ಸಿಎಂ ಪರ ಜಿಟಿ ದೇವೇಗೌಡ ಬ್ಯಾಟಿಂಗ್: ಜೆಡಿಎಸ್ ನಾಯಕರಿಂದ ಕ್ರಮಕ್ಕೆ ಆಗ್ರಹ
ಗುರುವಾರ (ಅ.03) ರಂದು ನಡೆದ ಮೈಸೂರು ದಸರಾ ಉದ್ಘಾಟನೆ ಕಾರ್ಯಕ್ರಮದಲ್ಲಿ ಜೆಡಿಎಸ್ ಶಾಸಕ, ಕೋರ್ ಕಮಿಟಿ ಅಧ್ಯಕ್ಷ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪರವಾಗಿ ಬ್ಯಾಟ್ ಬೀಸಿದ್ದರು. ಇದು ಜೆಡಿಎಸ್ ಹಾಲಿ ಮತ್ತು ಮಾಜಿ ಶಾಸಕರನ್ನು ಕೆರಳಿಸಿದ್ದು, ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.
ಬೆಂಗಳೂರು, ಅಕ್ಟೋಬರ್ 06: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಹಗರಣ ಸಂಬಂಧ ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ (Siddaramaiah) ಅವರು ರಾಜಿನಾಮೆ ನೀಡಬೇಕೆಂದು ಎನ್ಡಿಎ (NDA) ನಾಯಕರು ಪಟ್ಟು ಹಿಡಿದಿದ್ದಾರೆ. ಆದರೆ, ಜೆಡಿಎಸ್ ಶಾಸಕ, ಕೋರ್ ಕಮಿಟಿ ಅಧ್ಯಕ್ಷ ಜಿಡಿ ದೇವೇಗೌಡ (GT Devegowda) ಉಲ್ಟಾ ಹೊಡೆದಿದ್ದಾರೆ. ಗುರುವಾರ (ಅ.03) ರಂದು ನಡೆದ ಮೈಸೂರು ದಸರಾ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, “ಸಿಎಂ ಸಿದ್ದರಾಮಯ್ಯ ಅವರ ಎಫ್‌ಐಆರ್ ದಾಖಲಾದ್ರೆ ರಾಜೀನಾಮೆ ಕೊಡಬೇಕಾ? ಹಾಗಾಂತ ಕಾನೂನು ಇದೆಯಾ? ಕುಮಾರಸ್ವಾಮಿಯನ್ನು ರಾಜಿನಾಮೆ ಕೇಳಿದರೆ ಕೊಡುತ್ತಾರಾ? ಎಂದು ಪ್ರಶ್ನಿಸಿದ್ದರು.
ಜಿಡಿ ದೇವೇಗೌಡರ ಹೇಳಿಕೆಯಿಂದ ಎನ್ಡಿಎ ನಾಯಕರು ಮುಜುಗರಕ್ಕೆ ಒಳಗಾಗಿದ್ದಾರೆ. ಜಿಟಿ ದೇವೇಗೌಡರ ಈ ಹೇಳಿಕೆಯಿಂದ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಹೆಚ್.ಡಿ.ದೇವೇಗೌಡ ಅವರು ಮುನಿಸಿಕೊಂಡಿದ್ದಾರೆ. ಜಿಟಿ ದೇವೇಗೌಡರ ಹೇಳಿಕೆ ಬಗ್ಗೆ ಹೆಚ್.ಡಿ.ದೇವೇಗೌಡ ಆಪ್ತರ ಬಳಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂದು ಮೂಲಗಳಿಂದ ಮಾಹಿತಿ ದೊರೆತಿದೆ.
ಇದನ್ನೂ ಓದಿ: ಮೈಸೂರು ದಸರಾದ ಮೊದಲ ದಿನ ಮುಡಾಮಯ: ಮಹಿಷ ಮರ್ಧಿನಿ ಪೂಜೆಯಲ್ಲಿ ಮಾರ್ದನಿಸಿದ ಜಿಟಿ ದೇವೇಗೌಡ ಮಾತು
ಇನ್ನು, ಜಿ.ಟಿ.ದೇವೇಗೌಡ ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಜೆಡಿಎಸ್ನ ಹಾಲಿ ಮತ್ತು ಮಾಜಿ ಶಾಸಕರು ಮಾಜಿ ಪ್ರಧಾನಿ ಹೆಚ್ಡಿ ದೇವೇಗೌಡ ಅವರಿಗೆ ಮನವಿ ಮಾಡಿದ್ದಾರೆ. ಜಿ.ಟಿ.ದೇವೇಗೌಡ ಅವರ ಹೇಳಿಕೆಯಿಂದ ಪಕ್ಷಕ್ಕೆ ಸಾಕಷ್ಟು ಡ್ಯಾಮೇಜ್ ಆಗಿದೆ. ಜಿಟಿ ದೇವೇಗೌಡ ಅವರ ಹೇಳಿಕೆಯಿಂದ ಎನ್ಡಿಎ ಮೈತ್ರಿಕೂಟದ ಮುಡಾ ಹೋರಾಟಕ್ಕೆ ಹಿನ್ನಡೆಯಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕಾಂಗ್ರೆಸ್ ಪರ ಜಿ.ಟಿ.ದೇವೇಗೌಡ ಹೇಳಿಕೆಯಿಂದ ದೊಡ್ಡ ಹೊಡೆತ ಬಿದ್ದಿದೆ. ಇದರಿಂದ ಮುಂಬರುವ ಚುನಾವಣೆಗಳಲ್ಲಿ ಹಳೇ ಮೈಸೂರು ಭಾಗದಲ್ಲಿ ಜೆಡಿಎಸ್ಗೆ ದೊಡ್ಡ ಹೊಡೆತ ಬೀಳಲಿದೆ. ಜಿಟಿ ದೇವೇಗೌಡ ಅವರ ಹೇಳಿಕೆ ಬರುವ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಸ್ತ್ರವಾಗಿ ಬಳಸಿಕೊಳ್ಳುವ ಸಾಧ್ಯತೆ ಇದೆ. ಹೀಗಾಗಿ ಜಿಟಿಡಿ ಮಾತಿಗೆ ಬ್ರೇಕ್ ಹಾಕಬೇಕು ಎಂದು ಮನವಿ ಮಾಡಿದ್ದಾರೆ.
ಆದರೆ, ಹೆಚ್ಡಿ ದೇವೇಗೌಡ ಅವರು ಮಾತ್ರ ಸದ್ಯಕ್ಕೆ ಯಾವುದೇ ಆತುರದ ನಿರ್ಧಾರ ಬೇಡ ಎಂದು ಮೌನಕ್ಕೆ ಜಾರಿದ್ದಾರೆ. ಮುಂದಿನ ದಿನಗಳಲ್ಲಿ ಹೆಚ್ಡಿ ದೇವೇಗೌಡರ ನಡೆ ಏನಾಗಿರುತ್ತದೆ ಅಂತ ಕಾದು ನೋಡಬೇಕಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ