ಜಿ.ಟಿ. ದೇವೇಗೌಡರಿಗೆ ಭರ್ಜರಿ ಶಾಕ್​​ ಕೊಡುತ್ತಾ ಜೆಡಿಎಸ್​​? ವರಿಷ್ಠರ ನಡೆಯೇನು?

ಮುಂದಿನ ಚುನಾವಣೆಯಲ್ಲಿ ಚಾಮುಂಡೇಶ್ವರಿ ಕ್ಷೇತ್ರದಿಂದ ಸಾ.ರಾ.ಮಹೇಶ್‌ರನ್ನು ಅಭ್ಯರ್ಥಿಯಾಗಿ ಕಣಕ್ಕಿಳಿಸಲು ಜೆಡಿಎಸ್​​ನಲ್ಲಿ ತಯಾರಿ ನಡೆದಿದೆ. ಆ ಮೂಲಕ ಪಕ್ಷದಿಂದ ಅಂತರ ಕಾಯ್ದುಕೊಂಡಿರುವ ಶಾಸಕ ಜಿ.ಟಿ. ದೇವೇಗೌಡರಿಗೆ ಶಾಕ್​​ ನೀಡುವ ಚಿಂತನೆ ನಡೆದಿದ್ಯಾ ಎಂಬ ಪ್ರಶ್ನೆ ಉದ್ಭವಿಸಿದೆ. ಆದ್ರೆ , ದೇವೇಗೌಡರ ನೇತೃತ್ವದಲ್ಲಿ ಇಂದು ನಡೆಯಲಿರುವ ಸಭೆಯಲ್ಲಿ ಈ ಬಗ್ಗೆ ಅಂತಿಮ ನಿರ್ಧಾರ ಆಗುವ ಸಾಧ್ಯತೆ ಇದೆ.

ಜಿ.ಟಿ. ದೇವೇಗೌಡರಿಗೆ ಭರ್ಜರಿ ಶಾಕ್​​ ಕೊಡುತ್ತಾ ಜೆಡಿಎಸ್​​? ವರಿಷ್ಠರ ನಡೆಯೇನು?
ಜಿ.ಟಿ. ದೇವೇಗೌಡ
Edited By:

Updated on: Jan 18, 2026 | 10:52 AM

ಮೈಸೂರು, ಜನವರಿ 18: ಜೆಡಿಎಸ್​​​ನಿಂದ ಈಗಾಗಲೇ ಸಾಕಷ್ಟು ಅಂತರ ಕಾಯ್ದುಕೊಂಡಿರುವ ಶಾಸಕ ಜಿ.ಟಿ. ದೇವೇಗೌಡಗೆ ಮತ್ತಷ್ಟು ಶಾಕ್​​ ಕೊಡಲು ಜಾತ್ಯತೀತ ಜನತಾದಳ ನಾಯಕರು ಮುಂದಾಗಿದ್ದಾರೆ. ಮುಂದಿನ ಚುನಾವಣೆಯಲ್ಲಿ ಚಾಮುಂಡೇಶ್ವರಿ ಕ್ಷೇತ್ರದಲ್ಲಿ JDSನಿಂದ ಸಾ.ರಾ.ಮಹೇಶ್ ಸ್ಪರ್ಧಿಸ್ತಾರೆ ಎಂದು ಮೈಸೂರಿನಲ್ಲಿ ಪರಿಷತ್​ನ ಜೆಡಿಎಸ್​ ಸದಸ್ಯ ಮಂಜೇಗೌಡ ಹೇಳಿದ್ದಾರೆ. ಈ ಬಗ್ಗೆ ಬೆಂಗಳೂರಿನಲ್ಲಿ ಇಂದು ಹೆಚ್​​.ಡಿ. ದೇವೇಗೌಡರ ನೇತೃತ್ವದಲ್ಲಿ ಸಭೆ ಇದ್ದು, ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸ್ಪರ್ಧೆಗೆ ಸಾ.ರಾ.ಮಹೇಶ್​ ಒಪ್ಪಿದ್ದಾರೆ ಎಂದವರು ತಿಳಿಸಿದ್ದಾರೆ.

ಸಹಕಾರ ಕ್ಷೇತ್ರದ ಚುನಾವಣೆಯಲ್ಲಿ ಜಿ.ಟಿ. ದೇವೇಗೌಡ ಪಕ್ಷಕ್ಕೆ ಮೋಸ ಮಾಡಿದ್ದಾರೆ . MLC ಚುನಾವಣೆಯಲ್ಲೂ ಪಕ್ಷ ವಿರೋಧಿ ಕೆಲಸ ಮಾಡಿದ್ದಾರೆ. ಹೀಗಾಗಿ 2028ರ ಚುನಾವಣೆಯಲ್ಲಿ ಸಾ.ರಾ.ಮಹೇಶ್​​ರನ್ನು ಅಭ್ಯರ್ಥಿ ಮಾಡ್ತೇವೆ. ಎಲ್ಲಾ ವಿಚಾರವನ್ನು ಜೆಡಿಎಸ್​ ವರಿಷ್ಠರ ಗಮನಕ್ಕೆ ತರುತ್ತೇವೆ. ಅವರ ವಿರುದ್ಧ ಕ್ರಮ ತೆಗೆದುಕೊಳ್ಳುವುದು ಪಕ್ಷದ ವರಿಷ್ಠರಿಗೆ ಬಿಟ್ಟ ವಿಚಾರ. ಇರುವ ವಿಷಯವನ್ನು ಅವರ ಗಮನಕ್ಕೆ ತರುತ್ತಿದ್ದೇವೆ ಅಷ್ಟೇ ಎಂದವರು ತಿಳಿಸಿದ್ದಾರೆ. ಇನ್ನು ಈ ಹಿಂದೆಯೇ ಜಿಟಿಡಿಗೆ ಜೆಡಿಎಸ್​​ ಒಂದು ಹಂತದ ಶಾಕ್​​ ನೀಡಿತ್ತು. ಪಕ್ಷದ ಕೋರ್ ಕಮಿಟಿ ಪುನಾರಚನೆ ವೇಳೆ ಕಮಿಟಿ ಅಧ್ಯಕ್ಷ ಸ್ಥಾನದಿಂದ ಜಿ.ಟಿ.ದೇವೇಗೌಡರಿಗೆ ಗೇಟ್ ಪಾಸ್ ನೀಡಲಾಗಿತ್ತು. ಆ ಸ್ಥಾನಕ್ಕೆ ಚಿಂತಾಮಣಿ ಮಾಜಿ ಶಾಸಕ ಹಾಗೂ ಮಾಜಿ ಉಪ ಸ್ಪೀಕರ್ ಎಂ. ಕೃಷ್ಣಾರೆಡ್ಡಿ ಅವರನ್ನು ನೇಮಿಸಲಾಗಿತ್ತು. ಇನ್ನು ಅರಕಲಗೂಡು ಶಾಸಕ ಎ. ಮಂಜು ಅವರನ್ನು ಕೋರ್ ಕಮಿಟಿಯ ಸಂಚಾಲಕರನ್ನಾಗಿ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ. ಕುಮಾರಸ್ವಾಮಿ ನೇಮಿಸಿದ್ದರು.

ಇದನ್ನೂ ಓದಿ: ಸಿಎಂ ಪರ ಜಿಟಿ ದೇವೇಗೌಡ ಬ್ಯಾಟಿಂಗ್​; ಜೆಡಿಎಸ್​ ನಾಯಕರಿಂದ ಕ್ರಮಕ್ಕೆ ಆಗ್ರಹ

ಜೆಡಿಎಸ್​​ ಶಾಸಕರಾಗಿರುವ ಜಿಟಿಡಿ ಪದೇ ಪದೇ ಸಿದ್ದರಾಮಯ್ಯ ಸೇರಿದಂತೆ ಇತರ ನಾಯಕರನ್ನು ಹೊಗಳುತ್ತಿದ್ದಿದ್ದು ಪಕ್ಷದ ಮುಖಂಡರ ಕೆಂಗಣ್ಣಿಗೆ ಗುರಿಯಾಗಿತ್ತು. ಅಲ್ಲದೆ ಪಕ್ಷಕ್ಕೆ ಮುಜುಗರವನ್ನೂ ತಂದಿದೆ ಎನ್ನಲಾಗಿದೆ. ಈ ಹಿಂದೆಯೂ ಮಾಜಿ ಸಿಎಂ, ಈಗಿನ ಕೇಂದ್ರ ಸಚಿವ ಕಮಾರಸ್ವಾಮಿ ಮತ್ತು ಜಿ.ಟಿ. ದೇವೇಗೌಡರ ನಡುವಿನ ಮನಸ್ತಾಪಗಳು ರಾಜಕೀಯವಾಗಿ ಭಾರಿ ಸುದ್ದಿಯಾಗಿದ್ದವು. ಆದ್ರೆ ಈ ವಿಚಾರದಲ್ಲಿ ಮಧ್ಯ ಪ್ರವೇಶಿಸಿದ್ದ ದೇವೇಗೌಡರು ಜಿಟಿಡಿ ಮನವೊಲಿಸಿದ್ದರು. ಈ ನಡುವೆ ಮತ್ತೆ ಜಿ.ಟಿ. ದೇವೇಗೌಡರ ವರ್ತನೆ ಬಗ್ಗೆ ಆಕ್ಷೇಪಗಳು ವ್ಯಕ್ತವಾಗುತ್ತಿರುವ ಹಿನ್ನೆಲೆ ದೊಡ್ಡ ಗೌಡರ ನಡೆ ಏನು ಎಂಬುದು ಸದ್ಯಕ್ಕಿರುವ ಕುತೂಹಲ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.