ಕುಂಚ ಕೈಗೆತ್ತಿಕೊಂಡ ಹಳೆಯ ವಿದ್ಯಾರ್ಥಿಗಳು ತಮ್ಮ ಶಾಲೆಗಳ ಮುಂದೆ ಮಾಡಿದ್ದೇನು ಗೊತ್ತಾ?
ಕನ್ನಡ ಶಾಲೆಯ ಕುರಿತಾಗಿ ಜನರಲ್ಲಿದ್ದ ಕೀಳರಿಮೆಯನ್ನು ಹೋಗಲಾಡಿಸಿ ಪಾಲಕರು ತಮ್ಮ ಮಕ್ಕಳನ್ನು ಶಾಲೆಗೆ ಕಳಿಸಲಿ ಮತ್ತು ಕನ್ನಡ ಶಾಲೆಯಲ್ಲಿಯೇ ತಮ್ಮ ಮಕ್ಕಳನ್ನು ಓದಿಸುವಂತಾಗಲಿ ಎನ್ನುವುದು ಹಳೇ ವಿದ್ಯಾರ್ಥಿಗಳ ಸಂಘದ ಆಶಯ.

ಹುಬ್ಬಳ್ಳಿ: ಕನ್ನಡ ಮಾಧ್ಯಮ ಶಾಲೆಗಳು ಅವಗಣನೆಗೆ ಒಳಗಾಗುತ್ತಿವೆ. ಇಂಗ್ಲೀಷ್ ಮೋಹಕ್ಕೆ ಸಿಲುಕಿ ಕನ್ನಡ ಶಾಲೆಗಳಿಗೆ ಮಕ್ಕಳನ್ನು ಕಳಿಸುವವರ ಸಂಖ್ಯೆ ಕ್ಷೀಣಿಸುತ್ತಿದೆ ಎಂಬ ಆರೋಪ ಮೇಲಿಂದ ಮೇಲೆ ಕೇಳಿ ಬರುತ್ತಲೇ ಇರುತ್ತದೆ. ಅದಕ್ಕೆ ಅಪವಾದವೆಂಬಂತೆ ಕೆಲವೆಡೆ ಊರಿನವರು, ಹಳೇ ವಿದ್ಯಾರ್ಥಿಗಳು, ದಾನಿಗಳು ಶಾಲೆಗಳ ಅಭಿವೃದ್ಧಿಗೆ ಮುಂದಾಗುತ್ತಿರುತ್ತಾರೆ. ಅಂಥದ್ದೇ ಒಂದು ಕಾರ್ಯಕ್ಕೆ ಹುಬ್ಬಳ್ಳಿಯ ಯುವಕರು ಮುಂದಾಗಿದ್ದಾರೆ.
ಅವರೆಲ್ಲರೂ ಕನ್ನಡ ಶಾಲೆಯಲ್ಲಿ ಕಲಿತ ಹಳೇ ವಿದ್ಯಾರ್ಥಿಗಳು. ಕೇವಲ ತಾವು ಕಲಿತ ಶಾಲೆಗೆ ಮಾತ್ರವಲ್ಲದೆ ಇನ್ನಿತರ ಶಾಲೆಗಳನ್ನೂ ಬೆಳೆಸುವ ಮಹತ್ಕಾರ್ಯಕ್ಕೆ ಮುಂದಾಗಿದ್ದಾರೆ. ಕನ್ನಡ ಶಾಲೆಗಳು ಆಕರ್ಷಕವಾಗಿ ಕಾಣುವಂತೆ ಮಾಡಲು ವಿನೂತನ ಪ್ರಯತ್ನವನ್ನು ಕೈಗೆತ್ತಿಕೊಂಡಿದ್ದಾರೆ. ಕೈಯಲ್ಲಿ ಬಣ್ಣದ ಕುಂಚ ಹಿಡಿದುಕೊಂಡು ಶಾಲೆಗೆ ಬಣ್ಣ ಬಳಿಯುತ್ತಿರುವ ಯುವಕರು ಇದೀಗ ಎಲ್ಲರ ಗಮನ ಸೆಳೆಯುತ್ತಿದ್ದಾರೆ.
ಹೀಗೆ ಶಾಲಾ ಕಟ್ಟಡಗಳಿಗೆ ಬಣ್ಣ ಬಳಿಯಲು ಮುಂದಾಗಿರುವವರು ಹುಬ್ಬಳ್ಳಿಯ ಹಳೇ ವಿದ್ಯಾರ್ಥಿಗಳ ಸಂಘದ ಪದಾಧಿಕಾರಿಗಳು. ಈ ತಂಡದವರು ಕನ್ನಡ ಶಾಲೆಗಳನ್ನು ಸುಂದರವಾಗಿಸುವ ಸದುದ್ದೇಶದಿಂದ ಶಾಲಾ ಕಟ್ಟಡಗಳಿಗೆ ಬಣ್ಣ ಹಚ್ಚುವ ಮೂಲಕ ಅಭಿವೃದ್ಧಿ ಕಾರ್ಯಕ್ಕೆ ಕೈ ಜೋಡಿಸುತ್ತಿದ್ದಾರೆ.
ಈಗಾಗಲೇ ಹಳೇ ವಿದ್ಯಾರ್ಥಿಗಳ ಸಂಘದಿಂದ ಸುಮಾರು ಒಂಬತ್ತು ಶಾಲೆಗಳಿಗೆ ಬಣ್ಣ ಬಳಿಯಲಾಗಿದೆ. ಸರ್ಕಾರಿ ಶಾಲೆಗಳು ವಿದ್ಯಾರ್ಥಿಗಳ ಕಣ್ಮನ ಸೆಳೆಯುವಂತೆ ಮಾಡಲು ಸ್ವಯಂಪ್ರೇರಿತರಾಗಿ ಇಂತಹ ಮಹತ್ತರ ಕಾರ್ಯಕ್ಕೆ ಮುಂದಾಗಿರುವ ಹಳೇ ವಿದ್ಯಾರ್ಥಿಗಳ ಸಂಘದಲ್ಲಿ ಪೊಲೀಸ್, ವೈದ್ಯರು, ಶಿಕ್ಷಕರು ಸೇರಿದಂತೆ ಸಮಾಜ ಸೇವೆ ಮನೋಭಾವದ ದೊಡ್ಡ ತಂಡವೇ ಸೇರಿಕೊಂಡಿದೆ.
ಕನ್ನಡ ಶಾಲೆಯ ಕುರಿತಾಗಿ ಜನರಲ್ಲಿದ್ದ ಕೀಳರಿಮೆಯನ್ನು ಹೋಗಲಾಡಿಸಿ ಪಾಲಕರು ತಮ್ಮ ಮಕ್ಕಳನ್ನು ಶಾಲೆಗೆ ಕಳಿಸಲಿ ಮತ್ತು ಕನ್ನಡ ಶಾಲೆಯಲ್ಲಿಯೇ ತಮ್ಮ ಮಕ್ಕಳನ್ನು ಓದಿಸುವಂತಾಗಲಿ ಎನ್ನುವುದು ಹಳೇ ವಿದ್ಯಾರ್ಥಿಗಳ ಸಂಘದ ಆಶಯ. ಅಲ್ಲದೇ ಮಕ್ಕಳಲ್ಲಿ ಕಲಿಯುವ ಉತ್ಸಾಹವನ್ನು ಇಮ್ಮಡಿಗೊಳಿಸಲು ಈ ತಂಡ ಶ್ರಮಿಸುತ್ತಿದೆ.
ಅಲ್ಲದೇ ಧಾರವಾಡ ಹಾಗೂ ಹಾವೇರಿ ಜಿಲ್ಲೆಯ ಬಹುತೇಕ ಶಾಲೆಗಳಿಗೆ ಬಣ್ಣ ಹಚ್ಚಿರುವ ಹಳೇ ವಿದ್ಯಾರ್ಥಿಗಳ ಕಾರ್ಯ ಯುವ ಪೀಳಿಗೆಗೆ ಉತ್ಸಾಹ ನೀಡುವಂತಿದೆ. ನಾವು ಕಲಿತ ಸರ್ಕಾರಿ ಶಾಲೆಗಳು ನಮ್ಮ ಜೀವನಕ್ಕೆ ಮಾರ್ಗದರ್ಶನ ನೀಡಿವೆ. ಅಲ್ಲದೇ ನಮ್ಮ ಉಜ್ವಲ ಭವಿಷ್ಯಕ್ಕೆ ದಾರಿದೀಪವಾಗಿ ನಮ್ಮ ಜೀವನವನ್ನು ಬಣ್ಣ ಬಣ್ಣದಿಂದ ಕಂಗೊಳಿಸುವಂತೆ ಮಾಡಿರುವ ಶಾಲೆಗಳು ಸದಾ ವರ್ಣರಂಜಿತವಾಗಿ ಕಂಗೊಳಿಸಲಿ ಎಂಬ ಧ್ಯೇಯದೊಂದಿಗೆ ಹೆಜ್ಜೆ ಹಾಕುತ್ತಿರುವ ಹಳೇ ವಿದ್ಯಾರ್ಥಿಗಳ ತಂಡಕ್ಕೆ ಇನ್ನೂ ಹೆಚ್ಚಿನ ಸಾಮಾಜಿಕ ಕಾರ್ಯ ಮಾಡುವ ಶಕ್ತಿ ದೊರೆಯಲಿ ಎನ್ನುವುದೇ ಎಲ್ಲರ ಆಶಯ.
ತಾನು ಓದಿದ ಶಾಲೆಗೆ ಕಟ್ಟಡ ಕಟ್ಟಿಸಿಕೊಟ್ರು.. ಕೋಟೆನಾಡಿನ ನಿವೃತ್ತ ನೌಕರ ಮಾಡಿದ ಕೆಲಸ ಜನ ಮೆಚ್ಚುಗೆಗೆ ಪಾತ್ರ
Published On - 1:27 pm, Fri, 22 January 21