ದೇವನಹಳ್ಳಿ ಪಟ್ಟಣದಲ್ಲಿ ಹೆಚ್ಚಿದ ಕಳ್ಳರ ಹಾವಳಿ; RX ಬೈಕ್ ಕದಿಯಲು ಹಾಕಿದ್ದ ಪ್ಲಾನ್ ಫ್ಲಾಪ್
ಅದು ಬೆಂಗಳೂರು ಹೊರವಲಯದ ಕೆಂಪೇಗೌಡ ವಿಮಾನ ನಿಲ್ದಾಣದ ಪಕ್ಕದ ಪಟ್ಟಣ. ಆ ಪಟ್ಟಣದಲ್ಲಿ ರಾತ್ರಿಯಾಗಿ ಬೆಳೆಗ್ಗೆಯಾಗುವಷ್ಟರಲ್ಲಿ ಅಂಗಡಿ ಮಾಲೀಕರು ಬೆಚ್ಚಿಬಿದ್ದಿದ್ದಾರೆ. ರಾತ್ರಿ ಅಂಗಡಿಗಳ ಬಾಗಿಲು ಹಾಕಿಕೊಂಡು ಮನೆಗೆ ತೆರಳಿದ್ದ ಮಾಲೀಕರಿಗೆ ಬೆಳಗ್ಗೆ ಬಂದು ನೋಡುವಷ್ಟರಲ್ಲಿ ಶಾಕ್ ಆಗಿದೆ. ಪೊಲೀಸರು ಗಸ್ತು ಇರುವ ರಸ್ತೆಯಲ್ಲೆ ಅಂಗಡಿಗಳಲ್ಲಿ ಕಳ್ಳತನವಾಗಿದ್ದುಮ ಅಂಗಡಿ ಮಾಲೀಕರು ಆತಂಕಕ್ಕೀಡಾಗಿದ್ದಾರೆ.
ಬೆಂಗಳೂರು ಗ್ರಾಮಾಂತರ, ಸೆ.06: ಜಿಲ್ಲೆಯ ದೇವನಹಳ್ಳಿ(Devanahalli) ಪಟ್ಟಣದ ಹಳೆಯ ಬಸ್ ನಿಲ್ಥಾಣದಿಂದ ವಿಜಯಪುರ ಸರ್ಕಲ್ವರೆಗೂ ಸಾಕಷ್ಟು ವಾಣಿಜ್ಯ ಮಳಿಗೆಗಳಿದ್ದು, ವ್ಯಾಪಾರ ವಹಿವಾಟು ಜೋರಾಗಿ ನಡೆಯುತ್ತದೆ. ಹೀಗಾಗೆ ಇದೇ ರಸ್ತೆಯನ್ನೆ ಟಾರ್ಗೆಟ್ ಮಾಡಿಕೊಂಡ ಖದೀಮರು, ರಾತ್ರೋ ರಾತ್ರಿ ತಮ್ಮ ಕೈಚಳಕ ತೋರಿಸಿದ್ದು, ಬೈಕ್ ಶೋ ರೂಂ ಅಂದುಕೊಂಡು ಆರ್ ಎಕ್ಸ್ ಬೈಕ್ಗಳ ಕದಿಯಲು ಪ್ಲಾನ್ ಮಾಡಿದ್ದಾರೆ. ಶೇಟರ್ ಮುರಿದು ಒಳಗೆ ನುಗ್ಗೋಣ ಎನ್ನುಷ್ಟರಲ್ಲಿ ಬೈಕ್ ಸರ್ವಿಸ್ ಗೋಡನ್ ಕಂಡು ಇಲ್ಲಿ ಏನು ಸಿಗುವುದಿಲ್ಲ ಅಂದುಕೊಂಡ ಕಳ್ಳರು ಮುರಿದಿದ್ದ ಶೇಟರ್ ಬಿಟ್ಟು ನಾಲ್ವರು ಸ್ಥಳದಿಂದ ಎಸ್ಕೇಪ್ ಆಗಿದ್ದಾರೆ.
ಹೀಗೆ ಪರಾರಿಯಾದ ಖದೀಮರ ಗ್ಯಾಂಗ್, ವಿಜಯಪುರ ಸರ್ಕಲ್ ಬಳಿ ಇರುವ ಮೊಬೈಲ್ ಅಂಗಡಿಯ ಶೇಟರ್ ಮುರಿದು ಮೊಬೈಲ್ ಅಂಗಡಿಯ ಒಳಗೆ ನುಗ್ಗಿದ್ದಾರೆ. ಬಳಿಕ ಅಂಗಡಿಯ ಕ್ಯಾಷ್ ಬಾಕ್ಸನಲ್ಲಿದ್ದ 2 ಸಾವಿರ ಹಣ, ಕೀ ಪ್ಯಾಡ್ ಮೊಬೈಲ್ಗಳನ್ನ ಕದ್ದಿದ್ದು, ಪಕ್ಕದ ಚಿಲ್ಲರೆ ಅಂಗಡಿಗಳಿಗೂ ಖದೀಮರು ಕನ್ನ ಹಾಕಿದ್ದಾರೆ. ರಾತ್ರಿ ಬಾಗಿಲು ಹಾಕಿಕೊಂಡು ಹೋಗಿದ್ದ ಅಂಗಡಿ ಮಾಲೀಕರು, ಬೆಳಗ್ಗೆ ಬಂದು ಅಂಗಡಿ ಓಪನ್ ಮಾಡುವ ವೇಳೆ ಕಳ್ಳತನವಾಗಿರುವುದು ಬೆಳಕಿಗೆ ಬಂದಿದೆ.
ಇನ್ನು ನಾಲ್ವರು ಕಳ್ಳರು ಮಧ್ಯರಾತ್ರಿ ಈ ಕೃತ್ಯಗಳನ್ನ ಎಸಗಿದ್ದು, ಕಳ್ಳರ ಕೈಚಳಕ ಸಿಸಿಟಿವಿಯಲ್ಲಿ ದಾಖಲಾಗಿದೆ. ಪ್ರಮುಖ ರಸ್ತೆಯಲ್ಲಿ ಪೊಲೀಸರು ಗಸ್ತು ಇದ್ದರೂ ಕಳ್ಳರ ಈ ಕೈಚಳಕದಿಂದ ಅಂಗಡಿ ಮಾಲೀಕರು ಬೆಚ್ಚಿಬಿದ್ದಿದ್ದು, ಪೊಲೀಸರು ಗಸ್ತು ಹೆಚ್ಚಿಸುವಂತೆ ಒತ್ತಾಯಿಸಿದ್ದಾರೆ. ಒಟ್ಟಾರೆ ಸರಣಿ ಅಂಗಡಿ ಕಳ್ಳತನ ಸಂಬಂಧ ದೇವನಹಳ್ಳಿ ಪೊಲೀಸ್ ಠಾಣೆಯ ಪೊಲೀಸರು ಸ್ಥಳ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಹೀಗೆ ಪ್ರಮುಖ ರಸ್ತೆಯಲ್ಲೆ ಮಧ್ಯರಾತ್ರಿಯಲ್ಲಿ ಅಂಗಡಿಗಳಿಗೆ ಖದೀಮರು ಕನ್ನ ಹಾಕುತ್ತಿದ್ದು, ಕಳೆದ ನಾಲ್ಕು ದಿನಗಳಿಂದ ಪಟ್ಟಣದ ಒಳಗಡೆ ನಾಲ್ಕು ಅಂಗಡಿಗಳಲ್ಲಿಯೂ ಕಳ್ಳತನವಾಗಿದೆ. ಈ ನಿಟ್ಟಿನಲ್ಲಿ ಆದಷ್ಟು ಬೇಗ ಪೊಲೀಸರು ಇಂತಹ ಕಳ್ಳರಿಗೆ ಕಡಿವಾಣ ಹಾಕುವ ಕೆಲಸ ಮಾಡಬೇಕಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:59 pm, Fri, 6 September 24