ಬೆಂಗಳೂರು, (ನವೆಂಬರ್ 19): ಬೆಳಗಾವಿಯಲ್ಲಿ ( ನಡೆಯಲಿರುವ ಚಳಿಗಾಲದ ಅಧಿವೇಶನಕ್ಕೆ (Belagavi) Winter Session) ದಿನಾಂಕ ನಿಗದಿಯಾಗಿದೆ. ಡಿಸೆಂಬರ್ 9 ರಿಂದ ಆರಂಭವಾಗಲಿರುವ ವಿಧಾನಮಂಡಲದ ಅಧಿವೇಶನ ಡಿ.20ವರೆಗೆ ನಡೆಯಲಿದೆ. ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಇಲಾಖೆಯು ಅಧಿವೇಶನ ಕರೆಯುವ ಸಂಬಂಧ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರಿಗೆ ಕಡತ ರವಾನಿಸಿದ್ದು, ರಾಜ್ಯಪಾಲರು ಇಂದು(ನವೆಂಬರ್ 19) ಒಪ್ಪಿಗೆ ಸೂಚಿಸಿದ್ದಾರೆ.
ಇತ್ತೀಚೆಗೆ ಸುವರ್ಣ ವಿಧಾನಸೌಧಕ್ಕೆ ಭೇಟಿ ನೀಡಿದ್ದ ವಿಧಾನಸಭಾಧ್ಯಕ್ಷ ಯು.ಟಿ. ಖಾದರ್ ಮತ್ತು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರು ಅಧಿಕಾರಿಗಳ ಸಭೆ ನಡೆಸಿದ್ದರು. ಅಲ್ಲದೆ, ಅಧಿವೇಶನ ನಡೆಸಲು ಅಗತ್ಯವಾದ ಸಿದ್ಧತೆಗಳನ್ನು ಮಾಡುವಂತೆ ಸೂಚನೆ ನೀಡಿದ್ದರು. ಇದೀಗ ರಾಜ್ಯಪಾಲರ ಸಹ ಅಧಿವೇಶನಕ್ಕೆ ಗ್ರೀನ್ ಸಿಗ್ನಲ್ ನೀಡಿದ್ದಾರೆ. ಆದ್ರೆ, ಅವರ ಭಾಷಣ ಈ ಬಾರಿ ಮಹತ್ವ ಪಡೆದುಕೊಳ್ಳಲಿದೆ. ಯಾಕಂದ್ರೆ ರಾಜ್ಯಪಾಲರು ಮತ್ತು ಸರ್ಕಾರದ ನಡುವೆ ಮುಡಾ ಸೇರಿದಂತೆ ಕೆಲ ವಿಚಾರಗಳಲ್ಲಿ ಸಂಘರ್ಷ ಏರ್ಪಟ್ಟಿತ್ತು. ಹಾಗೇ ಸರ್ಕಾರದ ವಿರುದ್ಧ ವಿರೋಧ ಪಕ್ಷ ಕೆಲ ದೂರುಗಳನ್ನು ನೀಡಿದೆ. ಇದರಿಂದ ಬೆಳಗಾವಿ ಚಳಿಗಾಲದ ಅಧಿವೇಶದಲ್ಲಿ ರಾಜ್ಯಪಾಲರು ತಮ್ಮ ಭಾಷಣದಲ್ಲಿ ಏನೆಲ್ಲಾ ಹೇಳಲಿದ್ದಾರೆ ಎನ್ನುವುದು ಕುತೂಹಲ.
ಇನ್ನು ಬೆಳಗಾವಿ ಅಧಿವೇಶನದಲ್ಲಿ ಸರ್ಕಾರದ ವಿರುದ್ಧ ಮುಗಿಬೀಳಲು ವಿಪಕ್ಷ ಬಿಜೆಪಿ ಮತ್ತು ಜೆಡಿಎಸ್ ಸನ್ನದ್ಧವಾಗಿವೆ. ಈಗಾಗಲೇ ಸಾಲು ಸಾಲು ಆರೋಪಗಳನ್ನು ಮಾಡಿರುವ ವಿಪಕ್ಷಗಳು ಅವುಗಳನ್ನೇ ಅಸ್ತ್ರವಾಗಿ ಮಾಡಿಕೊಂಡು ಸದನದಲ್ಲಿ ಧ್ವನಿ ಎತ್ತಲಿವೆ. ಮುಡಾ ಹಾಗೂ ವಾಲ್ಮೀಕಿ ಹಗರಣ ಈಗಾಗಲೇ ಕಳೆದ ಮುಂಗಾರು ಅಧಿವೇಶನದಲ್ಲಿ ಚರ್ಚೆಯಾಗಿದೆ.
ಈಗ ಹೊಸದಾಗಿ ವಕ್ಫ್ ವಿವಾದ, ಬಿಪಿಎಲ್ ಕಾರ್ಡ್ ರದ್ದು ಸೇರಿದಂತೆ ಇತರೆ ಅಂಶಗಳನ್ನು ಮುಂದಿಟ್ಟುಕೊಂಡು ಸದನದಲ್ಲಿ ಆರ್ಭಟಿಸಲು ಸಜ್ಜಾಗಿದೆ.
ಈಗಾಗಲೇ ಸರ್ಕಾರದ ವಿರುದ್ಧ ಸಾಲು ಸಾಲು ಆರೋಪ ಮಾಡಿರುವ ಬಿಜೆಪಿ, ಸದನದಲ್ಲೂ ಧ್ವನಿ ಎತ್ತುವುದು ಖಚಿತ ಎಂದು ಗೊತ್ತಾಗುತ್ತಿದ್ದಂತೆಯೇ ಇತ್ತ ಸಿಎಂ ಸಿದ್ದರಾಮಯ್ಯ ಎಚ್ಚೆತ್ತುಕೊಂಡಿದ್ದಾರೆ. ಈ ಸಂಬಂಧ ನಿನ್ನೆ (ನವೆಂಬರ್ 18) ಹಿರಿಯ ಸಚಿವ ಜೊತೆ ಮಹತ್ವದ ಸಭೆ ನಡೆಸಿದ್ದು, ವಿಪಕ್ಷಗಳಿಗೆ ಹೇಗೆಲ್ಲಾ ತಿರುಗೇಟು ನೀಡಬೇಕೆನ್ನುವ ಬಗ್ಗೆ ಸಚಿವರಿಗೆ ಪಾಠ ಮಾಡಿದ್ದಾರೆ. ಅಲ್ಲದೇ ರಾಜ್ಯಾದ್ಯಂತ ತೀವ್ರ ಆಕ್ರೋಶಕ್ಕೆ ಕಾರಣವಾಗಿರುವ ಬಿಪಿಎಲ್ ಕಾರ್ಡ್ ಗೊಂದಲ ಬೇಗ ಬಗೆಹರಿಸುವಂತೆ ಸಚಿವ ಮುನಿಯಪ್ಪ ಅವರಿಗೆ ಖಡಕ್ ಸೂಚನೆ ನೀಡಿದ್ದಾರೆ.
ಇನ್ನು ಸರ್ಕಾರ ವಿರುದ್ಧ ಹಗರಣ ಬಗ್ಗೆ ಬಿಜೆಪಿ ಧ್ವನಿ ಎತ್ತಿದರೆ ಇದಕ್ಕೆ ಪ್ರತಿಯಾಗಿ ಕೋವಿಡ್ ಹಗರಣವನ್ನು ಎತ್ತಲು ಸರ್ಕಾರ ಮುಂದಾಗಿದೆ. ಹೀಗೆ ವಿಪಕ್ಷಗಳ ಆರೋಪಗಳಿಗೆ ತಕ್ಕನಾಗಿ ತಿರುಗೇಟು ನೀಡಲು ಸಿದ್ದರಾಮಯ್ಯ ಸರ್ಕಾರ ಎಲ್ಲಾ ರೀತಿಯ ತಯಾರಿ ಮಾಡಿಕೊಳ್ಳಲುತ್ತಿದೆ.
ಹೀಗಾಗಿ ಈ ಬಾರಿ ಚಳಿಗಾಲದ ಅಧಿವೇಶನ ತೀವ್ರ ಸ್ವರೂಪ ಪಡೆದುಕೊಳ್ಳಲಿದ್ದು, ಸದನ ಕೋಲಾಹಲವಾಗುವುದರಲ್ಲಿ ಅನುಮಾನವೇ ಇಲ್ಲ. ಇನ್ನು ಪ್ರಮುಖವಾಗಿ ಉತ್ತರ ಕರ್ನಾಟದ ಸಮಸ್ಯೆ ಬಗ್ಗೆ ಚರ್ಚೆ ಮಾಡಲು ಬೆಳಗಾವಿಯಲ್ಲಿ ಚಳಿಗಾಲ ಅಧಿವೇಶನ ನಡೆಸಲಾಗುತ್ತದೆ ಎಂದು ಈಗಾಗಲೇ ಸ್ಪೀಕರ್ ಹೇಳಿದ್ದಾರೆ. ಆದ್ರೆ, ಸರ್ಕಾರ ಮತ್ತು ವಿಪಕ್ಷಗಳ ಆರೋಪ-ಪ್ರತ್ಯಾರೋಪ ಮಧ್ಯ ಎಷ್ಟರಮಟ್ಟಿಗೆ ಉತ್ತರ ಕರ್ನಾಟಕದ ಸಮಸ್ಯೆಗಳ ಬಗ್ಗೆ ಚರ್ಚೆಯಾಗುತ್ತವೆ ಎನ್ನುವುದನ್ನು ಕಾದುನೋಡಬೇಕಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:34 pm, Tue, 19 November 24