ಗದಗ: ಮಳೆ ಬಂದರೆ ಹಳ್ಳದ ದಡದ ಮೇಲೆ ವಿದ್ಯಾರ್ಥಿಗಳು ಕಾಯಬೇಕು! ಬಸ್ ಸೌಲಭ್ಯ ಕಲ್ಪಿಸದಿದ್ದರೆ ಹೋರಾಟದ ಎಚ್ಚರಿಕೆ ನೀಡಿದ ಗ್ರಾಮಸ್ಥರು
ಸರ್ಕಾರ ಗ್ರಾಮೀಣ ಭಾಗದ ಮಕ್ಕಳ ಶಿಕ್ಷಣಕ್ಕೆ ಕೋಟಿ ಕೋಟಿ ಹಣ ಖರ್ಚು ಮಾಡುತ್ತಿದೆ. ಆದರೆ ಬಸ್ ಸೌಲಭ್ಯವಿಲ್ಲದೆ ಶಿರಹಟ್ಟಿ ತಾಲೂಕಿನ ಕೊಕ್ಕರಗುಂದಿ ಗ್ರಾಮದ ಮಕ್ಕಳ ಶಿಕ್ಷಣ ಈಗ ಅಯೋಮಯವಾಗಿದೆ.
ಗದಗ: ಜೀವದ ಹಂಗು ತೊರೆದು ಶಾಲೆ, ಕಾಲೇಜಿಗೆ ಹೋಗುವ ಪರಿಸ್ಥಿತಿ ಜಿಲ್ಲೆಯ ಶಿರಹಟ್ಟಿ ತಾಲೂಕಿನ ಕೊಕ್ಕರಗುಂದಿ ವಿದ್ಯಾರ್ಥಿಗಳಿಗೆ ಇದೆ. ಬಸ್ ಸೌಲಭ್ಯವಿಲ್ಲದೆ ವಿದ್ಯಾರ್ಥಿಗಳು ಪರದಾಡುತ್ತಿದ್ದಾರೆ. ತುಂಬಿ ಹರಿಯುವ ಹಳ್ಳವನ್ನು ದಾಟುವಾಗ ಸ್ವಲ್ಪ ಜಾಗ್ರತೆ ತಪ್ಪಿದ್ದರೂ ಮಕ್ಕಳ ಜೀವಕ್ಕೆ ಅಪಾಯವಿದೆ. ಗ್ರಾಮಕ್ಕೊಂದು ಬಸ್ ಸೌಲಭ್ಯ ಮಾಡಿಕೊಡಿ ಅಂತ ಕ್ಷೇತ್ರ ಶಾಸಕರು, ಡಿಸಿ, ಸಾರಿಗೆ ಇಲಾಖೆ ಅಧಿಕಾರಿಗಳಿಗೆ ಪರಿ ಪರಿಯಾಗಿ ಬೇಡಿಕೊಂಡರು ಯಾವುದೇ ಪ್ರಯೋಜನವಾಗುತ್ತಿಲ್ಲ ಅಂತ ಗ್ರಾಮಸ್ಥರು, ವಿದ್ಯಾರ್ಥಿಗಳು ಕಿಡಿಕಾರಿದ್ದಾರೆ.
ಸರ್ಕಾರ ಗ್ರಾಮೀಣ ಭಾಗದ ಮಕ್ಕಳ ಶಿಕ್ಷಣಕ್ಕೆ ಕೋಟಿ ಕೋಟಿ ಹಣ ಖರ್ಚು ಮಾಡುತ್ತಿದೆ. ಆದರೆ ಬಸ್ ಸೌಲಭ್ಯವಿಲ್ಲದೆ ಶಿರಹಟ್ಟಿ ತಾಲೂಕಿನ ಕೊಕ್ಕರಗುಂದಿ ಗ್ರಾಮದ ಮಕ್ಕಳ ಶಿಕ್ಷಣ ಈಗ ಅಯೋಮಯವಾಗಿದೆ. ಕೊಕ್ಕರಗುಂದಿ ವಿದ್ಯಾರ್ಥಿಗಳ ಗೋಳು ಕೇಳುವವರೆ ಇಲ್ಲದಂತಾಗಿದೆ. ಬಸ್ ಸೌಕರ್ಯ ಇಲ್ಲದೆ ವಿದ್ಯಾರ್ಥಿಗಳು ಎರಡು ಹರಿಯುವ ಹಳ್ಳ ದಾಟಿಕೊಂಡು ಶಾಲೆಗೆ ಹೋಗುವ ದುಸ್ಥಿತಿ ನಿರ್ಮಾಣವಾಗಿದೆ. ಕೊಕ್ಕರಗುಂದಿ ಗ್ರಾಮದಲ್ಲಿ ಪ್ರಾಥಮಿಕ ಶಾಲೆ ಮಾತ್ರವಿದೆ. ಪ್ರಾಥಮಿಕ ಶಿಕ್ಷಣ ಮುಗಿದ ಬಳಿಕ ಪ್ರೌಢ ಶಿಕ್ಷಣಕ್ಕೆ ಮತ್ತು ಕಾಲೇಜಿಗೆ ಬೆಳ್ಳಟ್ಟಿ ಗ್ರಾಮ ಹಾಗೂ ಶಿರಹಟ್ಟಿ ಪಟ್ಟಣಕ್ಕೆ ಹೋಗಬೇಕು. ಆದರೆ ಬಸ್ ಸೌಕರ್ಯ ಇಲ್ಲದೇ ವಿದ್ಯಾರ್ಥಿಳು ಪರದಾಡುತ್ತಿದ್ದಾರೆ.
ಮಳೆ, ಚಳಿಯಲ್ಲಿ ವಿದ್ಯಾರ್ಥಿಗಳು ಹೈರಾಣು ಕೊಕ್ಕರಗುಂದಿ ಗ್ರಾಮದಲ್ಲಿ ಸುಮಾರು 50ಕ್ಕೂ ಹೆಚ್ಚು ವಿದ್ಯಾರ್ಥಿಗಳು ಹೈಸ್ಕೂಲ್, ಕಾಲೇಜಿಗೆ ಹೋಗುತ್ತಾರೆ. ಬಸ್ ಇಲ್ಲದ ಕಾರಣ ಏಳೆಂಟು ಕಿಲೋಮೀಟರ್ ಬೆಳ್ಳಟ್ಟಿಗೆ ನಡೆದುಕೊಂಡು ಹೋಗಬೇಕು. ಅಲ್ಲಿಂದ ಶಿರಹಟ್ಟಿ ಕಾಲೇಜು ವಿದ್ಯಾರ್ಥಿಗಳು ಬಸ್ ಮೂಲಕ ಹೋಗಬೇಕಾದ ಅನಿವಾರ್ಯತೆ ಇದೆ. ಶಾಲೆ, ಕಾಲೇಜಿಗೆ ಹೋದಾಗ ಮಳೆ ಬಂದರೆ ತುಂಬಿ ಹರಿಯವ ಹಳ್ಳಗಳು ಶಾಂತವಾಗುವವರೆಗೂ ಹಳ್ಳದ ದಡದಲ್ಲೇ ಮಕ್ಕಳು ಕಾಯಬೇಕು. ಇಷ್ಟು ಗಂಭೀರ ಸಮಸ್ಯೆ ಇದ್ದರೂ ಜಿಲ್ಲಾಡಳಿತ ಅಧಿಕಾರಿಗಳು ಸಮಸ್ಯೆ ಬಗೆಹರಿಸುವ ಯತ್ನ ಮಾಡದಿರುವುದು ವಿಪರ್ಯಾಸವಾಗಿದೆ. ಹೀಗಾಗಿ ಕ್ಷೇತ್ರದ ಶಾಸಕರು, ಉಸ್ತುವಾರಿ ಸಚಿವರು, ಜಿಲ್ಲಾಡಳಿತದ ಅಧಿಕಾರಿಗಳ ವಿರುದ್ಧ ಗ್ರಾಮಸ್ಥರು ಕಿಡಿಕಾರಿದ್ದಾರೆ.
ಕೊಕ್ಕರಗುಂದಿ ಮಳೆಗಾಲದಲ್ಲಿ ನಡುಗಡ್ಡೆಯಾಗಿದೆ. ಮೂಲಭೂತ ಸೌಕರ್ಯ ಯಾವ ಜನಪ್ರತಿನಿಧಿಗಳು ಕೊಡ್ತಾಯಿಲ್ಲ. ಹೈಸ್ಕೂಲ್, ಕಾಲೇಜಿಗೆ ಹೋಗುವ ಮಕ್ಕಳು ಇದ್ದಾರೆ. ನಮ್ಮ ಮಕ್ಕಳು ಶಿಕ್ಷಣದಿಂದ ವಂಚಿತರಾಗಿದ್ದಾರೆ. ಸಾಕಷ್ಟು ತೊಂದರೆ ಆಗುತ್ತಿದೆ. ಕ್ಷೇತ್ರದ ಶಾಸಕ ರಾಮಣ್ಣ ಲಮಾಣಿ, ಸಂಸದ ಶಿವಕುಮಾರ ಉದಾಸಿ, ಎಲ್ಲ ಅಧಿಕಾರಿಗಳಿಗೆ ಮನವಿ ಮಾಡಿದ್ರು ಕೇವಲ ಭರವಸೆ ನೀಡುತ್ತಿದ್ದಾರೆ. ಜನಪ್ರತಿನಿಧಿಗಳ ನಿರ್ಲಕ್ಷ್ಯವೇ ನಮ್ಮ ಮಕ್ಕಳು ಶಿಕ್ಷಣದಿಂದ ವಂಚಿತರಾಗಲು ಕಾರಣ ಅಂತ ಗ್ರಾಮಸ್ಥ ಚೆನ್ನಬಸವಗೌಡ ಪಾಟೀಲ್ ಆರೋಪಿಸಿದ್ದಾರೆ.
ನಮ್ಮೂರಿಗೆ ಬಸ್ ಸೌಕರ್ಯ ಇಲ್ಲ. ಮಳೆಗಾಲದಲ್ಲಿ ಹಳ್ಳ ತುಂಬಿ ಹರಿದರೆ ಆ ಕಡೆ ಇದ್ದವರು ಆ ಕಡೆ ಇರಬೇಕು. ಮಳೆ ಬಂದರೆ ಮನೆಯಲ್ಲಿ ಶಾಲೆಗೆ ಹೋಗಬೇಡ ಅಂತಾರೆ. ಹೊಲಕ್ಕೆ ಕರೆದುಕೊಂಡು ಹೋಗುತ್ತಾರೆ. ವಿದ್ಯಾರ್ಥಿಗಳ ಜೀವನ ಹಾಳಾಗುತ್ತದೆ. ವಿದ್ಯಾರ್ಥಿಗಳಿಗೆ ಹತ್ತಾರು ಕನಸು ಇರುತ್ತವೆ. ಓದುವ ವಿದ್ಯಾರ್ಥಿಗಳ ಜೀವನ ಹಾಳಾಗುತ್ತಿದೆ. ದಯವಿಟ್ಟು ಸರ್ಕಾರ ಬಸ್ ಸೌಕರ್ಯ ಮಾಡಿಕೊಡಬೇಕು ಅಂತ ವಿದ್ಯಾರ್ಥಿನಿ ಪೂಜಾ ಸರ್ಕಾರಕ್ಕೆ ಮನವಿ ಮಾಡಿದ್ದಾಳೆ.
ಬಸ್ ಸೌಕರ್ಯ ಕಲ್ಪಿಸಿದರೆ ಮಕ್ಕಳ ಬದುಕಿಗೆ ದಾರಿಯಾಗುತ್ತದೆ. ಇಲ್ಲವಾದರೆ ಶಿರಹಟ್ಟಿ ತಹಶೀಲ್ದಾರ್ ಕಚೇರಿ ಎದುರು ಹೋರಾಟ ಮಾಡುವುದಾಗಿ ಗ್ರಾಮಸ್ಥರು, ವಿದ್ಯಾರ್ಥಿಗಳು ಜಿಲ್ಲಾಡಳಿತಕ್ಕೆ ಎಚ್ಚರಿಕೆ ನೀಡಿದ್ದಾರೆ.
ಇದನ್ನೂ ಓದಿ
ಲಾಕ್ಡೌನ್ನಿಂದ ಆರ್ಥಿಕ ಸಂಕಷ್ಟದ ಶಂಕೆ; ಕಿರುತೆರೆ ನಟ ಆತ್ಮಹತ್ಯೆ: ಅನುಮಾನ ಮೂಡಿಸಿದ ಸಾವು
ಕೂಡು ಒಕ್ಕಲಿಗ ಎಂಬುದು ಲಿಂಗಾಯತ ಸಮುದಾಯದ ಉಪಪಂಗಡ: ಎಂ.ಬಿ. ಪಾಟೀಲ್ ಸ್ಪಷ್ಟನೆ
(Students are struggling without a bus to go to college and school in gadag)