Onion Price Hike: ಈರುಳ್ಳಿ ದರ ಶತಕದತ್ತ ಸಾಗುತ್ತಿದ್ದರೂ ಗದಗ ರೈತರಿಗೆ ಶಾಕ್! ದಲ್ಲಾಳಿಗಳ ಕಾಟದಿಂದ ಸಿಗ್ತಿಲ್ಲ ದರ
ಈರುಳ್ಳಿ ಬೆಲೆ ಏರಿಕೆ: ಮಾರುಕಟ್ಟೆಯಲ್ಲಿ ಈರುಳ್ಳಿಗೆ ಭರ್ಜರಿ ಬೆಲೆ ಇದೆ. ಹೀಗಾಗಿ ಬಂಪರ್ ಬೆಲೆ ಸಿಗಬಹುದು ಎಂದು ಗದಗ ಜಿಲ್ಲೆಯ ರೈತರು ಖುಷಿಯಲ್ಲಿದ್ದರು. ಆದರೆ, ದಲ್ಲಾಳಿಗಳ ವಂಚನೆಯಿಂದ ಬೆಳೆದ ಈರುಳ್ಳಿಗೆ ಸೂಕ್ತ ಬೆಲೆ ಸಿಗದೇ ರೈತರು ಒದ್ದಾಡುತ್ತಿದ್ದಾರೆ. ರೈತರಿಗೆ ಸಿಗುವ ದರದಲ್ಲಿ ದಿಢೀರ್ ಕುಸಿತವಾಗಿದೆ! ಎಪಿಎಂಸಿ ಅಧಿಕಾರಿಗಳು ಸಹಾಯಕ್ಕೆ ಬರುತ್ತಿಲ್ಲ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಗದಗ, ನವೆಂಬರ್ 11: ಕರ್ನಾಟಕದ ಮಾರುಕಟ್ಟೆಗಳಲ್ಲಿ ಈರುಳ್ಳಿ ದರ ಕೆಜಿಗೆ 70, 80 ರೂ. ಎಂದು ಶತಕದತ್ತ ದಾಪುಗಾಲಿಡುತ್ತಿದೆ. ಈರುಳ್ಳಿ ದರ ಏರಿಕೆಯಿಂದ ಕಂಗಾಲಾಗಿರುವ ಗ್ರಾಹಕರು, ರೈತರಿಗಾದರೂ ಹಣ ಸಿಗುತ್ತಿದೆಯಲ್ಲ ಎಂದು ಸಮಾಧಾನಪಟ್ಟುಕೊಳ್ಳಲು ಯತ್ನಿಸುತ್ತಿದ್ದಾರೆ. ಆದರೆ, ವಾಸ್ತವ ಬೇರೆಯೇ ಇದೆ! ಬೆಲೆ ಏರಿಕೆಯ ಲಾಭ ರೈತರಿಗೂ ಸಿಗುತ್ತಿಲ್ಲ, ಬದಲಿಗೆ ದಲ್ಲಾಳಿಗಳ ಪಾಲಾಗುತ್ತಿದೆ.
ದಲ್ಲಾಳಿಗಳ ಚೆಲ್ಲಾಟ, ರೈತರ ಸಂಕಷ್ಟ
ಈ ಬಾರಿ ಹಿಂಗಾರು ಮಳೆ ಅಬ್ಬರಿಸಿದ್ದರಿಂದ ರಾಜ್ಯದ ಉದ್ದಗಲಕ್ಕೂ ಈರುಳ್ಳಿ ಬೆಳೆ ಕೊಳೆತು ಹೋಗಿದೆ. ಬೇಡಿಕೆಯಷ್ಟು ಈರುಳ್ಳಿ ಮಾರುಕಟ್ಟೆಗೆ ಬರುತ್ತಿಲ್ಲ. ಹೀಗಾಗಿ ಇರುವ ಈರುಳ್ಳಿಗೆ ಉತ್ತಮ ಬೆಲೆ ಸಿಗುತ್ತಿದೆ. ಮಾರುಕಟ್ಟೆಯಲ್ಲಿ ಗ್ರಾಹಕರಿಗೆ ಒಂದು ಕೆಜಿ ಈರುಳ್ಳಿ 60 ರಿಂದ 70 ರೂಪಾಯಿಗೆ ಮಾರಾಟವಾಗುತ್ತಿದೆ. ಹೀಗಾಗಿ ರೈತರಿಗೆ 50 ರೂಪಾಯಿ ಆದರೂ ಸಿಗಬೇಕಿದೆ. ಆದರೆ, ಗದಗ ಎಪಿಎಂಸಿಯಲ್ಲಿ ದಲ್ಲಾಳಿಗಳು ಕಳ್ಳಾಟ ಆಡುತ್ತಿದ್ದಾರೆ ಎಂದು ರೈತರು ಆರೋಪಿಸಿದ್ದಾರೆ.
ಗದಗ ಮಾರುಕಟ್ಟೆಯಲ್ಲಿ ಹೇಗಿದೆ ಈರುಳ್ಳಿ ದರ?
ಗದಗ ಮಾರುಕಟ್ಟೆಯಲ್ಲಿ ಶುಕ್ರವಾರದವರೆಗೂ ಒಂದು ಕ್ವಿಂಟಲ್ ಈರುಳ್ಳಿಗೆ 4 ಸಾವಿರ, 5 ಸಾವಿರ ರೂಪಾಯಿ ಸಿಗುತ್ತಿತ್ತು. ಆದರೆ, ಶನಿವಾರ ಒಂದು ಕ್ವಿಂಟಲ್ ಈರುಳ್ಳಿಗೆ 500 ರೂಪಾಯಿ, 800, 1000 ರೂಪಾಯಿ ಮಾಡಿದ್ದಾರೆ. ಈ ಬಗ್ಗೆ ಪ್ರಶ್ನೆ ಮಾಡಿದರೆ ವಾಪಸ್ ತೆಗೆದುಕೊಂಡು ಹೋಗಿ ಎನ್ನುತ್ತಾರೆ ಎಂದು ರೈತ ಅಶೋಕ ಎಂಬವವರು ಬೇಸರ ತೋಡಿಕೊಂಡಿದ್ದಾರೆ.
ಇನ್ನು ಗದಗ ಜಿಲ್ಲೆಯ ಏಳು ತಾಲೂಕುಗಳಲ್ಲಿ ಅತೀ ಹೆಚ್ಚು ರೈತರು ಈರುಳ್ಳಿ ಬೆಳೆಯುತ್ತಾರೆ. ಇತ್ತಿಚೆಗೆ ಸುರಿದ ಮಳೆಯಿಂದ ಸಾಕಷ್ಟು ಈರುಳ್ಳಿ ನಾಶವಾಗಿದೆ. ಅಳಿದು ಉಳಿದ ಈರುಳ್ಳಿಗೆ ಒಳ್ಳೆಯ ಬೆಲೆ ಬರುತ್ತದೆ ಎಂದು ಕಟಾವು ಮಾಡಿಕೊಂಡು ಬಂದಿದ್ದಾರೆ. ಆದರೆ ಏಕಾಏಕಿ ಈರುಳ್ಳಿ ಬೆಲೆ ಕುಸಿತವಾಗಿದೆ.
ಒಂದು ಎಕರೆ ಈರುಳ್ಳಿ ಬೆಳೆಯಲು 50 ರಿಂದ 60 ಸಾವಿರ ರೂಪಾಯಿ ಖರ್ಚು ಮಾಡಿರುತ್ತಾರೆ. ಐನೂರು, ಸಾವಿರಕ್ಕೆ ಮಾರಾಟ ಮಾಡಿದರೆ ಹಾಕಿದ ಬಂಡವಾಳ ಕೂಡಾ ಬರುವುದಿಲ್ಲ ಎಂದು ರೈತ ಮುತ್ತಪ್ಪ ಹೇಳಿಕೊಂಡಿದ್ದಾರೆ.
ದಲ್ಲಾಳಿಗಳು ಹೇಳುವುದೇನು?
ಹಲವೆಡೆ ರೈತರು ಖರೀದಿದಾರರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ, ಈರುಳ್ಳಿಯನ್ನು ವಾಪಸ್ ತೆಗೆದುಕೊಂಡು ಹೋಗಿದ್ದಾರೆ. ಈ ಬಗ್ಗೆ ದಲ್ಲಾಳಿಗಳನ್ನು ಪ್ರಶ್ನಿಸಿದರೆ, ಈರುಳ್ಳಿ ದರ ದಿಢೀರ್ ಕಡಿಮೆಯಾಗಿಲ್ಲ. ಗುಣಮಟ್ಟದ ಈರುಳ್ಳಿಗೆ ಒಳ್ಳೆಯ ಬೆಲೆ ಇದೆ. ಆದರೆ ಗುಣಮಟ್ಟ ಇಲ್ಲದ ಈರುಳ್ಳಿ ಕಡಿಮೆ ಬೆಲೆಗೆ ಟೆಂಡರ್ ಆಗಿದೆ ಎನ್ನುತ್ತಾರೆ.
ಇದನ್ನೂ ಓದಿ: ಕರ್ನಾಟಕದಲ್ಲಿ ಈರುಳ್ಳಿ ದರ ಮತ್ತೆ ಏರಿಕೆ: ಶತಕದತ್ತ ದಾಪುಗಾಲು, ಗ್ರಾಹಕರು ಶಾಕ್
ರೈತರಿಗೆ ಇಷ್ಟೆಲ್ಲಾ ಅನ್ಯಾಯವಾಗುತ್ತಿದೆ ಎಂಬ ಆರೋಪಗಳು ಕೇಳಿಬಂದರೂ ಎಪಿಎಂಸಿ ಅಧಿಕಾರಿಗಳು ಮಾತ್ರ ಅತ್ತಕಡೆ ಗಮನ ಹರಿಸುತ್ತಲೇ ಇಲ್ಲ. ಇದಕ್ಕೂ ರೈತರಿಂದ ಆಕ್ರೋಶ ವ್ಯಕ್ತವಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ