AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆಗುಂಬೆ ಘಾಟಿಯಲ್ಲಿ ಭಾರೀ ವಾಹನ ಸಂಚಾರ ನಿಷೇಧ, ಎಂದಿನಿಂದ? ಬದಲಿ ಮಾರ್ಗ ಇಲ್ಲಿದೆ

ಕರ್ನಾಟಕದಲ್ಲಿ ಮುಂಗಾರ ಮಳೆ ಜೋರಾಗಿದೆ. ರಾಜ್ಯ ಹಲವು ಜಿಲ್ಲೆಗಳಲ್ಲಿ ಭಾರೀ ಮಳೆಯಾಗುತ್ತಿದ್ದು, ಅಲ್ಲಲ್ಲಿ ಜನಜೀವನ ಅಸ್ತವ್ಯಸ್ಥವಾಗಿದೆ. ಅದರಲ್ಲೂ ಮುಖ್ಯವಾಗಿ ಚಾರ್ಮಾಡಿ ಘಾಟ್​ ನಲ್ಲಿ ಮಳೆಯಿಂದಾಗಿ ಭೂಕುಸಿತ ಉಂಟಾಗಿತ್ತು. ಇದರಿಂದ ಎಚ್ಚೆತ್ತ ಶಿವಮೊಗ್ಗ ಜಿಲ್ಲಾಡಳಿತ, ಭಾರೀ ಮಳೆಯಿಂದಾಗಿ ಭೂ ಕುಸಿತ ಸಾಧ್ಯತೆ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಆಗುಂಬೆ ಘಾಟಿಯಲ್ಲಿ ಭಾರೀ ವಾಹನಗಳ ಸಂಚಾರಕ್ಕೆ ನಿಷೇಧ ಹೇರಲಾಗಿದೆ. ಯಾವಾಗಿನಿಂದ ಎಲ್ಲಿಯವರಿಗೆ ಎನ್ನುವ ವಿವರ ಇಲ್ಲಿದೆ.

ಆಗುಂಬೆ ಘಾಟಿಯಲ್ಲಿ ಭಾರೀ ವಾಹನ ಸಂಚಾರ ನಿಷೇಧ, ಎಂದಿನಿಂದ? ಬದಲಿ ಮಾರ್ಗ ಇಲ್ಲಿದೆ
Agumbe Ghat
ರಮೇಶ್ ಬಿ. ಜವಳಗೇರಾ
|

Updated on: Jun 14, 2025 | 2:55 PM

Share

ಶಿವಮೊಗ್ಗ, (ಜೂನ್ 14): ಭಾರೀ ಮಳೆಯಿಂದ (Rain) ಭೂ ಕುಸಿತ ಸಾಧ್ಯತೆ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಶಿವಮೊಗ್ಗ (Shivamogga) ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಆಗುಂಬೆ ಘಾಟಿಯಲ್ಲಿ (Agumbe Ghat) ಭಾರೀ ವಾಹನಗಳ ಸಂಚಾರಕ್ಕೆ ನಿಷೇಧಿಸಲಾಗಿದೆ. ಮುಂಗಾರು ಮಳೆ ಹಿನ್ನೆಲೆ ಜೂನ್ 15ರಿಂದ ಸೆಪ್ಟೆಂಬರ್ 30ರವರೆಗೆ ಆಗುಂಬೆ ಘಾಟಿಯಲ್ಲಿ ಭಾರಿ ವಾಹನಗಳ ಸಂಚಾರವನ್ನು ನಿಷೇಧಿಸಿ ಶಿವಮೊಗ್ಗ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅವರು ಆದೇಶ ಹೊರಡಿಸಿದ್ದಾರೆ. ಹೀಗಾಗಿ ನಾಳೆಯಿಂದ ಬರೋಬ್ಬರಿ ಮೂರುವರೆ ತಿಂಗಳುಗಳ ಕಾಲ ಆಗುಂಬೆ ಘಾಟಿನಲ್ಲಿ ಣಾರೀ ವಾಹನ ಓಡಾಡುವುದಿಲ್ಲ.

ಆಗುಂಬೆ ಘಾಟಿ 169ಎ ಹೆದ್ದಾರಿ ರಸ್ತೆಯಲ್ಲಿ ಸಂಚಾರ ಬಂದ್ ಮಾಡಿದ್ದು, ಭಾರೀ ವಾಹನಗಳ ಓಡಾಟಕ್ಕೆ ಜಿಲ್ಲಾಧಿಕಾರಿ ನಿಷೇಧ ಹೇರಿದ್ದಾರೆ. ಮಲ್ಪೆ – ಆಗುಂಬೆ ಹೆದ್ದಾರಿ ರಸ್ತೆಯಾಗಿರುವ ಆಗುಂಬೆ ಘಾಟಿಯಲ್ಲಿ ಭಾರೀ ಮಳೆಯಿಂದ ಭೂ ಕುಸಿತ ಸಾಧ್ಯತೆ ಹಿನ್ನೆಲೆ ಬದಲಿ ಮಾರ್ಗದಲ್ಲಿ ಸಂಚರಿಸುವಂತೆ ಶಿವಮೊಗ್ಗ ಜಿಲ್ಲಾಧಿಕಾರಿ ಗುರುದತ್ ಹೆಗಡೆ ಆದೇಶಿಸಿದ್ದಾರೆ.

ಇದನ್ನೂ ಓದಿ: ಬೆಂಗಳೂರಿನ ಈ ರಸ್ತೆಯಲ್ಲಿ ಮೂರು ತಿಂಗಳು ಸಂಚಾರ ನಿಷೇಧ!

ಬದಲಿ ಮಾರ್ಗ ಇಲ್ಲಿದೆ

ಉಡುಪಿಯಿಂದ ತೀರ್ಥಹಳ್ಳಿಗೆ ಸಂಚರಿಸುವ ಭಾರಿ ವಾಹನಗಳು ಬದಲಿ ಮಾರ್ಗವಾಗಿ ಉಡುಪಿ-ಕುಂದಾಪುರ-ಸಿದ್ದಾಪುರ-ಮಾಸ್ತಿಕಟ್ಟೆ-ತೀರ್ಥಹಳ್ಳಿ ಮಾರ್ಗವಾಗಿ ಸಂಚರಿಸುವಂತೆ ಜಿಲ್ಲಾಧಿಕಾರಿಗಳ ಆದೇಶದಲ್ಲಿ ತಿಳಿಸಿದ್ದು, ಆಗುಂಬೆ ಘಾಟಿಯಲ್ಲಿ ಲಘು ವಾಹನಗಳ ಸಂಚಾರಕ್ಕೆ ಮಾತ್ರ ಅನುವು ಮಾಡಿಕೊಡಲಾಗಿದೆ.

ಜಿಲ್ಲಾಧಿಕಾರಿಗಳ ಆದೇಶದಲ್ಲೇನಿದೆ?

ರಾಷ್ಟ್ರೀಯ ಹೆದ್ದಾರಿ 169 ಎ ತೀರ್ಥಹಳ್ಳಿ- ಮಲ್ಪೆ ರಸ್ತೆಯ ಆಗುಂಬೆ ಘಾಟಿಯಲ್ಲಿ ಭಾರಿ ಮಳೆಯಿಂದಾಗಿ ಮತ್ತು ಭಾರಿ ವಾಹನಗಳ ಓಡಾಟದಿಂದಾಗಿ ಅಲ್ಲಲ್ಲಿ ರಸ್ತೆ ಬದಿಯಲ್ಲಿ ಭೂ ಕುಸಿತ ಆಗುವ ಸಂಭವ ಇರುವುದರಿಂದ ದಿನಾಂಕ: 15-06-2025 ರಿಂದ 30-09-2025 ರವರೆಗೆ ಸದರಿ ರಸ್ತೆಯಲ್ಲಿ ಭಾರಿ ವಾಹನಗಳ ಸಂಚಾರವನ್ನು (ಜಲ್ಲಿ ಮತ್ತು ಸರಕು ಸಾಗಾಣೆ ತುಂಬಿದ ವಾಹನಗಳು) ನಿಷೇಧಿಸಿ ಬದಲಿ ಮಾರ್ಗದಲ್ಲಿ ಸಂಚರಿಸಲು ಆದೇಶಿಸುವಂತೆ ಉಲ್ಲೇಖ (1)ರ ಪತ್ರದಲ್ಲಿ ಕೋರಲಾಗಿದೆ. ಈ ವಿಚಾರದಲ್ಲಿ ಉಲ್ಲೇಖ(2)ರಂತೆ ಪೊಲೀಸ್ ಇಲಾಖೆಯಿಂದ ವರದಿ ಪಡೆಯಲಾಗಿರುತ್ತದೆ.

ಸದರಿಯವರ ಕೋರಿಕೆ ಹಾಗೂ ಪೊಲೀಸ್ ಇಲಾಖಾ ವರದಿಯನ್ವಯ ಸಾರ್ವಜನಿಕ ಹಿತದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ಕೇಂದ್ರ ಮೋಟಾರು ವಾಹನ ಕಾಯ್ದೆ 1988ರ ಕಲಂ 115 ಹಾಗೂ ಕರ್ನಾಟಕ ಮೋಟಾರು ವಾಹನಗಳ ನಿಯಾಮವಳಿಗಳು 1989ರ ಕಲಂ 221(ಎ) (2) & (5) ರನ್ನಯ, ರಾಷ್ಟ್ರೀಯ ಹೆದ್ದಾರಿ 169ಎ ಆಗುಂಬೆ ಘಾಟಿಯ ಮೂಲಕ ದಿನಾಂಕ: 15-06-2025 ರಿಂದ 30-09-2025 ರವರೆಗೆ ಲಘು ವಾಹನ ಸಂಚಾರಕ್ಕೆ ಮಾತ್ರ ಅನುವು ಮಾಡಿ ಭಾರಿ ವಾಹನ ಸಂಚಾರವನ್ನು ನಿರ್ಬಂಧಿಸಿ ಆದೇಶಿಸಿದೆ ಹಾಗೂ ಭಾರಿ ವಾಹನಗಳು ಪರ್ಯಾಯ ಮಾರ್ಗದಲ್ಲಿ ಸಂಚರಿಸುವುದು ಎಂದು ಆದೇಶಿಸಲಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.