ನಾನೆಂಬ ಪರಿಮಳದ ಹಾದಿಯಲಿ: ನಮಸ್ಕಾರ ಇದು ಆಕಾಶವಾಣಿ ಹಾಸನ…

‘ಇಂದು ಬಾಗಿಲುದ್ದಕ್ಕೂ ಬೆಳೆದು ನಿಂತ ಮಗ ಭಿಕ್ಷುಕಿಯನ್ನು ಆಂಟಿ ಎಂದು, ಕಸದ ಗಾಡಿಯವನನ್ನು ಅಂಕಲ್ ಎಂದು ಹೇಳುವಾಗ ಅವನಲ್ಲಿ ಮನುಷ್ಯತ್ವದ ಬೀಜ ಮೊಳೆತದ್ದಕ್ಕೆ  ಖುಷಿ ಪಡುತ್ತೇನೆ. ಹೀಗೇ ನನ್ನ ಜಗತ್ತೇ ಬದಲಾಯಿತೋ, ನೋಟ ಬದಲಾಯಿಸಿತೋ ಗೊತ್ತಿಲ್ಲ. ಆದರೆ ಇದಕ್ಕೆ ಅವನು ಕಾರಣ ಎಂದು ಮಾತ್ರ ದೃಢವಾಗಿ ಹೇಳಬಲ್ಲೆ‌. ಸೃಷ್ಟಿಯ ಈ ಚಲನಶೀಲತೆಗೆ ನಾನು ಈ ಕಾರಣದಿಂದ  ಶಿರಬಾಗುತ್ತೇನೆ.’ ನೂತನ ದೋಶೆಟ್ಟಿ

ನಾನೆಂಬ ಪರಿಮಳದ ಹಾದಿಯಲಿ: ನಮಸ್ಕಾರ ಇದು ಆಕಾಶವಾಣಿ ಹಾಸನ...
ಲೇಖಕಿ, ಕವಿ, ಆಕಾಶವಾಣಿ ಕಾರ್ಯಕ್ರಮ ನಿರ್ವಾಹಕಿ ನೂತನ ದೋಶೆಟ್ಟಿ
Follow us
ಶ್ರೀದೇವಿ ಕಳಸದ
|

Updated on:Jan 22, 2021 | 1:41 PM

ಅಮ್ಮನಾಗುತ್ತಿದ್ದಂತೆ ತೆರೆದುಕೊಳ್ಳುವ ಪುಳಕ ಆವರಿಸಿಕೊಳ್ಳುವ ಜವಾಬ್ದಾರಿಗಳಲ್ಲಿ ನಿನ್ನೆಗಳ ವಜ್ಜೆಯೂ ಇರುತ್ತದೆ ನಾಳೆಗಳ ಆತಂಕವೂ ಸೇರಿರುತ್ತದೆ. ಆದರೂ ಒಂದೊಂದನ್ನೇ ಕೂಡಿಕಳೆದು ಅಷ್ಟಷ್ಟೇ ಒಳಗೊಳಗೆ ಚಿಗಿತುಕೊಂಡು ಮಾಗುವ ಪ್ರಕ್ರಿಯೆಯಲ್ಲಿ ನಮ್ಮನ್ನು ನಾವು ಕಂಡುಕೊಳ್ಳುವ ಪ್ರಯತ್ನ ನಿರಂತರ ಸಾಗಿರುತ್ತದೆ. ಬಯಸಿದ್ದು ಉಡಿಗೆ ಬಂದು ಬೀಳಲು ಇಲ್ಲಿ ಯಾವ ದೇವರೂ ಪ್ರತ್ಯಕ್ಷನಾಗಿ ವರ ನೀಡಲಾರ, ಹಾಗೆಯೇ ಕೈಹಿಡಿದು ಮುನ್ನಡೆಸಲಾರ. ನಮ್ಮ ಆಸಕ್ತಿಗಳಿಗೆ, ಆಕಾಂಕ್ಷೆಗಳಿಗೆ, ಹಂಬಲಗಳಿಗೆ ಅನುಗುಣವಾಗಿ ಒಳಗೊಳ್ಳುವ ನಿರಂತರ ಪ್ರಯತ್ನದಲ್ಲೇ ನಾವು ದೇವರನ್ನು ಕಾಣುವುದು. ಹೀಗಿರುವಾಗ ಎಲ್ಲರ ಮಧ್ಯೆಯೂ ನಾವು ನಾವಾಗಿ ಇರುವುದು, ನಮಗೂ ಒಂದು ವ್ಯಕ್ತಿತ್ವವಿದೆ, ಅಸ್ತಿತ್ವವಿದೆ ಎಂಬ ಎಚ್ಚರದೊಂದಿಗೆ ಚಲಿಸುವ ಹಾದಿ ಕೇವಲ ಹೂಹಾದಿಯೇ ಆಗಿರಲು ಸಾಧ್ಯವಾದೀತಾದರೂ ಹೇಗೆ? ಬೆರಳೆಣಿಕೆಯಷ್ಟು ಹೆಣ್ಣುಮಕ್ಕಳು ಈ ವಿಷಯದಲ್ಲಿ ಅದೃಷ್ಟವಂತರು. ಉಳಿದವರು? ಇರುವುದೊಂದೇ ಬದುಕು. ಎಡರುತೊಡರುಗಳನ್ನು ಬಿಡಿಸಿಕೊಂಡೇ ಸಾಗಬೇಕೆಂದರೆ ಚೂರಾದರೂ ಆಸರೆ ಬೇಕು ಹೆಚ್ಚು ಮನೋಬಲ ಬೇಕು. ಈ ಹಿನ್ನೆಲೆಯಲ್ಲಿ ವಿವಿಧ ಕ್ಷೇತ್ರಗಳಲ್ಲಿ ಈಗಾಗಲೇ ಗುರುತಿಸಿಕೊಂಡ ಹೆಣ್ಣುಮಕ್ಕಳನ್ನು ‘ನಾನೆಂಬ ಪರಿಮಳದ ಹಾದಿಯಲಿ’ ಸರಣಿಯಲ್ಲಿ ಪಾಲ್ಗೊಳ್ಳುವಂತೆ ಟಿವಿ9 ಕನ್ನಡ ಡಿಜಿಟಲ್ ಕೇಳಿಕೊಂಡಾಗ ಖುಷಿಯಿಂದ ತಮ್ಮ ಅನುಭವದ ಬುತ್ತಿಗಳನ್ನು ಬಿಚ್ಚಿಟ್ಟರು. ಓದುತ್ತಾ ಓದುತ್ತಾ ನಿಮಗೂ ಏನಾದರೂ ಹಂಚಿಕೊಳ್ಳಬೇಕೆನ್ನಿಸಿದಲ್ಲಿ ಖಂಡಿತ ಬರೆಯಿರಿ. tv9kannadadigital@gmail.com

ಪರಿಕಲ್ಪನೆ: ಶ್ರೀದೇವಿ ಕಳಸದ

ಕವಿ, ಲೇಖಕಿ ನೂತನ ದೋಶೆಟ್ಟಿ ಅವರ ಅನುಭವ ಬರಹ ನಿಮ್ಮ ಓದಿಗೆ…

ಸುಮಾರು 35 ವರ್ಷಗಳ ಹಿಂದೆ ಈಗಿನ ಹೆಣ್ಣುಮಕ್ಕಳಿಗೆ ಇದ್ದಂಥ ಕೆಲ ಅನುಕೂಲಗಳು ನಮಗೆ ಇರಲಿಲ್ಲ. ಈ ಸಾಲನ್ನು ಓದಿ ನೀವು ಇದೇನು ಅಡಗೂಲಜ್ಜಿ ಕತೆಯೇ ಎಂದು ಮೂಗು ಮುರಿಯಬಹುದು ಅಥವಾ ಆಶ್ಚರ್ಯ ಪಡಲೂಬಹುದು. ಆದರೆ ನಾನು ಕಂಡ ಆ ಮೂವತೈದು ವರ್ಷಗಳ ಹಿಂದಿನ ಕಾಲವನ್ನು ನೀವೂ ಒಮ್ಮೆ ಹೊಕ್ಕರೆ ನಿಮಗೂ ಹಾಗೇ ಅನ್ನಿಸಬಹುದೇನೋ.

ಮಲೆನಾಡಿನ ಮಡಿಲಲ್ಲಿ ತಣ್ಣಗಿದ್ದ ಪುಟ್ಟ ತಾಲೂಕು ಉತ್ತರ ಕನ್ನಡ ಜಿಲ್ಲೆಯ  ಸಿದ್ದಾಪುರ. ನಮ್ಮ ತಾಲೂಕು ಕೇಂದ್ರ ಸಿದ್ದಾಪುರ ಆಗ ದೊಡ್ಡ ಹಳ್ಳಿಯೇ. ಅಲ್ಲಿ  ವಿದ್ಯಾಭ್ಯಾಸ ಮಾಡಿದ ನನಗೆ ಮುಂದೊಂದು ದಿನ ನಾನು ಕೇಂದ್ರ ಸರ್ಕಾರದ ದೊಡ್ಡ ಸಂಸ್ಥೆಯೊಂದರಲ್ಲಿ ಅಧಿಕಾರಿಯಾಗಬಹುದು ಎಂಬ ಸಣ್ಣ ಸುಳಿವೂ ಇರಲಿಲ್ಲ. ಇದಕ್ಕೆ ಕಾರಣವೂ ಇಲ್ಲದಿಲ್ಲ.  ನನ್ನ ಗೆಳತಿಯೊಬ್ಬಳು ಸದಾ ಹೇಳುತ್ತಿದ್ದ ಮಾತನ್ನು ಇಲ್ಲಿ ಹೇಳಿ ಬಿಡುತ್ತೇನೆ. ‘ನನಗೆ ಅಂಥಾ ಬ್ಯಾಂಕ್ ಗ್ರೌಂಡ್ ಇರಲಿಲ್ಲ.’ ಆ ಕಾಲದಲ್ಲಿ  ಅವಳ ಈ ಮಾತು ನನ್ನನ್ನು ಅದೆಷ್ಟು ಕಂಗೆಡಿಸಿತ್ತು‌. ಅವಳ ಇಂಗಿತ ನಾನು ವಿದ್ಯಾವಂತ ಕುಟುಂಬದ ಹಿನ್ನೆಲೆಯವಳಲ್ಲ. ಆದ್ದರಿಂದ ನಾನು ಏನನ್ನೂ ಸಾಧಿಸಲಾಗದವಳು! ಇಂಥ ಮಾತುಗಳು ನನ್ನ  ಮುಗ್ಧ ಹಾಗೂ ಸೂಕ್ಷ್ಮ ಮನಸ್ಸನ್ನು ಸಾಕಷ್ಟು ಘಾಸಿಗೊಳಿಸಿದ್ದವು.

ಕಾಲೇಜು ವಿದ್ಯಾಭ್ಯಾಸದ ಅಂತಿಮ ಹೊಸ್ತಿಲಲ್ಲಿದ್ದ ನನಗೆ ಓದು ನನ್ನ ಕಾಲ ಮೇಲೆ ನಾನು ನಿಲ್ಲಬೇಕಾದ ಸಾಧನವೂ ಆಗಿತ್ತು. ಇದಕ್ಕೆ ಕಾರಣ ನನ್ನ ಸಾಧಾರಣ ರೂಪ. ನನ್ನ ಸ್ನೇಹಿತೆಯರು ಬೆಳ್ಳಗಿನ ಸುಂದರಿಯರು. ಅವರ ಮನೆಗಳಲ್ಲಿ ಆಗಲೇ ಅವರ ಮದುವೆಯ ಮಾತುಗಳು ನಡೆಯುತ್ತಿದ್ದವು. ಒಬ್ಬಳಂತೂ ‘ನನಗೇನು  ಕೆಲಸ ಮಾಡಬೇಕಾದ ಅಗತ್ಯವಿಲ್ಲ’ ಎಂದು ನೇರವಾಗಿ ಹೇಳಬಿಡುತ್ತಿದ್ದಳು. ಅವಳು ಹಾಗೆ ಹೇಳಿದಾಗಲೆಲ್ಲ ನನ್ನ ಗಂಟಲಲ್ಲಿ ಕಡಬು ಸಿಕ್ಕಿಕೊಂಡಂತೆ ಗಂಟಲುಬ್ಬಿ ಬರುತ್ತಿತ್ತು. ಅದನ್ನೆಂದೂ ಅವಳೆದುರು ತೋರ್ಪಡಿಸಲಿಲ್ಲ. ನನ್ನ ರೂಪ ಹಾಗೂ ಕೌಟುಂಬಿಕ ಹಿನ್ನೆಲೆಯ ಬಗ್ಗೆ ಅವಳ ತಿವಿಯುವ ಆ ಮಾತು ನನ್ನಲ್ಲಿ ಅದೆಂಥ ಕೀಳರಿಮೆಯನ್ನು ಬೆಳೆಸಿಬಿಟ್ಟಿತು. ಮದುವೆಯ ಅರ್ಹತೆಯೇ ನನಗಿಲ್ಲ ಎಂದು ನನಗೆ ನಾನೇ ಆಗ ತೀರ್ಮಾನಕ್ಕೆ ಬಂದಿದ್ದೆ. ಹಾಗಾಗಿ ಓದು, ಉದ್ಯೋಗ ಇವೆರಡು ನನ್ನ ಗುರಿಯಾದವು. ಇವಕ್ಕೆ ನನ್ನ ಬಳಿ ಇದ್ದ ಒಂದೇ ಒಂದು ಸಲಕರಣೆಯೆಂದರೆ ಪರಿಶ್ರಮ. ಅದನ್ನೇ ಮೈಗೂಡಿಸಿಕೊಂಡೆ. ಪದವಿಯ ನಂತರ ಸ್ನಾತಕೋತ್ತರ ಪದವಿ;  ಕೂಡಲೇ ಉದ್ಯೋಗವೂ ದೊರೆಯಿತು.

ಆ ವೇಳೆಗಾಗಲೇ ಅನೇಕ ಸ್ನೇಹಿತೆಯರು ಸಂಸಾರಿಗಳಾಗಿ ಬಗಲಲ್ಲಿ ತಮ್ಮ ಸಂಸಾರಫಲವನ್ನು ಹೊಂದಿದ್ದರು. ಇದೊಂದು ದೊಡ್ಡ ಸಾಧನೆ ಎಂದು ಬೀಗುತ್ತಿದ್ದ ಕಾಲವದು! ಅವರ ಇಂಥ ಸಾಧನೆಯ ಪ್ರದರ್ಶನದೆದುರು ನಾನು ಕುಗ್ಗಿ ಹೋಗುತ್ತಿದ್ದೆ. ನನಗೆ ಸರ್ಕಾರಿ ಉದ್ಯೋಗ ದೊರೆತಿದ್ದು ಅದುವರೆಗೂ ನಮ್ಮ ಕುಟುಂಬದ ಹೆಣ್ಣುಮಕ್ಕಳು ಯಾರೂ ಮಾಡದ ಸಾಧನೆಯನ್ನು ನಾನು ಮಾಡಿದ್ದು ನನ್ನಲ್ಲಿ ಮನೆ ಮಾಡಿದ್ದ ಕೀಳರಿಮೆಯನ್ನು ತುಸು ಕಡಿಮೆ ಮಾಡಿತೆಂದೇ ಹೇಳಬೇಕು. ನನ್ನ  ಹತ್ತಿರದ ಸ್ನೇಹಿತೆಯರು ಯಾರೂ ಉದ್ಯೋಗಕ್ಕೆ ಸೇರಿರಲಿಲ್ಲ. ಜೊತೆಗೆ ‘ನಮಗೆ ಕೆಲಸ ಮಾಡುವ ಅಗತ್ಯವಿಲ್ಲ’ ಎಂಬ ಟ್ಯಾಗಂತೂ ಇದ್ದೇ ಇತ್ತು.

ಖಾಸಗಿ ಕಂಪನಿಯ ಉದ್ಯೋಗಸ್ಥ ಪತಿಯನ್ನು ಪಡೆದಿದ್ದ ಒಬ್ಬ ಸ್ನೇಹಿತೆ ಸರ್ಕಾರಿ ಕೆಲಸವನ್ನು ಹೀಗಳೆದು ನನ್ನನ್ನು  ಹಂಗಿಸಿದ್ದಳು. ಅವಳ  ಪ್ರಕಾರ ಸರ್ಕಾರಿ ಕಚೇರಿಗಳಲ್ಲಿ ಯಾರೂ ಕೆಲಸ ಮಾಡುವುದಿಲ್ಲ! ಅಂತೂ ಪಾಪಿ ಸಮುದ್ರ ಹೊಕ್ಕರೂ ಮೊಣಕಾಲು ನೀರು ಎಂಬಂಥ ಪರಿಸ್ಥಿತಿ. ಏನು ಮಾಡಿದರೂ ಒಳ್ಳೆಯ ಮಾತುಗಳನ್ನು ಕೇಳುವ ಅವಕಾಶವೇ ಒದಗಿ ಬರುತ್ತಿರಲಿಲ್ಲ. ಇದು ನನ್ನ ವ್ಯಕ್ತಿತ್ವವನ್ನು ಘಾಸಿಗೊಳಿಸುತ್ತ ಸಾಗಿತು. ಕವಿತೆಗಳನ್ನು ಬರೆದೆ. ಕತೆಗಳನ್ನು ಬರೆದೆ. ಯಾರಿಗೂ ತೋರಿಸದೆ ಬಚ್ಚಿಟ್ಟೆ.  ಮುಂದೆ ಪತ್ರಿಕೆಗಳಲ್ಲಿ ಲೇಖನಗಳು ಪ್ರಕಟವಾಗ ಹತ್ತಿದಾಗ ಬೈಲೈನ್ ನೋಡಿ ಒಳಗೇ ಕೀಳರಿಮೆ ನಿಧಾನವಾಗಿ ಕರಗಹತ್ತಿತು.

ಆಕಾಶವಾಣಿಯ ರೆಕಾರ್ಡಿಂಗ್ ಸ್ಟುಡಿಯೋದಲ್ಲಿ…

ಈ ನಡುವೆ ಮದುವೆಯಾಯಿತು. ಒಬ್ಬ ಮಗ ಹುಟ್ಟಿದ. ಆ ದಿನದ ಸಾರ್ಥಕ್ಯವನ್ನು ಶಬ್ದಗಳಲ್ಲಿ ಹೇಳಲಾಗದು. ಆ ಕಾಲದಲ್ಲಿ ತಾಯಿಯಾಗುವುದು ಪ್ರತಿಯೊಬ್ಬ ಹೆಣ್ಣಿನ ಹಂಬಲವಾಗಿತ್ತು. ತಾಯಿಯಾಗುವುದು ಪ್ರಕೃತಿಯ ಅಗಾಧ, ಅನನ್ಯ ಸೃಷ್ಟಿ ವೈಚಿತ್ರ್ಯ ನನ್ನ ಪಾಲಿಗೆ.  ಒಂದು ಜೀವವನ್ನು ಸೃಜಿಸುವ ಶಕ್ತಿ,  ಕಾಣದ ಆ ಸೃಷ್ಟಿಕರ್ತನ ನಂತರ ಇರುವುದು ತಾಯಿಗೆ ಮಾತ್ರ. ಅಂಥ ಅನನ್ಯ ಪದವಿ ನನಗೆ ದೊರೆತಾಗ ಅದನ್ನು ಅತಿಯಾಗಿ ಸಂಭ್ರಮಿಸಿದೆ. ದೇಹದೊಳಗಿನ ಇರುವಿಕೆಯನ್ನು ಆಗಾಗ ತೋರಿಸುತ್ತಿದ್ದ ಜೀವ ಆಗಲೇ ಅಮ್ಮನ ಜೊತೆಗಾರನಾಗಬಿಟ್ಟಿತ್ತು. ಅದು ಗಂಡೋ- ಹೆಣ್ಣೋ ಎಂಬ ಕುತೂಹಲ ನನಗೆ ಇರಲೇ ಇಲ್ಲ. ನಾನೀಗ ಸ್ರೃಷ್ಟಿಕ್ರಿಯೆಯ ಕೊಂಡಿ ಎಂಬ ಅಭಿಮಾನ ಮಾತ್ರ ನನ್ನದಾಗಿತ್ತು. ಆ ಕರುಳ ಬಳ್ಳಿಯ ಬಾಂಧವ್ಯವನ್ನು ಅನುಭವಿಸುವ ತಾಯಿಯೇ ಧನ್ಯಳು. ಅದಕ್ಕಾದರೂ ಹೆಣ್ಣಾಗಿ ಹುಟ್ಟಬೇಕು. ಅಂಥ ಅನುಭವವನ್ನು ಪಡೆದ ಹೆಣ್ಣು ಜನ್ಮ ಸಾರ್ಥಕ. ಮಗು ಹೆಣ್ಣನ್ನು ತಾಯಿಯಿಂದ ದೈವತ್ವಕ್ಕೇರಿಸುವ ಪ್ರಕ್ರಿಯೆ ಇದೆಯಲ್ಲಾ ಅದನ್ನು ಅನುಭವಿಸುವುದಕ್ಕಾಗಿ ಎಷ್ಟು ಜನ್ಮಗಳಿದ್ದರೂ ಹೆಣ್ಣೇ ಆಗಿ ಹುಟ್ಟಬೇಕು ಎಂದು ಹಂಬಲಿಸುವವಳು ನಾನು.

ಮಗ ಬೆಳೆದಂತೆ ಪುಟ್ಟ ಸ್ನೇಹಿತನೇ ಆದ. ನನ್ನ ಪದವಿ ತರಗತಿಯಲ್ಲಿ ಕಲಿತ ವರ್ಡ್ಸ್​ವರ್ತ್ ಕವಿಯ ಕವಿತೆಯ ಸಾಲು Child is the Father of the Man  ಮನದ ಮೂಲೆಯಲ್ಲಿ ಅಚ್ಚೊತ್ತಿಬಿಟ್ಟಿತ್ತು. ಅದು ಅಷ್ಟು ಗಾಢವಾಗಿ ನನ್ನೊಳಗನ್ನು ಆವರಿಸಿಕೊಂಡಿದ್ದನ್ನು ಅಕ್ಷರಶಃ ನಾವಿಬ್ಬರೂ ಬದುಕಿದೆವು. ಒಂದು ವರ್ಷದ ಮಗು ಮಲಗುವಾಗ ನಾನು ಹಾಡುತ್ತಿದ್ದ ಭಾವಗೀತೆ, ಮಲಗೊ ಮಲಗೆನ್ನ ಮರಿಯೆ, ಬಣ್ಣದ ನವಿಲಿನ ಗರಿಯೆ ಹಾಡನ್ನು ಪೂರ್ಣವಾಗಿ ಮಗು ತಾನೇ ಹಾಡಿಕೊಂಡು ಮಲಗುತ್ತಿದ್ದಾಗ ಯಶೋದೆಯ ಬ್ರಹ್ಮಾಂಡ ದರ್ಶನದ ಅನುಭವವೇ ನನಗೂ ಆಗುತ್ತಿತ್ತು. ಬಾಲಲೀಲೆಗಳನ್ನು ದಾಖಲಿಸುವುದಕ್ಕಾಗಿ ಸದಾ ಕ್ಯಾಮೆರಾ ಲೋಡ್ ಆಗಿರುತ್ತಿತ್ತು.

ಅವನು ಎಲ್​ಕೆಜಿ ಕ್ಲಾಸಿನಲ್ಲಿದ್ದಾಗ ತಾನು ಶಾಲೆಗೆ ಹೋಗುತ್ತಿದ್ದ ಟೆಂಪೊದಲ್ಲಿ ಕೇಳಿದ್ದ, ‘ಹರ್ ಘಡೀ ಬದಲ್ ರಹೀಂ ಹೈ ರೂಪ ಜಿಂದಗೀ, ಛಾಂವ್ ಹೇ ಕಭೀ ಕಭೀ ಯೇ ಧೂಪ ಜಿಂದಗೀ’ ಹಾಡನ್ನು ಕಲಿತು ಬಂದು ನನ್ನೆದುರು ಈ ಹಾಡು ಎಷ್ಟು ಚೆನ್ನಾಗಿದೆ ಕೇಳು ಎಂದು ಹಾಡಿ ಕೇಳಿಸಿದಾಗ ಅವನ ಸಂಗೀತ, ಸಾಹಿತ್ಯದ ರುಚಿಗೆ ಬೆರಗಾಗಿದ್ದೆ. ಆ ಗೀತೆ ಈಗಲೂ ನನ್ನ ಕೆಲವೇ ಕೆಲವು ಆಲ್ ಟೈಂ ಫೇವರಿಟ್ ಗೀತೆಗಳಲ್ಲಿ ಒಂದು. ನಾನು ಅದನ್ನು ಮೊದಲು ಬಾರಿ ಕೇಳಿದ್ದು ಅವನ ಬಾಯಿಂದ!

ಮೂರನೇ ತರಗತಿಯಲ್ಲಿ ಇದ್ದಾಗ ಅವನು ಒಮ್ಮೆ ಆಸ್ಪತ್ರೆಗೆ ದಾಖಲಾಗಬೇಕಾಯ್ತು. ಆ ರಾತ್ರಿ ಇಂಡಿಯಾ- ಪಾಕಿಸ್ತಾನ ಕ್ರಿಕೆಟ್ ಮ್ಯಾಚ್ ಇತ್ತು. ಸ್ವತಃ ಕ್ರಿಕೆಟ್ ಆಟಗಾರರಾಗಿರುವ ಗಂಡ ಅದನ್ನು ಮಿಸ್ ಮಾಡಿಕೊಳ್ಳಲಾರದೇ ಹೊರಡಲು ತಯಾರಾದರು. ಆಗ ಅವನು, ‘ಪಪ್ಪಾ ಯೂ ಕ್ಯಾನ್ ಗೋ. ಬಟ್ ಇಟ್ ಈಸ್ ಎ ಕ್ವೆಶ್ಚನ್ ಆಫ್ ರೆಸ್ಪೊನ್ಸಿಬಿಲಿಟಿ’ ಎಂದಾಗ ಆ ಮಾತಿನಿಂದ ಅವರ ಕಾಲ ಕೆಳಗಿನ ನೆಲವೇ ಅವರಿಗೆ ಕುಸಿದು ಹೋದಂತೆ ಅನ್ನಿಸಿದರೆ ನನ್ನ ಮಾತೃ ಹೃದಯ ಬೀಗಿತ್ತು.

ನಿತ್ಯದ ಜಂಜಡಗಳು ಬಳಲಿಸಿದ ನನ್ನನ್ನು ಗಮನಿಸಿದ ಅವನು ತನ್ನ ಎಮ್ ಪಿ ಥ್ರೀ ಯಲ್ಲಿ, ‘ಏನಾಗಲಿ ಮುಂದೆ ಸಾಗು ನೀ. ಬಯಸಿದ್ದೆಲ್ಲಾ ಸಿಗದು ಬಾಳಲಿ’ ಹಾಡನ್ನು ರೆಕಾರ್ಡ್ ಮಾಡಿಕೊಂಡು ಬಂದು ನಿನಗೆ ಬೇಸರವಾದಾಗ ಕೇಳು ಎಂದಾಗ ನಾನು ಮಗುವಿನಲ್ಲಿ ದೇವರನ್ನು ಕಂಡೆ.

ಇಂದು ಬಾಗಿಲುದ್ದಕ್ಕೂ ಬೆಳೆದು ನಿಂತ ಅವನು ಭಿಕ್ಷುಕಿಯನ್ನು ಆಂಟಿ ಎಂದು, ಕಸದ ಗಾಡಿಯವನನ್ನು ಅಂಕಲ್ ಎಂದು  ಹೇಳುವಾಗ ಅವನಲ್ಲಿ ಮನುಷ್ಯತ್ವದ ಬೀಜ ಮೊಳೆತದ್ದಕ್ಕೆ  ಖುಷಿ ಪಡುತ್ತೇನೆ. ಹೀಗೇ ನನ್ನ ಜಗತ್ತೇ ಬದಲಾಯಿತೋ, ನೋಟ ಬದಲಾಯಿಸಿತೋ ಗೊತ್ತಿಲ್ಲ. ಆದರೆ ಇದಕ್ಕೆ ಅವನು ಕಾರಣ ಎಂದು ಮಾತ್ರ ದೃಢವಾಗಿ ಹೇಳಬಲ್ಲೆ‌. ನಾನು ಬೆರಳು ಹಿಡಿದು ನಡೆಸಿದ ಮಗ ಇಂದು ನನ್ನನ್ನು ನಡೆಸುತ್ತಾನೆ‌. ಸೃಷ್ಟಿಯ ಈ ಚಲನಶೀಲತೆಗೆ ನಾನು ಈ ಕಾರಣದಿಂದ  ಶಿರಬಾಗುತ್ತೇನೆ.

ತಾಯಿ ಮಗುವಿನ ಬಾಂಧವ್ಯ ಖಾಸಗಿಯಂತೆ ಕಂಡರೂ ಅದಕ್ಕೊಂದು ಸಾಮಾಜಿಕ ಆಯಾಮ ಕೂಡ ಇದೆ ಎಂದು ನನ್ನ ನಂಬಿಕೆ. ತಾಯಿ ಸಮಾಜಕ್ಕೆ ಒಬ್ಬ ಒಳ್ಳೆಯ ಪ್ರಜೆಯನ್ನು ದಯಪಾಲಿಸುವ ಸಾಮರ್ಥ್ಯ ಉಳ್ಳವಳು. ಸಮಾಜದ ಪುಟ್ಟ ಘಟಕವಾದ ಕುಟುಂಬದಲ್ಲಿ ಸಂಸ್ಕೃತಿ, ಪರಂಪರೆಯ ವಾಹಕಳಾಗಿ, ಪರಿಚಾರಿಕೆಯಾಗಿ ಅವಳು ನಿರ್ವಹಿಸುವ ಪಾತ್ರ ಯಾವ ವಿಶ್ವವಿದ್ಯಾಲಯದ ಶಿಕ್ಷಣಕ್ಕೂ ಕಡಿಮೆಯಿಲ್ಲ ಎಂಬುದು ಅತಿಶಯೋಕ್ತಿಯಲ್ಲ.

ಅಂದ ಹಾಗೆ ಕಾಲ ಈಗ 35 ವರ್ಷಗಳ ಹಿಂದೆ ಇದ್ದಂತೆ ಇಲ್ಲ ಎಂದು ಆರಂಭದಲ್ಲಿ ಹೇಳಿದ್ದೆನಲ್ಲವೇ? ಹುಡುಗಿಯ ಬಿಳಿ ಬಣ್ಣ, ಎತ್ತರ ಮೊದಲಾದವನ್ನು ನೋಡಿ ಮದುವೆಗಳು ನಡೆಯುವ ಕಾಲ ಈಗ ಇಲ್ಲ ಎಂಬುದೇ ನನಗೆ ಸಮಾಧಾನ. ಇಲ್ಲದಿದ್ದರೆ ನನ್ನ ಸ್ನೇಹಿತೆಯಂಥವರು ಇನ್ನೆಷ್ಟು ಜನ ನನ್ನಂಥವರಲ್ಲಿ ಕೀಳರಿಮೆ ಬೆಳೆಸುತ್ತಿದ್ದರೋ? ಬೆಳೆಯುವ ಕಾಲದಲ್ಲಿ ಮಕ್ಕಳಷ್ಟೇ ಬೆಳೆಯುವುದಿಲ್ಲ. ತಾಯಿ- ತಂದೆಯರೂ ಅವರೊಂದಿಗೆ ಬೆಳೆಯುತ್ತಾರೆ; ಬೆಳೆಯಬೇಕು.

***
ಪರಿಚಯ: ನೂತನ ದೋಶೆಟ್ಟಿಯವರು ಪತ್ರಿಕೋದ್ಯಮ ಹಾಗೂ ಸಮೂಹ ಸಂವಹನದಲ್ಲಿ ಸ್ನಾತಕೋತ್ತರ ಪದವೀಧರೆ. ಹಾಸನದ ಆಕಾಶವಾಣಿಯಲ್ಲಿ ಕಾರ್ಯಕ್ರಮ ನಿರ್ವಾಹಕರಾಗಿದ್ದಾರೆ. ಮೂರು ಕವನಸಂಕಲನಗಳು; ಕಾಲವೆಂದು ‘ಮಹಾಮನೆ’, ‘ಭಾಗೀರತಿ’ ಮತ್ತು ‘ಮಾನವೀಯತೆ ಬಿಕ್ಕಳಿಸಿದೆ’. ಕಥಾ ಸಂಕಲನ ‘ಯಾವ ವೆಬ್ ಸೈಟಿನಲ್ಲೂ ಉತ್ತರವಿಲ್ಲ’ (ಈ ಕಥೆ ಕುವೆಂಪು ವಿಶ್ವವಿದ್ಯಾಲಯದ ಪದವಿಗೆ ಪಠ್ಯವಾಗಿತ್ತು) ಬಿಡಿ ಲೇಖನಗಳು ಸಂಗ್ರಹ; ‘ಅಂತಃಸ್ಫುರಣ’ ಮತ್ತು  ‘ಸಾಹಿತ್ಯ ಲೋಕ-ಮರೆಯಾಯಿತೆ ಪ್ರಜಾಸತ್ತೆ?’ ಮತ್ತು ಆಕಾಶವಾಣಿಯ ಅನುಭವಗಳ ಲೇಖನ ಮಾಲೆ ‘ಆಕಾಶವಾಣಿಯ ಅಂತರಾಳ’.

ನಾನೆಂಬ ಪರಿಮಳದ ಹಾದಿಯಲಿ: ನನ್ನನ್ನು ನಾನು ಹುಡುಕಿಕೊಂಡಿದ್ದು ಅಕ್ಷರಗಳ ಮೂಲಕ…

Published On - 1:34 pm, Fri, 22 January 21

ಮ್ಯಾಕ್ಸ್ 25 ದಿನ ಪೂರೈಸಿದ್ದಕ್ಕೆ ಅಭಿಮಾನಿಗಳಿಗೆ ಸುದೀಪ್ ಸ್ಪೆಷಲ್ ವಿಡಿಯೋ
ಮ್ಯಾಕ್ಸ್ 25 ದಿನ ಪೂರೈಸಿದ್ದಕ್ಕೆ ಅಭಿಮಾನಿಗಳಿಗೆ ಸುದೀಪ್ ಸ್ಪೆಷಲ್ ವಿಡಿಯೋ
ಖೋ- ಖೋ ವಿಶ್ವಕಪ್ ಗೆದ್ದು ಬೀಗಿದ ಭಾರತ ಮಹಿಳಾ ಪಡೆ
ಖೋ- ಖೋ ವಿಶ್ವಕಪ್ ಗೆದ್ದು ಬೀಗಿದ ಭಾರತ ಮಹಿಳಾ ಪಡೆ
ಪ್ರಯಾಗ್​ರಾಜ್ ಕುಂಭಮೇಳದ ಹಲವು ಟೆಂಟ್​ಗಳಲ್ಲಿ ಅಗ್ನಿ ಜ್ವಾಲೆ ನರ್ತನ
ಪ್ರಯಾಗ್​ರಾಜ್ ಕುಂಭಮೇಳದ ಹಲವು ಟೆಂಟ್​ಗಳಲ್ಲಿ ಅಗ್ನಿ ಜ್ವಾಲೆ ನರ್ತನ
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ