ಒಂದೇ ಬೆಳೆ ಬೆಳೆದು ನಷ್ಟ ಅನುಭವಿಸುತ್ತಿದ್ದ ಹಾವೇರಿ ಜಿಲ್ಲೆಯ ರೈತರಿಗೆ ಗುಡ್ ನ್ಯೂಸ್; ಬಹು ಬೆಳೆಗೆ ಸರ್ಕಾರದಿಂದ ಪ್ರೋತ್ಸಾಹ

| Updated By: preethi shettigar

Updated on: Jun 04, 2021 | 8:34 AM

ರಾಷ್ಟ್ರೀಯ ಆಹಾರ ಭದ್ರತಾ ಯೋಜನೆಯಡಿ ಪ್ರಧಾನಮಂತ್ರಿಗಳು ರೂಪಿಸಿರುವ ಎಣ್ಣೆ ಹಾಗೂ ಬೇಳೆ ಕಾಳು ಬೆಳೆಗಳ ಬಹುಬೆಳೆ ಯೋಜನೆಗೆ ಹಾವೇರಿ ಜಿಲ್ಲೆಯನ್ನು ಕರ್ನಾಟಕ ರಾಜ್ಯದಲ್ಲಿ ಪೈಲೆಟ್ ಜಿಲ್ಲೆಯಾಗಿ ಆಯ್ಕೆ ಮಾಡಲಾಗಿದೆ. ಈ ಯೋಜನೆಯಲ್ಲಿ ರೈತರು ಬಹುಬೆಳೆ ಪದ್ಧತಿಯನ್ನು ಅನುಸರಿಸಿದರೆ, ಒಂದಲ್ಲ ಒಂದು ಬೆಳೆ ರೈತನ ಕೈ ಹಿಡಿದು ನಿಶ್ಚಿತ ಆದಾಯದ ಜತೆಗೆ ರೈತರ ಆದಾಯ ದ್ವಿಗುಣಗೊಳ್ಳುತ್ತದೆ.

ಒಂದೇ ಬೆಳೆ ಬೆಳೆದು ನಷ್ಟ ಅನುಭವಿಸುತ್ತಿದ್ದ ಹಾವೇರಿ ಜಿಲ್ಲೆಯ ರೈತರಿಗೆ ಗುಡ್ ನ್ಯೂಸ್; ಬಹು ಬೆಳೆಗೆ ಸರ್ಕಾರದಿಂದ ಪ್ರೋತ್ಸಾಹ
ಬಹು ಬೆಳೆಗೆ ಸರ್ಕಾರದಿಂದ ಪ್ರೋತ್ಸಾಹ
Follow us on

ಹಾವೇರಿ : ಜಿಲ್ಲೆಯಲ್ಲಿನ ಬಹುತೇಕ ರೈತರು ಸಾಂಪ್ರದಾಯಿಕ ಬೆಳೆಗಳನ್ನೇ ಬೆಳೆಯುತ್ತಿದ್ದಾರೆ. ಅದರಲ್ಲೂ ಪ್ರತಿವರ್ಷವೂ ಜಿಲ್ಲೆಯಲ್ಲಿನ ಹೆಚ್ಚಿನ ಸಂಖ್ಯೆಯ ರೈತರು ಹತ್ತಿ ಮತ್ತು ಮೆಕ್ಕೆಜೋಳವನ್ನು ಪ್ರಮುಖ ಬೆಳೆಯಾಗಿ ಬೆಳೆಯುತ್ತಿದ್ದಾರೆ. ಆದರೆ ಹತ್ತಿ ಮತ್ತು ಮೆಕ್ಕೆಜೋಳ ಬೆಳೆದ ರೈತರು ಮಾರುಕಟ್ಟೆಯಲ್ಲಿ ಸೂಕ್ತ ಬೆಲೆ ಸಿಗದೆ ಅಥವಾ ಬೆಳೆ ಹಾನಿಯಾಗಿ ತೊಂದರೆಗೆ ಸಿಲುಕುತ್ತಿದ್ದರು. ಇದನ್ನು ಬದಲಾಯಿಸುವ ನಿಟ್ಟಿನಲ್ಲಿ ಸರ್ಕಾರ ಒಂದು ಹೊಸ ಯೋಜನೆಯನ್ನು ತಂದಿದ್ದು, ಒಂದೇ ಬೆಳೆ ಬೆಳೆದು ಕೈಸುಟ್ಟುಕೊಳ್ಳುತ್ತಿದ್ದ ಜಿಲ್ಲೆಯ ರೈತರಿಗೆ ಈಗ ಶುಭ ಸುದ್ದಿಯೊಂದು ದೊರೆತಂತಾಗಿದೆ.

ರಾಷ್ಟ್ರೀಯ ಆಹಾರ ಭದ್ರತಾ ಯೋಜನೆಯಡಿ ಪ್ರಧಾನಮಂತ್ರಿಗಳು ರೂಪಿಸಿರುವ ಎಣ್ಣೆ ಹಾಗೂ ಬೇಳೆ ಕಾಳು ಬೆಳೆಗಳ ಬಹುಬೆಳೆ ಯೋಜನೆಗೆ ಹಾವೇರಿ ಜಿಲ್ಲೆಯನ್ನು ಕರ್ನಾಟಕ ರಾಜ್ಯದಲ್ಲಿ ಪೈಲೆಟ್ ಜಿಲ್ಲೆಯಾಗಿ ಆಯ್ಕೆ ಮಾಡಲಾಗಿದೆ. ಈ ಯೋಜನೆಯಲ್ಲಿ ರೈತರು ಬಹುಬೆಳೆ ಪದ್ಧತಿಯನ್ನು ಅನುಸರಿಸಿದರೆ, ಒಂದಲ್ಲ ಒಂದು ಬೆಳೆ ರೈತನ ಕೈ ಹಿಡಿದು ನಿಶ್ಚಿತ ಆದಾಯದ ಜತೆಗೆ ರೈತರ ಆದಾಯ ದ್ವಿಗುಣಗೊಳ್ಳುತ್ತದೆ. ಆ ಮೂಲಕ ರೈತರ ಬದುಕು ಸುಧಾರಿಸುತ್ತದೆ ಎಂಬ ಆಶಯದಿಂದ ಈ ಯೋಜನೆ ಜಾರಿಗೊಳಿಸಲಾಗಿದೆ.

ಜಿಲ್ಲೆಯಲ್ಲಿ ಹೆಚ್ಚಿನ ಪ್ರದೇಶದಲ್ಲಿ ಮೆಕ್ಕೆಜೋಳ ಬೆಳೆಯಲಾಗುತ್ತಿದೆ. ಈ ಬೆಳೆಯ ಅಂತರ ಬೆಳೆಯಾಗಿ ಅಥವಾ ಪ್ರತ್ಯೇಕ ಬೆಳೆಯಾಗಿ ಸೋಯಾ, ತೊಗರಿ, ಶೇಂಗಾ, ಸೂರ್ಯಕಾಂತಿಯಂತಹ ಎಣ್ಣೆ ಹಾಗೂ ದ್ವಿದಳ ಧಾನ್ಯಗಳನ್ನು ಬೆಳದರೆ ನಿಶ್ಚಿತವಾದ ಆದಾಯ ಬರಲಿದೆ. ಆದರೆ ಬಹುತೇಕ ರೈತರು ಇಂತಹ ಪದ್ಧತಿ‌ ಅನುಸರಿಸದೆ ಹತ್ತಿ ಮತ್ತು ಮೆಕ್ಕೆಜೋಳವನ್ನೇ ಹೆಚ್ಚಾಗಿ ಬೆಳೆಯುತ್ತಿದ್ದರು. ಹೀಗಾಗಿ ರೈತರ ಆದಾಯ ದ್ವಿಗುಣಗೊಳಿಸುವ ಸಲುವಾಗಿ ಜಿಲ್ಲೆಯಲ್ಲಿ ಈ ಯೋಜನೆಯನ್ನು ಪೈಲಟ್ ಯೋಜನೆಯಾಗಿ ಆಯ್ಕೆ ಮಾಡಲಾಗಿದೆ.

ಈ ಯೋಜನೆ ಅಡಿಯಲ್ಲಿ ಜಿಲ್ಲೆಗೆ 2441 ಕ್ವಿಂಟಲ್ ದ್ವಿದಳ ಧಾನ್ಯ ಬೀಜಗಳು ಪೂರೈಕೆಯಾಗಿವೆ. ಜಿಲ್ಲೆಗೆ ರೂ.2,44,44,240ಗಳ ಮೊತ್ತದ 33,730 ದ್ವಿದಳ ಧಾನ್ಯಗಳ ಬೀಜಗಳ ಕಿಟ್​ಗಳು ಈಗಾಗಲೆ ಪೂರೈಕೆ ಆಗಿವೆ. ಅಂದಾಜು 600 ಹೆಕ್ಟೇರ್ ಪ್ರದೇಶದಲ್ಲಿ ದ್ವಿದಳ ಧಾನ್ಯ ಬೆಳೆಯಬಹುದಾಗಿದೆ.‌ ಎಲ್ಲ ತಾಲೂಕು ರೈತ ಸಂಪರ್ಕ ಕೇಂದ್ರಗಳಲ್ಲಿ ದ್ವಿದಳ ಧಾನ್ಯ ಹಾಗೂ ಎಣ್ಣೆ ಕಾಳುಗಳ ಬಿತ್ತನೆ ಬೀಜಗಳನ್ನು ವಿತರಿಸಲಾಗುತ್ತಿದೆ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ತಿಳಿಸಿದ್ದಾರೆ.

ಈ ಯೋಜನೆ ಕುರಿತಂತೆ ದೇಶದಾದ್ಯಂತ ರೈತರೊಂದಿಗೆ ಕೇಂದ್ರದ ಕೃಷಿ ಸಚಿವರಾದ ನರೇಂದ್ರಸಿಂಗ್ ತೋಮರ್ ಮತ್ತು ಕೈಲಾಸ್ ಚೌಧರಿ ನಡೆಸಿದ ವಿಡಿಯೋ ಸಂವಾದದಲ್ಲಿ ಜಿಲ್ಲೆಯ ಪ್ರಗತಿಪರ ರೈತರಾದ ಚಂದ್ರಕಾಂತ ಸಂಗೂರ ಎಂಬುವರು ಭಾಗವಹಿಸಿ ಮಾಹಿತಿ ಪಡೆದುಕೊಂಡಿದ್ದಾರೆ. ಈಗಾಗಲೆ ಜಿಲ್ಲೆಯಲ್ಲಿ ಯೋಜನೆ ಜಾರಿಗೆ ಬೇಕಾದ ಬಿತ್ತನೆ ಬೀಜ ಬಂದಿದ್ದು, ರೈತರಿಗೆ ವಿತರಣೆ ಮಾಡಲಾಗುತ್ತಿದೆ.

ನಮ್ಮ ರೈತರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿ ತೊಂದರೆಗೆ ಒಳಗಾಗಬಾರದು ಎನ್ನುವ ನಿಟ್ಟಿನಲ್ಲಿ ಮಿಶ್ರ ಬೆಳೆಗೆ ಪ್ರೋತ್ಸಾಹಿಸುವ ಹಾಗೂ ಯಾವುದೋ ಒಂದು ಬೆಳೆ ನಾಶವಾದಲ್ಲಿ ಇನ್ನೊಂದು ಬೆಳೆ ರೈತರನ್ನು ಕೈಹಿಡಿದು ಆರ್ಥಿಕ ಸಂಕಷ್ಟಕ್ಕೆ ಸಿಲುಕುವುದನ್ನು ತಪ್ಪಿಸುತ್ತದೆ ಎನ್ನುವ ನಿಟ್ಟಿನಲ್ಲಿ ಈ ಯೋಜನೆ ತರಲಾಗಿದೆ. ಕರ್ನಾಟಕಕ್ಕೆ ಮಂಜೂರಾದ ಬಹು ಬೆಳೆ ಯೋಜನೆಯನ್ನು ಪ್ರಾಯೋಗಿಕವಾಗಿ ಹಾವೇರಿ ಜಿಲ್ಲೆಯಲ್ಲಿ ಆನುಷ್ಠಾನ ಮಾಡಲಾಗುತ್ತಿದೆ. ನಮ್ಮ ಜಿಲ್ಲೆಯನ್ನು ಬಹು ಬೆಳೆ ಯೋಜನೆಗೆ ಆಯ್ಕೆ ಮಾಡಿದ ಪ್ರಧಾನ ಮಂತ್ರಿಗಳು ಹಾಗೂ ಕೇಂದ್ರದ ಕೃಷಿ ಸಚಿವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಸಂತೋಷ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ:

ಮೀನು ಕೃಷಿಗೆ ಕೈ ಹಾಕಿ ಯಶಸ್ವಿಯಾದ ಕೊಡಗು ರೈತ; ಗ್ರಾಹಕರ ಎದುರೇ ಹಿಡಿದು ತಾಜಾ ಮೀನು ಮಾರಾಟ

ಬಳ್ಳಾರಿ: ದುಪ್ಪಟ್ಟು ದರಕ್ಕೆ ಮೆಣಸಿನಕಾಯಿ ಬೀಜ ವ್ಯಾಪಾರ; ರೈತರು ಕಂಗಾಲು