ಬೆಂಗಳೂರು: ಚುನಾವಣಾ ಅಫಿಡವಿಟ್ನಲ್ಲಿ ಸುಳ್ಳು ಮಾಹಿತಿ ನೀಡಿರುವ ಆರೋಪದಡಿ ಸಚಿವ ಕೆ.ಸಿ.ನಾರಾಯಣಗೌಡ ವಿರುದ್ಧ ಕಾನೂನು ಕ್ರಮಕ್ಕೆ ಸೂಚನೆ ನೀಡಲಾಗಿದೆ. ಸಚಿವರ ವಿರುದ್ಧ ಸೂಕ್ತ ಕ್ರಮಕೈಗೊಳ್ಳಲು ರಾಜ್ಯಪಾಲ ವಜುಭಾಯಿ ವಾಲಾ ಅನುಮತಿ ನೀಡಿದ್ದಾರೆ. ರಾಜ್ಯ ಸರ್ಕಾರಕ್ಕೆ ಅನುಮತಿ ನೀಡಿರುವ ರಾಜ್ಯಪಾಲರು ಸುಳ್ಳು ಆಸ್ತಿ ವಿವರದ ತನಿಖೆ ನಡೆಸುವಂತೆ ಸೂಚಿಸಿದ್ದಾರೆ.
ಏನಿದು ಪ್ರಕರಣ?
ಚುನಾವಣಾ ಅಫಿಡವಿಟ್ನಲ್ಲಿ ಸಚಿವ ನಾರಾಯಣಗೌಡ ಆಸ್ತಿ ವಿವರವನ್ನು ಮರೆಮಾಚಿ ತಪ್ಪು ಮಾಹಿತಿ ಕೊಟ್ಟಿದ್ದಾರೆ ಎಂದು ಸಾಮಾಜಿಕ ಕಾರ್ಯಕರ್ತ ದಿನೇಶ್ ಕಲ್ಲಳ್ಳಿ ಆರೋಪಿಸಿದ್ದಾರೆ. 2013 ಹಾಗೂ 2018ರ ಚುನಾವಣೆ ಅಫಿಡವಿಟ್ನಲ್ಲಿ ತಪ್ಪು ಮಾಹಿತಿ ಸಲ್ಲಿಸಿದ್ದಾರೆ ಎಂದು ದೂರು ದಾಖಲಿಸಲು ದಿನೇಶ್ ಕಲ್ಲಳ್ಳಿ ಅನುಮತಿ ಕೋರಿದ್ದರು. ಈ ಬಗ್ಗೆ ರಾಜ್ಯಪಾಲರಿಗೆ ಮನವಿ ಸಹ ಮಾಡಿದ್ದರು.
ಇದೀಗ, ದಿನೇಶ್ ಬರೆದಿದ್ದ ಪತ್ರದ ಮನವಿಗೆ ಗವರ್ನರ್ ಅನುಮತಿ ನೀಡಿದ್ದಾರೆ. ಪ್ರಕರಣ ಕುರಿತು ಮುಂದಿನ ಕ್ರಮ ಕೈಗೊಳ್ಳಲು ರಾಜ್ಯಪಾಲರ ಕಚೇರಿಯಿಂದ ಮುಖ್ಯ ಕಾರ್ಯದರ್ಶಿಗೆ ಪತ್ರ ರವಾನಿಸಲಾಗಿದೆ.
‘ತನಿಖೆಗೆ ಆದೇಶ ನೀಡಿದ್ದಾರೆಂಬುದು ಸತ್ಯಕ್ಕೆ ದೂರವಾದದ್ದು’
ರಾಜ್ಯಪಾಲರು ದೂರನ್ನು ಮುಂದಿನ ಕ್ರಮಕ್ಕಾಗಿ ಕಳಿಸಿದ್ದಾರೆ. ತನಿಖೆಗೆ ಆದೇಶ ನೀಡಿದ್ದಾರೆಂಬುದು ಸತ್ಯಕ್ಕೆ ದೂರವಾದದ್ದು ಎಂದು ಸಚಿವ ಡಾ.ಕೆ.ಸಿ.ನಾರಾಯಣಗೌಡ ಕಚೇರಿಯಿಂದ ಸ್ಪಷ್ಟನೆ ಸಿಕ್ಕಿದೆ. ಸಾಮಾಜಿಕ ಕಾರ್ಯಕರ್ತ ದಿನೇಶ್ ಕಲ್ಲಳ್ಳಿ ಪತ್ರ ಬರೆದಿದ್ರು. ರಾಜ್ಯಪಾಲರಿಗೆ ಪತ್ರ ಬರೆದು ಖಾಸಗಿ ದೂರು ಸಲ್ಲಿಸಿದ್ದರು. ಈ ಪತ್ರವನ್ನು ಮುಂದಿನ ಕ್ರಮಕ್ಕಾಗಿ ಸಿಎಸ್‌ಗೆ ಕಳಿಸಿದ್ದಾರೆ.
ಗವರ್ನರ್ ಕಚೇರಿಯಿಂದ ಮುಖ್ಯ ಕಾರ್ಯದರ್ಶಿಗೆ ರವಾನಿಸಲಾಗಿದೆ. ಆದರೆ, ತನಿಖೆಗೆ ಆದೇಶ ನೀಡಿದ್ದಾರೆಂಬುದು ಸತ್ಯಕ್ಕೆ ದೂರ ಎಂದು ಸಚಿವ ಡಾ.ಕೆ.ಸಿ.ನಾರಾಯಣಗೌಡ ಕಚೇರಿಯಿಂದ ಸ್ಪಷ್ಟನೆ ದೊರೆತಿದೆ.