Karnataka Rain: ಕರುನಾಡಿನಲ್ಲಿ ಮುಂದುವರೆದ ವರುಣಾರ್ಭಟ, ನೂರಾರು ಮನೆಗಳಿಗೆ ನುಗ್ಗಿದ ಮಳೆ ನೀರು

ಕರ್ನಾಟಕದಲ್ಲಿ ಭಾರೀ ಮಳೆ ಮುಂದುವರೆದಿದ್ದು, ವರುಣಾರ್ಭಟಕ್ಕೆ ಜನರು ಸುಸ್ತಾಗಿದ್ದಾರೆ. ಅನೇಕ ಕಡೆಗಳಲ್ಲಿ ಪ್ರವಾಹದಂತೆ ಮಳೆ ನೀರು ಹರಿದು ಹೋಗುತ್ತಿದ್ದು, ಅಪಾರ ಪ್ರಮಾಣದಲ್ಲಿ ಆಸ್ತಿ ಪಾಸ್ತಿಗಳಿಗೆ ಹಾನಿ ಸಂಭವಿಸಿದೆ.

Karnataka Rain: ಕರುನಾಡಿನಲ್ಲಿ ಮುಂದುವರೆದ ವರುಣಾರ್ಭಟ, ನೂರಾರು ಮನೆಗಳಿಗೆ ನುಗ್ಗಿದ ಮಳೆ ನೀರು
ಕರ್ನಾಕದಲ್ಲಿ ಮುಂದುವರಿದ ಮಳೆ, ಮನೆಗಳಿಗೆ ನುಗ್ಗಿದ ನೀರು, ತುಂಬಿ ಹರಿದ ಕೆರೆಗಳು
Follow us
TV9 Web
| Updated By: Rakesh Nayak Manchi

Updated on:Sep 06, 2022 | 7:30 AM

ಬೆಂಗಳೂರು: ಕರ್ನಾಟಕದಲ್ಲಿ ಭಾರೀ ಮಳೆ ಮುಂದುವರೆದಿದ್ದು, ವರುಣಾರ್ಭಟಕ್ಕೆ ಜನರು ಸುಸ್ತಾಗಿದ್ದಾರೆ. ಅನೇಕ ಕಡೆಗಳಲ್ಲಿ ಪ್ರವಾಹದಂತೆ ಮಳೆ ನೀರು ಹರಿದು ಹೋಗುತ್ತಿದ್ದು, ಅಪಾರ ಪ್ರಮಾಣದಲ್ಲಿ ಆಸ್ತಿ ಪಾಸ್ತಿಗಳಿಗೆ ಹಾನಿ ಸಂಭವಿಸಿದೆ. ಅದರಂತೆ ಸೋಮವಾರ ಸುರಿದ ಮಳೆಗೆ ಗದಗ ಜಿಲ್ಲೆಯಲ್ಲಿ ಅವಾಂತರವೇ ಸೃಷ್ಟಿಯಾಗಿದ್ದು, ಸಿಹಿಹಳ್ಳ ಹಾಗೂ ಸೌಳ ಹಳ್ಳಗಳು ಉಕ್ಕಿ ಹರಿದಿವೆ. ಇನ್ನೊಂದೆಡೆ ಗದಗ ತಾಲೂಕಿನ ಮದಗಾನೂರ ಗ್ರಾಮದಲ್ಲಿ 500ಕ್ಕೂ ಹೆಚ್ಚು ಮನೆಗೆ ಮಳೆ ನೀರು ನುಗ್ಗಿದ್ದು, ರಾತ್ರೋ ರಾತ್ರಿ ರೈತರು ದಿಕ್ಕೆಟ್ಟಿದ್ದಾರೆ. ಬಹುತೇಕ ರೈತರ ಮನೆಯಲ್ಲಿನ ಧಾನ್ಯದರಾಶಿ ಹಾಳಾಗಿದ್ದು, ದಿನಬಳಕೆಯ ವಸ್ತುಗಳು ನೀರುಪಾಲಾಗಿವೆ. ಶೇಂಗಾ, ಈರುಳ್ಳಿ, ಮೆಣಸಿನಕಾಯಿ ಸೇರಿ ಇತರೆ ಬೆಳೆಗಳು ನೀರಿನಲ್ಲಿ ಕೊಚ್ಚಿಹೋಗಿವೆ.

ಗದಗ ಮತ್ತು ಬೆಟಗೇರಿ ಅವಳಿ ನಗರದಲ್ಲಿ ಜಲಪ್ರಳಯ ಸಂಭವಿಸಿದ್ದು, ಅನೇಕ ಪ್ರದೇಶಗಳಲ್ಲಿ ಜನರ ಜೀವನ ಅಸ್ತವ್ಯಸ್ಥಗೊಂಡಿತು. ಈ ನಿಟ್ಟಿನಲ್ಲಿ ತಡರಾತ್ರಿಯೇ ಕಾರ್ಯಪ್ರವೃತ್ತರಾದ ಜಿಲ್ಲಾಧಿಕಾರಿ ವೈಶಾಲಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಪರಿಹಾರ ಕಾರ್ಯಕ್ಕೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಅವಳಿ ನಗರದ ಮಂಜುನಾಥ್, ಅಂಬೇಡ್ಕರ್, ಗಂಗೀಮಡಿ ಬಡಾವಣೆ, ಭಜಂತ್ರಿ ಓಣಿ ಸೇರಿ ಹಲವಡೆ ಸಾಕಷ್ಟು ಸಮಸ್ಯೆಗಳಾಗಿದ್ದು, ನೂರಾರು ಮನೆಗಳಿಗೆ ನೀರು ನುಗ್ಗಿದೆ. ಮನೆಗಳಿಗೆ ನೀರು ನುಗ್ಗಿ ಅಪಾಯದಲ್ಲಿ ಸಿಲುಕಿದ್ದವರ ರಕ್ಷಣಾ ಕಾರ್ಯ ನಡೆದಿದ್ದು, ರಾತ್ರಿ ಕಳೆಯಲು ಜನರಿಗೆ ವಿವಿಧ ಕಲ್ಯಾಣ ಮಂಟಪಗಳಲ್ಲಿ ವ್ಯವಸ್ಥೆ ನಡೆಸಲಾಯಿತು. ಇಲ್ಲಿ ಊಟದ ವ್ಯವಸ್ಥೆಯನ್ನೂ ಕಲ್ಪಿಸಲಾಯಿತು.

ಜಿಲ್ಲಾಡಳಿತದ ವಿರುದ್ಧ ವೃದ್ಧೆಯ ಆಕ್ರೋಶ

ರಕ್ಕಸ ಮಳೆಗೆ ಗದಗ-ಬೆಟಗೇರಿ ಅವಳಿ ನಗರ ತತ್ತರಿಸಿದ್ದು, ಮನೆ ತುಂಬಾ ನೀರು ತುಂಬಿದ ಹಿನ್ನೆಲೆ ಖುರ್ಚಿ ಮೇಲೆ ಕುಳಿತು ರಾತ್ರಿಯಲ್ಲಿ ವೃದ್ಧೆ ಜಾಗರಣೆ ಮಾಡಿದ್ದಾರೆ. ಮನೆಯಲ್ಲಿ ಎರಡು ಅಡಿ ನೀರು ನಿಂತು ಕುಟುಂಬಸ್ಥರ ಗೋಳಾಡುತ್ತಿದ್ದರೆ ಇತ್ತ ಅಜ್ಜಿ ಜಿಲ್ಲಾಡಳಿತದ ನಿರ್ಲಕ್ಷ್ಯವನ್ನು ಬೊಟ್ಟು ಮಾಡಿದ್ದಾರೆ. ಮನೆಗಳಿಗೆ ನೀರು ನುಗ್ಗಿ ಜನರು ಸಂಕಷ್ಟದಲ್ಲಿ ಇದ್ದರೂ ಜಿಲ್ಲಾಡಳಿತ ನಿರ್ಲಕ್ಷ್ಯ ತೋರಿದೆ. ಯಾರೂ ಬಂದಿಲ್ಲ, ಏನೂ ವ್ಯವಸ್ಥೆ ಇಲ್ಲ, ಆರೋಗ್ಯ ಸರಿ ಇಲ್ಲ, ರಾತ್ರಿ ಜಾಗರಣೆ ಮಾಡುವ ಸ್ಥಿತಿ ಬಂದಿದೆ, ಯಾವ ಮಂಗಲ ಕಾರ್ಯಾಲಯದಲ್ಲೂ ಮಲಗುವ ವ್ಯವಸ್ಥೆ ಮಾಡಿಲ್ಲ, ಯಾವ ಅಧಿಕಾರಿಗಳು ಬಂದಿಲ್ಲ ಎಂದು ಆಕ್ರೋಶ ಹೊರಹಾಕಿದರು.

ಕುಸಿದು ಬಿದ್ದ 15 ಮನೆಗಳು, ಬೆಲೆಗಳು ನಾಶ

ಕೋಲಾರದಲ್ಲಿ ನಿರಂತರ ಮಳೆಯಿಂದ ಅನಾಹುತ ಸಂಭವಿಸಿದ್ದು, ಈವರೆಗೆ ಜಿಲ್ಲೆಯಲ್ಲಿ 15 ಮನೆಗಳು ಕುಸಿದು ಬಿದ್ದಿವೆ. ಅಲ್ಲದೆ 252 ಹೆಕ್ಟೇರ್ ಪ್ರದೇಶದಲ್ಲಿನ ತೋಟಗಾರಿಕಾ ಹಾಗೂ ಕೃಷಿ ಬೆಳೆಗಳು ಹಾನಿಯಾಗಿವೆ. ಸಿಡಿಲಿನ ಹೊಡೆತಕ್ಕೆ ಒಂದು ಪ್ರಾಣ ಹಾನಿಯಾಗಿದೆ, ಸುಮಾರು 100 ಕ್ಕೂ ಲೋಕೋಪಯೋಗಿ ಹಾಗೂ ಗ್ರಾಮೀಣ ರಸ್ತೆಗಳು ಹಾಳಾಗಿದ್ದು, ಈ ಎಲ್ಲದರ ಬಗ್ಗೆ ಸರ್ಕಾರಕ್ಕೆ ವರದಿ ಕಳಿಸಲಾಗಿದೆ ಎಂದು ಕೋಲಾರ ಜಿಲ್ಲಾಧಿಕಾರಿ ವೆಂಕಟರಾಜಾ ಮಾಹಿತಿ ನೀಡಿದ್ದಾರೆ.

ಬೀದಿಯಲ್ಲಿ ಜನರ ಪರದಾಟ

ತುಮಕೂರು ಜಿಲ್ಲೆಯಲ್ಲಿ ತಡರಾತ್ರಿಯೂ ಕೆಲವೆಡೆ ಮಳೆರಾಯ ಅಬ್ಬರಿಸಿದ್ದು, ಹಲವು ಮನೆಗಳಿಗೆ ನೆಯ ನೀರು ಹೊಕ್ಕಿದೆ. ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲೂಕಿನ ಹುಳಿಯಾರು ಭಾಗದಲ್ಲಿ ಭಾರೀ ಮಳೆಗೆ ಮಡಿವಾಳರ ಬೀದಿಯಲ್ಲಿ ಹಲವು ಮನೆಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿದ್ದು, ಮನೆಯಲ್ಲಿದ್ದ ವಸ್ತುಗಳು, ಸಾಮಾಗ್ರಿಗಳು ನೀರುಪಾಲು ಆಗಿವೆ. ಇದರಿಂದಾಗಿ ಬೀದಿಯಲ್ಲಿ ಜನರ ಪರದಾಡುತ್ತಿದ್ದು, ಮಹಿಳೆಯರು ಸೇರಿದಂತೆ ಎಲ್ಲರೂ ಮನೆಯಿಂದ ನೀರು ಹೊರಹಾಕಿದರು. ಇನ್ನೊಂದೆಡೆ ಚಿಕ್ಕನಾಯಕನಹಳ್ಳಿ ತಾಲೂಕಿನ ಹುಳಿಯಾರಿನ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸೋರಿಕೆಯಾಗುತ್ತಿದ್ದು, ಮಳೆ ಸಂದರ್ಭದಲ್ಲಿ ಆಸ್ಪತ್ರೆಯೊಳಗೆ ನೀರು ತುಂಬುವ ಆತಂಕ ಎದುರಾಗಿದೆ. ಈ ನಿಟ್ಟಿನಲ್ಲಿ ಆಸ್ಪತ್ರೆಯನ್ನು ದುರಸ್ಥಿ ಮಾಡುವಂತೆ ಸ್ಥಳೀಯರು ಒತ್ತಾಯಿಸುತ್ತಿದ್ದಾರೆ.

ಮನೆ ಕುಸಿದು ಓರ್ವ ಸಾವು

ಹಾವೇರಿ ಜಿಲ್ಲೆಯಲ್ಲಿ ರಾತ್ರಿ ಸುರಿದ ಧಾರಾಕಾರ ಮಳೆಗೆ ಶಿಗ್ಗಾಂವಿ ತಾಲೂಕಿನ ಶಿಶುವಿನಹಾಳ ಗ್ರಾಮದಲ್ಲಿ ಮನೆಯೊಂದು ಕುಸಿದುಬಿದ್ದು, ಓರ್ವ ಸಾವನ್ನಪ್ಪಿದ ಘಟನೆ ನಡೆದಿದೆ. ಮನೆ ಕುಸಿತದಿಂದ ಗಂಭೀರವಾಗಿ ಗಾಯಗೊಂಡಿದ್ದ ಬಸನಗೌಡ ಪಾಟೀಲ(32) ಅವರನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ಕರೆದೊಯ್ಯುವ ವೇಳೆ ಮಾರ್ಗಮಧ್ಯೆದಲ್ಲಿ ಸಾವನ್ನಪ್ಪಿದ್ದಾರೆ. ಮನೆಯಲ್ಲಿದ್ದ ಮತ್ತಿಬ್ಬರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇನ್ನು ಹಾನಗಲ್ ತಾಲೂಕಿನ ಶಂಕರಿಕೊಪ್ಪ ಗ್ರಾಮದಲ್ಲಿ  ಹಿರೇಕೆರೆ ತುಂಬಿ ಹರಿದು ಮನೆಗಳಿಗೆ ನೀರು ನುಗ್ಗಿದೆ. ಮನೆಯೊಳಗೆ ಹೊಕ್ಕ ನೀರನ್ನು ಹೊರಹಾಕಲು ನಿವಾಸಿಗಳು ಹರಸಾಹಸ ಪಟ್ಟರು.

ಚಿಕ್ಕಬಳ್ಳಾಪುರ ಜಿಲ್ಲೆಯಲ್ಲೂ ಸೋಮವಾರ ರಾತ್ರಿ ಧಾರಾಕಾರ ಮಳೆಯಾಗಿದ್ದು, ಧಾರಾಕರ ಮಳೆಯಿಂದ ವೃದ್ದ ದಂಪತಿಯ ಮನೆ ಜಲಾವೃತಗೊಂಡಿತು. ಚಿಕ್ಕಬಳ್ಳಾಫುರ ತಾಲೂಕಿನ ತುಮಕಲಹಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ರಾಜಕಾಲುವೆ ಒತ್ತುವರಿಯಿಂದ ಮನೆಗೆ ನೀರು ನುಗ್ಗಿದೆ. ಪರಿಣಾಮವಾಗಿ ರಾತ್ರಿಯಿಡಿ ನಿದ್ದೆ ಮಾಡದ ವೃದ್ದ ದಂಪತಿ ರವಿಪ್ರಕಾಶ ಹಾಗೂ ಗೀತಾ ಜಾಗರಣೆ ಮಾಡುವಂತಾಯಿತು. ಅಲ್ಲದೆ ಮನೆಯಲ್ಲಿದ್ದ ಬಟ್ಟೆ ಬರೆ ದವಸ ಧಾನ್ಯಗಳು ನೀರು ಪಾಲಾಗಿದ್ದು, ಪದೆ ಪದೆ ಮನೆಗಳು ಜಲಾವೃತವಾಗುತ್ತಿವೆ ಎಂದು ಅಳಲು ತೋಡಿಕೊಂಡಿದ್ದಾರೆ.

ಮತ್ತಷ್ಟು ರಾಜ್ಯದ ಸುದ್ದಿಗಳನ್ನ ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:25 am, Tue, 6 September 22