆ ಉಸ್ತುವಾರಿ ವಹಿಸಲೆಂದೇ ಕೇಂದ್ರ ಸರ್ಕಾರದ ಯೋಜನೆಯಡಿ ಆಶಾ ಕಾರ್ಯಕರ್ತೆಯರು ಕೆಲಸ ಮಾಡುತ್ತಿದ್ದಾರೆ.
ಆದ್ರೆ ಇಲ್ಲಿ ಮಗು ಮಾರಾಟ ಪ್ರಕರಣದಲ್ಲಿ ಆಶಾ ಕಾರ್ಯಕರ್ತೆಯೇ ಮಧ್ಯಸ್ಥಿಕೆ ವಹಿಸಿರೋದು ಆಘಾತಕ್ಕೆ ಕಾರಣವಾಗಿದೆ, ವಿಚಾರಣೆ ವೇಳೆ ಎಲ್ಲರೂ ಕೂಡ ತಪ್ಪಿತಸ್ಥರೆಂದು ಕಂಡು ಬಂದ ಹಿನ್ನೆಲೆಯಲ್ಲಿ ಬಂಧಿಸಿ ಜೈಲಿಗಟ್ಟಲಾಗಿದ್ದು ತನಿಖೆ ಮುಂದುವರೆದಿದೆ. ನಿನ್ನೆ ಬುಧವಾರ ಸಕಲೇಶಪುರ ಗ್ರಾಮಾಂತರ ಠಾಣೆಯಲ್ಲಿ ಎಫ್.ಐ.ಆರ್ ದಾಖಲಾಗಿದ್ದು ಮಗುವನ್ನ ವಶಕ್ಕೆ ಪಡದ ಅಧಿಕಾರಿಗಳು ಮಕ್ಕಳ ಕಲ್ಯಾಣ ಸಮಿತಿ ಮುಂದೆ ಹಾಜರುಪಡಿಸಿ ಮಗುವನ್ನ ಆರೈಕೆಗಾಗಿ ಮಕ್ಕಳ ಪಾಲನಾ ಗೃಹಕ್ಕೆ ಕಳಿಸಿದ್ದಾರೆ.
ಒಟ್ನಲ್ಲಿ ಬಡತನದ ಕಾರಣವೋ.. ಧನ ದಾಹವೋ.. ಅಥವಾ ಬೆದರಿಕೆಯ ಭಯವೋ ಅಂತೂ ಹುಟ್ಟಿದ ಒಂದೇ ದಿನಕ್ಕೆ ಮಗುವನ್ನ ಅಕ್ರಮವಾಗಿ ಮಾರಾಟ ಮಾಡಿರೊ ಆರೋಪದಲ್ಲಿ ಹೆತ್ತಮ್ಮ ಸೇರಿ ಐವರು ಅರೆಸ್ಟ್ ಆಗಿ ಜೈಲು ಸೇರಿದ್ದಾರೆ. ಈ ಪ್ರಕರಣದಲ್ಲಿ ಮಹಿಳೆಯ ಮೇಲೆ ದೌರ್ಜನ್ಯ ಎಸಗಿ ಮಗುವನ್ನ ಮಾರಾಟ ಮಾಡಿಸಲಾಗಿದೆ ಎನ್ನೋ ಬಗ್ಗೆಯೂ ಅನುಮಾನ ಇದ್ದು ಸಮಗ್ರ ತನಿಖೆಯಿಂದ ಸತ್ಯ ಬಯಲಾಗಬೇಕಿದೆ.
ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ