ಗದಗ: ನಗರದ ಬಸವೇಶ್ವರ ಪ್ಯಾರಾ ಮೆಡಿಕಲ್ ಕಾಲೇಜಿನ ಪ್ರಾಂಶುಪಾಲ ಡಿ.ಬಿ. ಪಾಟೀಲ್ ವಿರುದ್ಧ ವಂಚನೆ ಆರೋಪ ಕೇಳಿಬಂದಿದೆ. ಇದು ವಿದ್ಯಾರ್ಥಿಗಳ ಭವಿಷ್ಯದ ಮೇಲೆ ಪರಿಣಾಮ ಬೀರಿದೆ. ಕಾರ್ಯದರ್ಶಿ ಹಾಗೂ ಪ್ರಾಂಶುಪಾಲರ (Principal) ಗುದ್ದಾಟದಲ್ಲಿ ವಿದ್ಯಾರ್ಥಿಗಳ ಭವಿಷ್ಯ ಅತಂತ್ರ ಸ್ಥಿತಿಗೆ ಸಿಲುಕಿದಂತೆ ಆಗಿದೆ. ಜಿಎನ್ಎಂ (ಜನರಲ್ ನರ್ಸಿಂಗ್ ಮಿಡ್ ವೈಫರಿ) ಕೋರ್ಸ್ಗೆ ಪ್ರವೇಶ ಪಡೆದ ವಿದ್ಯಾರ್ಥಿಗಳ(Students) ಭವಿಷ್ಯ ಅತಂತ್ರಗೊಂಡಿದೆ. ಹೀಗಾಗಿ ನ್ಯಾಯಕ್ಕಾಗಿ ವಿದ್ಯಾರ್ಥಿಗಳು, ಪಾಲಕರು(Parents) ಪ್ರಾಂಶುಪಾಲರ ಮನೆಗೆ ಮುತ್ತಿಗೆ ಹಾಕಿದ್ದಾರೆ.
ವಿದ್ಯಾರ್ಥಿಗಳು ನೂರಾರು ಕನಸು ಕಂಡಿದ್ರು. ತಂಟೆ ತಕಾರರಿಲ್ಲದೇ ಕೋರ್ಸ್ ಮುಗಿಸಿ ನರ್ಸ್ ಆಗಬೇಕು ಅನ್ನೋ ಗುರಿ ಹೊಂದಿದ್ದರು. ಹೆತ್ತವರು ಕೂಡ ನಮ್ಮ ಮಕ್ಕಳು ಒಳ್ಳೆಯ ಶಿಕ್ಷಣ ಪಡೆಯಬೇಕು ಎಂದು ಸಾಲಸೋಲ ಮಾಡಿ ಫೀಸ್ ಕಟ್ಟಿದ್ರು. ಆದರೆ ವಿದ್ಯಾರ್ಥಿಗಳ ಕನಸಿಗೆ ಶಾಲಾ ಆಡಳಿತ ಮಂಡಳಿ ಕೊಕ್ಕೆ ಹಾಕಿದೆ. ಶಾಲಾ ಆಡಳಿತ ಮಂಡಳಿಯ ಒಳಜಗಳದ ಮಧ್ಯೆ ವಿದ್ಯಾರ್ಥಿಗಳ ಭವಿಷ್ಯ ಡೋಲಾಯಮಾನ ಸ್ಥಿತಿ ತಲುಪಿದೆ. ಹೀಗಾಗಿ ರೊಚ್ಚಿಗೆದ್ದ ವಿದ್ಯಾರ್ಥಿಗಳು ಮತ್ತು ಪೋಷಕರು ಪ್ರಾಂಶುಪಾಲರ ಮತ್ತು ಕಾರ್ಯದರ್ಶಿಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಗದಗ ನಗರದಲ್ಲಿರೋ ಬಸವೇಶ್ವರ ಪ್ಯಾರಾಮೆಡಿಕಲ್ ಕಾಲೇಜಿನಲ್ಲಿ ಇಂದು ದೊಡ್ಡ ಹೈಡ್ರಾಮವೇ ನಡೆದು ಹೋಗಿದೆ. ಬಸವೇಶ್ವರ ಪ್ಯಾರಾಮೆಡಿಕಲ್ ಕಾಲೇಜಲ್ಲಿ ನಾವು ಪ್ರವೇಶ ಪಡೆದು ವ್ಯಾಸಂಗ ಮಾಡ್ತಿದ್ದೇವೆ ಅಂದು ಕೊಂಡವರಿಗೆ ಬರಸಿಡಿಲು ಬಡಿದಂತಾಗಿದೆ. ಸುಮಾರು 60 ಕ್ಕೂ ಹೆಚ್ಚು ಪ್ಯಾರಾಮೆಡಿಕಲ್ ವಿದ್ಯಾರ್ಥಿಗಳ ಶೈಕ್ಷಣಿಕ ಭವಿಷ್ಯ ಅಂತ್ರತ್ರ ಸ್ಥಿತಿಯಲ್ಲಿದೆ. ಇದಕ್ಕೆಲ್ಲ ಮುಖ್ಯ ಕಾರಣ ಬಸವೇಶ್ವರ ಪ್ಯಾರಾಮೆಡಿಕಲ್ ಕಾಲೇಜಿನ ಪ್ರಾಂಶುಪಾಲ ಡಿ. ಬಿ. ಪಾಟೀಲ್ ವಿರುದ್ಧ ವಿದ್ಯಾರ್ಥಿಗಳು ಬೊಟ್ಟು ಮಾಡ್ತಿದ್ದಾರೆ. ಯಾಕಂದ್ರೆ ಪ್ರಿನ್ಸಿಪಾಲ್ ಡಿ.ಬಿ. ಪಾಟೀಲ್ ಬಸವೇಶ್ವರ ಪ್ಯಾರಾಮೆಡಿಕಲ್ ಕಾಲೇಜ್ ಹೆಸರಲ್ಲಿ ಪ್ರವೇಶ ಕೊಟ್ಟು ಬಳಿಕ ಮತ್ತೊಂದು ಕಾಲೇಜ್ ಹೆಸರಿನಲ್ಲಿ ಪ್ರವೇಶ ರಶೀದಿ ಕೊಟ್ಟಿದ್ದಾರೆ.
ಇಷ್ಟೇಲ್ಲಾ ಆದರೂ ಸಹ ಎರಡು ಮೂರು ತಿಂಗಳು ಇದೇ ಕಾಲೇಜ್ನಲ್ಲಿ ತರಗತಿಗಳು ಸುಸೂತ್ರವಾಗಿ ನಡೆದಿದ್ದರೂ ಈಗ ತರಗತಿಗಳು ನಡೆಯದೇ ವಿದ್ಯಾರ್ಥಿಗಳು ಪರದಾಡ್ತಿದ್ದಾರೆ. ಇದಕ್ಕೆಲ್ಲ ಕಾರಣ ಕಾಲೇಜಿನ ಆಡಳಿತ ಮಂಡಳಿಯ ನಡುವಿನ ಒಳಜಗಳವೇ ಕಾರಣ ಎಂದು ವಿದ್ಯಾರ್ಥಿಗಳು ಆರೋಪ ಮಾಡುತ್ತಿದ್ದಾರೆ. ಹೀಗಾಗಿ ಇಂದು ಪ್ರಾಂಶುಪಾಲರ ಮನೆ ಮುಂದೆ ವಿದ್ಯಾರ್ಥಿಗಳು ನ್ಯಾಯ ಕೇಳಲು ಹೋದ್ರೆ ಪ್ರಾಂಶುಪಾಲರು ಮನೆಗೆ ಬೀಗ ಹಾಕಿಕೊಂಡು ಪರಾರಿಯಾಗಿದ್ದಾರೆ. ಇದರಿಂದ ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ವಿದ್ಯಾರ್ಥಿಗಳು ಮತ್ತೆ ಕಾಲೇಜ್ಗೆ ಆಗಮಿಸಿ ಕಾರ್ಯದರ್ಶಿ ಕಚೇರಿಗೆ ನುಗ್ಗಿ ಕಾರ್ಯದರ್ಶಿ ಬಿ.ವಿ. ಹುಬ್ಬಳ್ಳಿ ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ. ಪೋಷಕರೊಬ್ಬರು ನಿಮ್ಮ ಕಾಲು ಮುಗಿತೀನಿ ನಮ್ಮ ಮಕ್ಕಳ ಭವಿಷ್ಯದ ಜೊತೆ ಆಟವಾಡಬೇಡಿ ಎಂದು ಈ ವೇಳೆ ಮನವಿ ಕೂಡ ಮಾಡಿಕೊಂಡಿದ್ದಾರೆ. ಎರಡು ಮೂರು ತಿಂಗಳು ಸುಸೂತ್ರವಾಗಿ ತರಗತಿ ನಡೆಸಿದ ನೀವು ಹೀಗೆ ಯಾಕೆ ಇದ್ದಕ್ಕಿದ್ದಂತೆ ತರಗತಿ ನಡೆಸುತ್ತಿಲ್ಲ. ನಿಮ್ಮ ಜಗಳದ ಮಧ್ಯೆ ನಮ್ಮ ಭವಿಷ್ಯದ ಮೇಲೆ ಬರೆ ಹಾಕ್ತಿದ್ದೀರಿ ಎಂದು ವಿದ್ಯಾರ್ಥಿಗಳು ಕಿಡಿಕಾರಿದ್ದಾರೆ.
ಈ ಪ್ರಕರಣ ಸದ್ಯ ಪೊಲೀಸ್ ಠಾಣೆ ಮೆಟ್ಟಿಲೇರಿದೆ. ಗದಗ ಶಹರ ಪೊಲೀಸರು ಕೂಡ ಇವತ್ತು ಸಮಸ್ಯೆ ಇತ್ಯರ್ಥ ಮಾಡುವುದಾಗಿ ವಿದ್ಯಾರ್ಥಿಗಳಿ ಹೇಳಿದ್ರು. ಆದ್ರೆ, ಪೊಲೀಸ್ ಅಧಿಕಾರಿಗಳು ಕೂಡ ಇವತ್ತು ಕಾಲೇಜ್ ಕಡೆ ಸುಳಿದಿಲ್ಲ. ಇದು ಪೋಷಕರು, ವಿದ್ಯಾರ್ಥಿಗಳ ಆಕ್ರೊಶಕ್ಕೆ ಕಾರಣವಾಗಿದೆ. ಇನ್ನು ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕಾಲೇಜ್ನ ಕಾರ್ಯದರ್ಶಿ ಬಿ.ವಿ. ಹುಬ್ಬಳ್ಳಿ, ನಮ್ಮದು ಏನೂ ತಪ್ಪಿಲ್ಲ. ಎಲ್ಲವೂ ಪ್ರಾಂಶುಪಾಲರು ಮಾಡಿದ ಯಡವಟ್ಟು ಪೊಲೀಸರಿಗೆ ಈ ವಿಷಯ ತಿಳಿಸಿದ್ದೇವೆ. ಪೊಲೀಸರು ಪ್ರಾಂಶುಪಾಲ ಡಿ.ಬಿ ಪಾಟೀಲ್ ರನ್ನು ಕರೆದುಕೊಂಡು ಬರುವುದಾಗಿ ಹೇಳಿದ್ದಾರೆ. ಕರೆತಂದ ತಕ್ಷಣ ಸಮಸ್ಯೆ ಇತ್ಯರ್ಥ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ.
ಒಬ್ಬೊಬ್ಬ ವಿದ್ಯಾರ್ಥಿಗಳಿಂದ ಪ್ರಾಂಶುಪಾಲರು 40 ಸಾವಿರ ರೂಪಾಯಿಯಂತೆ ಸುಮಾರು ಎರಡೂವರೆ ಲಕ್ಷಕ್ಕೂ ಅಧಿಕ ಹಣ ಪಡೆದಿದ್ದಾರೆ. ದುಡ್ಡು ಹೋದ್ರೆ ಹೋಯ್ತು ಕೊನೆ ಪಕ್ಷ ನಮಗೆ ತರಗತಿ ನಡೆಸಿ ನಮ್ಮ ಶಿಕ್ಷಣಕ್ಕೆ ಅನುಕೂಲ ಮಾಡಿ ಕೊಡಿ ಎಂದು ವಿದ್ಯಾರ್ಥಿಗಳು ಅಳಲು ತೋಡಿಕೊಂಡಿದ್ದಾರೆ.
ಇದನ್ನೂ ಓದಿ:
ಮಂಗಳೂರು: ಕಾಲೇಜು ಸರಿಯಿಲ್ಲ, ಕಾಲೇಜಿಗೆ ಬೋಧಕರು ಸರಿಯಾಗಿ ಬರುತ್ತಿಲ್ಲ ಅಂತಾ ಬೆಂಗಳೂರು ಮೂಲದ ವಿದ್ಯಾರ್ಥಿ ಆತ್ಮಹತ್ಯೆ
Published On - 4:43 pm, Fri, 25 March 22