ಘಾನಾದಿಂದ ಮಂಗಳೂರು ವಿಮಾನ ನಿಲ್ದಾಣಕ್ಕೆ ಬಂದ ಪ್ರಯಾಣಿಕನಿಗೆ ಕೊರೋನಾ ಪಾಸಿಟಿವ್ : ತುರ್ತು ಸಭೆ ನಡೆಸಿದ ಮಂಗಳೂರು ಡಿಸಿ
ಕೊರೋನಾ ಹಾಟ್ ಸ್ಪಾಟ್ ಆಗಿರುವ ಘಾನಾ ದೇಶದಿಂದ ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಿದ ಪ್ರಯಾಣಿಕನಿಗೆ ಕೊರೋನಾ ಪಾಸಿಟಿವ್ ಬಂದಿದೆ. ಏರ್ಪೋರ್ಟ್ನಲ್ಲಿ ಆರ್ಟಿಪಿಸಿಆರ್ ಟೆಸ್ಟ್ ವೇಳೆ ಕೊರೊನಾ ಸೋಂಕು ಇರುವುದು ದೃಢಪಟ್ಟಿದೆ.
ಮಂಗಳೂರು: ರಾಜ್ಯದಲ್ಲಿ ಕೊರೋನಾ ಸೋಂಕಿನ ಆತಂಕ ಕಡಿಮೆಯಾಗಿಲ್ಲ. ಈ ನಡುವೆ ಒಮಿಕ್ರಾನ್ ಪ್ರಕರಣಗಳು ದಾಖಲಾಗುತ್ತಿವೆ. ವಿದೇಶಿ ಪ್ರಯಾಣಿಕರ ಆಗಮನದಿಂದ ರಾಜ್ಯದಲ್ಲಿ ಸೋಂಕು ಹರಡುವ ಅತಂಕ ಎದುರಾಗಿದೆ. ಇದೀಗ ಕೊರೋನಾ ಹಾಟ್ ಸ್ಪಾಟ್ ಆಗಿರುವ ಘಾನಾ ದೇಶದಿಂದ ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಿದ ಪ್ರಯಾಣಿಕನಿಗೆ ಕೊರೋನಾ ಪಾಸಿಟಿವ್ ಬಂದಿದೆ. ಏರ್ಪೋರ್ಟ್ನಲ್ಲಿ ಆರ್ಟಿಪಿಸಿಆರ್ ಟೆಸ್ಟ್ ವೇಳೆ ಕೊರೊನಾ ಸೋಂಕು ಇರುವುದು ದೃಢಪಟ್ಟಿದೆ. ಯಾವುದೇ ರೋಗ ಲಕ್ಷಣವಿಲ್ಲದಿದ್ದರೂ ಕೊರೊನಾ ಸೋಂಕು ದೃಢಪಟ್ಟಿದ್ದು, ಸದ್ಯ ಸೋಂಕಿತ ವ್ಯಕ್ತಿಯನ್ನು ಏರ್ಪೋರ್ಟ ಸಿಬ್ಬಂದಿ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಪಾಸಿಟಿವ್ ಬಂದ ಪ್ರಯಾಣಿಕನ ಗಂಟಲು ದ್ರವ ಬೆಂಗಳೂರಿಗೆ ರವಾನೆ ಮಾಡಲಾಗಿದೆ. ಜಿನೋಮಿಕ್ ಸೀಕ್ವೆನ್ಸಿಂಗ್ಗಾಗಿ ಬೆಂಗಳೂರಿಗೆ ಸ್ಯಾಂಪಲ್ ರವಾನೆ ಮಾಡಲಾಗಿದೆ. ಜತೆಗೆ ಸೋಂಕಿತನ ಹತ್ತಿರದ ಸೀಟ್ನಲ್ಲಿದ್ದ 27 ಪ್ರಯಾಣಿಕರನ್ನು ಕ್ವಾರಂಟೈನ್ ಮಾಡಲಾಗಿದೆ. ಮಂಗಳೂರು ನಿಲ್ದಾಣಕ್ಕೆ ಬಂದ ಪ್ರಯಾಣಿಕನಿಗೆ ಕೊರೋನಾ ಪಾಸಿಟಿವ್ ಬಂದ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಡಿಸಿ ಡಾ.ಕೆ.ವಿ.ರಾಜೇಂದ್ರ ನೇತೃತ್ವದಲ್ಲಿ ತುರ್ತು ಸಭೆ ನಡೆಸಿದ್ದಾರೆ. ಏರ್ಪೋರ್ಟ್ ಮುಖ್ಯಸ್ಥರು, ಏರ್ಪೋರ್ಟ್ ಆರೋಗ್ಯಾಧಿಕಾರಿ, ಜಿಲ್ಲಾ ಸರ್ವೇಕ್ಷಣಾಧಿಕಾರಿ, ಕೊವಿಡ್ ನೋಡಲ್ ಅಧಿಕಾರಿ ಹಾಗೂ ಅಪೋಲೊ ಲ್ಯಾಬ್ ಮುಖ್ಯಸ್ಥರ ಜತೆ ಡಿಸಿ ಡಾ.ರಾಜೇಂದ್ರ ಸಭೆ ನಡೆಸಿದ್ದಾರೆ. ಅಲ್ಲದೇ ವಿಮಾನ ನಿಲ್ದಾಣದಲ್ಲಿ ತಪಾಸಣೆ ಬಿಗಿಗೊಳಿಸುವಂತೆ ಡಿಸಿ ಸೂಚನೆ ನೀಡಿದ್ದಾರೆ.
ದೇಶದಲ್ಲಿ ಕೊರೋನಾ ಜೆತೆಗೆ ಒಮಿಕ್ರಾನ್ ಸೋಂಕಿತರ ಸಂಖ್ಯೆಯೂ ಹೆಚ್ಚಾಗುತ್ತಿದೆ. ದೇಶದ 11 ರಾಜ್ಯಗಳಿಗೆ ಒಮಿಕ್ರಾನ್ ಹರಡಿದ್ದು ಒಟ್ಟು 101 ಪ್ರಕರಣಗಳು ಈವರೆಗೆ ದಾಖಲಾಗಿದೆ. ದಕ್ಷಿಣ ಆಫ್ರಿಕಾದಲ್ಲಿ ಮೊದಲು ಕಾಣಿಸಿಕೊಂಡ ಒಮಿಕ್ರಾನ್ ಸೋಂಕು ಇದೀಗ ಎಲ್ಲ ರಾಷ್ಟ್ರಗಳಿಗೆ ಹರಡುತ್ತಿದೆ. ಈ ಹಿನ್ನೆಲೆಯಲ್ಲಿ ವಿದೇಶದಿಂದ ರಾಜ್ಯಕ್ಕೆ ಬರುವ ಪ್ರಯಾಣಿಕರ ಮೇಲೆ ಹೆಚ್ಚಿನ ನಿಗಾ ಇರಿಸಲಾಗಿದೆ. ಇದೀಗ ಮಂಗಳೂರಿನ ವಿಮಾನ ನಿಲ್ದಾಣದಲ್ಲಿಯೂ ಬಿಗಿ ಕ್ರಮಕ್ಕೆ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ.