ಪಾಠ ಹೇಳಿಕೊಡುವ ಕೃಷಿ ವಿಶ್ವವಿದ್ಯಾಲಯ ರೈತರ ಪಾಲಿಗೆ ಹೇಗೆ ವರವಾಗಿದೆ ಗೊತ್ತಾ? ತಪ್ಪದೇ ಓದಿ..
ರೈತರು ಬೆಳೆಯುವ ನವಣೆ,ಸಜ್ಜೆ ಮತ್ತೀತರ ಸಿರಿಧಾನ್ಯಗಳನ್ನು ಕೃಷಿ ವಿಶ್ವವಿದ್ಯಾಲಯದಲ್ಲಿ ಅತ್ಯಂತ ಕಡಿಮೆ ದರದಲ್ಲಿ ಸಂಸ್ಕರಣೆ ಮಾಡಿಸಿಕೊಂಡು ಮಾರುಕಟ್ಟೆಯಲ್ಲಿ ಮಾರಾಟ ಮಾಡುವ ಮೂಲಕ ರೈತರು ಭರ್ಜರಿ ಲಾಭ ಗಳಿಸುತ್ತಿದ್ದಾರೆ.
ರಾಯಚೂರು: ಬಿಸಿಲನಾಡು ರಾಯಚೂರಿನ ಕೃಷಿ ವಿಶ್ವವಿದ್ಯಾಲಯವು ಕಲ್ಯಾಣ ಕರ್ನಾಟಕ ಭಾಗದ ರೈತರ ಪಾಲಿಗೆ ವರದಾನವಾಗಿದೆ. ಅತಿವೃಷ್ಟಿ ಮತ್ತು ಅನಾವೃಷ್ಟಿಯಿಂದ ಕಂಗಾಲಾಗುವ ಅಸಂಖ್ಯಾತ ರೈತರ ಪಾಲಿಗೆ ಈ ಕೃಷಿ ವಿಶ್ವವಿದ್ಯಾಲಯವು ರೈತರ ಆದಾಯ ಹೆಚ್ಚಿಸಿಕೊಳ್ಳಲು ವಿನೂತನ ಪ್ರಯೋಗಳನ್ನ ಮಾಡುತ್ತಿದ್ದು, ರೈತರ ಮೆಚ್ಚುಗೆಗೆ ಪಾತ್ರವಾಗುತ್ತಿದೆ.
ಕೃಷಿ ವಿಶ್ವವಿದ್ಯಾಲಯದ ತಾಂತ್ರಿಕ ವಿಭಾಗದ ವಿಜ್ಞಾನಿಗಳ ಹೊಸ ಬಗೆಯ ಪ್ರಯೋಗಗಳು ಅದೆಷ್ಟೋ ರೈತರ ಬದುಕಲ್ಲಿ ಆಶಾಕಿರಣ ಮೂಡಿಸಿದೆ. ವಿಶೇಷವಾಗಿ ಕೃಷಿ ವಿಶ್ವವಿದ್ಯಾಲಯದ ಸಿರಿಧಾನ್ಯ ಸಂಸ್ಕರಣ ಘಟಕವು ಕಲ್ಯಾಣ ಕರ್ನಾಟಕ ಭಾಗದ ರಾಯಚೂರು, ಕೊಪ್ಪಳ, ಬೀದರ್, ಬಳ್ಳಾರಿ, ಕಲಬುರ್ಗಿ ಮತ್ತು ಯಾದಗೀರ ಜಿಲ್ಲೆಗಳ ವ್ಯಾಪ್ತಿಯ ಸಣ್ಣ ರೈತರು ಬೆಳೆಯುವ ಸಿರಿಧಾನ್ಯಗಳನ್ನ ಸಂಸ್ಕರಣೆ ಮಾಡುತ್ತಿದೆ.
ರೈತರು ಬೆಳೆಯುವ ನವಣೆ, ಸಜ್ಜೆ ಮತ್ತಿತರ ಸಿರಿಧಾನ್ಯಗಳನ್ನು ಕೃಷಿ ವಿಶ್ವವಿದ್ಯಾಲಯದಲ್ಲಿ ಅತ್ಯಂತ ಕಡಿಮೆ ದರದಲ್ಲಿ ಸಂಸ್ಕರಣೆ ಮಾಡಿಸಿಕೊಂಡು ಮಾರುಕಟ್ಟೆಯಲ್ಲಿ ಮಾರಾಟ ಮಾಡುವ ಮೂಲಕ ರೈತರು ಭರ್ಜರಿ ಲಾಭ ಗಳಿಸುತ್ತಿದ್ದಾರೆ.
ಇನ್ನು ಕೃಷಿ ವಿಶ್ವವಿದ್ಯಾಲಯದಲ್ಲಿರುವ ಅತ್ಯಾಧುನಿಕ ಯಂತ್ರೋಪಕರಣಗಳನ್ನ ಸಾವಿರಾರು ಜನ ರೈತರು ಸದುಪಯೋಗಪಡಿಸಿಕೊಳ್ಳುವ ಮೂಲಕ ಆದಾಯ ದ್ವಿಗುಣ ಮಾಡಿಕೊಳ್ಳುವ ಕಾಯಕದಲ್ಲಿ ನಿರತರಾಗಿದ್ದಾರೆ. ವಿಶೇಷವಾಗಿ ನವಣೆ ಬೆಳೆಯುವ ರೈತರು ವಿಶ್ವವಿದ್ಯಾಲಯದ ಸಿರಿಧಾನ್ಯ ಸಂಸ್ಕರಣ ಘಟಕದಲ್ಲಿ ಕ್ವಿಂಟಾಲುಗಟ್ಟಲೇ ನವಣೆಯನ್ನ ಸಂಸ್ಕರಿಸಿ ಪ್ಯಾಕಿಂಗ್ ಮಾಡಿ ತಮ್ಮದೇ ಬ್ರ್ಯಾಂಡ್ನಲ್ಲಿ ಮುಕ್ತ ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತಿದ್ದಾರೆ.
ರಾಯಚೂರು ಕೃಷಿ ವಿಶ್ವವಿದ್ಯಾಲಯ ನವಣೆ ಅಕ್ಕಿ ಸೇರಿದಂತೆ ಎಲ್ಲಾ ಬಗೆಯ ಸಿರಧಾನ್ಯಗಳನ್ನ ಪ್ರತಿ ಕೆ.ಜಿಗೆ ಕೇವಲ 6 ರೂಪಾಯಿ ಶುಲ್ಕ ಪಡೆಯುತ್ತಿದೆ. ಆ ಮೂಲಕ ಸಂಸ್ಕರಣೆಯಿಂದ ಪ್ರತಿ ತಿಂಗಳು ಬರುವ 2 ಲಕ್ಷ ರೂಪಾಯಿ ಹಣವನ್ನು ಸಂಸ್ಕರಣೆ ಘಟಕದ ನಿರ್ವಹಣೆಗೆ ಬಳಸುತ್ತಿದೆ.ಇನ್ನು ಇದುವರೆಗೂ ಕೇವಲ ಸಣ್ಣ ಪ್ರಮಾಣದಲ್ಲಿ ರೈತರು ಸಿರಿಧಾನ್ಯಗಳನ್ನ ಸಂಸ್ಕರಿಸಿಕೊಳ್ಳಲು ರಾಯಚೂರು ಕೃಷಿ ವಿಶ್ವವಿದ್ಯಾಲಯಕ್ಕೆ ಆಗಮಿಸುತ್ತಿದ್ದರು.
ಸದ್ಯ ದೊಡ್ಡ ದೊಡ್ಡ ಕಂಪನಿಗಳು ಸಹ ಸಿರಿಧಾನ್ಯಗಳ ಸಂಸ್ಕರಣೆಗೆ ವಿಶ್ವವಿದ್ಯಾಲಯದ ಕದ ತಟ್ಟುತ್ತಿವೆ. ಆದರೆ ವಿಶ್ವವಿದ್ಯಾಲಯದಲ್ಲಿ ಸಣ್ಣ ಪ್ರಮಾಣದ ಯಂತ್ರೋಪರಣಗಳು ಇರುವುದರಿಂದ ಕಡಿಮೆ ಪ್ರಮಾಣದಲ್ಲಿ ಮಾತ್ರ ಸಿರಿಧಾನ್ಯ ಸಂಸ್ಕರಣೆ ಮಾಡಲಾಗುತ್ತಿದೆ.
ಈಗಾಗಲೇ ಕಲ್ಯಾಣ ಕರ್ನಾಟಕ ವ್ಯಾಪ್ತಿಯ 6 ಜಿಲ್ಲೆಗಳಲ್ಲಿನ 7,000ಕ್ಕೂ ಅಧಿಕ ರೈತರು ರಾಯಚೂರು ಕೃಷಿ ವಿಶ್ವವಿದ್ಯಾಲಯದ ಸಿರಿಧಾನ್ಯ ಸಂಸ್ಕರಣಾ ಘಟಕದಲ್ಲಿ ನೋಂದಣಿ ಮಾಡಿಸಿಕೊಂಡಿದ್ದು ನಿತ್ಯವೂ ಸಿರಿಧಾನ್ಯಗಳ ಸಂಸ್ಕರಣೆ ಮಾಡಿಸಿಕೊಂಡು ತಮ್ಮದೇ ಬ್ರ್ಯಾಂಡನಲ್ಲಿ ಸಿರಿಧಾನ್ಯ ಮಿಶ್ರಿತ ಪದಾರ್ಥದ ಪ್ಯಾಕೇಟಗಳನ್ನ ಮುಕ್ತ ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತಿದ್ದಾರೆ. ಈ ಸಿರಿಧಾನ್ಯ ಮಿಶ್ರಿತ ಪದಾರ್ಥಗಳಿಗೆ ಸದ್ಯ ಮಾರುಕಟ್ಟೆಯಲ್ಲಿ ಫುಲ್ ಡಿಮ್ಯಾಂಡ್ ಇದ್ದು, ಹೀಗಾಗಿ ರೈತರು ನಿತ್ಯವೂ 2 ಕ್ವಿಂಟಾಲಿಗೂ ಅಧಿಕ ಪ್ರಮಾಣದ ಸಿರಿಧಾನ್ಯಗಳನ್ನ ಸಂಸ್ಕರಿಸಿ ಪ್ಯಾಕಿಂಗ್ ಮಾಡಿಕೊಂಡು ತೆರಳುತ್ತಿದ್ದಾರೆ.
ಸಿರಿಧಾನ್ಯದ ವೈಶಿಷ್ಟ: ನವಣೆ, ರಾಗಿ, ಸಜ್ಜೆ ಸೇರಿದಂತೆ 6 ಬಗೆಯ ಸಿರಿಧಾನ್ಯಗಳು ಅಧಿಕ ಗಂಧಕದ ಪ್ರಮಾಣ ಹೊಂದಿರುವ ಅತ್ಯುತ್ತಮ ಪೌಷ್ಟಿಕಾಂಶದಿಂದ ಕೂಡಿರುತ್ತವೆ. ಹೆಚ್ಚು ಸಿರಿಧಾನ್ಯ ಸೇವಿಸುವುದರಿಂದ ದೇಹದ ಜೀವಕೋಶಗಳ ಪೋಷಣೆಗೆ ಉಪಯುಕ್ತ ಶಕ್ತಿಯನ್ನ ಒದಗಿಸುತ್ತದೆ. ಸಿರಿಧಾನ್ಯ ಮಿಶ್ರಿತ ಆಹಾರ ಸೇವಿಸುವುದರಿಂದ ಅಸ್ತಮಾದಂತಹ ರೋಗಗಳು ನಿವಾರಣೆಯಾಗುತ್ತವೆ.
ಸಿರಿಧಾನ್ಯಗಳಲ್ಲಿ ಅಧಿಕ ನಾರಿನಂಶ ಇರುವುದರಿಂದ ಈ ಆಹಾರ ಸೇವಿಸುವುದರಿಂದ ಮಹಿಳೆಯರಲ್ಲಿನ ಸ್ತನ ಕ್ಯಾನ್ಸರ್ ನಿಯಂತ್ರಣಕ್ಕೆ ಅತ್ಯಮೂಲ್ಯ ಶಕ್ತಿ ಒದಗಿಸುತ್ತದೆ. ಪ್ರತಿ ನಿತ್ಯವೂ ಸಿರಿಧಾನ್ಯ ಮಿಶ್ರಿತ ಆಹಾರ ಸೇವಿಸುವುದರಿಂದ ಮಧುಮೇಹ, ಹೃದಯ ಸಂಬಂಧಿ ಕಾಯಿಲೆಗಳಾದ ಅಧಿಕ ರಕ್ತದೊತ್ತಡ, ಕೊಲೆಸ್ಟ್ರಾಲ್ ಕಡಿಮೆ ಮಾಡಲು ಸಹಾಯಕವಾಗುತ್ತದೆ.
ದೇಹದ ಯಾವುದೇ ಭಾಗಕ್ಕೆ ಪೆಟ್ಟಾದಾಗ ನವಣೆ ಅಕ್ಕಿ, ಅನ್ನ ಮತ್ತು ತುಪ್ಪ ಸೇವಿಸಿದರೆ ನೋವು ನಿಯಂತ್ರಣ ಮಾಡುತ್ತದೆ. ವಿಶೇಷವಾಗಿ ನವಣೆ ಅಕ್ಕಿಯಿಂದ ತಯಾರಿಸಿದ ಅನ್ನ ಸೇವಿಸುವುದರಿಂದ ಬೊಜ್ಜು ಸಹ ಕಡಿಮೆಯಾಗುತ್ತದೆ. ಶಸ್ತ್ರಚಿಕಿತ್ಸೆಗೆ ಒಳಗಾದ ರೋಗಿಗಳಿಗೆ ಸಾವಕ್ಕಿ ಅನ್ನ ನೀಡುತ್ತಾರೆ. ಇದರಿಂದ ಕೀವು ಮತ್ತು ನಂಜು ತಡೆಯಬಹುದು. ಇನ್ನು ಸಾವಕ್ಕಿ ಸೇವನೆಯಿಂದ ಕಣ್ಣು ಉರಿ ಜತೆಗೆ ಪದೇ ಪದೇ ಕಾಡುವ ತಲೆನೋವು ಶಮನವಾಗುವುದು. ಹೀಗಾಗಿ ಸದ್ಯ ಸಿರಿಧಾನ್ಯ ಮಿಶ್ರಿತ ಆಹಾರ ಪದಾರ್ಥಗಳ ಸೇವನೆಗೆ ಭಾರಿ ಡಿಮ್ಯಾಂಡ್ ಕೇಳಿ ಬರುತ್ತಿದೆ.
ಸಿರಿಧಾನ್ಯ ತರುವ ರೈತರಿಗೆ ನೆರವಾಗುವ ಸದುದ್ದೇಶದಿಂದ ಕೃಷಿ ವಿಶ್ವವಿದ್ಯಾಲಯ ಅತಿ ಕಡಿಮೆ ಬೆಲೆಯಲ್ಲಿ ಸಿರಿಧಾನ್ಯಗಳನ್ನ ಸಂಸ್ಕರಣೆ ಮಾಡಿ ನೀಡುತ್ತಿದೆ. ಇದಕ್ಕೆ ಒಳ್ಳೆಯ ರೆಸ್ಪಾನ್ಸ್ ಸಿಗುತ್ತಿದೆ. ಈಗಾಗಲೇ ಸಿರಿಧಾನ್ಯಗಳ ಸಂಸ್ಕರಣೆಗೆ ಡಿಮ್ಯಾಂಡ್ ಹೆಚ್ಚಾಗಿದ್ದು, ಹೊಸ ಯಂತ್ರೋಪಕರಣ ಸಿದ್ಧಪಡಿಸಲಾಗುತ್ತಿದೆ ಎಂದು ರಾಯಚೂರು ಕೃಷಿ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕರಾದ ಶರಣಗೌಡ ಹಿರೇಗೌಡರ್ ಹೇಳಿದ್ದಾರೆ.
ಅಪರೂಪದ ರಕ್ತ ಚಂದನ ಬೆಳೆದ ಯುವ ರೈತ; ಯೂಟ್ಯೂಬ್ ನೋಡಿಯೇ ಪ್ರೇರಣೆ ಪಡೆದಿದ್ದರು !