ಬೆಂಗಳೂರು: ಗಣೇಶ ಹಬ್ಬಕ್ಕೆ (Ganesh Utsav) ಕೇವಲ ಮೂರು ದಿನ ಬಾಕಿ ಇರುವಾಗ ರಾಜ್ಯ ಸರ್ಕಾರವು ಮನೆಯಲ್ಲಿ 2 ಅಡಿ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ 4 ಅಡಿ ಗಣೇಶನ ಮೂರ್ತಿ (Ganesh Idol) ಇಡಬೇಕೆಂಬ ಅರ್ಥಹೀನ ನಿರ್ಬಂಧ ಹೇರುವ ಮೂಲಕ ಮೂರ್ತಿ ತಯಾರಕರ ಬದುಕಿನ ಜತೆ ಚೆಲ್ಲಾಟವಾಡಿದೆ. ತಕ್ಷಣ ಈ ಆದೇಶವನ್ನು ಹಿಂಪಡೆಯಬೇಕು ಅಥವಾ ಮೂರ್ತಿ ತಯಾರಿಕರಿಗೆ ಪರಿಹಾರ ನೀಡಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ (DK Shivakumar) ಆಗ್ರಹಿಸಿದ್ದಾರೆ.
ಕಳೆದ 2 ತಿಂಗಳಿಂದ ಗಣೇಶ ಮೂರ್ತಿ ತಯಾರಕರು ಲಕ್ಷಾಂತರ ಮೂರ್ತಿಗಳನ್ನು ಮಾಡಿದ್ದಾರೆ. ಸರ್ಕಾರ ಕೊನೆ ಕ್ಷಣದಲ್ಲಿ ಇಂತಹ ನಿರ್ಬಂಧ ಹೇರಿದರೆ ಅವರ ಸ್ಥಿತಿ ಏನಾಗಬೇಕು? ಸರ್ಕಾರ ಇದನ್ನೇ ಎರಡು ಮೂರು ತಿಂಗಳ ಹಿಂದೆಯೇ ಹೇಳಿದ್ದರೆ, ಮೂರ್ತಿ ತಯಾರಕರು ದೊಡ್ಡ ಮೂರ್ತಿಗಳನ್ನು ಮಾಡುತ್ತಲೇ ಇರಲಿಲ್ಲ ಎಂದು ಡಿ.ಕೆ. ಶಿವಕುಮಾರ್ ಆಕ್ಷೇಪಿಸಿದ್ದಾರೆ.
ಕೊವಿಡ್ ಸಮಯದಲ್ಲಿ ಆದಾಯವಿಲ್ಲದಿದ್ದ ಗಣೇಶ ಮೂರ್ತಿ ತಯಾರಕರು, ತಮ್ಮ ಬಳಿ ಇದ್ದಬದ್ದ ಹಣ ಹಾಕಿ ಮೂರ್ತಿಗಳನ್ನು ತಯಾರಿಸಿದ್ದಾರೆ. ಕೊನೆ ಗಳಿಗೆಯಲ್ಲಿ ಈ ನಿರ್ಬಂಧ ಹೇರಿದರೆ ಅವರು ಎಲ್ಲಿಗೆ ಹೋಗಬೇಕು? ಸರ್ಕಾರ ಇದುವರೆಗೂ ಇವರಿಗೆ ನಯಾ ಪೈಸೆ ಕೋವಿಡ್ ಪರಿಹಾರ ಕೊಟ್ಟಿಲ್ಲ. ಹೀಗಿರುವಾಗ ಈ ರೀತಿ ನಿರ್ಬಂಧ ಎಷ್ಟು ಸರಿ? ದೇವರ ಮೂರ್ತಿ ಮಾಡಿಕೊಂಡು ಜೀವನ ನಡೆಸುವವರ ಬದುಕಿಗೆ ಸರ್ಕಾರ ಕೊಳ್ಳಿ ಇಟ್ಟಿದೆ ಎಂದು ಡಿಕೆಶಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಾಜ್ಯ ಸರ್ಕಾರ ಗಣಪತಿ ಉತ್ಸವಕ್ಕೆ ಕಡಿವಾಣ ಹಾಕುವ ಭರದಲ್ಲಿ ಭಕ್ತ ಹಾಗೂ ಭಗವಂತನ ನಡುವೆ ಕಂದಕ ನಿರ್ಮಿಸಿರುವುದು ದುರಾದೃಷ್ಟಕರ ಸಂಗತಿ. ಗಣೇಶ ಪ್ರತಿಮೆಯನ್ನು ಮನೆಯಲ್ಲಿ 2 ಅಡಿ, ಸಾರ್ವಜನಿಕ ಪ್ರದೇಶದಲ್ಲಿ 4 ಅಡಿಗೆ ಸೀಮಿತಗೊಳಿಸಿ, ದೇವರಿಗೂ ನೀನು ಇಷ್ಟೇ ಎತ್ತರ ಇರಬೇಕು ಎಂದು ನಿಯಂತ್ರಣ ಹೇರುತ್ತಿದ್ದಾರೆ ಎಂದು ಡಿಕೆ ಶಿವಕುಮಾರ್ ಕುಟುಕಿದ್ದಾರೆ.
ಸಾರ್ವಜನಿಕ ಸ್ಥಳಗಳಲ್ಲಿ ಹೆಚ್ಚು ಜನ ಸೇರಬಾರದು, ಮೆರವಣಿಗೆ ಮಾಡಬಾರದು ಎಂಬುದನ್ನು ಒಪ್ಪುತ್ತೇವೆ. ಆದರೆ, ಗಣೇಶನ ಪ್ರತಿಮೆ 2ರಿಂದ 4 ಅಡಿಯೇ ಇರಬೇಕು ಎಂಬ ನಿರ್ಬಂಧದ ಹಿಂದೆ ಯಾವ ತರ್ಕ ಇದೆ? ಹಿಂದೂ ಸಂಸ್ಕೃತಿ ವಕ್ತಾರರು ಎಂದು ಹೇಳಿಕೊಳ್ಳುವವರು ಮಾಡುವ ಕೆಲಸ ಇದೇನಾ? ಎಂದು ಡಿಕೆ ಶಿವಕುಮಾರ್ ಪ್ರಶ್ನಿಸಿದ್ದಾರೆ.
ಸರ್ಕಾರ ಅಂತಿಮ ಗಳಿಗೆಯಲ್ಲಿ ಈ ನಿರ್ಧಾರ ತೆಗೆದುಕೊಂಡರೆ, ಈಗ ಮಾಡಿರುವ ಮೂರ್ತಿಗಳನ್ನು ನಿರ್ಧಾರ ಪ್ರಕಟಿಸಿರುವವರ ಮನೆ ಮುಂದೆ ಇಡಬೇಕಾ? ನಿರ್ಧಾರ ಪ್ರಕಟಿಸಿರುವವರೇ ಇವುಗಳನ್ನು ಖರೀದಿಸಲಿ ಎಂದು ಒತ್ತಾಯಿಸಿದ್ದಾರೆ. ಸರ್ಕಾರದ ಈ ತಿಕ್ಕಲುತನದ ನಿರ್ಧಾರ “ಕುಂಬಾರನಿಗೆ ವರುಷ, ದೊಣ್ಣೆಗೆ ನಿಮಿಷ” ಎಂಬಂತಿದೆ ಎಂದು ಅವರು ಟೀಕಿಸಿದ್ದಾರೆ.
ನಾವು ಕೊವಿಡ್ ನಿಯಮದ ಬಗ್ಗೆ ಪ್ರಶ್ನೆ ಮಾಡುತ್ತಿಲ್ಲ, ಸರ್ಕಾರದ ಅವೈಜ್ಞಾನಿಕ ತೀರ್ಮಾನ ಪ್ರಶ್ನಿಸುತ್ತಿದ್ದೇವೆ. ಈ ವೃತ್ತಿ ಅವಲಂಬಿಸಿರುವವರ ಬದುಕು ಬೀದಿ ಪಾಲಾಗಬಾರದು. ಗಣೇಶ ಹಬ್ಬಕ್ಕೆ ಇನ್ನು ಎರಡು ದಿನ ಕಾಲಾವಕಾಶ ಇದೆ. ಸರ್ಕಾರ ಈ ಅರ್ಥಹೀನ ನಿರ್ಬಂಧವನ್ನು ವಾಪಾಸ್ ಪಡೆಯಬೇಕು ಅಥವಾ ಮೂರ್ತಿ ತಯಾರಕರಿಗೆ ಪರಿಹಾರ ನೀಡಬೇಕು ಎಂದು ಶಿವಕುಮಾರ್ ಆಗ್ರಹಿಸಿದ್ದಾರೆ.
ಇದನ್ನೂ ಓದಿ: Ganesha Chaturthi 2021: ಗಣೇಶೋತ್ಸವ ಆಚರಣೆಗೆ ಷರತ್ತುಬದ್ಧ ಅನುಮತಿ; ಮಾರ್ಗಸೂಚಿ ಪ್ರಕಟ
Ganesha Chaturthi 2021: ಗಣಪತಿಯ ವಾಹನವಾದ ಇಲಿ; ಮೂಷಿಕ ಗಣೇಶನ ಹೊತ್ತು ಸವಾರಿ ಮಾಡಿದ ಹಿಂದಿದೆ ಒಂದು ಅಪರೂಪದ ಕಥೆ
(Ganesh Chaturthi Karnataka Government Should Withdraw Hight Measurements for Ganesha Idols Ganesh Utsav 2021)
Published On - 5:28 pm, Wed, 8 September 21