ಅಯೋಧ್ಯೆ ಹೋರಾಟ ವಿಚಾರವಾಗಿ ದಾಖಲಾದ ಪ್ರಕರಣವನ್ನು ಸರ್ಕಾರ ಕೂಡಲೇ ಹಿಂಪಡೆಯಬೇಕು: ಜಗದೀಶ್ ಶೆಟ್ಟರ್ ಒತ್ತಾಯ
ಅಯೋಧ್ಯೆಯಲ್ಲಿ ರಾಮಲಲ್ಲಾನ ವಿಗ್ರಹ ಪ್ರತಿಷ್ಠಾಪನೆಗೆ ದಿನಗಣನೆ ಶುರವಾದಾಗ 30 ವರ್ಷಗಳ ಹಳೆಯ ಪ್ರಕರಣವನ್ನು ರೀಓಪನ್ ಮಾಡಿ ಹುಬ್ಬಳ್ಳಿಯಲ್ಲಿ ರಾಮ ಜನ್ಮಭೂಮಿಗಾಗಿ ಹೋರಾಟ ನಡೆಸಿದ ಶ್ರೀಕಾಂತ್ ಪೂಜಾರಿಯನ್ನು ಬಂಧಿಸಲಾಗಿದೆ. ಇದು ಹಿಂದೂ ಸಂಘಟನೆಗಳು ಹಾಗೂ ವಿಪಕ್ಷ ಬಿಜೆಪಿ ಆಕ್ರೋಶಕ್ಕೆ ಕಾರಣವಾಗಿದೆ. ಆದರೆ, ಕಾಂಗ್ರೆಸ್ ನಾಯಕರು ಬಂಧನವನ್ನು ಸಮರ್ಥಿಸಿಕೊಂಡರೆ, ಸ್ವಪಕ್ಷದ ಎಂಎಲ್ಸಿ ಜಗದೀಶ್ ಶೆಟ್ಟರ್, ಸರ್ಕಾರ ಕೂಡಲೇ ಪ್ರಕರಣವನ್ನು ಹಿಂಪಡೆಯುವಂತೆ ಒತ್ತಾಯಿಸಿದ್ದಾರೆ.
ಬೆಂಗಳೂರು, ಜ.2: ಅಯೋಧ್ಯೆ (Ayodhya) ವಿಚಾರವಾಗಿ ದಾಖಲಾದ ಪ್ರಕರಣಗಳನ್ನು ವಾಪಸ್ ಪಡೆಯಬೇಕು ಎಂದು ಮಾಜಿ ಮುಖ್ಯಮಂತ್ರಿಯೂ ಆಗಿರುವ ಕಾಂಗ್ರೆಸ್ ಎಂಎಲ್ಸಿ ಜಗದೀಶ್ ಶೆಟ್ಟರ್ (Jagadish Shettar) ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಸರ್ಕಾರ ಕೂಡಲೇ ಪ್ರಕರಣವನ್ನು ಹಿಂಪಡೆಯಲಿ, ಇದರಲ್ಲಿ ರಾಜಕೀಯ ಬೇಡ ಎಂದಿದ್ದಾರೆ.
ಬಂಧನ ಮಾಡಿ ಅಂತಾ ಸರ್ಕಾರ ಹೇಳಿರುವುದಿಲ್ಲ. ಕೋರ್ಟ್ ಆದೇಶ ಆಗಿರಬಹುದು, ಪೊಲೀಸರೇ ನಿರ್ಧರಿಸಿರಬಹುದು. ಆದರೆ ಸರ್ಕಾರವೇ ಇದನ್ನು ಮಾಡಿಸಿದೆ ಅಂದರೆ ನಾನು ಒಪ್ಪುವುದಿಲ್ಲ. ಈ ವಿಚಾರದಲ್ಲಿ ಬಿಜೆಪಿ ಪ್ರತಿಭಟನೆ ಮಾಡಿದರೆ ಮಾಡಲಿ. ಹಿಂದೆ ಬಿಜೆಪಿ ಸರ್ಕಾರವಿತ್ತು, ಆಗ ರದ್ದು ಮಾಡಿದ್ದರೆ ಮುಗಿದು ಹೋಗುತ್ತಿತ್ತು ಎಂದರು.
ಹಿಂದೆ ಅಯೋಧ್ಯೆ ವಿಚಾರದಲ್ಲಿ ಗಲಭೆಗಳಾದರೆ ರೌಡಿಶೀಟ್ ಓಪನ್ ಮಾಡುತ್ತಿದ್ದರು. ರೌಡಿಶೀಟ್ ಓಪನ್ ಆದವರ ಪೈಕಿ 50-60 ವರ್ಷದವರಿದ್ದಾರೆ. ವಯಸ್ಸಾದವರನ್ನು ರೌಡಿಶೀಟ್‌ನಿಂದ ತೆಗೆಯಿರಿ ಅಂತಾ ನನಗೆ ಶುಭಕೋರಲು ಬರುವ ಎಲ್ಲಾ ಕಮಿಷನರ್‌ಗಳಿಗೆ ಹೇಳುತ್ತಿದ್ದೆ. ಸಚಿವ ಸಂಪುಟಕ್ಕೆ ಈ ವಿಚಾರ ತಂದು ಪ್ರಕರಣ ವಾಪಸ್ ಮಾಡಿಸುವ ಪ್ರಯತ್ನ ಮಾಡಿದ್ದೇನೆ ಎಂದರು.
ಇದನ್ನೂ ಓದಿ: ರಾಮ ಮಂದಿರ ನಿರ್ಮಾಣ: ರಿವೇಂಜ್ ತೀರಿಸಿಕೊಳ್ಳಲು ಕಾಂಗ್ರೆಸ್ ಹುಬ್ಬಳ್ಳಿಯಲ್ಲಿ ಹಳೇ ಕೇಸ್ ಓಪನ್ ಮಾಡಿಸಿದೆ- ಜೋಶಿ
ಹುಬ್ಬಳ್ಳಿಯಲ್ಲಿ ನಾನೇ ಇದರ ನೇತೃತ್ವವನ್ನು ವಹಿಸಿಕೊಂಡಿದ್ದೆ. ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಅಡ್ವಾಣಿ ಕೊಡುಗೆ ಅಪಾರವಾಗಿದೆ. ಮಾಧ್ಯಮಗಳಲ್ಲಿ ಬಂದ ಬಳಿಕ ಟ್ರಸ್ಟ್‌ನವರು ಹೋಗಿ ಅಡ್ವಾಣಿ ಅವರಿಗೆ ಆಹ್ವಾನ ನೀಡಿದ್ದಾರೆ. ನನಗಿರುವ ಮಾಹಿತಿ ಪ್ರಕಾರ ಎಲ್.ಕೆ.ಅಡ್ವಾಣಿರವರಿಗೆ ಆಹ್ವಾನ ಕೊಟ್ಟು ವಯಸ್ಸಾಗಿದೆ, ಮನೆಯಲ್ಲೇ ಕುಳಿತು ವೀಕ್ಷಿಸಿ ಅಂದಿದ್ದಾರಂತೆ. ಇದು ಕೊಟ್ಟಂತೆಯೂ ಆಗಬೇಕು, ಕೊಡದಂತೆಯೂ ಆಗಬೇಕು. ಆಹ್ವಾನ ಪತ್ರಿಕೆ ಕೊಟ್ಟು ಪರೋಕ್ಷವಾಗಿ ಬರಬೇಡಿ ಅಂದರೆ ಏನರ್ಥ ಎಂದು ಪ್ರಶ್ನಿಸಿದರು.
ರಾಮ ಮಂದಿರಕ್ಕೆ ನಾನೂ 2 ಕೋಟಿಯಷ್ಟು ಹಣ ಸಂಗ್ರಹ ಮಾಡಿಕೊಟ್ಟಿದ್ದೆ. ಪಕ್ಷ ಬದಲಿಸಿದ ಮೇಲೆ ನಾವು ರಾಮ ಭಕ್ತರೇ ಅಲ್ಲವೆಂದು ಹೇಳುತ್ತಾರೆ ಎಂದರು. ಸರ್ಕಾರದಿಂದ ಅಲ್ಪಸಂಖ್ಯಾತರ ಓಲೈಕೆ ಎಂದು ಬಿಜೆಪಿ ಆರೋಪ ವಿಚಾರವಾಗಿ ಮಾತನಾಡಿದ ಶೆಟ್ಟರ್, ಲೋಕಸಭೆ ಚುನಾವಣೆ ಬರುತ್ತಿದೆ, ಅದಕ್ಕೆ ಹೀಗೆ ಆರೋಪ ಮಾಡುತ್ತಿದ್ದಾರೆ. ಅಭಿವೃದ್ಧಿ ಮೇಲೆ ಚುನಾವಣೆಗೆ ಹೋಗಬೇಕು, ಧರ್ಮ ವಿಚಾರ ಪ್ರಸ್ತಾಪ ಸರಿಯಲ್ಲ ಎಂದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ