ಶಿವಮೊಗ್ಗ: ಹಚ್ಚಹಸಿರಾಗಿರುವ ಶಿವಮೊಗ್ಗ ಜಿಲ್ಲೆಯಲ್ಲಿ ಇದೀಗ ಕೊರೊನಾ ಆತಂಕ ಮಡುವುಗಟ್ಟಿದೆ. ಅದೂ ಪೊಲೀಸ್ ಇಲಾಖೆಯ ಉನ್ನತಾಧಿಕಾರಿಗಳನ್ನೇ ಬಾಧಿಸತೊಡಗಿದೆ. ಮುಖ್ಯಮಂತ್ರಿ ಸ್ವಕ್ಷೇತ್ರವಾದ ಶಿಕಾರಿಪುರದಲ್ಲಿ ಕಳೆದ ವಾರ ದಿಢೀರನೆ ಕೊರೊನಾ ಸೋಂಕು ಪ್ರಕರಣಗಳು ತಲೆಯೆತ್ತಿದ್ದವು. ಆ ಸಂದರ್ಭದಲ್ಲಿ ಶಿಕಾರಿಪುರ ತಾಲೂಕಿನ ಅಪ್ರಾಪ್ತ ವಯಸ್ಸಿನ ಬಾಲಕಿಗೆ ಕೊರೊನಾ ಪಾಸಿಟಿವ್ ಪತ್ತೆಯಾಗಿದೆ. ಆ ಹಿನ್ನೆಲೆಯಲ್ಲಿ ಶಿವಮೊಗ್ಗ ಜಿಲ್ಲೆಯ 12ಕ್ಕೂ ಹೆಚ್ಚು ಇನ್ಸ್ಪೆಕ್ಟರ್ಗಳು, 5 DySPಗಳಿಗೆ ಈಗ ಕ್ವಾರಂಟೈನ್ ಮಾಡಲಾಗಿದೆ.
ಯಾರು ಆ ಬಾಲಕಿ? ಇವರಿಗೆ ಯಾಕೆ ಕ್ವಾರಂಟೈನ್?
ಕಳೆದ ವಾರ ಆಗಿದ್ದೇನೆಂದ್ರೆ.. ಶಿವಮೊಗ್ಗದಲ್ಲಿ ಅತ್ಯಾಚಾರ ಪ್ರಕರಣವೊಂದು ನಡೆದಿತ್ತು. ಸಂತ್ರಸ್ತೆ ಮತ್ತು ಆರೋಪಿಯನ್ನು ಕರೆದುಕೊಂಡು ಹೋಗಿ ಶಿಕಾರಿಪುರದಲ್ಲಿ ಸ್ಥಳ ಮಹಜರು ಮಾಡಲಾಗಿತ್ತು. ಅಪ್ರಾಪ್ತ ವಯಸ್ಸಿನ ಬಾಧಿತ ಬಾಲಕಿ ಮತ್ತು ಆರೋಪಿಯನ್ನು ಪೊಲೀಸ್ ಜೀಪಿನಲ್ಲಿ ಕರೆದುಕೊಂಡು ಹೋಗಲಾಗಿತ್ತು. ಅದಾದಮೇಲೆ ಶಿಕಾರಿಪುರ ಗ್ರಾಮಾಂತರದ CPI ಬಾಲಕಿಯನ್ನು ಶಿವಮೊಗ್ಗದಲ್ಲಿ ಆಸ್ಪತ್ರೆಗೆ ಬಿಟ್ಟು ಬಂದಿದ್ದರು. ಬಳಿಕ ಸೀದಾ SP ಕಚೇರಿಗೆ ತೆರಳಿ, CPIಗಳ ಸಭೆಯಲ್ಲಿ ಭಾಗವಹಿಸಿದ್ದರು.
ಶಿಕಾರಿಪುರ ಗ್ರಾಮಾಂತರದ CPI ಶಿಕಾರಿಪುರದಿಂದ ಆ ಅಪ್ರಾಪ್ತ ವಯಸ್ಸಿನ ಬಾಲಕಿಯನ್ನು ಪೊಲೀಸ್ ಜೀಪ್ನಲ್ಲಿ ಶಿವಮೊಗ್ಗ ನಗರಕ್ಕೆ ಕರೆತಂದು ಅನುಮಾನದ ಮೇಲೆ ಕೊವೀಡ್ ಆಸ್ಪತ್ರೆಗೆ ಸೇರಿಸಿದ್ದರು! ಇದೀಗ ಫಲಿತಾಂಶ ಹೊರಬಿದ್ದಿದ್ದು ಬಾಲಕಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ ಅಂದು ಸಿಪಿಐ ಸಭೆಯಲ್ಲಿ ಭಾಗವಹಿಸಿದ ಎಲ್ಲಾ CPI ಮತ್ತು DySPಗಳಿಗೆ ಈಗ ಕ್ವಾರಂಟೈನ್ ಭಾಗ್ಯ ಕಲ್ಪಿಸಲಾಗಿದೆ.
Published On - 2:23 pm, Tue, 19 May 20