ಕೊರೊನಾ ವಾರಿಯರ್ಸ್ ಮೇಲಿನ ಹಲ್ಲೆಗಿಲ್ಲ ಕಡಿವಾಣ, ಗೃಹ ಇಲಾಖೆಯಲ್ಲೇ ಫೈಲ್ ಪೆಂಡಿಂಗ್

ಕೊರೊನಾ ವಾರಿಯರ್ಸ್ ಮೇಲಿನ ಹಲ್ಲೆಗಿಲ್ಲ ಕಡಿವಾಣ, ಗೃಹ ಇಲಾಖೆಯಲ್ಲೇ ಫೈಲ್ ಪೆಂಡಿಂಗ್

ಬೆಂಗಳೂರು: ಕೊರೊನಾ ವಾರಿಯರ್ಸ್‌ ಮೇಲಿನ ಹಲ್ಲೆ ವಿಚಾರಕ್ಕೆ ಸಂಬಂಧಿಸಿದಂತೆ ಹಲ್ಲೆ ತಡೆಯಲು ತಂದಿರುವ ಸುಗ್ರೀವಾಜ್ಞೆಗೆ ಇನ್ನೂ ಮುಕ್ತಿ ಸಿಕ್ಕಿಲ್ಲ. ಕಾಯ್ದೆಗೆ ರಾಜ್ಯಪಾಲರ ಅಂಕಿತ ಬಿದ್ದರೂ ಗ್ರೀನ್‌ಸಿಗ್ನಲ್ ಸಿಕ್ಕಿಲ್ಲ. ಕಾಯಿದೆ ಅನುಷ್ಠಾನ ಮಾಡುವ ಸಂಬಂಧ ಗೃಹ ಇಲಾಖೆಯಿಂದ ಇನ್ನೂ ಸ್ಪಷ್ಟ ಸಂದೇಶ ರವಾನೆಯಾಗಿಲ್ಲ.

ಕಳೆದ ವಾರ ರಾಜ್ಯಪಾಲರಿಂದ ಅಂಕಿತ ಪಡೆದಿರುವ ಸುಗ್ರೀವಾಜ್ಞೆಯಲ್ಲಿ ಕೊರೊನಾ ವಾರಿಯರ್ಸ್ ಮೇಲೆ ಹಲ್ಲೆ ಮಾಡಿದ ಮತ್ತು ಹಲ್ಲೆಗೆ ಯತ್ನಿಸಿದವರಿಗೆ ಶಿಕ್ಷೆ ನೀಡುವ ಅಧಿಕಾರವನ್ನು ನೀಡಲಾಗಿತ್ತು. ಕರ್ನಾಟಕ ಸರ್ಕಾರ ಸುಗ್ರೀವಾಜ್ಞೆ ಜಾರಿ ಮಾಡಿದ ದಿನವೇ ಕೇಂದ್ರ ಸರ್ಕಾರದಿಂದಲೂ ಸುಗ್ರೀವಾಜ್ಞೆ ಜಾರಿಯಾಗಿತ್ತು. ಆದರೆ ಅದನ್ನು ಗೃಹ ಇಲಾಖೆ ಇನ್ನೂ ಅನುಷ್ಠಾನಕ್ಕೆ ತಂದಿಲ್ಲ.

ಅಲ್ಲದೆ ರಾಜ್ಯದ ಸುಗ್ರೀವಾಜ್ಞೆಯಲ್ಲಿ ದಾಳಿ ಮಾಡುವವರಿಗೆ 3 ವರ್ಷದವರೆಗೆ ಶಿಕ್ಷಿಸುವ ಬಗ್ಗೆ ಉಲ್ಲೇಖಿಸಲಾಗಿದೆ. ಆದರೆ ಕೇಂದ್ರ ಸರ್ಕಾರದ ಸುಗ್ರೀವಾಜ್ಞೆಯಲ್ಲಿ ಶಿಕ್ಷೆಯನ್ನು 7 ವರ್ಷಕ್ಕೆ ತರಲಾಗಿದೆ. ಹೀಗಾಗಿ ಯಾವ ನಿಯಮ ಅನ್ವಯವಾಗುತ್ತೆ ಎಂಬ ಗೊಂದಲ ಹೆಚ್ಚಾಗಿದೆ.

ಕೇಂದ್ರ ಸರ್ಕಾರದ ಸುಗ್ರೀವಾಜ್ಞೆ ಇಡೀ ದೇಶಕ್ಕೆ ಅನ್ವಯವಾಗೋದ್ರಿಂದ ಕಾಯಿದೆಯ ಅನುಷ್ಠಾನಕ್ಕೆ ಗೊಂದಲ ಉಂಟಾಗಿದೆ. ಕೇಂದ್ರದ ಸುಗ್ರೀವಾಜ್ಞೆಯ ನಿಯಮಗಳಿಗೆ ರಾಜ್ಯ ಗೃಹ ಇಲಾಖೆ ಕಾಯುತ್ತಿದೆ. ಕೇಂದ್ರದ ಸುಗ್ರೀವಾಜ್ಞೆಯೇ ಅಂತಿಮವಾಗಿರುವುದರಿಂದ ರಾಜ್ಯದ ಸುಗ್ರೀವಾಜ್ಞೆಯ ಕೆಲವು ಅಂಶಗಳು ಮಾತ್ರ ಅನುಷ್ಠಾನವಾಗುವ ಸಾಧ್ಯತೆ ಇದೆ.

ಕೇಂದ್ರದ ಸುಗ್ರೀವಾಜ್ಞೆಯಲ್ಲಿರುವ ಪ್ರಮುಖ ಅಂಶಗಳು ಮತ್ತು ರಾಜ್ಯದ ಸುಗ್ರೀವಾಜ್ಞೆಯಲ್ಲಿರುವ ಪ್ರಮುಖ ಅಂಶಗಳನ್ನು ಗುರುತಿಸುವಲ್ಲಿ ಕೇಂದ್ರ ಸರ್ಕಾರ ವಿಳಂಬ ಮಾಡುತ್ತಿದೆ. ಅಲ್ಲದೆ ಕೇಂದ್ರ ಸರ್ಕಾರದ ಸುಗ್ರೀವಾಜ್ಞೆಯ ಅಂಶಗಳು ಉತ್ತಮವಾಗಿದ್ದರೆ ಅದನ್ನೇ ರಾಜ್ಯ ಸರಕಾರ ಪಾಲಿಸಬೇಕಿದೆ. ಹೀಗಾಗಿ ಸುಗ್ರೀವಾಜ್ಞೆಯ ಅನುಷ್ಠಾನದಲ್ಲಿ ವಿಳಂಬವಾಗಿದೆ.

ಕಾಯಿದೆ ಅನುಷ್ಠಾನ ವಿಳಂಬ ಹಿನ್ನೆಲೆಯಲ್ಲಿ ತನಿಖಾಧಿಕಾರಿಗಳು ಹಳೆಯ ಕಲಂಗಳ ಪ್ರಕಾರವೇ ಕೇಸ್​ಗಳನ್ನು ದಾಖಲು ಮಾಡಿಕೊಳ್ಳುತ್ತಿದ್ದಾರೆ. ಇಂದಿನ ಸಚಿವ ಸಂಪುಟ ಸಭೆಯಲ್ಲಿ ಈ ಸಂಬಂಧ ಚರ್ಚೆ ನಡೆಸುವ ಸಾಧ್ಯತೆ ಇದೆ. ಯಾವ ಸುಗ್ರೀವಾಜ್ಞೆಯ ಪ್ರಕಾರ ಸರ್ಕಾರ ಕ್ರಮ ಜರುಗಿಸಬೇಕು ಎಂಬ ಕುರಿತು ಚರ್ಚೆ ಮಾಡಲಿದ್ದಾರೆ.

Published On - 11:37 am, Thu, 30 April 20

Click on your DTH Provider to Add TV9 Kannada