ಮಹಿಳಾ ಠಾಣೆ ಎದುರು ಹಬ್ಬಿದ ಬಳ್ಳಿಗಳು: ಯಾವ ಗಾರ್ಡನ್​ಗೂ ಕಡಿಮೆ ಇಲ್ಲ ಯಾದಗಿರಿಯ ಈ ಪೊಲೀಸ್ ಸ್ಟೇಷನ್

ಮಹಿಳಾ ಠಾಣೆಯ ಪೊಲೀಸ್‌ ಇನ್ಸ್‌ಪೆಕ್ಟರ್ ಹೊಸಕೇರಪ್ಪ ಅವರು ಕಲಬುರ್ಗಿ, ರಾಜಮಂಡ್ರಿಯಲ್ಲಿ ತೂಗು ಹಾಕುವ ಬಳ್ಳಿಗಳಿಗಾಗಿ ಹುಡುಕಾಡಿದ್ದಾರೆ. ಆದರೆ, ಎರಡು ಕಡೆ ಸಿಗದಿದ್ದರಿಂದ ಕೊಪ್ಪಳದ ಮುನಿರಾಬಾದ್‌ ತೋಟಗಾರಿಕೆ ಕೇಂದ್ರದಿಂದ ಈ ಬಳ್ಳಿಗಳನ್ನು ತಂದು ನೆಟ್ಟಿದ್ದಾರೆ.

ಮಹಿಳಾ ಠಾಣೆ ಎದುರು ಹಬ್ಬಿದ ಬಳ್ಳಿಗಳು: ಯಾವ ಗಾರ್ಡನ್​ಗೂ ಕಡಿಮೆ ಇಲ್ಲ ಯಾದಗಿರಿಯ ಈ ಪೊಲೀಸ್ ಸ್ಟೇಷನ್
ಪೋಲಿಸ್ ಠಾಣೆ ಮುಂಭಾಗದ ದೃಶ್ಯ
Follow us
preethi shettigar
| Updated By: ಸಾಧು ಶ್ರೀನಾಥ್​

Updated on: Jan 22, 2021 | 12:09 PM

ಯಾದಗಿರಿ: ನಗರದ ಮಹಿಳಾ ಪೊಲೀಸ್‌ ಠಾಣೆ ‘ಪರಿಸರ ಸ್ನೇಹಿ’ಯಾಗಿ ರೂಪುಗೊಂಡಿದ್ದು, ಇಲ್ಲಿ ವಿವಿಧ ಅಲಂಕಾರಿಕ ಗಿಡಗಳು, ಹಸಿರು ಎಲೆ ಬಳ್ಳಿಗಳು ಜಾಗ ಪಡೆದಿವೆ. ಜಿಲ್ಲೆಯ ಏಕೈಕ ಮಹಿಳಾ ಠಾಣೆ ಇದಾಗಿದ್ದು, ಇಲ್ಲಿನ ಸಿಬ್ಬಂದಿಗಳು ಪರಿಸರ ಪ್ರೇಮ ಮೆರೆದಿದ್ದಾರೆ.

ಗ್ರಾಮೀಣ ಪೊಲೀಸ್‌ ಠಾಣೆ ಕಟ್ಟಡದ ಮೊದಲ ಮಹಡಿಯಲ್ಲಿ ಮಹಿಳಾ ಪೊಲೀಸ್ ಠಾಣೆ ಇದೆ. ಅಲ್ಲಿ ಮಲೆನಾಡಿನ ವಿವಿಧ ಬಳ್ಳಿಗಳನ್ನು ನೇತು ಹಾಕಲಾಗಿದೆ. ಠಾಣೆಗೆ ತೆರಳಿದವರಿಗೆ ‘ಹಸಿರು ಬಳ್ಳಿ’ಗಳನ್ನು ನೋಡಿ ಕ್ಷಣಕಾಲ ಯಾವುದೋ ಗಾರ್ಡನ್​ಗೆ ಬಂದಿದ್ದೇವೆ ಎಂದು ಭಾಸವಾಗುತ್ತದೆ. ಈ ಹಸಿರು ಬಳ್ಳಿಗಳ ಕೃಷಿ ಜೂನ್‌ ತಿಂಗಳಲ್ಲಿ ಆರಂಭಗೊಂಡಿದ್ದು, ಸೆಪ್ಟೆಂಬರ್‌ ತನಕ ಬಳ್ಳಿಗಳನ್ನು ಬೆಳೆಸಿದ್ದಾರೆ. ನಂತರ ದಸರಾ ಹಬ್ಬದ ಮುನ್ನ ಇದನ್ನು ತೂಗು ಹಾಕಲಾಗುತ್ತದೆ.

80 ಬಾಟಲಿಗಳ ಬಳಕೆ: ವಿವಿಧ ಹಸಿರು ಬಳ್ಳಿಗಳನ್ನು ತೂಗು ಹಾಕಲು 80 ಪ್ಲಾಸ್ಟಿಕ್‌ ಬಾಟಲಿಗಳನ್ನು ಬಳಕೆ ಮಾಡಿಕೊಳ್ಳಲಾಗಿದೆ. ಇವುಗಳಲ್ಲಿ ಕೆಲವು ಮಾತ್ರ ಆಕಾರಕ್ಕೆ ಬಂದಿದ್ದಿಂದ ಅವುಗಳನ್ನು ಮಾತ್ರ ಉಪಯೋಗಿಸಲಾಗಿದೆ. ಮತ್ತಷ್ಟು ಬಳ್ಳಿಗಳನ್ನು ತೂಗು ಹಾಕಲು ಸಿಬ್ಬಂದಿ ಪ್ರಯತ್ನ ನಡೆಸುತ್ತಿದ್ದಾರೆ. ಹಸಿರೆಲೆ ಮನಿಪ್ಲಾಂಟ್‌ನಲ್ಲಿ ಎರಡು ವಿಧಗಳಿದ್ದು, ಹಸಿರು, ಬಿಳಿ ಬಳ್ಳಿಗಳನ್ನು ಹೊಂದಿವೆ. ಇವುಗಳನ್ನು ಈ ಪೊಲೀಸ್ ಠಾಣೆಯಲ್ಲಿ ಅಳವಡಿಸಲಾಗಿದೆ.

ಬಾಟಲಿಗಳಲ್ಲಿ ಬಳ್ಳಿ ಅಳವಡಿಕೆ

ಮಹಿಳಾ ಠಾಣೆಯಲ್ಲಿ ಏನೇನಿದೆ? ಮೊದಲನೇ ಮಹಡಿಯಲ್ಲಿ ಮೊದಲಿಗೆ ಕಾಣಸಿಗುವುದು ಬರಹಗಾರರ ಕೋಣೆ. ಅದರ ಪಕ್ಕದಲ್ಲಿ ಇನ್ಸ್​ಪೆಕ್ಟರ್​​ ಕೋಣೆ, ಕಾನೂನು ಸಲಹಾ ಕೇಂದ್ರ, ಮಕ್ಕಳ ಆಹಾರ ಕೋಣೆ ಇದೆ. ಇವುಗಳ ಮುಂದೆಯೇ ಈ ಬಾಟಲಿಗಳನ್ನು ತೂಗು ಹಾಕಲಾದ ಬಣ್ಣ ಬಣ್ಣದ ಗಿಡಗಳಿವೆ.

ಪೊಲೀಸ್ ಮುಂಭಾಗದ ಚಿತ್ರಣ

ಕೇರಳ ಮಹಿಳಾ ಠಾಣೆ ಪ್ರೇರಣೆ: ಕೇರಳದ ತ್ರಿಶೂರ್‌ನಲ್ಲಿ ನಡೆದ ತರಬೇತಿ ಕಾರ್ಯಾಗಾರಕ್ಕೆ ಇನ್ಸ್​ಪೆಕ್ಟರ್​​ ಹೊಸಕೇರಪ್ಪ ಅವರು ತೆರಳಿದಾಗ ಅಲ್ಲಿ ಮಹಿಳಾ ಠಾಣೆಗೂ ಭೇಟಿ ನೀಡಿದ್ದರು. ಆಗ ಅಲ್ಲಿ ಹಸಿರು ಬಳ್ಳಿಗಳಿಂದ ಠಾಣೆ ಶೃಂಗರಿಸಲಾಗಿತ್ತು. ಇದು ನಮ್ಮಲ್ಲೂ ಏಕೆ ಇರಬಾರದು ಎಂಬ ಪ್ರಶ್ನೆ ಅವರಲ್ಲಿ ಮೂಡಿದ್ದು, ಆಗಿನಿಂದ ಇಂತಹ ಕೆಲಸ ಇಲ್ಲಿ ಚಾಲ್ತಿಯಲ್ಲಿದೆ ಎಂದು ತಿಳಿದು ಬಂದಿದೆ.

ಕಲ್ಯಾಣ ಕರ್ನಾಟಕದ ಮಹಿಳಾ ಪೊಲೀಸ್‌ ಠಾಣೆಯಲ್ಲಿ ಎಲ್ಲಿಯೂ ಈ ರೀತಿ ಅಳವಡಿಸಿಲ್ಲ. ಬಹುಶಃ ನಾವೇ ಮೊದಲು ಇರಬೇಕು. ಹಸಿರು ಬಳ್ಳಿಗಳನ್ನು ನಾನು ಸೇರಿದಂತೆ ನಮ್ಮ ಸಿಬ್ಬಂದಿಯವರು ಕಾಪಾಡಿಕೊಂಡು ಬರುತ್ತಿದ್ದೇವೆ. ಇದಕ್ಕೆ ತೋಟಗಾರಿಕೆ ಇಲಾಖೆಯ ಸಿಬ್ಬಂದಿ ರವಿ ಸಹಕಾರ ನೀಡಿದ್ದಾರೆ. ಇದರಿಂದ ಇಷ್ಟೊಂದು ಚೆನ್ನಾಗಿ ಮೂಡಿ ಬರಲು ಸಾಧ್ಯವಾಗಿದೆ ಎಂದು ಪಿಐ ಹೊಸಕೇರಪ್ಪ ಹೇಳಿದ್ದಾರೆ.

ಬಣ್ಣ ಬಣ್ಣದ ಗಿಡಗಳು

ಮುನಿರಾಬಾದ್‌ನಿಂದ ತಂದ ಬಳ್ಳಿಗಳು: ಮಹಿಳಾ ಠಾಣೆಯ ಪೊಲೀಸ್‌ ಇನ್ಸ್‌ಪೆಕ್ಟರ್ ಹೊಸಕೇರಪ್ಪ ಅವರು ಕಲಬುರ್ಗಿ, ರಾಜಮಂಡ್ರಿಯಲ್ಲಿ ತೂಗು ಹಾಕುವ ಬಳ್ಳಿಗಳಿಗಾಗಿ ಹುಡುಕಾಡಿದ್ದಾರೆ. ಆದರೆ, ಎರಡು ಕಡೆ ಸಿಗದಿದ್ದರಿಂದ ಕೊಪ್ಪಳದ ಮುನಿರಾಬಾದ್‌ ತೋಟಗಾರಿಕೆ ಕೇಂದ್ರದಿಂದ ತಂದ ಮನಿಪ್ಲಾಂಟ್‌, ಪೊಥೋಸ್ ಸಸ್ಯ, ಜಾಮಿಯಾ ಸಸ್ಯ, ಬಾಣದ ಬಳ್ಳಿ ಸೇರಿದಂತೆ ವಿವಿಧ ಅಲಂಕಾರಿಗಳು ಬಳ್ಳಿಗಳು ಇಲ್ಲಿವೆ. ಜೊತೆಗೆ ತುಳಸಿ ಗಿಡ, ಅಲಂಕಾರಿಕ ಹೂ ಕುಂಡಗಳು ಕೂಡ ಇಲ್ಲಿ ಜಾಗ ಪಡೆದಿವೆ.

ಪೊಲೀಸ್ ಸಿಬ್ಬಂದಿಗಳಿಂದ ಗಾರ್ಡನ್ ನಿರ್ಮಾಣ

ನಮ್ಮ ಸುತ್ತಲಿನ ವಾತಾವರಣ ಹಸಿರು ಗಿಡ, ಮರಗಳಿಂದ ಕೂಡಿದ್ದರೆ ಮನಸ್ಸಿಗೆ ಆನಂದವಾಗುತ್ತದೆ. ಕೆಲಸ ಮುಗಿದ ಬಳಿಕ ಸಂಜೆ ಹೊತ್ತು ಬಳ್ಳಿಗಳನ್ನು ನೋಡುತ್ತಾ ಆವರಣದಲ್ಲಿ ನಡಿಗೆ ಕೂಡ ಮಾಡುತ್ತೇನೆ. ಸ್ವಂತ ಹಣದಿಂದ ಇದನ್ನು ಮಾಡಿದ್ದೇನೆ. ಇದು ಖುಷಿ ಕೊಡುವ ವಿಷಯವಾಗಿದೆ ಎಂದು ಹೊಸಕೇರಪ್ಪ ತಿಳಿಸಿದ್ದಾರೆ.

ಸಿಬ್ಬಂದಿ ಎಲ್ಲಾ ಸೇರಿಕೊಂಡು ಆಗಾಗ ನೀರು ಹಾಕುತ್ತೇವೆ. ನಮ್ಮ ಸಾಹೇಬರು ಉತ್ತಮ ಪರಿಸರ ಪ್ರೇಮಿಯಾಗಿದ್ದು, ಬಳ್ಳಿಗಳನ್ನ ತಂದು ಇಲ್ಲಿ ತೂಗು ಹಾಕಿಸಿದ್ದಾರೆ. ಇದರಿಂದ ನಮಗೂ ಖುಷಿಯಾಗಿದೆ ಎಂದು ಪಿಎಸ್‌ಐ ಶೀಲಾ ಹೇಳಿದರು.

ರಾಜಕೀಯ ದ್ವೇಷಕ್ಕೆ ಬಲಿಯಾದವು 250 ಕ್ಕೂ ಹೆಚ್ಚು ಅಡಿಕೆ ಗಿಡಗಳು, ಯಾವೂರಲ್ಲಿ?