ಬಳ್ಳಾರಿ | ಹಿರೇಹೆಗ್ಡಾಳ್ ಗ್ರಾಮ ಪಂಚಾಯತಿಯಲ್ಲಿ ಪತ್ನಿ ಅಧ್ಯಕ್ಷೆ: ಪತಿ ಅದೇ ಕಚೇರಿಯ ಜವಾನ

ಮೀಸಲಾತಿ ಇಲ್ಲದಿದ್ದರೆ ನಮ್ಮಂಥ ಬಡವರು ಅಧ್ಯಕ್ಷರಾಗುವುದು ಕನಸಿನ ಮಾತಾಗುತ್ತಿತ್ತು, ಪ್ರಜಾಪ್ರಭುತ್ವದಲ್ಲಿ ಎಲ್ಲರಿಗೂ ಅಧಿಕಾರ ಸಿಗಬೇಕೆಂಬ ಮೀಸಲಾತಿಯ ಆಶಯ ನನ್ನಂಥವರು ಅಧ್ಯಕ್ಷರಾಗುವುದರ ಮೂಲಕ ಈಡೇರುತ್ತಿದೆ ಎಂದು ಹಿರೇಹೆಗ್ಡಾಳ್ ಗ್ರಾಮ ಪಂಚಾಯತಿಯ ನೂತನ ಅಧ್ಯಕ್ಷೆ ಎಂ.ಅಶ್ವಿನಿ ಹೇಳಿದ್ದಾರೆ.

ಬಳ್ಳಾರಿ | ಹಿರೇಹೆಗ್ಡಾಳ್ ಗ್ರಾಮ ಪಂಚಾಯತಿಯಲ್ಲಿ ಪತ್ನಿ ಅಧ್ಯಕ್ಷೆ: ಪತಿ ಅದೇ ಕಚೇರಿಯ ಜವಾನ
ಪತಿ ಫಕ್ಕೀರಪ್ಪ ಮತ್ತು ಪತ್ನಿ ಎಂ.ಅಶ್ವಿನಿ
preethi shettigar

| Edited By: Ghanashyam D M | ಡಿ.ಎಂ.ಘನಶ್ಯಾಮ

Feb 07, 2021 | 8:26 PM

ಬಳ್ಳಾರಿ: ಕೂಡ್ಲಿಗಿ ತಾಲೂಕಿನ ಹಿರೇಹೆಗ್ಡಾಳ್ ಗ್ರಾಮ ಪಂಚಾಯತಿ ಕಚೇರಿಯಲ್ಲಿ ಪತಿ ಜವಾನನಾಗಿ ಕೆಲಸ ಮಾಡುತ್ತಿದ್ದರೆ ಅದೇ ಗ್ರಾಮ ಪಂಚಾಯತಿಯಲ್ಲಿ ಪತ್ನಿ ಅಧ್ಯಕ್ಷೆಯಾಗಿ ಆಯ್ಕೆಯಾಗಿದ್ದಾರೆ. ಹಿರೇಹೆಗ್ಡಾಳ್ ಗ್ರಾಮ ಪಂಚಾಯತಿಗೆ ಈ ಬಾರಿ ಅಧ್ಯಕ್ಷ ಸ್ಥಾನ ಎಸ್​ಟಿಗೆ ಮೀಸಲಾಗಿತ್ತು. ಉಪಾಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಾಗಿತ್ತು. ಈ ಹಿನ್ನೆಲೆಯಲ್ಲಿ ಎಂ.ಅಶ್ವಿನಿ ಈಗ ಗ್ರಾಮ ಪಂಚಾಯತಿ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಇದೇ ಗ್ರಾಮ ಪಂಚಾಯತಿಯಲ್ಲಿ ಅಶ್ವಿನಿಯ ಪತಿ ಫಕ್ಕೀರಪ್ಪ ಜವಾನನಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಗ್ರಾಮ ಪಂಚಾಯತಿಯಲ್ಲಿ 13 ಸದಸ್ಯರ ಬಲ ಇದ್ದು ಜನತೆಯ ಒತ್ತಾಸೆಯಂತೆ 2ನೇ ವಾರ್ಡಿನ ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದಿದ್ದ ಎಂ.ಅಶ್ವಿನಿ ಈಗ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

ಅಶ್ವಿನಿ ಕೈ ಹಿಡಿದ ಮೀಸಲಾತಿ ಹಿರೇಹೆಗ್ಡಾಳ್ ಗ್ರಾಮ ಪಂಚಾಯತಿಯಲ್ಲಿ ಈ ಬಾರಿ ಅಧ್ಯಕ್ಷ ಸ್ಥಾನಕ್ಕೆ ಎಸ್​ಟಿ ಮೀಸಲಾತಿ ಬಂದಿತ್ತು. 13 ಸದಸ್ಯರಲ್ಲಿ ಎಂ.ಅಶ್ವಿನಿ ಒಬ್ಬರೇ ಎಸ್​ಟಿ ಮಹಿಳೆ ಇದ್ದದ್ದು. ಯಾವ ಪ್ರತಿಸ್ಪರ್ಧಿಯೂ ಈ ಗ್ರಾಮ ಪಂಚಾಯ್ತಿಯಲ್ಲಿ ಇರಲಿಲ್ಲ. ಹೀಗಾಗಿ ಉಳಿದ 12 ಸದಸ್ಯರಿಗೆ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಲು ಅವಕಾಶವೇ ಇಲ್ಲದ ಕಾರಣ ಅವಿರೋಧವಾಗಿ ಅಶ್ವಿನಿ ಅಧ್ಯಕ್ಷರಾಗಿ ಆಯ್ಕೆಯಾದರು.

ನನ್ನ ಪತಿ ಫಕ್ಕೀರಪ್ಪ 23 ವರ್ಷಗಳಿಂದ ಹಿರೇಹೆಗ್ಡಾಳ್ ಗ್ರಾಮ ಪಂಚಾಯತಿಯಲ್ಲಿ ಜವಾನನ ಕೆಲಸ ಮಾಡುತ್ತಿದ್ದಾರೆ. ಅಧಿಕಾರ ಶಾಶ್ವತ ಅಲ್ಲ ಮನೆಯಲ್ಲಿ ಪತಿ ಪತ್ನಿಯಾಗಿದ್ದರೂ ಕಚೇರಿಯಲ್ಲಿ ನನ್ನ ಕೆಲಸ ನಾನು ಮಾಡುತ್ತೇನೆ, ನನ್ನ ಪತಿ ಅವರ ಕೆಲಸಮಾಡುತ್ತಾರೆ. ಮೀಸಲಾತಿ ಇಲ್ಲದಿದ್ದರೆ ನಮ್ಮಂಥ ಬಡವರು ಅಧ್ಯಕ್ಷರಾಗುವುದು ಕನಸಿನ ಮಾತಾಗುತ್ತಿತ್ತು, ಪ್ರಜಾಪ್ರಭುತ್ವದಲ್ಲಿ ಎಲ್ಲರಿಗೂ ಅಧಿಕಾರ ಸಿಗಬೇಕೆಂಬ ಮೀಸಲಾತಿಯ ಆಶಯ ನನ್ನಂಥವರು ಅಧ್ಯಕ್ಷರಾಗುವುದರ ಮೂಲಕ ಈಡೇರುತ್ತಿದೆ ಎಂದು ಹಿರೇಹೆಗ್ಡಾಳ್ ಗ್ರಾಮ ಪಂಚಾಯತಿಯ ನೂತನ ಅಧ್ಯಕ್ಷೆ ಎಂ.ಅಶ್ವಿನಿ ಹೇಳಿದ್ದಾರೆ.

ಹಾವೇರಿ ಜಿಲ್ಲೆಯ ಗ್ರಾಮ ಪಂಚಾಯತಿಯಲ್ಲಿ ಪತಿ ಜವಾನ…ಪತ್ನಿ ಪಂಚಾಯತಿಯ ಅಧ್ಯಕ್ಷೆ!

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada