ಮಾರ್ಚ್ 1ರಿಂದ ರಾಜ್ಯ ಸರ್ಕಾರಿ ನೌಕರರ ಪ್ರತಿಭಟನೆ, ಯಾವೆಲ್ಲಾ ಸೇವೆಗಳಲ್ಲಿ ವ್ಯತ್ಯಯ? ಇಲ್ಲಿದೆ ಪಟ್ಟಿ
7ನೇ ವೇತನ ಆಯೋಗ ಜಾರಿ, ನೂತನ ರಾಷ್ಟ್ರೀಯ ಪಿಂಚಣಿ ಯೋಜನೆ (NPS) ರದ್ದು ಹಾಗೂ ವಿವಿಧ ಬೇಡಿಕೆಗಳನ್ನು ಆಗ್ರಹಿಸಿ ನಾಳೆ (ಮಾರ್ಚ್ 1) ರಿಂದ ರಾಜ್ಯ ಸರ್ಕಾರಿ ನೌಕರರು ರಾಜ್ಯಾದ್ಯಂತ ಕರ್ತವ್ಯಕ್ಕೆ ಹಾಜರಾಗದೆ ಅನಿರ್ಧಿಷ್ಟವಧಿ ಪ್ರತಿಭಟನೆ ಮಾಡಲಿದ್ದಾರೆ.
ಬೆಂಗಳೂರು: 7ನೇ ವೇತನ ಆಯೋಗದ ಶಿಫಾರಸುಗಳು (7th Pay Commission) ಜಾರಿಯಾಗಬೇಕೆಂದು, ನೂತನ ರಾಷ್ಟ್ರೀಯ ಪಿಂಚಣಿ ಯೋಜನೆ (NPS) ರದ್ದು ಹಾಗೂ ವಿವಿಧ ಬೇಡಿಕೆಗಳನ್ನು ಆಗ್ರಹಿಸಿ ನಾಳೆ (ಮಾರ್ಚ್ 1) ರಿಂದ 10 ಲಕ್ಷ ಸರ್ಕಾರಿ ನೌಕರರು ರಾಜ್ಯಾದ್ಯಂತ ಕರ್ತವ್ಯಕ್ಕೆ ಹಾಜರಾಗದೆ ಅನಿರ್ಧಿಷ್ಟವಧಿ ಪ್ರತಿಭಟನೆ ಮಾಡಲಿದ್ದಾರೆ. ಪಂಜಾಬ್, ರಾಜಸ್ಥಾನ, ಛತ್ತಿಸ್ಗಢ, ಜಾರ್ಖಂಡ್, ಹಿಮಾಚಲ ಪ್ರದೇಶ ರಾಜ್ಯಗಳ ಮಾದರಿಯಲ್ಲಿ NPS ರದ್ದುಗೊಳಿಸಿ OPS ಜಾರಿಗೆ ನೌಕರರು ಆಗ್ರಹಿಸುತ್ತಿದ್ದಾರೆ. ಈ ಹಿನ್ನೆಲೆ ನಾಳೆ ಸರ್ಕಾರಿ ಸೇವೆಯಲ್ಲಿ ವ್ಯತ್ಯಯ ಉಂಟಾಗುವ ಸಾಧ್ಯತೆ ಇದೆ.
ಬಂದ್ ಆಗುವ ಸರ್ಕಾರಿ ಕಚೇರಿಗಳು
ವಿಧಾನಸೌಧದ ಎಲ್ಲಾ ಕಚೇರಿಗಳು, ಸಚಿವಾಲಯದ ಕಚೇರಿಗಳು, ಬಿಬಿಎಂಪಿ ಕಚೇರಿ, ಬೆಸ್ಕಾಂ, BWSSB, ತಾಲೂಕು ಕಚೇರಿ, ಜಿಲ್ಲಾಧಿಕಾರಿಗಳ ಕಚೇರಿ, ಪುರಸಭೆ ಕಚೇರಿ, ಗ್ರಾಮ ಪಂಚಾಯಿತಿ, ಸರ್ಕಾರಿ ಶಾಲೆಗಳು, ಸರ್ಕಾರಿ ಆಸ್ಪತ್ರೆ (ಐಸಿಯು, ಎಂಐಸಿಯು ಹೊರತುಪಡಿಸಿ), ಕಂದಾಯ ಇಲಾಖೆ, ಪ್ರಾಥಮಿಕ ಆರೋಗ್ಯ ಕೇಂದ್ರ, ಪುರಸಭೆ, ಸರ್ಕಾರಿ ಹಾಸ್ಟೆಲ್ಗಳು, ಆರೋಗ್ಯ ಇಲಾಖೆ, ಕಂದಾಯ ಇಲಾಖೆ, ಜಲಮಂಡಳಿ, ಬಿಬಿಎಂಪಿ ಆಸ್ಪತ್ರೆಗಳು, ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಗಳು ಬಂದ್ ಇರಲಿವೆ.
ಮಧ್ಯಂತರ ವರದಿ ಕೇಳಿದ ಸಿಎಂ ಬೊಮ್ಮಾಯಿ
ಗುರುವಾರ ನಡೆದ ಅಧಿವೇಶನದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ 7 ನೇ ವೇತನ ಆಯೋಗದ ಅನುಷ್ಠಾನಕ್ಕೆ ಸಂಬಂಧಿಸಿದಂತೆ ನಿವೃತ್ತ ಮುಖ್ಯ ಕಾರ್ಯದರ್ಶಿ ಸುಧಾಕರ್ ರಾವ್ ನೇತೃತ್ವದ ವೇತನ ಆಯೋಗದ ಮಧ್ಯಂತರ ವರದಿಯನ್ನು ಕೇಳಿದ್ದೇನೆ. ಈ ವರದಿ ಸಲ್ಲಿಕೆಯಾದ ಬಳಿಕ ಅದರ ಆಧಾರದ ಮೇಲೆ ಮಹತ್ವದ ನಿರ್ಧಾರಗಳನ್ನು ಕೈಗೊಳ್ಳಲಿದ್ದೇವೆ ಎಂದು ಹೇಳಿದ್ದರು.
ಪ್ರತಿಭಟನೆ ಬೇಡ ಎಂದ ಸಿಎಂ ಬೊಮ್ಮಾಯಿ
ರಾಜ್ಯ ಸರ್ಕಾರಿ ನೌಕರರು ಪ್ರತಿಭಟನೆಗೆ ಮುಂದಾಗಬಾರದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮನವಿ ಮಾಡಿಕೊಂಡಿದ್ದಾರೆ. ಭಾನುವಾರ ಕಲಬುರಗಿಯಲ್ಲಿ ಮಾತನಾಡಿದ್ದ ಅವರು ರಾಜ್ಯ ಸರ್ಕಾರ ಶೀಘ್ರವೇ ಗುಡ್ ನ್ಯೂಸ್ ನೀಡಲಿದೆ. ಏಳನೇ ವೇತನ ಆಯೋಗದ ಶಿಫಾರಸು ಜಾರಿ ಮಾಡಲಾಗುತ್ತದೆ ಎಂದು ಸಿಎಂ ಭರವಸೆ ನೀಡಿದ್ದರು. ಸರ್ಕಾರಿ ನೌಕರರ ಬೇಡಿಕೆ ಈಡೇರಿಸಲು ನಮ್ಮ ಸರ್ಕಾರ ಬದ್ಧವಾಗಿದೆ. ಯಾವುದೇ ಸರ್ಕಾರಿ ನೌಕರರು ಮುಷ್ಕರಕ್ಕೆ ಮುಂದಾಗಬಾರದು. ರಾಜ್ಯದ ಜನತೆಯ ಹಿತದೃಷ್ಟಿಯಿಂದ ಮುಷ್ಕರದ ನಿರ್ಧಾರವನ್ನ ಹಿಂತೆಗೆದುಕೊಳ್ಳಿ. 7ನೇ ವೇತನ ಆಯೋಗ ಶಿಫಾರಸ್ಸು ಜಾರಿಗೆ ಅಗತ್ಯವಿರುವ ಹಣವನ್ನು ಬಿಡುಗಡೆಗೊಳಿಸಲು ಸರ್ಕಾರ ಬದ್ಧವಾಗಿದೆ ಎಂದು ಹೇಳಿದ್ದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:31 am, Tue, 28 February 23