ಗದಗ, ಸೆ.10: ಇತ್ತಿಚೀನ ದಿನಗಳಲ್ಲಿ ರಾಜ್ಯದ ಪ್ರಮುಖ ದೇವಸ್ಥಾನಗಳು ರಾತ್ರೋರಾತ್ರಿ ಲೂಟಿ ಆಗುತ್ತಿತ್ತು. ದೇವಸ್ಥಾನ ಕಳ್ಳರ ಗ್ಯಾಂಗ್ ರಾಜ್ಯದ ನಾಲ್ಕಾರು ಜಿಲ್ಲೆಯ ಪೊಲೀಸರ ನಿದ್ದೆಗೆಡಿಸಿತ್ತು. ಮೇಲಿಂದ ಮೇಲೆ ದೇವಸ್ಥಾನಗಳ ಕಳ್ಳತನ ಪ್ರಕರಣಗಳು ಆಗುತ್ತಿದ್ದರೂ ಪೊಲೀಸರು ಏನು ಮಾಡ್ತಾಯಿದ್ದಾರೆ ಎಂದು ಆಕ್ರೋಶ ವ್ಯಕ್ತವಾಗಿತ್ತು. ಇದು ರಾಜ್ಯ ಪೊಲೀಸ್ ಇಲಾಖೆಗೆ ಚಾಲೇಂಜ್ ಆಗಿತ್ತು. ಹೀಗಾಗಿ ನಾಲ್ಕಾರು ಜಿಲ್ಲೆಯ ಪೊಲೀಸರ ನಡುವೆ ಖತರ್ನಾಕ್ ಗ್ಯಾಂಗ್ ಹೆಡೆಮುರಿ ಕಟ್ಟುವಲ್ಲಿ ಪೈಪೋಟಿಯೇ ಏರ್ಪಟ್ಟಿತ್ತು. ಆದ್ರೆ, ಕೊನೆಗೂ ಈ ಡೇಂಜರಸ್ ಕಳ್ಳರ ಗ್ಯಾಂಗ್ನ್ನು ಗದಗ ಜಿಲ್ಲೆಯ ಲಕ್ಷ್ಮೇಶ್ವರ ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ.
ಹೌದು, ಈ ಫೋಟೋದಲ್ಲಿರುವ 28 ವರ್ಷದ ಪ್ರಸಾದ್, 24 ವರ್ಷದ ಪ್ರದೀಪ್ ಹಾಗೂ ಜೈಲ್ ವಾರ್ಡನ್ 29 ವರ್ಷದ ಶ್ರೀಕಾಂತ ಗುಡಗೂರ ಇವರೇ ಈ ಖತರ್ನಾಕ್, ಐನಾತಿ ಕಳ್ಳರು. ಇವರನ್ನು ಈಗ ಲಕ್ಷ್ಮೇಶ್ವರ ಪೊಲೀಸ್ರು ಬಂಧಿಸಿ ಜೈಲಿಗಟ್ಟಿದ್ದಾರೆ. ಈ ಕಳ್ಳರು ಗದಗ, ಹಾವೇರಿ, ತುಮಕೂರು, ವಿಜಯನಗರ, ಚಿತ್ರದುರ್ಗ, ಶಿವಮೊಗ್ಗ ಆರು ಜಿಲ್ಲೆಯ ದೇವಸ್ಥಾನಗಳು ಲೂಟಿ ಮಾಡಿದ್ದರು. ಚಿನ್ನ, ಬೆಳ್ಳಿ, ಹುಂಡಿ ದೋಚಿ ಪರಾರಿ ಆಗುತ್ತಿದ್ದರು. ಅದರಂತೆ ಗದಗ ಜಿಲ್ಲೆಯ ಶಿರಹಟ್ಟಿ ತಾಲೂಕಿನ ಹೊಳಲಮ್ಮ ದೇವಸ್ಥಾನ, ಅಂಬಾಭವಾನಿ ದೇವಸ್ಥಾನ, ಬನ್ನಿಕೊಪ್ಪ ಸೇರಿದಂತೆ 4 ದೇವಸ್ಥಾನಗಳು ಹಾಗೂ ಸರಗಳ್ಳತನ ಮಾಡಿ ಎಸ್ಕೇಫ್ ಆಗಿದ್ದರು.
ಇದನ್ನೂ ಓದಿ:ದೇವನಹಳ್ಳಿ ಪಟ್ಟಣದಲ್ಲಿ ಹೆಚ್ಚಿದ ಕಳ್ಳರ ಹಾವಳಿ; RX ಬೈಕ್ ಕದಿಯಲು ಹಾಕಿದ್ದ ಪ್ಲಾನ್ ಫ್ಲಾಪ್
ಇದು ಒಂದೇ ಕುಟುಂಬದ ಮೂರು ಜನರ ಗ್ಯಾಂಗ್, ಇದಕ್ಕೆ ಸರ್ಕಾರಿ ನೌಕರನೇ ಬಾಸ್. ಹೌದು ಚಿತ್ರದುರ್ಗ ಜಿಲ್ಲಾ ಕಾರಾಗೃಹದ ಜೈಲು ವಾರ್ಡನ್ 29 ವರ್ಷದ ಶ್ರೀಕಾಂತ ಎಂಬಾತನೇ ಕಳ್ಳರ ಗ್ಯಾಂಗ್ ಲೀಡರ್ ಆಗಿದ್ದಾನೆ. 3 ಜನ ಸಹೋದರರ ಕಳ್ಳರ ಕುಟುಂಬದ ಇಬ್ಬರು ಕಳ್ಳತನ ಪ್ರಕಣದಲ್ಲಿ ಚಿತ್ರದುರ್ಗ ಜೈಲು ಪಾಲಾಗಿದ್ದರು. ಆಗ ಈ ಜೈಲ್ ವಾರ್ಡನ್ ಶ್ರೀಕಾಂತ ಬೇಲ್ ಮೇಲೆ ಬಿಡಿಸಿದ್ದನಂತೆ. ಹೊರಗೆ ಬಂದ ಕಳ್ಳರು, ಕಳ್ಳತನ ಮಾಡಿ ಈ ಜೈಲ್ ವಾರ್ಡನ್ಗೆ ತಂದು ಕೊಟ್ಟಿದ್ದಾರೆ. ಆಗಲೇ ತನ್ನ ಜವಾಬ್ದಾರಿ ಮರೆತು ಈ ಕಳ್ಳರ ಗ್ಯಾಂಗ್ ಗೆ ಲೀಡರ್ ಆಗಿದ್ದಾನಂತೆ.
ನಂತರ ಗೂಗಲ್ನಲ್ಲಿ ರಾಜ್ಯದ ಪ್ರಮುಖ ದೇವಸ್ಥಾನಗಳ ನೋಡಿ ಪ್ಲಾನ್ ಹಾಕಿಕೊಡುತ್ತಿದ್ದನಂತೆ. ಇತನ ಮಾರ್ಗದರ್ಶನದಲ್ಲಿ ಈ ಕಳ್ಳರ ಗ್ಯಾಂಗ್, ದೇವಸ್ಥಾನಗಳನ್ನು ಲೂಟಿ ಮಾಡ್ತಾಯಿತ್ತು. ಒಂದು ದಿನ ರಾತ್ರಿ ಕೊಲೆಯಾದ ರಮೇಶ್, ತಮ್ಮ ಪ್ರಸಾದ್, ವಾರ್ಡನ್ ಶ್ರೀಕಾಂತ ಕೂಡಿ ಎಣ್ಣೆ ಪಾರ್ಟಿ ಮಾಡುತ್ತಿದ್ದರು. ಆಗ ಮೂವರಲ್ಲಿ ಜಗಳವಾಗಿದೆ. ಜೈಲ್ ವಾರ್ಡನ್ ಶ್ರೀಕಾಂತಗೆ ಎಲ್ಲವೂ ಹೇಳ್ತಾಯಿದ್ದೀರಿ. ಶ್ರೀಕಾಂತನನ್ನು ಸೇರಿಸಿಕೊಂಡಿದ್ದಕ್ಕೆ ಸಿಟ್ಟಾಗಿ ನಿಮ್ಮ ಆಟ ಪೊಲೀಸ್ರಿಗೆ ಹೇಳ್ತೀನಿ ಎಂದು ಕೊಲೆಯಾದ ರಮೇಶ್ ಅವಾಜ್ ಹಾಕಿದ್ದಾನೆ. ಆಗ ವಿಕೋಪಕ್ಕೆ ತಿರುಗಿದ ಜಗಳದಲ್ಲಿ ಸಹೋದರರು ಹಾಗೂ ವಾರ್ಡನ್ ಶ್ರೀಕಾಂತ ಸೇರಿ ಅಣ್ಣ ರಮೇಶ್ ತಲೆಗೆ ಕಲ್ಲಿನಿಂದ ಹೊಡೆದು, ಬಳಿಕ ಉಸಿರುಗಟ್ಟಿಸಿ ಕೊಂದು ಹಾಕಿದ್ದಾರೆ. ಬಳಿಕ ಯಾರಿಗೂ ಗೊತ್ತಾಗದಂತೆ ಮುಚ್ಚಿ ಹಾಕಿದ್ದರು.
ಇದನ್ನೂ ಓದಿ:ಮೈಸೂರು: ಕಲಾವಿದನ ಮನೆ ಮುಂದಿದ್ದ ಗಣೇಶನ ಮೂರ್ತಿ ಲಪಟಾಯಿಸಿದ ಕಳ್ಳರು!
ಕೊಲೆಯಾಗಿ ಒಂದೂವರೆ ವರ್ಷವಾದ್ರೂ ಈ ಪ್ರಕರಣ ಬೆಳಕಿಗೆ ಬಂದಿಲ್ಲ. ಲಕ್ಷ್ಮೇಶ್ವರ ಪೊಲೀಸರು ಅರೆಸ್ಟ್ ಮಾಡಿ ಯಾವಾಗ ಡ್ರಿಲ್ ಮಾಡಿದರೂ ಆಗಲೇ ಪಾಪಿಗಳು ಎಲ್ಲ ಸತ್ಯ ಕಕ್ಕಿದ್ದಾರೆ. ಒಂದೂವರೆ ವರ್ಷದ ಬಳಿಕ ನಡೆದ ಕೊಲೆ ಸತ್ಯ ಬಯಲಾಗಿದೆ. ಹಾವೇರಿ ಜಿಲ್ಲೆಯ ರಾಣೆಬೆನ್ನೂರ ತಾಲೂಕಿನಲ್ಲಿ ಕೊಲೆ ಮಾಡಿ ಲೇಔಟ್ ವೊಂದಲ್ಲಿ ಮುಚ್ಚಿಹಾಕಿದ್ದಾರೆ. ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಒಟ್ಟು 15 ಪ್ರಕರಣಗಳಲ್ಲಿ ಖದೀಮರು ಭಾಗಿಯಾಗಿದ್ದಾರೆ. ಆರೋಪಿಗಳಿಂದ ಚಿನ್ನ, ಬೆಳ್ಳಿಯ ವಸ್ತುಗಳು, ನಗದು ಸೇರಿದಂತೆ 46 ಲಕ್ಷ ಮೊತ್ತದ ಚಿನ್ನ, ಬೆಳ್ಳಿ, ವಾಹನಗಳು ಜಪ್ತಿ ಮಾಡಲಾಗಿದೆ. ಅಷ್ಟೇ ಅಲ್ಲ ಕೃತ್ಯಕ್ಕೆ ಬಳಸಲಾದ ಕಟರ್, ಸೇರಿ ಹಲವು ವಸ್ತುಗಳು ಸೀಜ್ ಮಾಡಲಾಗಿದೆ ಅಂತ ಗದಗ ಪ್ರಭಾರ ಎಸ್ಪಿ ಅಮರನಾಥ್ ರೆಡ್ಡಿ ಹೇಳಿದ್ದಾರೆ.
ವಾರ್ಡನ್ ಶ್ರೀಕಾಂತಗೆ ಕಳ್ಳರ ಜೊತೆ ಸೇರಿ ಹಣ ಮಾಡುವ ದುರಾಸೆ ಹುಟ್ಟುತ್ತೆ. ಹೀಗಾಗಿ ಕಳ್ಳರ ಜೊತೆ ಸೇರಿದ್ದಾನೆ. 2022 ರಲ್ಲಿ ಕಳ್ಳತನ ಪ್ರಕರಣದಲ್ಲಿ ವಾರ್ಡನ್ ಶ್ರೀಕಾಂತ್ ಸಿಕ್ಕಿಹಾಕಿಕೊಂಡಿದ್ದ. ಆಗ ಶ್ರೀಕಾಂತನ ವಿರುದ್ಧ ಇಲಾಖೆ ವಿಚಾರಣೆ ನಡೆಯುತ್ತದೆ. ಇಲಾಖೆ ತನಿಖೆಗೆ ಆದೇಶ ಮಾಡಿ ಗುಲಬರ್ಗಾ ವರ್ಗ ಮಾಡುತ್ತಾರೆ. ಅಲ್ಲಿ ನೌಕರಿಗೆ ಹಾಜರಾಗಿ. ಎರಡು ದಿನಗಳ ಬಳಿಕ ವಾಪಸ್ ಆಗುತ್ತಾನೆ. ಮತ್ತೆ ಕಳ್ಳರ ಗ್ಯಾಂಗ್ ಸೇರ್ತಾನೆ. ಈಗ ಲಕ್ಷ್ಮೇಶ್ವರ ಪೊಲೀಸರು ಯಾಕೆ ಮತ್ತೆ ಕಳ್ಳರ ಗ್ಯಾಂಗ್ ಸೇರಿದೆ ಎಂದು ಪ್ರಶ್ನೆ ಮಾಡಿದಾಗ ಕೊಲೆ ಸತ್ಯ ಬಾಯಿಬಿಟ್ಟಿದ್ದಾನೆ.
ಸಣ್ಣ ವಯಸ್ಸಿನಲ್ಲಿ ಜೈಲ್ ವಾರ್ಡನ್ ಆಗಿ ಸರ್ಕಾರಿ ನೌಕರಿ ಗಿಟ್ಟಿಸಿಕೊಂಡಿದ್ದ. ಆದ್ರೆ, ಕಳ್ಳರ ಜೊತೆಗೆ ಸೇರಿ ಹಣದ ಆಸೆಗೆ ತನ್ನ ಭವಿಷ್ಯವನ್ನೇ ಮಣ್ಣುಪಾಲು ಮಾಡಿಕೊಂಡಿದ್ದಾನೆ. ಮಾಡಬಾರದ್ದು ಮಾಡಿ ಪಾಪಿ ಶ್ರೀಕಾಂತ ಜೈಲುಪಾಲಾಗಿದ್ದಾನೆ. ಒಡಹುಟ್ಟಿದ ಸಹೋದರರು ಹಣಕ್ಕಾಗಿ ಅಣ್ಣನ್ನನ್ನೇ ಕೊಂದು ಈಗ ಅವ್ರು ಕೂಡ ಕೃಷ್ಣನ ಜನ್ಮಸ್ಥಾನ ಸೇರಿದ್ದಾರೆ.
ಹೆಚ್ಚುವರಿ ಎಸ್ಪಿ ಎಂ ಬಿ ಸಂಕದ, ಡಿವೈಎಸ್ಪಿ ಜೆ. ಎಂ. ಇನಾಮದಾರ ಮಾರ್ಗದರ್ಶನದಲ್ಲಿ ಶಿರಹಟ್ಟಿ ಸಿಪಿಐ ನಾಗರಾಜ್ ಮಾಡಳ್ಳಿ ಲಕ್ಷ್ಮೇಶ್ವರ ಪಿಎಸ್ಐ ಈರಣ್ಣ ರಿತ್ತಿ ನೇತೃತ್ವದ ತಂಡ ಈ ಪ್ರಕರಣ ಬೇಧಿಸಿದೆ. ಕ್ಲಿಷ್ಟಕರ ಪ್ರಕರಣ ಬೇಧಿಸಿದ ಲಕ್ಷ್ಮೇಶ್ವರ ಪೊಲೀಸ್ರ ಕಾರ್ಯಕ್ಕೆ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿದ್ದು, ಪೊಲೀಸ್ ಇಲಾಖೆ ಸೂಕ್ತ ಬಹುಮಾನ ನೀಡಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:04 pm, Tue, 10 September 24