ಸರ್ಕಾರಿ ಆಸ್ಪತ್ರೆಗಳು ಅಂದ್ರೆ ಬಡವರ ಪಾಲಿನ ಸಂಜೀವಿನಿ ಅಂತಾರೆ. ಆದ್ರೆ, ಗದಗ ಜಿಮ್ಸ್ ಆಸ್ಪತ್ರೆ (GIMS Hospital in Gadag) ಬಡವರ ರಕ್ತ ಹೀರುವ ಆಸ್ಪತ್ರೆಯಾಗಿದೆ. ಗಂಭೀರ ಕಾಯಿಲೆಯಿಂದ ನರಳಾಡುವ ರೋಗಿಗಳ ಕೈಗೆ ತಮ್ಮ ರಕ್ತ ತಪಾಸಣೆಯ ವರದಿ ಸಿಗದೇ ನರಳಾಡುತ್ತಿದ್ದಾರೆ. ಔಷಧಿಗಳು ಇಲ್ಲದೇ ಗೋಳಾಡುತ್ತಿದ್ದಾರೆ. ವರದಿ ಕೇಳಿದ್ರೆ ಮಷಿನ್ ಕೆಟ್ಟಿವೆ. ಇವತ್ತು, ನಾಳೆ ಅಂತಾನೆ ಕಥೆ ಹೇಳ್ತಾಯಿದ್ದಾರೆ. ಹೀಗಾಗಿ ರಕ್ತ ತಪಾಸಣೆ ರಿಪೋರ್ಟ್ ಇಲ್ಲದೇ ವೈದ್ಯರಿಗೂ ಮುಂದಿನ ತಪಾಸಣೆ ಕಷ್ಟವಾಗಿದೆ. ಸರ್ಕಾರಿ ಆಸ್ಪತ್ರೆಯಲ್ಲಿ ಉಚಿತ ಚಿಕಿತ್ಸೆ ಸಿಗುತ್ತೆ ಅಂತ ಬಂದ್ರೆ ಬಡವರ ಜೇಬಿಗೆ ನಿತ್ಯವೂ ಭರ್ಜರಿ ಕತ್ತರಿ ಬೀಳ್ತಾಯಿದೆ. ಚಿಕಿತ್ಸೆಯ ಮಾತು ದೂರವೇ ಉಳಿದಿದೆ. ಇದು ಬಡ ರೋಗಿಗಳ ಆಕ್ರೋಶಕ್ಕೆ ಕಾರಣವಾಗಿದೆ (Gadag News).
ವಾರಗಟ್ಟಲೇ ರಕ್ತ ತಪಾಸಣೆ ರಿಪೋರ್ಟ್ ನೀಡದೇ ಸತಾಯಿಸುತ್ತಿರೋ ಸಿಬ್ಬಂದಿ….! ರಕ್ತ ತಪಾಸಣೆಯೂ ಇಲ್ಲ. ಔಷಧಿಗಳೂ ಇಲ್ಲವಾಗಿದೆ. ಎಲ್ಲವೂ ಖಾಸಗಿ ಆಸ್ಪತ್ರೆಯಲ್ಲೇ ಸಿಗುತ್ತೆ ಹೋಗಿ ಅನ್ನೋ ಉತ್ತರ…! ಜಿಮ್ಸ್ ಆಡಳಿತದ ವಿರುದ್ಧ ಬಡ ರೋಗಿಗಳ ಆಕ್ರೋಶ…! ಗದಗ ಜಿಮ್ಸ್ ಆಸ್ಪತ್ರೆ ಆಡಳಿತಕ್ಕೆ ಹೇಳೋರಿಲ್ಲ. ಕೇಳೋರಿಲ್ಲ. ಇಲ್ಲಿ ಸಿಬ್ಬಂದಿಗಳು ಆಡಿದ್ದೇ ಆಟ…! ಕೆಲ ಔಷಧಿಗಳು ಖಾಲಿಯಾಗಿ ತಿಂಗಳಾದ್ರೂ ನಿರ್ದೇಶಕರು ಡೋಂಟ್ ಕೇರ್.. ರಕ್ತ ತಪಾಸಣೆ ಮಷಿನ್ ಕೆಟ್ಟಿದೆ ಅಂತ ನಾಳೆ,. ನಾಡಿದ್ದು, ಅಂತ ರೋಗಿಗಳಿಗೆ ಅಲೆದಾಟ..!
ಬೆಡ್ ಗಳ ಮೇಲೆ ರೋಗಿಗಳ ಗೋಳಾಟ, ನರಳಾಟ. ರಕ್ತ ತಪಾಸಣೆ ರಿಪೋರ್ಟ್ ಗಾಗಿ ಹಳೇ ಆಸ್ಪತ್ರೆ, ಹೊಸ ಆಸ್ಪತ್ರೆಗೆ ಸಂಬಂಧಿಕರ ಅಲೆದಾಟ. ಮುಂದಿನ ಚಿಕಿತ್ಸೆಗಾಗಿ ರೋಗಿಗಳ ಪರದಾಟ. ರಕ್ತ ತಪಾಸಣೆ ವಿಭಾಗದ ಸಿಬ್ಬಂದಿಗಳ ವಿರುದ್ಧ ರೋಗಿಗಳ ಸಂಬಂಧಿಕರ ಆಕ್ರೋಶ. ಹೌದು ಈ ಅವ್ಯವಸ್ಥೆಗಳ ದೃಶ್ಯಗಳು ಕಂಡುಬರುವುದು ಗದಗ ಜಿಮ್ಸ್ ಆಸ್ಪತ್ರೆಯಲ್ಲಿ. ಸದಾ ಒಂದಿಲ್ಲೊಂದು ಯಡವಟ್ಟುಗಳ ಮೂಲಕ ರಾಜ್ಯದಲ್ಲಿ ಸದ್ದು ಮಾಡ್ತಾಯಿದೆ. ಆದ್ರೂ, ಸರ್ಕಾರ, ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ಈ ಆಸ್ಪತ್ರೆಯ ಆಡಳಿತಕ್ಕೆ ಚಿಕಿತ್ಸೆ ಕೊಡುವ ಕೆಲಸ ಮಾಡ್ತಾಯಿಲ್ಲ. ಹೀಗಾಗಿ ಇಲ್ಲಿ ರೋಗಿಗಳು ನರಳಾಡುವಂತಾಗಿದೆ.
ಇಲ್ಲಿನ ಜಿಮ್ಸ್ ಆಡಳಿತ ಆಡಿದ್ದೇ ಆಟ ಎನ್ನುವಂತೆ ವರ್ತನೆ ತೋರುತ್ತಾ ಇದ್ದಾರೆ. ಸರ್ಕಾರಿ ಆಸ್ಪತ್ರೆ ಅಂದ್ರೆ ಎಲ್ಲವೂ ಉಚಿತ ಚಿಕಿತ್ಸೆ ಸಿಗುತ್ತೆ ಅಂತ ಬಡ ರೋಗಿಗಳು ಆಗಮಿಸ್ತಾರೆ. ಆದ್ರೆ, ಇಲ್ಲಿಗೆ ಬಂದ ಬಡ ರೋಗಿಗಳ ಜೇಬಿಗೆ ಭರ್ಜರಿ ಕತ್ತರಿ ಬಿಳ್ತಾಯಿದೆ. ಹೌದು ಗದಗ ತಾಲೂಕಿನ ಮಲ್ಲಸಮುದ್ರ ಗ್ರಾಮದ ಬಸವರಾಜ್ ವಿಪರೀತ ತಲೆ ನೋವು ಹಾಗೂ ಗದಗನ ಈರಮ್ಮ ಹೃದಯ ಸಂಬಂಧಿ ಕಾಯಿಲೆಯಿಂದ ಗದಗ ಜಿಮ್ಸ್ ಆಸ್ಪತ್ರೆಗೆ ದಾಖಲಾಗಿ ನರಳಾಡುತ್ತಿದ್ದಾರೆ. ಹೀಗಾಗಿ ವೈದ್ಯರು ವಿವಿಧ ರಕ್ತ ಮಾದರಿ ತಪಾಸಣೆಗೆ ಬರೆದುಕೊಟ್ಟಿದ್ದಾರೆ. ಆದ್ರೆ, ಜಿಮ್ಸ್ ರಕ್ತ ತಪಾಸಣಾ ವಿಭಾಗದಲ್ಲಿ ರಕ್ತದ ಮಾದರಿ ತಪಾಸಣೆಗೆ ನೀಡಿದ್ರೂ ವಾರಗಟ್ಟಲೇ ಆದ್ರೂ ರಕ್ತ ತಪಾಸಣೆ ವರದಿ ನೀಡದೇ ಸತಾಯಿಸುತ್ತಿದ್ದಾರೆ ಅಂತ ರೋಗಿಗಳು ಆರೋಪಿಸಿದ್ದಾರೆ. ಇದು ವೈದ್ಯರಿಗೂ ತಲೆನೋವಾಗಿದೆ.
ಬ್ಲಡ್ ರಿಪೋರ್ಟ್ ಇಲ್ಲದೇ ಮುಂದಿನ ಚಿಕಿತ್ಸೆ ಗೆ ವೈದ್ಯರು ಹಿಂದೇಟು ಹಾಕ್ತಾಯಿದ್ದಾರೆ ಅಂತ ರೋಗಿಗಳ ಸಂಬಂಧಿಕರು ಆರೋಪಿಸಿದ್ದಾರೆ. ರಕ್ತ ತಪಾಸಣಾ ವಿಭಾಗದಲ್ಲಿ ಕೇಳಿದ್ರೆ ಮಷಿನ್ ಕೆಟ್ಟಿವೆ ನಾಳೆ.. ನಾಡಿದ್ದು ಅಂತ ಸಿಬ್ಬಂದಿ ಕಥೆ ಹೇಳ್ತಾಯಿದ್ದಾರೆ. ಹೀಗಾಗಿ ಸೂಕ್ತ ಚಿಕಿತ್ಸೆ ಸಿಗದೇ ರೋಗಿಗಳು ಬೆಡ್ ಮೇಲೆ ನರಳಾಡುತ್ತಿದ್ದಾರೆ. ರೋಗಿಗಳ ನರಳಾಟ ನೋಡದೇ ಸಂಬಂಧಿಕರು ಒದ್ದಾಡುತ್ತಿದ್ದಾರೆ. ಹಳೆ ಆಸ್ಪತ್ರೆ ಕಟ್ಟಡದಲ್ಲಿ ರೋಗಿಗಳು ಅಡ್ಮಿಟ್ ಆದ್ರೆ, ಹೊಸ ಆಸ್ಪತ್ರೆ ಕಟ್ಟಡದಲ್ಲಿ ರಕ್ತ ತಪಾಸಣೆ ವಿಭಾಗ ಇದೆ. ನಿತ್ಯವೂ ಹತ್ತಾರು ಬಾರಿ ಅಲೆದಾಡಿ ಸಂಬಂಧಿಕರು ರೋಸಿಹೋಗಿದ್ದಾರೆ.
ಜಿಮ್ಸ್ ಆಡಳಿತದ ವ್ಯವಸ್ಥೆ ನೋಡಿದ್ರೆ ಕೆಲ ಖಾಸಗಿ ಆಸ್ಪತ್ರೆಗಳಿಗೂ ಜಿಮ್ಸ್ ಆಡಳಿತಕ್ಕೂ ಲಿಂಕ್ ಇದೆ ಅಂತ ರೋಗಿಗಳು ಆರೋಪಿಸಿದ್ದಾರೆ. ಜಿಮ್ಸ್ ಆಸ್ಪತ್ರೆಯಲ್ಲಿ ಎಲ್ಲ ಸೌಕರ್ಯಗಳು ಇದ್ರೂ ಖಾಸಗಿ ಆಸ್ಪತ್ರೆಗೆ ರಕ್ತ ಮಾದರಿ ತಪಾಸಣೆಗೆ ಕಳಿಸ್ತಿದ್ದಾರೆ. ರೋಗಿಗಳ ಸಂಬಂಧಿಕರು ಖಾಸಗಿ ಆಸ್ಪತ್ರೆಗಳು ನೀಡಿದ ವರದಿಗಳನ್ನು ಟಿರ್ವಿಗೆ ತೋರಿಸಿ ಆಕ್ರೋಶ ಹೊರಹಾಕಿದ್ದಾರೆ. ಸಾವಿರಾರು ರೂಪಾಯಿ ಕೊಟ್ಟು ಖಾಸಗಿ ಆಸ್ಪತ್ರೆಯಲ್ಲಿ ವರದಿ ಪಡೆದುಕೊಂಡು ಬರಲಾಗಿದೆ ಅಂತ ಕಿಡಿಕಾರಿದ್ದಾರೆ. ಅಷ್ಟೇ ಅಲ್ಲ ಇಲ್ಲಿ ಔಷಧಿ ಮಾತ್ರೆಗಳಿಗೂ ಬರವಿದೆ. ಜಿಮ್ಸ್ ಔಷಧಿ ವಿಭಾಗದಲ್ಲಿ ಕೆಲವು ಔಷಧಿ ಮಾತ್ರೆಗಳು ಇಲ್ಲ ಅಂತ ಸಿಬ್ಬಂದಿಗಳು ಹೊರಗಡೆ ಕಳಿಸ್ತಿದ್ದಾರೆ.
ಕೆಲವು ಔಷಧಿಗಳು ಖಾಲಿಯಾಗಿ ತಿಂಗಳಾದ್ರೂ ಜಿಮ್ಸ್ ನಿರ್ದೇಶಕ ಡಾ ಬಸವರಾಜ್ ಬೊಮ್ಮನಹಳ್ಳಿ (Director Dr Basavaraj Bommanahalli) ಡೋಂಟ್ ಕೇರ್ ಅಂತಿದ್ದಾರಂತೆ. ಆಸ್ಪತ್ರೆಯಲ್ಲಿ ಕೆಲವು ಔಷಧಿ, ಮಾತ್ರೆಗಳು ಇಲ್ಲ ಅಂತ ಔಷಧಿ ವಿಭಾಗದ ಸಿಬ್ಬಂದಿಗಳಿಂದಲೇ ಸತ್ಯ ಬಯಲಾಗಿದೆ. ಸರ್ಕಾರಿ ಆಸ್ಪತ್ರೆಯಲ್ಲಿ ಉಚಿತ ಚಿಕಿತ್ಸೆ ಸಿಗುತ್ತೆ ಅಂತ ಬಂದ ರೋಗಿಗಳ ಜೇಬಿಗೆ ಭರ್ಜರಿ ಕತ್ತರಿ ಬಿಳ್ತಾಯಿದೆ. ಔಷಧಿ ಖರೀದಿಗೆ, ರಕ್ತ ತಪಾಸಣೆ ಸಾವಿರಾರು ರೂಪಾಯಿ ಖರ್ಚು ಮಾಡುವ ಸ್ಥಿತಿ ಬಡ ರೋಗಿಗಳಿಗೆ ಬಂದಿದೆ. ಇದು ಜಿಮ್ಸ್ ಆಡಳಿತದ ನಿರ್ಲಕ್ಷ್ಯ ವಿರುದ್ಧ ರೋಗಿಗಳ ಸಂಬಂಧಿಕರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇನ್ನೂ ಈ ಬಗ್ಗೆ ಜಿಮ್ಸ್ ನಿರ್ದೇಶಕರನ್ನು ಕೇಳಿದ್ರೆ ಹೇಳೋದು ಹೀಗೆ.
ಬಾಲಕನೊಬ್ಬ ಚಿಕಿತ್ಸೆಗೆ ದಾಖಲಾಗಿದ್ದಾನೆ. ಈತನಿಗೆ ವೈದ್ಯರು ಮಾತ್ರೆ, ಮುಲಾಮ ಬರೆದುಕೊಂಡಿದ್ದಾರೆ. ಆದ್ರೆ, ಈ ಮಾತ್ರೆ, ಮುಲಾಮು ಜಿಮ್ಸ್ ಆಸ್ಪತ್ರೆಯಲ್ಲಿ ಇಲ್ಲ. ವೈದ್ಯರು ಬರೆದುಕೊಟ್ಟ ಮಾತ್ರ, ಮುಲಾಮು ತುಂಬಾ ದುಬಾರಿಯಾಗಿದ್ದು, ಅನಿವಾರ್ಯವಾಗಿ ನಾವು ಸಾವಿರಾರು ರೂಪಾಯಿ ಖರ್ಚು ಮಾಡಿ ಹೊರಗಡೆ ಖರೀದಿ ಮಾಡಿ ತಂದಿದ್ದೇವೆ ಅಂತ ಹೇಳ್ತಿದ್ದಾರೆ. ಔಷಧಿ ವಿಭಾಗ ಮಾತ್ರೆ, ಔಷಧಿ ಕೊರತೆ ಬಗ್ಗೆ ಪಟ್ಟಿ ಮಾಡಿ ನಿರ್ದೇಶಕರಿಗೆ ನೀಡಿದ್ದಾರೆ. ಆದ್ರೆ, ನಿರ್ದೇಶಕರು ಮಾತ್ರ ಇನ್ನೂ ಖರೀದಿ ಮಾಡಿಲ್ಲ. ನಾವೇನ್ ಮಾಡೋಣ ಅನ್ನೋ ಉತ್ತರ ನೀಡ್ತಾರೆ. ಒಟ್ಟಾರೆಯಾಗಿ ಬಡವರ ಪಾಲಿಗೆ ಸಂಜೀವಿನಿಯಾಗಬೇಕಿದ್ದ ಗದಗ ಜಿಮ್ಸ್ ಆಸ್ಪತ್ರೆ ಬಡವರ ಪಾಲಿಗೆ ಯಮವಾಗಿ ಕಾಡುತ್ತಿರೋದು ಮಾತ್ರ ವಿಪರ್ಯಾಸವೇ ಸರಿ. (ವರದಿ: ಸಂಜೀವ ಪಾಂಡ್ರೆ, ಟಿವಿ 9, ಗದಗ)
Published On - 11:49 am, Mon, 28 November 22