ಸರ್ಕಾರಿ ಸೇವೆ ಸಲ್ಲಿಸುತ್ತಲೇ 11 ಪದವಿ ಪಡೆದ ಅಧಿಕಾರಿ; ಇನ್ನೂ ಕುಗ್ಗಿಲ್ಲ ಭೂ ಸ್ವಾಧೀನಾಧಿಕಾರಿಯ ಓದುವ ಹಂಬಲ
ಹಾಸನದಲ್ಲಿ ಹಾಲಿ ಹೇಮಾವತಿ ಜಲಾಯಶ ಯೋಜನೆಯ ವಿಶೇಷ ಭೂ ಸ್ವಾಧೀನಾಧಿಕಾರಿಯಾಗಿರುವ ಡಾ. ಮಂಜುನಾಥ್ ವಿ, ಬರೊಬ್ಬರಿ 11 ಪದವಿಗಳನ್ನು ಪಡೆದಿದ್ದಾರೆ. ಸರ್ಕಾರಿ ಸೇವೆ ಸಲ್ಲಿಸುತ್ತಲೇ ಪದವಿ ಮೇಲೆ ಪದವಿಗಳನ್ನು ಗಳಿಸುತ್ತಾ ಹೋದ ಮಂಜುನಾಥ್ ಅವರಿಗೆ ಇನ್ನೂ ಓದಿನ ಆಸಕ್ತಿ ಒಂಚೂರು ಕಡಿಮೆಯಾಗಿಲ್ಲ,
ಹಾಸನ: ಓದು ಎಂದರೆ ಹಿಂಜರಿಯುವ ಈ ಕಾಲದಲ್ಲಿ, ಒಂದು ಪದವಿ ಪಡೆದರೆ ಸಾಕಪ್ಪ ಸಾಕು ಎಂದು ತಿಳಿಯುತ್ತಾರೆ. ಇನ್ನು ಓದುವುದೇ ಒಂದು ಕೆಲಸವಾದರೆ ಬದುಕುವುದು ಹೇಗೆ ಎನ್ನುವುದು ಹಲವರ ಮಾತು. ಆದರೆ ಹಾಸನ ಜಿಲ್ಲೆಯ ವ್ಯಕ್ತಿಯೊರ್ವ ಬರೊಬ್ಬರಿ 35 ವರ್ಷಗಳಿಂದ ಸರ್ಕಾರಿ ಸೇವೆ ಮಾಡುತ್ತಿದ್ದರೂ, ಅವರ ಓದಿನ ಆಕಸಕ್ತಿ ಮಾತ್ರ ಇಂಗಿಲ್ಲ, ಓದುವ ಹಂಬಲವೂ ಕಡಿಮೆಯಾಗಿಲ್ಲ. ನಿವೃತ್ತಿಗೆ ಸಮೀಪ ಆಗುತ್ತಿದ್ದರೂ ನಾನೊಬ್ಬ ವಿದ್ಯಾರ್ಥಿ ಎನ್ನುವ ಅವರ ಮಾತು ನಿಜಕ್ಕೂ ಇತರರಿಗೆ ಸೂರ್ತಿ. ವೃತ್ತಿ ಮಾಡುತ್ತಲೇ ಒಂದೊಂದೇ ಪದವಿಗಳನ್ನು ಕೊರಳಿಗೇರಿಸಿಕೊಂಡ ಈ ಅಧಿಕಾರಿ ಯಾರು? ಅವರ ಪದವಿಗಳು ಎಂತವು ? ಎಂಬ ಪ್ರಶ್ನೆ ನಿಮ್ಮಲ್ಲಿದ್ದರೆ ಅದಕ್ಕೆ ಉತ್ತರ ಇಲ್ಲಿದೆ.
ಹಾಸನದಲ್ಲಿ ಹಾಲಿ ಹೇಮಾವತಿ ಜಲಾಯಶ ಯೋಜನೆಯ ವಿಶೇಷ ಭೂ ಸ್ವಾಧೀನಾಧಿಕಾರಿಯಾಗಿರುವ ಡಾ. ಮಂಜುನಾಥ್ ವಿ, ಬರೊಬ್ಬರಿ 11 ಪದವಿಗಳನ್ನು ಪಡೆದಿದ್ದಾರೆ. ಸರ್ಕಾರಿ ಸೇವೆ ಸಲ್ಲಿಸುತ್ತಲೇ ಪದವಿ ಮೇಲೆ ಪದವಿಗಳನ್ನು ಗಳಿಸುತ್ತಾ ಹೋದ ಮಂಜುನಾಥ್ ಅವರಿಗೆ ಇನ್ನೂ ಓದಿನ ಆಸಕ್ತಿ ಒಂಚೂರು ಕಡಿಮೆಯಾಗಿಲ್ಲ. ಇನ್ನೂ ಯಾವ ಪದವಿ ಪಡೆಯಬಹುದು ಎನ್ನುವ ಹುಡುಕಾಟದಲ್ಲಿ ತಲ್ಲೀನರಾಗಿರುವ ಇವರು ನಾನು ಚಿರಕಾಲದ ವಿದ್ಯಾರ್ಥಿ ಎಂದು ಅತ್ಯಂತ ಉತ್ಸಾಹದಿಂದ ಓದಿನ ಕಡೆಗೆ ಗಮನಹರಿಸಿದ್ದಾರೆ.
ಒಂದೆರಡು ಪದವಿ ಪಡೆದು ದುಡಿಮೆಯೇ ಬದುಕು ಎಂದು ಕಳೆದು ಹೋಗುವ ಜನರ ನಡುವೆ ಮಾದರಿಯಾಗಿ ಕಾಣುತ್ತಾರೆ ಮಂಜುನಾಥ್. ಸರ್ಕಾರಿ ಸೇವೆ ಮಾಡುತ್ತಲೇ ಕಲಿಕೆಗೆ ಮುಂದಾದ ಇವರು ಓದಿರುವುದು ಸಮಾಜ ಶಾಸ್ತ್ರದಲ್ಲಿ ಎಂ,ಎ ಪದವಿ, ಎಂಬಿಎ, ಡಿಎಇ(ಡಿಪ್ಲಮೋ ಇನ್ ಎರೊನಾಟಿಕ್ಸ್ ಇಂಜಿನಿಯರಿಂಗ್), ಡಿಆರ್ಇ (ಡಿಪ್ಲೊಮಾ ಇನ್ ರೈಲ್ವೆಸ್ ಇಂಜಿನಿಯರಿಂಗ್), ಡಿಇಇ( ಡಿಪ್ಲೊಮಾ ಇನ್ ಎಲೆಕ್ಟ್ರಿಕಲ್ ಅಂಡ್ ಎಲೆಕ್ಟ್ರಾನಿಕ್ಸ್), ಡಿಎನ್ ಐಎಸ್(ಡಿಪ್ಲೊಮಾ ಇನ್ ನ್ಯಾಷನಲ್ ಇಂಡಸ್ಟ್ರಿ ಸೆಕ್ಯೂರಿಟಿ), ಎಂಸಿಎಫ್(ಮೆಂಟನೆನ್ಸ್ ಆಫ್ ಕನ್ವೆನ್ಷನಲ್ ಫೋರ್ಸ್), ಎಲ್ಎಲ್ಬಿ ಜತೆಗೆ ಪಿಎಚ್ಡಿ ಪದವಿಯನ್ನೂ ಗಳಿಸಿ ಡಾಕ್ಟರೇಟ್ ಕೂಡ ಪಡೆದಿದ್ದಾರೆ.
ಕಡು ಬಡತನದ ನಡುವೆ ಹುಟ್ಟಿ ಓದಬೇಕೆಂಬ ಹಂಬಲ ಮೂಲತಃ ಅವಿಭಜಿತ ಕೋಲಾರ ಜಿಲ್ಲೆಯವರಾದ ವೀರಣ್ಣ ಬಸಮ್ಮ ದಂಪತಿಗಳಿಗೆ ಏಳು ಗಂಡು, ಏಳು ಹೆಣ್ಣು ಸೇರಿ, 14 ಜನ ಮಕ್ಕಳು. ಬಡತನಕ್ಕೆ ಮಕ್ಕಳು ಜಾಸ್ತಿ ಎನ್ನುವಂತೆ ಮನೆಯಲ್ಲಿ ಕಿತ್ತು ತಿನ್ನುವ ಬಡತನ ಇದ್ದುದರಿಂದ ಮನೆಯ ಯಾರರೊಬ್ಬರೂ ಶಾಲೆ ಮುಖ ನೋಡಲೇ ಇಲ್ಲ. ಮಂಜುನಾಥ್ ಅವರು ಮಾತ್ರ ಹೊಟೆಲ್ನಲ್ಲಿ ಗ್ಲಾಸ್ ತೊಳೆಯುತ್ತಲೇ ಓದಿನ ಕಡೆಗೆ ಆಸಕ್ತಿ ಬೆಳೆಸಿಕೊಂಡರು. ಹೊಟೆಲ್ಗೆ ಬರುವ ಹಳ್ಳಿಯ ಜನರ ಮಕ್ಕಳು ಉಪಯೋಗಿಸಿದ ಬುಕ್ಗಳನ್ನ ಮಾರಾಟ ಮಾಡುತ್ತಿದ್ದರು. ಅದರಲ್ಲಿ ಸಿಗುತ್ತಿದ್ದ ಖಾಲಿ ಹಾಳೆಗಳನ್ನು ಸಂಗ್ರಹಿಸಿ ತಮ್ಮ ನೋಟ್ ಬುಕ್ ಆಗಿ ಮಾಡಿಕೊಂಡು ಓದೋಕೆ ಶುರುಮಾಡಿದ ಮಂಜುನಾಥ್ ಮತ್ತೆಂದು ಹಿಂದೆ ತಿರುಗಿ ನೋಡಲಿಲ್ಲ.
ಯೋಧನಾಗಿ ಸೇವೆ ಸಲ್ಲಿಸಿದ ಮಂಜುನಾಥ್ ಮನೆಯಲ್ಲಿ ಯಾರೂ ಓದದಿದ್ದರೇನಂತೆ, ನಾನೆ ಅವರೆಲ್ಲರ ಓದನ್ನು ಓದಿಬಿಡಬೇಕೆಂಬ ಛಲದಿಂದ ಓದುವುದಕ್ಕೆ ಶುರುಮಾಡಿದರು. ಆದರೆ ಮನೆಯಲ್ಲಿ ಕಡು ಬಡತನ ಹಾಗಾಗಿಯೇ ಇನ್ನೂ 20ರ ಪ್ರಾಯಕ್ಕೇ ಸೇನೆ ಸೇರಿದ ಮಂಜುನಾಥ್ ಮನೆಗೆ ಆಸರೆಯಾಗಿಬಿಟ್ಟರು, ದೇಶ ರಕ್ಷಕನಾಗಿ ಜಮ್ಮು ಕಾಶ್ಮೀರ ಸೇರಿ ಮೂಲೆ ಮೂಲೆ ಸುತ್ತಿದ್ದು, ಹೀಗೆ ಸುತ್ತೋವಾಗಲೆ ಓದಿನ ಕಡೆಗೆ ಆಸಕ್ತಿ ಕಳೆದುಕೊಳ್ಳದ ಮಂಜುನಾಥ್ ಆಗಲೇ ನಾಲ್ಕೈದು ಪದವಿ ಸಂಪಾದಿಸಿಕೊಂಡರು. ದೇಶದಲ್ಲಷ್ಟೇ ಅಲ್ಲದೇ ವಿದೇಶದಲ್ಲೂ ಭಾರತ ಸೇನೆ ಪ್ರತಿನಿಧಿಸಿ ಸೇವೆ ಸಲ್ಲಿಸಿದರು. ಯುನೈಟೆಡ್ ನೇಷನ್ಸ್ ಪೀಸ್ ಫೋರಂನ ಭಾಗವಾಗಿ ಶ್ರೀಲಂಕಾ ಸೇರಿ ಹಲವೆಡೆ ಸೇವೆ ಸಲ್ಲಿಸಿ 20 ವರ್ಷಗಳ ಬಳಿಕ ನಿವೃತ್ತಿಯಾಗಿ ಮರಳಿ ಬಂದಿದ್ದರು.
ನಿವೃತ್ತಿ ಬಳಿಕವೂ ನಿಲ್ಲದ ಓದು ಸೇನೆಯಲ್ಲಿ 20 ವರ್ಷ ಸೇವೆ ಸಲ್ಲಿಸಿ ಬಂದು ಇನ್ನೇನು ಆರಾಮಾಗಿ ಇದ್ದುಬಿಡೋಣ ಎನ್ನುವ ನಿರ್ಧಾರಕ್ಕೆ ಬದಲಾಗಿ ಮಂಜುನಾಥ್ ಮತ್ತೆ ಓದುವುದಕ್ಕೆ ಶುರು ಮಾಡಿದರು. ಸ್ಪರ್ಧಾತ್ಮಕ ಪರೀಕ್ಷೆಯತ್ತ ತಯಾರಿ ಶುರು ಮಾಡಿದರು. ಐಎಎಸ್ ಜತೆಗೆ ಕೆಎಎಸ್ ಕೂಡ ಪರೀಕ್ಷೆ ಎದುರಿಸೋಕೆ ಸಿದ್ಧರಾದರು, ವಯಸ್ಸಿನ ಕಾರಣಕ್ಕೆ ಐಎಎಸ್ ಮಾಡುವುದಕ್ಕೆ ಸಾಧ್ಯವಾಗದಿದ್ದರೂ, 1998ರಲ್ಲೇ ಕೆಎಎಸ್ ಮೊದಲ ಯತ್ನದಲ್ಲೇ ಪಾಸ್ ಮಾಡಿದ ಮಂಜುನಾಥ್ 2006 ಕೆಎಎಸ್ ಬ್ಯಾಚ್ ಅಧಿಕಾರಿಯಾಗಿ, ಮೊಟ್ಟ ಮೊದಲು ಹುಟ್ಟೂರು ಚಿಕ್ಕಬಳ್ಳಾಪುರಕ್ಕೆ ತಹಸಿಲ್ದಾರ್ ಆಗಿ ನೇಮಕವಾಗಿಬಿಟ್ಟರು. ಅಲ್ಲಿಂದ ಚಿಂಚೋಳಿ, ಗದಗ, ನರಗುಂದ, ಕೆಎಸ್ಎಫ್ಸಿ, ದಾವಣಗೆರೆ, ಶಿವಮೊಗ್ಗ, ಹೊಳೆನರಸೀಪುರ, ಹಾಸನ, ಸಕಲೇಶಪುರಗಳಲ್ಲಿ ತಹಸಿಲ್ದಾರ್ ಆಗಿ ಸೇವೆ ಮಾಡುತ್ತಲೇ ಮತ್ತೆ ಓದುತ್ತ ಸಾಗಿದ್ದು, ಮಂಜುನಾಥ್ ಇಂದು ಬರೊಬ್ಬರಿ 11 ಪದವಿಗಳನ್ನ ಮುಡಿಗೇರಿಸಿಕೊಂಡಿದ್ದಾರೆ.
38 ಜನರಲ್ಲಿ ಮಂಜುನಾಥ್ ಒಬ್ಬರೇ ಪಾಸ್ ತಮ್ಮೂರಿನ ಮಾರುತಿ ಪ್ರೌಢ ಶಾಲೆಯಲ್ಲಿದ್ದ 38 ಮಕ್ಕಳಲ್ಲಿ ಪಾಸಾಗಿದ್ದು, ಮಂಜುನಾಥ್ ಒಬ್ಬರೆ. ಅಂದು ಆರಂಭವಾದ ಇವರ ವಿಜಯ ಯಾತ್ರೆ ಇಂದಿಗೂ ನಿಂತಿಲ್ಲ. ಅಂದಿನಿಂದ ಇಂದಿನವರೆಗೆ ಓದು ಓದು ಓದು, ಯಾವ್ಯಾವ ಶಿಕ್ಷಣ, ಯಾವ ಪದವಿಯನ್ನು ಪಡೆಯಬೇಕು ಎಂಬ ಆಸಕ್ತಿ ಬರುತ್ತೋ ಅದನ್ನ ಪಡೆಯದೆ ತೀರೋದಿಲ್ಲ, ಹಾಲಿ ಹಾಸನದಲ್ಲಿ ಹೇಮಾವತಿ ಜಲಾಶಯ ಯೋಜನೆಯ ವಿಶೇಷ ಭೂ ಸ್ವಾದೀನ ಅಧಿಕಾರಿಯಾಗಿರುವ ಮಂಜುನಾಥ್ ಇನ್ನೂ ಐದು ವರ್ಷ ಸೇವೆಯಲ್ಲಿ ಇರಲಿದ್ದಾರೆ. ಅಲ್ಲಿಯವರೆಗೆ ಎಷ್ಟು ಸಾಧ್ಯವೋ ಅಷ್ಟೂ ಪದವಿ ಪಡೆಯುವ ತೀರ್ಮಾನ ಮಂಜುನಾಥ್ ಮಾಡಿದ್ದು, ಮತ್ತೆ ಓದಿನ ಹುಟುಕಾಟದಲ್ಲಿದ್ದಾರೆ.
ವರದಿ: ಮಂಜುನಾಥ್.ಕೆ.ಬಿ.
Published On - 11:13 am, Sat, 10 July 21