ಗದಗ, ಸೆ.3: ಉತ್ತರ ಕರ್ನಾಟಕ ಭಾಗದ ರೈತರಿಗೆ ಮಳೆ ಬಂದರೂ ಕಷ್ಟ, ಮಳೆ ಬರದಿದ್ದರೂ ಕಷ್ಟ ಎಂಬಂತಾಗಿದೆ. ಕಳೆದ ಎರಡ್ಮೂರು ವರ್ಷ ಅತೀಯಾದ ಮಳೆಗೆ ಬೆಳೆ ಸರ್ವನಾಶವಾಗಿ ಅನ್ನದಾತರು ಇಂದಿಗೂ ನರಳುತ್ತಿದ್ದಾರೆ. ಆದರೆ, ಈ ವರ್ಷ ಮಳೆ ಅಭಾವದಿಂದ ನರಳಾಡುತ್ತಿದ್ದಾರೆ. ಹೌದು, ತೀವ್ರ ಮಳೆ ಕೊರತೆಯಿಂದ ಫಲವತ್ತಾಗಿ ಬೆಳೆದ ಬ್ಯಾಡಗಿ ಮೆಣಸಿನಕಾಯಿ (Byadgi Chilli) ಬೆಳೆ ಒಣಗಲು ಆರಂಭವಾಗಿದೆ. ಇದು ಭೀಕರ ಬರದ ಛಾಯೆ ಅಂತ ಗದಗ (Gadag) ರೈತರು ಹೇಳುತ್ತಿದ್ದಾರೆ.
ಜಿಲ್ಲೆಯಲ್ಲಿ ಕಳೆದ ವರ್ಷ ಬ್ಯಾಡಗಿ ಮೆಣಸಿನಕಾಯಿಗೆ ಭಾರೀ ಬೇಡಿಕೆ, ಬೆಲೆ ಇತ್ತು. ಕಳೆದ ಬಾರಿ ಒಂದು ಕ್ವಿಂಟಾಲ್ ಮೆಣಸಿನಕಾಯಿ ಬರೊಬ್ಬರಿ 70-80 ಸಾವಿರಕ್ಕೆ ಮಾರಾಟವಾಗಿದೆ. ಆ ಮೂಲಕ ರೈತರು ಭರ್ಜರಿ ಲಾಭ ಪಡೆದಿದ್ದರು. ಹೀಗಾಗಿ ಈ ಬಾರಿಯೂ ಭಾರೀ ಬೆಲೆ ಸಿಗುತ್ತದೆ ಅಂದುಕೊಂಡಿದ್ದ ರೈತರು ಕಳೆದ ವರ್ಷಕ್ಕಿಂತ ಗದಗ ಜಿಲ್ಲೆಯಲ್ಲಿ ಅತೀ ಹೆಚ್ಚು ಮೆಣಸಿಕಾಯಿಗೆ ಬೆಳೆ ಬೆಳೆದಿದ್ದಾರೆ.
ಬೀಜದ ಬೆಲೆ ದುಬಾರಿಯಾಗಿದ್ದರೂ ಉತ್ತಮ ಬೆಲೆ ಸಿಗುತ್ತೆ ಅಂತ ನಂಬಿದ ರೈತರು ಕೆಂಪು ಸುಂದರಿ (ಮೆಣಸಿನಕಾಯಿ) ಬೀಜ ಬಿತ್ತನೆ ಮಾಡಿದ್ದು, ಫಲವತ್ತಾಗಿ ಬೆಳೆದಿದೆ. ಆದರೆ ಮಳೆರಾಯ ಈ ವರ್ಷ ಕೈಕೊಟ್ಟಿದ್ದಾನೆ. ಜಿಲ್ಲೆಯಲ್ಲಿ ಬರದ ಛಾಯೆ ಆವರಿಸಿದೆ. ಹೀಗಾಗಿ ತೇವಾಂಶ ಕೊರತೆಯಿಂದ ಮೆಣಸಿನಕಾಯಿ ಬೆಳೆ ಸಂಪೂರ್ಣ ಬಾಡುತ್ತಿದೆ.
ಇದನ್ನೂ ಓದಿ: ಗದಗ: ನಿಧಿ ಆಸೆಗಾಗಿ ದೇವಸ್ಥಾನದಲ್ಲಿ ಗುಂಡಿ ಅಗೆದ ಖದೀಮರು
ಈಗಾಗಲೇ ಬೆಳೆ ಸತ್ವಕಳೆದುಕೊಂಡಿದೆ. ಹೀಗಾಗಿ ಲಕ್ಷ ಲಕ್ಷ ಖರ್ಚು ಮಾಡಿ ಬೆಳೆದ ರೈತರು ಈಗ ಗೋಳಾಡುತ್ತಿದ್ದಾರೆ. ಗದಗ ತಾಲೂಕಿನ ಮುಳಗುಂದ ಗ್ರಾಮದಲ್ಲಿ ಹೆಸರು ಬೆಳೆ ಕೈಕೊಟ್ಟಿದ್ದರಿಂದ ಕಳೆದ ಬಾರಿಗಿಂತ ಮೆಣಸಿನಕಾಯಿ ಈ ಬಾರಿ ಶೇಕಡಾ 40 ರಷ್ಟು ಹೆಚ್ಚಿಗೆ ಬಿತ್ತನೆ ಮಾಡಿದ್ದಾರೆ. ಆರಂಭದಲ್ಲಿ ಬೆಳೆ ಭರ್ಜರಿಯಾಗಿತ್ತು. ಆದರೆ, ಬಿತ್ತನೆ ಬಳಿಕ ಮಳೆಯ ಕೊರತೆಯಿಂದ ಈಗ ಸಂಪೂರ್ಣ ಒಣಗುತ್ತಿದೆ. ಇದು ರೈತರನ್ನು ಕಂಗಾಲಾಗುವಂತೆ ಮಾಡಿದೆ..
ಮಳೆ ಕೊರತೆಯಿಂದ ಈ ಬಾರಿ ಹೆಸರು ಬೆಳೆ ಸಂಪೂರ್ಣ ಹಾನಿಯಾಗಿದ್ದರಿಂದ ರೈತರು ಬ್ಯಾಡಗಿ ಮೆಣಸು ಬೆಳೆದು ಝಣ ಝಣ ಕಾಂಚಾಣ ಎಣಿಸುವ ಕನಸು ಕಂಡಿದ್ದರು. ಆದರೆ, ಗದಗ ಜಿಲ್ಲೆಯಲ್ಲಿ ಮಳೆ ಇಲ್ಲದೇ ಮೆಣಸಿನಕಾಯಿ ಬೆಳೆ ಒಣಗುತ್ತಿದೆ. ಹೀಗಾಗಿ ಈ ಬಾರಿ ಮಾರುಕಟ್ಟೆಯಲ್ಲಿ ಬ್ಯಾಡಗಿ ಮೆಣಸಿನಕಾಯಿಗೆ ಕಂಟಕ ಎದುರಾಗುವ ಸಾಧ್ಯತೆ ಇದೆ.
ಹೆಚ್ಚನ ಪ್ರಮಾಣದಲ್ಲಿ ಗದಗ ಜಿಲ್ಲೆಯಿಂದಲೇ ಬ್ಯಾಡಗಿ ಮಾರುಕಟ್ಟೆಗೆ ಕೆಂಪು ಸುಂದರಿ ಪೂರೈಕೆ ಆಗುತ್ತದೆ. ಮಳೆ ಅಭಾವದಿಂದ ಮೆಣಸಿನಕಾಯಿ ಬೆಳೆ ನೆಲಬಿಟ್ಟು ಏಳುತ್ತಿಲ್ಲ. ಒಂದು ಎಕರೆಗೆ 40 ಸಾವಿರ ಖರ್ಚು ಮಾಡಿ ಬಿತ್ತನೆ ಮಾಡಿದ್ದ ರೈತರು ಈಗ ಕಂಗಾಲಾಗಿದ್ದಾರೆ.
ಇನ್ನುಮುಂದೆ ಮಳೆಯಾದರೂ ಬೆಳೆ ಇಳುವರಿ ಬರಲ್ಲ. ಮುಂದೆ ಬಿತ್ತನೆ ಮಾಡಬೇಕಂದರೂ ಹಣ ಇಲ್ಲದಂತಾಗಿದೆ. ಹೀಗಾಗಿ ರೈತರ ಜೀವನ ಸಂಕಷ್ಟದಲ್ಲಿದೆ. ಕ್ಷೇತ್ರದ ಶಾಸಕರೂ ಆದ ಸಚಿವ ಎಚ್. ಕೆ. ಪಾಟೀಲ್ ಗದಗ ಜಿಲ್ಲೆಯ ಬರಗಾಲ ಪೀಡಿತ ಪ್ರದೇಶ ಅಂತ ಘೋಷಣೆಗೆ ಸರ್ಕಾರಕ್ಕೆ ಒತ್ತಾಯ ಮಾಡಬೇಕು. ಜೊತೆಗೆ ಸಾಲಮನ್ನಾ ಮಾಡಬೇಕು ಅಂತ ಸರ್ಕಾರಕ್ಕೆ ರೈತರು ಒತ್ತಾಯಿಸಿದ್ದಾರೆ.
ತೋಟಗಾರಿಕೆ ಇಲಾಖೆ ಮಾಹಿತಿ ಪ್ರಕಾರ, ಜಿಲ್ಲೆಯಲ್ಲಿ 27 ಸಾವಿರ ಹೇಕ್ಟರ್ ಪ್ರದೇಶದಲ್ಲಿ ಮೆಣಸಿನಕಾಯಿ ಬಿತ್ತನೆ ಮಾಡಲಾಗಿದೆ. ತೇವಾಂಶ ಕೊರತೆಯಿಂದ ಈಗಾಗಲೇ ಶೇಕಡಾ 80 ರಷ್ಟು ಬೆಳೆ ಹಾನಿಯಾಗಿದೆ. ಕೆಲವಡೆ ಜೀವ ಇದ್ದರೂ ಇಳುವರಿ ಕಡಿಮೆಯಾಗಲಿದೆ ಅಂತ ತೋಟಗಾರಿಕೆ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ.
ಒಟ್ಟಾರೆಯಾಗಿ ಬ್ಯಾಡಗಿ ಮೆಣಸು ಬೆಳೆದು ಲಾಭ ಮಾಡಿಕೊಳ್ಳಬೇಕು ಅಂತ ಕನಸು ಕಂಡ ರೈತರಿಗೆ ಬರಗಾಲ ಬರಸಿಡಿಸಲು ಬಡಿದಂತಾಗಿದೆ. ಅನ್ನದಾತರು ಅಕ್ಷರಶಃ ಸಂಕಷ್ಟದಲ್ಲಿದ್ದಾರೆ. ಸರ್ಕಾರ ಸಂಕಷ್ಟದಲ್ಲಿರುವ ರೈತರ ನೆರವಿಗೆ ಧಾವಿಸಬೇಕು ಅಂತ ರೈತರು ಒತ್ತಾಯಿಸಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ