ತೈಲ ಬೆಲೆ ಹೆಚ್ಚಳ ಭಾರತದಲ್ಲೇ ಕನಿಷ್ಠ: ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಸ್ಪಷ್ಟನೆ

ಜಾಗತಿಕ ಬಿಕ್ಕಟ್ಟಿನ ನಡುವೆಯೂ ಭಾರತದಲ್ಲಿ ಇಂಧನ ದರ ಏರಿಕೆ (+3.2%) ವಿಶ್ವದಲ್ಲೇ ಅತ್ಯಂತ ಕನಿಷ್ಠವಾಗಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಸಮರ್ಥಿಸಿಕೊಂಡಿದ್ದಾರೆ. ಅಮೆರಿಕ, ಯುಕೆಗಿಂತ ಭಾರತದಲ್ಲಿ ಕಡಿಮೆ ದರ ಹೆಚ್ಚಳವಾಗಿದ್ದು, ಯಾವುದೇ ಜಾಗತಿಕ ಒತ್ತಡವಿಲ್ಲದಿದ್ದ ಸಂದರ್ಭದಲ್ಲೂ ಈ ಹಿಂದೆ ಕರ್ನಾಟಕದಲ್ಲಿ ಇಂಧನ ತೆರಿಗೆ ಹೆಚ್ಚಿಸಿದ್ದರ ಬಗ್ಗೆ ಗಮನ ಸೆಳೆದಿದ್ದಾರೆ.

ತೈಲ ಬೆಲೆ ಹೆಚ್ಚಳ ಭಾರತದಲ್ಲೇ ಕನಿಷ್ಠ: ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಸ್ಪಷ್ಟನೆ
ತೈಲ ಬೆಲೆ ಹೆಚ್ಚಳ ಭಾರತದಲ್ಲೇ ಕನಿಷ್ಠ: ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಸ್ಪಷ್ಟನೆ
Image Credit source: PTI

Updated on: May 16, 2026 | 9:15 AM

ನವದೆಹಲಿ, ಮೇ 16: ಜಾಗತಿಕ ಸಂಘರ್ಷ, ಬಿಕ್ಕಟ್ಟಿದ್ದರೂ ಭಾರತವು ತೈಲ ಬೆಲೆಯನ್ನು ಅತ್ಯಂತ ಕನಿಷ್ಠ ಮಟ್ಟದಲ್ಲಿ ಹೆಚ್ಚಳ ಮಾಡಿದೆ. ಬೇರೆ ಬೇರೆ ರಾಷ್ಟ್ರಗಳಲ್ಲಿ ಶೇ 20 ರಿಂದ 45ರಷ್ಟು ಏರಿಕೆ ಕಂಡಿದ್ದರೆ, ನಮ್ಮ ದೇಶದಲ್ಲಿ ಕೇವಲ ಶೇ 3.2ರಷ್ಟು ಮಾತ್ರವೇ ಹೆಚ್ಚಿಸಿದೆ ಎಂದು ಕೇಂದ್ರ ಗ್ರಾಹಕ ವ್ಯವಹಾರ ಸಚಿವ ಪ್ರಲ್ಹಾದ ಜೋಶಿ (Pralhad Joshi) ಸ್ಪಷ್ಟಪಡಿಸಿದ್ದಾರೆ. ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ 3 ರೂ. ಏರಿಕೆ ಬೆನ್ನಲ್ಲೇ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಪಕ್ಷಗಳು ಮುಗಿಬಿದ್ದಿವೆ. ಈ ಹಿನ್ನೆಲೆಯಲ್ಲಿ ಪ್ರಲ್ಹಾದ್ ಜೋಶಿ ಅಂಕಿಅಂಶ ಸಮೇತ ಸ್ಪಷ್ಟನೆ ನೀಡಿದ್ದಾರೆ.

ಮುಖ್ಯಾಂಶಗಳು

  • ದೇಶದಲ್ಲಿ ಡೀಸೆಲ್, ಪೆಟ್ರೋಲ್ ಬೆಲೆ ಕೇವಲ ಶೇ 3.2 ರಷ್ಟು ಏರಿಕೆ.
  • ಜಾಗತಿಕವಾಗಿ ಶೇ 20-40ರಷ್ಟು ಹೆಚ್ಚಿದೆ ಎಂದ ಪ್ರಲ್ಹಾದ ಜೋಶಿ.
  • ಯಾವುದೇ ಬಿಕ್ಕಟ್ಟು, ಸಂಘರ್ಷ ಸ್ಥಿತಿ ಇಲ್ಲದಿದ್ರೂ ಕಾಂಗ್ರೆಸ್ ಸರ್ಕಾರ ಹೆಚ್ಚಿಸಿದ್ದೇಕೆ ಎಂದು ಪ್ರಶ್ನಿಸಿದ ಜೋಶಿ.

ಪಶ್ಚಿಮ ಏಷ್ಯಾ ಸಂಘರ್ಷ ಮತ್ತು ಇಂಧನ ಪೂರೈಕೆ ಅಡ್ಡಿ ಆತಂಕದ ನಡುವೆಯೂ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ದೇಶದ ನಾಗರಿಕರ ಹಿತದೃಷ್ಟಿಯಿಂದ ಕೆಲವೇ ದಿನಗಳ ಹಿಂದೆ ಅಬಕಾರಿ ಸುಂಕವನ್ನು 10 ರೂ. ಕಡಿಮೆ ಮಾಡಿತ್ತು. ಆದರೆ, ಇದೀಗ ಬ್ರೆಂಟ್ ಕಚ್ಚಾ ತೈಲ ಬೆಲೆ ಐತಿಹಾಸಿಕ ಗರಿಷ್ಠ ಮಟ್ಟಕ್ಕೆ ಏರುತ್ತಿದ್ದರಿಂದ ಪೆಟ್ರೋಲ್, ಡಿಸೇಲ್ ಬೆಲೆ ಹೆಚ್ಚಳ ಅನಿವಾರ್ಯವಾಗಿದೆ. ಆದರೂ ವಿಶ್ವದಲ್ಲೇ ಅತ್ಯಂತ ಕನಿಷ್ಠ ಮಟ್ಟದಲ್ಲಿ ಅಂದರೆ 3 ರೂ. ಏರಿಕೆ ಮಾಡಿದೆ ಎಂದು ಜೋಶಿ ಹೇಳಿದ್ದಾರೆ.

ಭಾರತದಲ್ಲೇ ಅತ್ಯಂತ ಕನಿಷ್ಠ ಏರಿಕೆ: ಜೋಶಿ

ಜಾಗತಿಕವಾಗಿ ನೋಡಿದರೆ ತೈಲ ಬೆಲೆಯನ್ನು ಭಾರತವೇ ಆತ್ಯಂತ ಕಡಿಮೆ‌‌ ಮಟ್ಟದಲ್ಲಿ ಏರಿಕೆ ಮಾಡಿದೆ. ಯುಎಸ್ಎ +44.5%, ಶ್ರೀಲಂಕಾ +38.2%, ಯುಕೆ +19.2%, ಜರ್ಮನಿ +13.7% ರಷ್ಟು ಹೆಚ್ಚಳ ಮಾಡಿದ್ದರೆ, ತಮ್ಮ ಸರ್ಕಾರ ಭಾರತದಲ್ಲಿ‌ ಕೇವಲ +3.2% ಹೆಚ್ಚಳ ಮಾಡಿದೆ ಅಷ್ಟೇ ಎಂದು ಸಚಿವರು ಅಂಕಿ ಅಂಶ ಸಹಿತ ವಿವರಿಸಿ ಕಾಂಗ್ರೆಸ್ ಗೆ ಚಾಟಿ ಬೀಸಿದ್ದಾರೆ.

ಜಗತ್ತಿನೆಲ್ಲೆಡೆ ಎಲ್ಲಾ ರಾಷ್ಟ್ರಗಳು ಇಂಧನ ಬಿಕ್ಕಟ್ಟು ಎದುರಿಸುತ್ತಿವೆ. ಇಂಧನ ಪೂರೈಕೆ ಮತ್ತು ತೈಲ ಆಮದು ಮಾಡಿಕೊಳ್ಳುವ ದೇಶಗಳಂತೂ ತೀವ್ರ ಒತ್ತಡದಲ್ಲಿವೆ. ವಾಸ್ತವ ಗೊತ್ತಿದ್ದರೂ ಈ ವಿಷಯದಲ್ಲಿ ಕಾಂಗ್ರೆಸ್ ಬೂಟಾಟಿಕೆ ಮಾಡುತ್ತಿದೆ ಎಂದು ಸಚಿವರು ಕಿಡಿ ಕಾರಿದ್ದಾರೆ.

ಕಾಂಗ್ರೆಸ್ ಸರ್ಕಾರ ಹೆಚ್ಚಿಸಿದ್ದೇಕೆ: ಜೋಶಿ ಪ್ರಶ್ನೆ

ಜಾಗತಿಕ ತೈಲ ಪೂರೈಕೆಯಲ್ಲಿ ಯಾವುದೇ ಅಡಚಣೆ ಇಲ್ಲದಿದ್ದರೂ ರಾಜ್ಯಾದ್ಯಂತ ಕಾಂಗ್ರೆಸ್ ಸರ್ಕಾರ ಎರೆಡೆರಡು ಬಾರಿ ಇಂಧನ ತೆರಿಗೆ ಹೆಚ್ಚಿಸಿದ್ದೇಕೆ ಎಂದು ಜೋಶಿ ಪ್ರಶ್ನಿಸಿದ್ದಾರೆ.

ಪೆಟ್ರೋಲ್, ಡೀಸೆಲ್ ಸೆಸ್ ಹೆಚ್ಚಿಸಿದ್ದ ಕರ್ನಾಟಕ ಕಾಂಗ್ರೆಸ್ ಸರ್ಕಾರ

ಕರ್ನಾಟಕ ಕಾಂಗ್ರೆಸ್ ಸರ್ಕಾರ 2024ರ ಜೂನ್ 15ಕ್ಕೆ ಪೆಟ್ರೋಲ್ ವ್ಯಾಟ್ ಅನ್ನು ಶೇ 25.92ರಿಂದ ಶೇ.29.84 ಮತ್ತು ಡೀಸೆಲ್ ಮೇಲೆ ಶೇ 14.34 ರಿಂದ ಶೇ 18.44ರಷ್ಟು ಹಾಗೂ 3 ರೂ. ಪ್ರತಿ ಲೀಟರ್ ಗೆ ಹೆಚ್ಚಿಸಿತ್ತು. 2025ರ ಏಪ್ರಿಲ್ 1ಕ್ಕೆ ಡೀಸೆಲ್ ವ್ಯಾಟ್ ಮತ್ತೆ ಶೇ.21.17ಕ್ಕೆ ಏರಿಕೆಯಾಗಿದ್ದು, ಡೀಸೆಲ್ ಬೆಲೆ ಸುಮಾರು 91 ರೂ. ಏರಿಸಿದ್ದು, ಕೇವಲ 10 ತಿಂಗಳಲ್ಲಿ 5 ರೂ. ಹೆಚ್ಚಿಸಿದೆ. ಇದೇಕೆ ಎಂದು ಸಚಿವ ಪ್ರಲ್ಹಾದ ಜೋಶಿ ಪ್ರಶ್ನಿಸಿ ತಿರುಗೇಟು ನೀಡಿದ್ದಾರೆ.

ಕಾಂಗ್ರೆಸ್ ಬೂಟಾಟಿಕೆ: ಜೋಶಿ

ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ 50ಕ್ಕೂ ಹೆಚ್ಚು ಅಗತ್ಯ ವಸ್ತುಗಳ ಬೆಲೆ ಹೆಚ್ಚಿಸಿ ಜನಜೀವನ ದುಸ್ಥರಗೊಳಿಸಿದೆ. ಆದರೆ, ಈಗ ಕೇಂದ್ರದತ್ತ ಬೆರಳು ತೋರಿ ಪಾಠ ಮಾಡಲು ಬರುತ್ತಿದೆ. ಇದು ಬೂಟಾಟಿಕೆ ರಾಜಕಾರಣವಲ್ಲದೆ ಮತ್ತೇನೂ ಅಲ್ಲವೆಂದು ವಾಗ್ದಾಳಿ ಮಾಡಿದ್ದಾರೆ.

ಇದನ್ನೂ ಓದಿ: ಪೆಟ್ರೋಲ್, ಡೀಸೆಲ್ ದರ ಭರ್ಜರಿ ಏರಿಕೆ; ಜನಸಾಮಾನ್ಯರಿಗೆ ಬೆಲೆ ಏರಿಕೆಯ ಆಘಾತ 

ಪ್ರಸ್ತುತ ಸನ್ನಿವೇಶದಲ್ಲಿ ತೈಲ ಬೆಲೆ ಏರಿಕೆಯನ್ನು ದೇಶದ ಜನ ಅರ್ಥ ಮಾಡಿಕೊಳ್ಳಬಲ್ಲರು. ಅದರಂತೆ ರಾಜ್ಯ ಸರ್ಕಾರ ಸಹ ಕೇಂದ್ರದ ಅನಿವಾರ್ಯ ನಿಲುವುಗಳನ್ನು ಗೌರವಿಸಬೇಕು ಎಂದು ಸಚಿವ ಪ್ರಲ್ಹಾದ ಜೋಶಿ ಹೇಳಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Ganapathi Sharma

ಕೇರಳದ ಕಾಸರಗೋಡು ಜಿಲ್ಲೆಯ ಕನ್ನಡಿಗ, ಪ್ರಸ್ತುತ ಬೆಂಗಳೂರಿನಲ್ಲಿ ವಾಸ. 13 ವರ್ಷಗಳಿಂದ ಪತ್ರಕರ್ತನಾಗಿ ಕಾರ್ಯನಿರ್ವಹಿಸುತ್ತಿದ್ದು, ಬರವಣಿಗೆ, ಅನುವಾದದಲ್ಲಿ ಆಸಕ್ತಿ ಮತ್ತು ಪರಿಣತಿ. ಪ್ರಚಲಿತ ವಿದ್ಯಮಾನಗಳು, ರಾಜ್ಯ-ರಾಷ್ಟ್ರ ರಾಜಕೀಯ, ಉದ್ಯಮ, ವೈಯಕ್ತಿಕ ಹಣಕಾಸು ವಿಚಾರಗಳ ಬರವಣಿಗೆಯ ಬಗ್ಗೆ ಹೆಚ್ಚಿನ ಆಸಕ್ತಿ, ಒಲವು.

Read More
Follow Us