Sign In

By signing in or creating an account, you agree with Associated Broadcasting Company's Terms & Conditions and Privacy Policy.

ತಂಗಿಗೆ ಹಾಲು ತರಲು ಹೋದ ಅಣ್ಣಯ್ಯನ ಹತ್ಯೆ, 13 ದಿನ ಐಸಿಯುನಲ್ಲಿದ್ದ ಯುವಕ ಉಸಿರು ಚೆಲ್ಲಿದ, ಹೆತ್ತವರಿಗೆ ಇನ್ನೂ ಗೊತ್ತಿಲ್ಲ ಹತ್ಯೆಗೆ ಕಾರಣವೇನು ಅಂತಾ

ಅಷ್ಟಕ್ಕೂ ಕೊಲೆಯಾಗಿದ್ದು ಯಾಕೆ. ಮಾಡಿದವ್ರು ಯಾರು ಅನ್ನೋದು ನಿಗೂಢವಾಗಿತ್ತು. ಪೊಲೀಸರೂ ಸಕಾಲಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಸಣ್ಣ ಸುಳಿವಿನ ಜಾಡು ಹಿಡಿದು ಹೊರಟ ಗದಗ ಗ್ರಾಮೀಣ ಪೊಲೀಸ್ರು ಅದೇ ಗ್ರಾಮದ ಹಂತಕನನ್ನು ಅರೆಸ್ಟ್ ಮಾಡಿದ್ದಾರೆ. ಅಷ್ಟಕ್ಕೂ ಕೊಂದ ವ್ಯಕ್ತಿ ವೀರಯ್ಯನ ಸ್ನೇಹಿತನೇ!

ತಂಗಿಗೆ ಹಾಲು ತರಲು ಹೋದ ಅಣ್ಣಯ್ಯನ ಹತ್ಯೆ, 13 ದಿನ ಐಸಿಯುನಲ್ಲಿದ್ದ ಯುವಕ ಉಸಿರು ಚೆಲ್ಲಿದ, ಹೆತ್ತವರಿಗೆ ಇನ್ನೂ ಗೊತ್ತಿಲ್ಲ ಹತ್ಯೆಗೆ ಕಾರಣವೇನು ಅಂತಾ
ತಂಗಿಗೆ ಹಾಲು ತರಲು ಹೋದ ಅಣ್ಣಯ್ಯನ ಹತ್ಯೆ
Follow us
TV9 Web
| Updated By: ಸಾಧು ಶ್ರೀನಾಥ್​

Updated on: Feb 25, 2023 | 7:53 AM

ಅದು ಇಬ್ಬರು ಮಕ್ಕಳ ಬಡ ಕುಟುಂಬ. ಬಡತನವಿದ್ರೂ ಇಬ್ಬರೂ ಮಕ್ಕಳನ್ನು ಮುದ್ದಾಗಿ ಸಾಕಿದ್ದರು. ಅಣ್ಣನಿಗೆ (Brother) ತಂಗಿಯ (Sister) ಮೇಲೆ ತುಂಬಾ ಪ್ರೀತಿ. ಹೀಗಾಗಿ ಆ ರಾತ್ರಿ ತಂಗಿಯ ಊಟಕ್ಕೆಂದು ಹಾಲು ತರಲು ಹೋಗಿದ್ದ. ಆದ್ರೆ, ವಾಪಸ್ ಮನೆಗೆ ಬಂದಿರುವುದು ಹೆಣವಾಗಿ. ಆ ರಾತ್ರಿ ದುಷ್ಕರ್ಮಿಗಳು ತಲೆಗೆ ಕೊಡಲಿಯಿಂದ ಬಲವಾಗಿ ಹೊಡೆದು ಮಾರಣಾಂತಿಕ ಹಲ್ಲೆ ಮಾಡಿದ್ದರು. ಹುಬ್ಬಳ್ಳಿ ಕಿಮ್ಸ್ (Hubballi KIMS) ಆಸ್ಪತ್ರೆಯಲ್ಲಿ 13 ದಿನ ಐಸಿಯುನಲ್ಲಿ ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದ ಯುವಕ ಅಂತಿಮವಾಗಿ ಉಸಿರು ಚೆಲ್ಲಿದ್ದಾನೆ. ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಅಷ್ಟಕ್ಕೂ ಕೊಲೆ ಮಾಡಿದವ್ರು ಯಾರು? ಕಾರಣ ಏನು? ಇಲ್ಲಿದೆ ವಿವರ

ಅದು ಗದಗ (gadag) ತಾಲೂಕಿನ ಹಿರೇಹಂದಿಗೋಳ ಗ್ರಾಮ. ಈ ಗ್ರಾಮ ಎಂದ್ರೆ ಸರ್ವಜನಾಂಗದ ಶಾಂತಿಯ ತೋಟ. ಎಲ್ಲ ಜಾತಿಯ ಜನ್ರು ಅಣ್ಣ, ತಮ್ಮಂದಿರಂತೆ ಬಾಳುತ್ತಿದ್ದಾರೆ. ಕೊಲೆ, ಗಲಾಟೆ ಅನ್ನೋ ಮಾತಿಲ್ಲ. ಆದ್ರೆ, ಆ ರಾತ್ರಿ ಹಿರೇಹಂದಿಗೋಳ ಗ್ರಾಮದಲ್ಲಿ ಘೋರ ಘಟನೆ ನಡೆದು ಹೋಗಿದೆ. ಹೌದು ಅದು ಫೆಬ್ರುವರಿ 6ರ ರಾತ್ರಿ 10 ಗಂಟೆ ಸಮಯ ವೀರಯ್ಯ ನಂದಿಕೋಲ ಎಂಬ 27 ವರ್ಷದ ಯುವಕ ರಕ್ತದ ಮಡುವಿನಲ್ಲಿ ಬಿದ್ದು ಒದ್ದಾಡಿದ್ದಾನೆ. ರಾತ್ರಿ 10-30ರ ಸಮಯ ಇಡೀ ಗ್ರಾಮ ಸ್ಥಬ್ಧವಾಗಿದೆ. ದುಷ್ಕರ್ಮಿಗಳು ಮಾರಣಾಂತಿಕ ಹಲ್ಲೆ ಮಾಡಿದ್ದಾರೆ. ಹೀಗಾಗಿ ವೀರಯ್ಯ ನೆಲಕ್ಕೆ ಉರುಳಿದ್ದಾನೆ. ವೀರಯ್ಯ ಕಥೆ ಮುಗಿತು ಅಂತ ದುಷ್ಕರ್ಮಿಗಳು ಸ್ಥಳದಿಂದ ಎಸ್ಕೇಪ್ ಆಗಿದ್ದಾರೆ.

ವೀರಯ್ಯ ಸತ್ತೇ ಹೋದ ಅಂತ ಹಂತಕ ಪರಾರಿಯಾಗಿದ್ದಾನೆ. ಆದ್ರೆ, ವೀರಯ್ಯ ಸತ್ತಿಲ್ಲ ರಕ್ತದ ಮಡುವಿನಲ್ಲಿ ಬಿದ್ದು ಒದ್ದಾಡುತ್ತಿದ್ದ. ಸ್ಥಳೀಯರು ನೋಡಿದ್ದಾರೆ. ಮುಖಕ್ಕೆ ಟಾರ್ಚ್ ಹಾಕಿ ನೋಡಿದ್ದಾರೆ. ಆಗಲೇ ಗ್ರಾಮಸ್ಥರಿಗೂ ಗೊತ್ತಾಗಿದ್ದು ಆತ ವೀರಯ್ಯ ಅಂತಾ. ತಕ್ಷಣ ವೀರಯ್ಯ ಪಾಲಕರಿಗೆ ಮಾಹಿತಿ ನೀಡಿದ್ದಾರೆ. ತಂದೆ, ತಾಯಿ ಹಾಗೂ ಕುಟುಂಬಸ್ಥರು ಓಡೋಡಿ ಬಂದಿದ್ದಾರೆ. ಬಂದು ನೋಡಿದ್ರೆ ವೀರಯ್ಯ ರಕ್ತದ ಮಡುವಿನಲ್ಲಿ ಬಿದ್ದಿದ್ದ. ತಕ್ಷಣ ಆ್ಯಂಬುಲೆನ್ಸ್ ಮೂಲಕ ಗದಗ ಜಿಮ್ಸ್ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಪರಸ್ಥಿತಿ ಗಂಭೀರವಾಗಿರೋದ್ರಿಂದ ತಕ್ಷಣ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ರವಾನೆ ಮಾಡಿದ್ದಾರೆ.

ಅಷ್ಟಕ್ಕೂ ಕೊಲೆಯಾಗಿದ್ದು ಯಾಕೆ. ಮಾಡಿದವ್ರು ಯಾರು ಅನ್ನೋದು ನಿಗೂಢವಾಗಿತ್ತು. ಪೊಲೀಸರೂ ಸಕಾಲಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಸಣ್ಣ ಸುಳಿವಿನ ಜಾಡು ಹಿಡಿದು ಹೊರಟ ಗದಗ ಗ್ರಾಮೀಣ ಪೊಲೀಸ್ರು ಅದೇ ಗ್ರಾಮದ ಹಂತಕನನ್ನು ಅರೆಸ್ಟ್ ಮಾಡಿದ್ದಾರೆ. ಅಷ್ಟಕ್ಕೂ ಕೊಂದ ವ್ಯಕ್ತಿ ವೀರಯ್ಯನ ಸ್ನೇಹಿತನೇ! ಲೋಹಿತ್ ಖಾನಾಪುರ ಅಂತಾ. ವೀರಯ್ಯ ಹಾಗೂ ಲೋಹಿತ್ ಇಬ್ಬರೂ ಸ್ನೇಹಿತರಂತೆ. ಆದ್ರೆ, ಕ್ಲೋಸ್ ಫ್ರೆಂಡ್ಸ್ ಅಲ್ಲ. ಆಗೊಮ್ಮೆ ಈಗೊಮ್ಮೆ ಸೇರಿ ಎಣ್ಣೆ ಹಾಕುವ ಗೆಳೆಯರು. ಫೆಬ್ರುವರಿ 6ರಂದು ರಾತ್ರಿ ಕ್ಷುಲ್ಲಕ ವಿಷಯಕ್ಕೆ ಜಗಳವಾಗಿದೆ. ಆಗ ಲೋಹಿತ್ ತಾಯಿ ಜಗಳ ಬಿಡಿಸಿ ಕಳಿಸಿದ್ದಾಳಂತೆ.

ಕೆಲ ಹೊತ್ತಿನ ಬಳಿಕ ಮತ್ತೆ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆ ಬಳಿ ಇವರಿಬ್ಬರೂ ಸೇರಿದ್ದಾರೆ. ಮತ್ತೆ ಇಬ್ಬರ ನಡುವಿನ ಜಗಳ ವಿಕೋಪಕ್ಕೆ ಹೋಗಿದೆ. ಆಗ ವೀರಯ್ಯ ತನ್ನ ಸ್ನೇಹಿತ ಲೋಹಿತನ ತಾಯಿಗೆ ಅವಾಚ್ಯ ಶಬ್ದಗಳಿಂದ ಬೈದಿದ್ದಾನಂತೆ. ಅಷ್ಟೇ ಕೋಪಗೊಂಡ ಲೋಹಿತ್ ಕೊಡಲಿಯಿಂದ ತಲೆಗೆ ಬಲವಾಗಿ ಹೊಡೆದಿದ್ದಾನೆ. ಕ್ಷಣ ಮಾತ್ರದಲ್ಲಿ ವೀರಯ್ಯ ನೆಲಕ್ಕುರುಳಿದ್ದಾನೆ. ರಕ್ತ ಹರಿದಿದೆ. ಆಗ ಗಾಬರಿಯಾದ ಲೋಹಿತ್ ಸತ್ತೇ ಹೋದ ಅಂತ ಅಲ್ಲಿಂದ ಎಸ್ಕೇಪ್ ಆಗಿದ್ದಾನೆ.

ರಕ್ತದ ಮಡುವಿನಲ್ಲಿ ಬಿದ್ದು ಒಂದು ಗಂಟೆ ಒದ್ದಾಡಿದ್ದಾನೆ ವೀರಯ್ಯ. ಆ ಮೇಲೆ ಕುಟುಂಬಸ್ಥರು ಸ್ಥಳಕ್ಕೆ ಬಂದು ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದ್ರೆ, 13 ದಿನ ಐಸಿಯುನಲ್ಲಿ ಸಾವು ಬದುಕಿನ ಮಧ್ಯೆ ವೀರಯ್ಯ ಹೋರಾಡಿದ್ದಾನೆ. ಮಗ ಬದುಕಿ ಬರ್ತಾನೆ ಅಂತ ಹೆತ್ತವ್ರು ಆಸ್ಪತ್ರೆ ಬಳಿ ಉಪವಾಸ, ವನವಾಸ ಮಾಡಿ ಕಾದಿದ್ದಾರೆ. ಆದ್ರೆ, ವೀರಯ್ಯ ಕೊನೆಗೂ ಉಸಿರು ನಿಲ್ಲಿಸಿದ್ದಾನೆ. ಮಾರಣಾಂತಿಕ ಹಲ್ಲೆಗೊಳಗಾಗಿದ್ದ ವೀರಯ್ಯ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾನೆ. 13 ದಿನ ಐಸಿಯು ನಲ್ಲಿ ಇಟ್ಟು ಚಿಕಿತ್ಸೆ ಕೊಟ್ರೂ ವೀರಯ್ಯ ಬದುಕುಳಿಯಲ್ಲಿಲ್ಲ. ಪುತ್ರನ ಕಳೆದುಕೊಂಡು ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

ಒಬ್ಬನೇ ಮಗ, ಮುದ್ದಾಗಿ ರಾಜನಂತೆ ಸಾಕಿದ್ರು. ಹೀಗಾಗಿ ಮಗನ ಸಾವು ಹೆತ್ತವರಿಗೆ ಸಹಿಸಿಕೊಳ್ಳಲು ಆಗುತ್ತಿಲ್ಲ. ರಾಜಾಹುಲಿ ಎಲ್ಲಿದ್ದೀಯೋ… ನಿನ್ನ ಗೆಳೆಯರಿಗೆ ನಾ ಏನ್ ಹೇಳಲೋ ಅಂತ ಅಜ್ಜಿ ಗೋಳಾಡುತ್ತಿದ್ದಾರೆ. ಇತ್ತ ನನ್ನ ಕಂದ ಎಲ್ಲಿ ಹೋದ್ಯೋ ನನ್ನ ಮಗನೇ.. ತಂಗಿಗೆ ಹಾಲು ತರಲು ಹೋದ ಅಣ್ಣ ಬರಲೇ ಇಲ್ಲ ಅಂತ ತಾಯಿ ಗೋಳಾಡುತ್ತಿದ್ದಾಳೆ. ಉಪವಾಸ, ವನವಾಸ ಮಾಡಿ ಬೆಳೆಸಿದ್ದ ಮಗ ಹೋದ್ನಲ್ಲ ಅಂತ ಹೆತ್ತಕರುಳಿನ ಗೋಳು ಕರುಳು ಹಿಂಡುವಂತಿದೆ.

ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಯ ಐಸಿಯುನಲ್ಲಿ 13 ದಿನ ವೀರಯ್ಯ ಸಾವು ಬದುಕಿನ ನಡುವೆ ಒದ್ದಾಡಿದ್ದಾನೆ. ಆದ್ರೆ, ತಲೆಗೆ ಬಲವಾಗಿ ಹೊಡೆತ ಬಿದ್ದಿದ್ರಿಂದ ವೀರಯ್ಯ ಫೆಬ್ರುವರಿ 18 ರಂದು ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾನೆ. ಈ ಮಧ್ಯೆ ಕೊಲೆಗಾರ ಲೋಹಿತ್ ಖಾನಾಪುರನ್ನು ಗದಗ ಗ್ರಾಮೀಣ ಪೊಲೀಸ್ರು ಬಂಧಿಸಿದ್ದಾರೆ. ಪೊಲೀಸ್ರು ತಮ್ಮದೇ ಭಾಷೆಯಲ್ಲಿ ಆರೋಪಿ ಲೋಹಿತನನ್ನು ವಿಚಾರಣೆ ಮಾಡಿದ್ದಾರೆ. ಆಗ ಹಂತಕ ಲೋಹಿತ್ ಕೊಲೆಯ ಸತ್ಯ ಕಕ್ಕಿದ್ದಾನೆ.

ನನ್ನ ತಾಯಿಯನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ. ಹೀಗಾಗಿ ಸಹಿಸಿಕೊಳ್ಳದಾದಾಗ ಕೊಂದಿದ್ದೇನೆ ಅಂತ ಬಾಯಿಬಿಟ್ಟಿದ್ದಾನಂತೆ. ಲೋಹಿತ್ ಕುರಿಗಾಹಿ ಗ್ರಾಮಕ್ಕೆ ಆಗೊಮ್ಮೆ ಈಗೊಮ್ಮೆ ಬರ್ತಾಯಿದ್ದನಂತೆ. ಊರಿಗಾಗಿ ಬಂದಾಗ ಎಲ್ಲರೂ ಸೇರಿ ಎಣ್ಣೆ ಹೊಡೆಯೋದು ಇವ್ರ ಚಾಳಿಯಂತೆ. ಅಂದೂ ಕೂಡ ಎಣ್ಣೆ ಹೊಡೆದಿದ್ದು, ಬಳಿಕ ಜಗಳ ಮಾಡಿಕೊಂಡಿದ್ದಾರೆ. ಆಗ ಲೋಹಿತನನ್ನು ಕೊಡಲಿಯಿಂದ ಕೊಚ್ಚಿ ಕೊಂದಿದ್ದಾನೆ.

ಆದ್ರೆ, ಪಾಪ ವೀರಯ್ಯನ ಕುಟುಂಬಕ್ಕೆ ಇವತ್ತಿಗೂ ಮಗನ ಕೊಲೆಗೆ ನಿಖರ ಕಾರಣ ಗೊತ್ತಿಲ್ಲ. ಬಡ ಕುಟುಂಬ, ಓರ್ವ ಮಗ ವೀರಯ್ಯ. ಇನ್ನೊಬ್ಬಳು ಪುಟ್ಟ ಮಗಳು. ಭವಿಷ್ಯಕ್ಕಾಗಿ ಉಪವಾಸ, ವನವಾಸ ಮಾಡಿ ಮಕ್ಕಳನ್ನು ಸಾಕಿದ್ದಾರೆ. ಕಡಲೆ ರಾಶಿಯಲ್ಲಿ ಕುಟುಂಬ ಬ್ಯೂಸಿಯಾಗಿದೆ. ನಮ್ಮ ಮಗ ಯಾರ ಜೊತೆಯೂ ಜಗಳ ಮಾಡಿದವನಲ್ಲ. ಯಾವುದೇ ಅವ್ಯವಹಾರವಿಲ್ಲ. ಆದ್ರೆ, ನನ್ನ ಮಗನನ್ನು ಯಾಕೆ ಕೊಂದರು? ಯಾರು ಕೊಂದರು? ಅಂತಾ ನಮಗೆ ಗೊತ್ತಿಲ್ಲ. ಪೊಲೀಸರೇ ಸತ್ಯ ಬಾಯಿ ಬಿಡಿಸ್ತಾರೆ ಅಂತಿದ್ದಾರೆ. ಪೊಲೀಸರು ಸದ್ಯ ಆರೋಪಿಯನ್ನು ವಶಕ್ಕೆ ಪಡದು ವಿಚಾರಣೆ ನಡೆಸಿದ್ದಾರೆ.

ಹುಟ್ಟಿದಾಗನಿಂದಲೂ ಅಜ್ಜಿ ಆರೈಕೆಯಲ್ಲಿ ವೀರಯ್ಯ ಬೆಳೆದಿದ್ದ. ಅಜ್ಜಿಗೂ ಯಾರೂ ದಿಕ್ಕಿಲ್ಲ. ಹೀಗಾಗಿ ಮೊಮ್ಮಗನನ್ನೇ ದತ್ತು ಪಡೆದಿದ್ಲು. ನನಗೆ ನೀನು.. ನಿನಗೆ ನಾನು ಅಂತ ಅಜ್ಜಿ ಮೊಮ್ಮಗನ ಸಂಬಂಧ ಇತ್ತು. ಆದ್ರೆ, ಈಗ ಅಜ್ಜಿಯನ್ನು ಬಿಟ್ಟು ಮೊಮ್ಮಗ ಬಾರದ ಲೋಕಕ್ಕೆ ಹೋಗಿದ್ದಾನೆ. ಮನೆಯಲ್ಲಿ ಒಬ್ಬನೇ ಪುತ್ರನನ್ನು ಕಳೆದುಕೊಂಡು ಅಜ್ಜಿ, ತಾಯಿ, ತಂದೆ ಗೋಳಾಡುತ್ತಿದ್ದಾರೆ. ಆದ್ರೆ ಹೆತ್ತ ತಾಯಿಗೆ ಅವಾಚ್ಯವಾಗಿ ಬೈದಿದಕ್ಕೆ ಸ್ನೇಹಿತ ಎಂಬುದನ್ನೂ ನೋಡದೆ ಕೊಚ್ಚಿ ಕೊಲೆ ಮಾಡಿದ್ದಾನೆ ಗೆಳೆಯ ಲೋಹಿತ್.. ಸಿಟ್ಟಿನ ಕೈಗೆ ಬುದ್ದಿಕೊಟ್ರೆ ಏನ್ನಾಗುತ್ತೆ ಎನ್ನುವದಕ್ಕೆ ಉದಾಹರಣೆ.

ವರದಿ: ಸಂಜೀವ ಪಾಂಡ್ರೆ, ಟಿವಿ9, ಗದಗ