‘ಗ್ಯಾರಂಟಿ’ ಯೋಜನೆ ಭವಿಷ್ಯದ ನಿರೀಕ್ಷೆಗಳಿಗೆ ಮಾರಕ: ಸಬ್ಸಿಡಿ ನಿಲ್ಲಿಸುವಂತೆ ಸರ್ಕಾರಕ್ಕೆ ಸಲಹೆ

ಆರ್ಥಿಕ ಪ್ರಗತಿಯಲ್ಲಿ ಕರ್ನಾಟಕ ಹೊಸ ಇತಿಹಾಸವನ್ನೇ ಸೃಷ್ಟಿಸಿದೆ. ಆರ್ಥಿಕ ವರ್ಷ ಅಂದ್ರೇ 2024-25ನೇ ಸಾಲಿನಲ್ಲಿ ಎಲ್ಲ ರಾಜ್ಯಗಳನ್ನು ಹಿಂದಿಕ್ಕಿ ಕರ್ನಾಟಕ ಇಡೀ ದೇಶದಲ್ಲಿಯೇ ನಂಬರ್‌ 1 ರಾಜ್ಯವಾಗಿ ಹೊರಹೊಮ್ಮಿದೆ. ದೇಶದಲ್ಲಿಯೇ ಅತಿ ಹೆಚ್ಚು ತಲಾ ಆದಾಯ ಹೊಂದಿರುವ ರಾಜ್ಯ ಎಂಬ ಹೆಗ್ಗಳಿಕೆ ಈಗ ಕರ್ನಾಟಕಕ್ಕೆ ಸಂದಿದೆ. ಇದರ ನಡುವೆ ಪಂಚ ಗ್ಯಾರಂಟಿಗಳಿಂದಾಗಿ ಸಿದ್ದರಾಮಯ್ಯ ಸರ್ಕಾರದ ಸಾಲದ ಸುಳಿಗೆ ಸಿಲುಕಿದೆ. ಈ ಅಂಶ ಖುದ್ದು ಸಿಎಂ ಸಿದ್ದರಾಮಯ್ಯ ಸದನದಲ್ಲಿ ಮಂಡಿಸಿದ ಸಿಎಜಿ ವರದಿಯಲ್ಲೇ ಉಲ್ಲೇಖವಾಗಿದೆ. ಇದರ ಬೆನ್ನಲ್ಲೇ ಬೆಂಗಳೂರಿನ ಪ್ರಧಾನ ಮಹಾಲೇಖಪಾಲರ ಕಚೇರಿಯಿಂದ ಎಜಿ ಅಶೋಕ್ ಸಿನ್ಹಾ ಸುದ್ದಿಗೋಷ್ಠಿ ನಡೆಸಿ ಆರ್ಥಿಕತೆ ಬಗ್ಗೆ ರಾಜ್ಯ ಸರ್ಕಾರಕ್ಕೆ ಮಹತ್ವದ ಸಲಹೆ ನೀಡಿದ್ದಾರೆ.

‘ಗ್ಯಾರಂಟಿ’ ಯೋಜನೆ ಭವಿಷ್ಯದ ನಿರೀಕ್ಷೆಗಳಿಗೆ ಮಾರಕ: ಸಬ್ಸಿಡಿ ನಿಲ್ಲಿಸುವಂತೆ ಸರ್ಕಾರಕ್ಕೆ ಸಲಹೆ
Guarantee Schemes
Edited By:

Updated on: Aug 20, 2025 | 7:11 PM

ಬೆಂಗಳೂರು, (ಆಗಸ್ಟ್ 20):ರಾಜ್ಯ ಸರ್ಕಾರ ಜಾರಿಗೆ ತಂದಿರುವ ಐದು ಗ್ಯಾರಂಟಿ ಯೋಜನೆಗಳು ಆರ್ಥಿಕ ಕೊರತೆ ಸೃಷ್ಟಿ ಮಾಡಿದ್ದು, ಮೂಲಸೌಕರ್ಯಗಳ ಅನುದಾನದ ಮೇಲೆ ನಕಾರಾತ್ಮಕ ಪರಿಣಾಮ ಬೀರಿದೆ ಎಂದು ರಾಜ್ಯ ಹಣಕಾಸಿನ ವ್ಯವಹಾರಗಳ ಲೆಕ್ಕಪರಿಶೋಧನಾ ವರದಿ (ಸಿಎಜಿ) ವ್ಯಾಖ್ಯಾನಿಸಿದೆ. 2022-23ಕ್ಕೆ ಹೋಲಿಸಿದರೆ ಪ್ರಸಕ್ತ ವರ್ಷ ರಾಜಸ್ವ ಕೊರತೆಯಾಗಿದೆ. ಅಂದರೆ 2023-24ನೇ ಸಾಲಿನಲ್ಲಿ 9271 ಕೋಟಿ ರೂ. ರಾಜಸ್ವ ಕೊರತೆಯಾಗಿದೆ ಎಂದು ಸಿಎಜಿ ವರದಿ ತಿಳಿಸಿದೆ. ಇದರ ಬೆನ್ನಲ್ಲೇ ಬೆಂಗಳೂರಿನ ಪ್ರಧಾನ ಮಹಾಲೇಖಪಾಲರ ಕಚೇರಿಯಿಂದ ಎಜಿ ಅಶೋಕ್ ಸಿನ್ಹಾ ಸುದ್ದಿಗೋಷ್ಠಿ ನಡೆಸಿ ಸಬ್ಸಿಡಿ ಕಡಿಮೆ ಮಾಡಲು ರಾಜ್ಯ ಸರ್ಕಾರಕ್ಕೆ ಮಹತ್ವದ ಸಲಹೆ ನೀಡಿದ್ದಾರೆ.

ಕಳೆದ ವರ್ಷಕ್ಕಿಂತ ಸಾಲ ಹೆಚ್ಚಳ

2022-23ಕ್ಕೆ ಹೋಲಿಸಿದರೆ ಪ್ರಸಕ್ತ ವರ್ಷ ರಾಜಸ್ವ ಕೊರತೆಯಾಗಿದೆ. ಅಂದರೆ 2023-24ನೇ ಸಾಲಿನಲ್ಲಿ 9271 ಕೋಟಿ ರಾಜಸ್ವ ಕೊರತೆಯಾಗಿದೆ. ಇದರೊಂದಿಗೆ 65,522 ಕೋಟಿ ರೂ. ವಿತ್ತೀಯ ಕೊರತೆಯಾಗಿದೆ. ಹೀಗಾಗಿ ರಾಜ್ಯ ಸರ್ಕಾರ ಸುಮಾರು 84,334 ಕೋಟಿ ರೂ. ಸಾಲ ಮಾಡಿದೆ.ಗ್ಯಾರಂಟಿ ಯೋಜನೆಗಳು ಹಾಗೂ ಅದರಿಂದ ಉಂಟಾದ ಕೊರತೆಗಳಿಗೆ ಹಣಕಾಸು ಒದಗಿಸಲು 63 ಸಾವಿರ ಕೋಟಿ ರೂ. ನಿವ್ವಳ ಸಾಲ ಪಡೆದುಕೊಂಡಿದೆ. ಕಳೆದ ವರ್ಷಕ್ಕಿಂತ ಪ್ರಸಕ್ತ ವರ್ಷ 37 ಸಾವಿರ ಕೋಟಿ ರೂಪಾಯಿ ಸಾಲ ಹೆಚ್ಚಾಗಿದೆ ಎಂದು ಮಾಹಿತಿ ನೀಡಿದರು.

ಇದನ್ನೂ ಓದಿ: ಗ್ಯಾರಂಟಿ ಯೋಜನೆಗಳಿಗೆ ಸಾಲ, ಕರ್ನಾಟಕದ ವಿತ್ತೀಯ ಕೊರತೆ ಹೆಚ್ಚಳ: ಸಿಎಜಿ ವರದಿಯಲ್ಲಿ ಬಹಿರಂಗ

ಸರ್ಕಾರಕ್ಕೆ ನಷ್ಟದ ಮೇಲೆ ನಷ್ಟ

ಅಬಕಾರಿ ಇಲಾಖೆಯಲ್ಲಿ‌ KSDLCಯಲ್ಲಿ ಮದ್ಯ ಆಮದಿಗೆ ಲೈಸೆನ್ಸ್ ಇಲ್ಲ. ಇದರಿಂದ ಸರ್ಕಾರಕ್ಕೆ ಲಾಸ್ ಆಗಿದೆ. ಹೀಗಾಗಿ ಮದ್ಯದ ಬೆಲೆ ಹೆಚ್ಚಳ ಮಾಡ್ತಾರೆ. ಮುದ್ರಾಂಕ ಇಲಾಖೆಯಲ್ಲಿ 44 ಕೋಟಿ ರೂಪಾಯಿ ನಷ್ಟ ಆಗಿದೆ. ಸಾರಿಗೆ ಇಲಾಖೆಯಲ್ಲಿ ಖಾಸಗಿ ಸೇವೆ ಒದಗಿಸುವವರಿಂದ 1.87 ಕೋಟಿ ತೆರಿಗೆ ನಷ್ಟವಾಗಿದೆ. ಮಾಲಿನ್ಯ ನಿಯಂತ್ರಣ ಮಂಡಳಿಯು 9 ಸ್ಥಳೀಯ ಕಚೇರಿಗಳಲ್ಲಿ ಕೊಳಚೆ ಶುದ್ಧೀಕರಣ ಘಟಕಗಳು ಅವಶ್ಯಕತೆ ಇದ್ದರೂ ಸ್ಥಾಪಿಸಿಲ್ಲ.ಮಂಡಳಿಯ ಒಪ್ಪಿಗೆ ಪಡೆಯದೇ ಆಸ್ಪತ್ರೆಯವರು ಕಾರ್ಯನಿರ್ವಹಿಸ್ತಿದ್ದರು. ಇದನ್ನು ಗಮನಿಸಿದ್ದೇವೆ, ಶೇಕಡಾ 44ರಷ್ಟು ಶುದ್ಧೀಕರಣ ಕೆಲಸ ಆಗುತ್ತಿದೆ. ಗುತ್ತಿಗೆ ಕೊಟ್ಟ ಮೇಲೆ ಲೋಕೋಪಯೋಗಿ ಇಲಾಖೆ ಮರೆತು ಬಿಡ್ತಿತ್ತು. 5 ಕೇಸ್‌ಗಳಲ್ಲಿ ಗುತ್ತಿಗೆ ಪಡೆದವರು ತಮ್ಮ ಹೆಸರಿನಲ್ಲೇ ಖಾತೆ ಮಾಡಿಕೊಂಡಿದ್ದಾರೆ. ಗುತ್ತಿಗೆ ನವೀಕರಿಸದಿದ್ದರಿಂದ 5 ಕೇಸ್‌ನಲ್ಲಿ ಒಟ್ಟು 1,559 ಕೋಟಿ ನಷ್ಟವಾಗಿದೆ.

ಕೊಳಗೇರಿ ಅಭಿವೃದ್ಧಿ ಮಂಡಳಿ 5.27 ಕೋಟಿ ಜಮೆಯನ್ನು ಇನ್ನೂ ಪತ್ತೆ ಹಚ್ಚಿಲ್ಲ.ಸೇವಾಸಿಂಧೂ ಪೋರ್ಟಲ್‌ನಲ್ಲಿ ಪರಿಶೀಲಿಸದೆ ಕಾರ್ಮಿಕರ ನೋಂದಣಿ. ವಸತಿ ಯೋಜನೆಗಾಗಿ ಕರ್ನಾಟಕ ಕೊಳಚೆ ಅಭಿವೃದ್ಧಿ ಮಂಡಳಿಯಲ್ಲಿ‌ ನೀಡಿದ ಫಲಾನುಭವಿಗಳಲ್ಲಿ ನೈಜತೆಯಿಲ್ಲ. ಶೇ.66ರಷ್ಟು ಕೈಗಾರಿಕೆಗಳು ಮಾಲಿನ್ಯ ನಿಯಂತ್ರಣ ಮಂಡಳಿ ಒಪ್ಪಿಗೆ ಪಡೆದಿಲ್ಲ. ಮಾಲಿನ್ಯಕಾರಕಗಳನ್ನು ಸರಿಯಾಗಿ ನಿಯಂತ್ರಣ ಮಾಡಿಲ್ಲ ಎಂದು ಎಜಿ ಅಶೋಕ್ ಸಿನ್ಹಾ ತಿಳಿಸಿದರು.

ಸಬ್ಸಿಡಿ ಕಡಿಮೆ ಮಾಡಲು ಸಲಹೆ

64 ಇಲಾಖೆಗಳು, ಸರ್ಕಾರಿ ಕಂಪನಿಗಳು. ನಿಗಮಗಳಲ್ಲಿ ಸರ್ಕಾರದ ಅನುದಾನದ ಮೇಲೆ ಗಳಿಸಿದ 15,549 ಕೋಟಿಗಳ ಬಡ್ಡಿಯನ್ನು ಆರ್ಥಿಕ ಇಲಾಖೆ ನೀಡಿದ ಸೂಚನೆಗಳ ಹೊರತಾಗಿಯೂ ಸಂದಾಯವಾಗಿಲ್ಲ. ಹಣಕಾಸಿನ ವ್ಯವಹಾರಗಳ ಬಗ್ಗೆ 2022-23ಕ್ಕೆ ಹೋಲಿಸಿದರೆ ಬೆಳವಣಿಗೆ ಕಡಿಮೆ. ಗ್ಯಾರಂಟಿಗಳಿಂದ ಖರ್ಚು ವೇಗಗತಿಯಲ್ಲಿ ಆಗಿದೆ. ಹೀಗಾಗಿ ರಾಜಸ್ವ ಕೊರತೆ ಆಗಿದೆ. 2004-2005 ಹಾಗೂ ಕೊವಿಡ್ ಸಂದರ್ಭ ಹೊರತುಪಡಿಸಿದ್ರೆ ರಾಜಸ್ವ ಇರಲಿಲ್ಲ. ಇಷ್ಟು ತೊಂದರೆ ಯಾವಾಗಲೂ ಆಗಿರಲಿಲ್ಲ. ಸಬ್ಸಿಡಿ ಕಡಿಮೆ ಮಾಡಲು ಸಲಹೆ ನೀಡಿದ್ದೇವೆ ಎಂದು ಹೇಳಿದರು.

2023-24ರಲ್ಲಿ ಗ್ಯಾರಂಟಿಗಳಿಗೆ 63 ಸಾವಿರ ಕೋಟಿ ಸಾಲ

ಸಿಎಂ ಸಿದ್ದರಾಮಯ್ಯ ವಿಧಾನಸಭೆಯಲ್ಲಿ ನಿನ್ನೆ ರಾಜ್ಯ ಹಣಕಾಸು ವ್ಯವಹಾರಗಳ‌ ಕುರಿತ CAG ಅಂದ್ರೆ ಮಹಾಲೇಖಪಾಲರ ಲೆಕ್ಕಪರಿಶೋಧಕರ ವರದಿ ಮಂಡನೆ ಮಾಡಿದರು‌. ವರದಿಯಲ್ಲಿ 2023-24 ನೇ ಸಾಲಿನಲ್ಲಿ ಸರ್ಕಾರದ ವೆಚ್ಚ, ಹಣಕಾಸು ನಿರ್ವಹಣೆ, ಬಜೆಟ್‌ಗೆ ಸಂಬಂಧಿಸಿದ ವಿವರಗಳನ್ನು ಉಲ್ಲೇಖಿಸಲಾಗಿದ್ದು, ಪಂಚ ಗ್ಯಾರಂಟಿಗಳಿಗಾಗಿ 2023-24 ಸಾಲಿನಲ್ಲಿ ಸಂಪನ್ಮೂಲ ಒದಗಿಸಲು ರಾಜ್ಯ ಸರ್ಕಾರ 63 ಸಾವಿರ ಕೋಟಿ ರೂಪಾಯಿ ನಿವ್ವಳ ಮಾರುಕಟ್ಟೆ ಸಾಲ ಮಾಡಿರುವುದಾಗಿ ವರದಿಯಲ್ಲಿ ತಿಳಿಸಿದೆ.

ಒಟ್ಟು ರಾಜಸ್ವ ವೆಚ್ಚದಲ್ಲಿ ಶೇ.15ರಷ್ಟು ಪಂಚ ಗ್ಯಾರಂಟಿ ಪಾಲು

ಗೃಹ ಲಕ್ಷ್ಮಿಗೆ 16,964 ಕೋಟಿ ರೂಪಾಯಿ ಗೃಹ ಜ್ಯೋತಿಗೆ 8,900 ಕೋಟಿ ರೂಪಾಯಿ ಅನ್ನಭಾಗ್ಯಕ್ಕೆ 7,384 ಕೋಟಿ ರೂಪಾಯಿ, ಶಕ್ತಿ ಯೋಜನೆಗೆ 3,200 ಕೋಟಿ ರೂಪಾಯಿ ಮತ್ತು ಯುವನಿಧಿಗೆ 88 ಕೋಟಿ ರೂಪಾಯಿ ಸಾಲ ಮಾಡಲಾಗಿದೆ. ಪಂಚ ಗ್ಯಾರಂಟಿಗಳಿಂದ ಸರ್ಕಾರದ ವಿತ್ತೀಯ ಕೊರತೆ 46,623 ಕೋಟಿ ರೂಪಾಯಿನಿಂದ 65,522 ಕೋಟಿ ರೂಪಾಯಿಗೆ ಹೆಚ್ಚಳವಾಗಿದೆ ಎಂದು ಸಿಎಜಿ ವರದಿಯಲ್ಲಿ ಉಲ್ಲೇಖಿಸಿದೆ. ಅಷ್ಟೇ ಅಲ್ಲ ಒಟ್ಟು ರಾಜಸ್ವ ವೆಚ್ಚದಲ್ಲಿ ಶೇಕಡಾ 15 ರಷ್ಟು ಪಂಚ ಗ್ಯಾರಂಟಿ ಪಾಲು ಹೊಂದಿದೆ ಎಂದು ವಿವರಿಸಿದೆ

ರಾಜ್ಯದ ಆರ್ಥಿಕತೆ ಚಿತ್ರಣ ಬದಲಿಸಿದ ಗ್ಯಾರಂಟಿಗಳು

ಕರ್ನಾಟಕ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳು ರಾಜ್ಯದ ಆರ್ಥಿಕತೆಯ ಚಿತ್ರಣವನ್ನೇ ಬದಲಿಸಿವೆ. ಕರ್ನಾಟಕ ಕಾಂಗ್ರೆಸ್ ಸರ್ಕಾರ ಜಾರಿ ಮಾಡಿರುವ ಪಂಚ ಗ್ಯಾರಂಟಿಗಳು ದುಬಾರಿಯಾಗಿದ್ದು, ಅವುಗಳಿಗಾಗಿ ಸಾವಿರಾರು ಕೋಟಿ ರೂಪಾಯಿ ಸಾಲ ಮಾಡಿದ್ದು ಸಿಎಜಿ ವರದಿಯಲ್ಲಿ ಬಯಲಾಗಿದೆ. ಅಷ್ಟೇ ಅಲ್ಲ ಮುಂದೆ ಈ ಗ್ಯಾರಂಟಿ ಯೋಜನೆಗಳಿಂದ ರಾಜ್ಯದ ಆರ್ಥಿಕತೆಯ ಮೇಲೆ ಒತ್ತಡ ಬೀಳುತ್ತೆ. 2023-24ರಲ್ಲಿ ರಾಜ್ಯದ ಆದಾಯವು ಕಳೆದ ವರ್ಷಕ್ಕಿಂತ ಶೇ.1.86 ರಷ್ಟು ಹೆಚ್ಚಳವಾಗಿದೆ. ಆದ್ರೆ, ಖರ್ಚು ಶೇ.12.54 ರಷ್ಟು ಹೆಚ್ಚಾಗಿದೆ. ಗ್ಯಾರಂಟಿ ಯೋಜನೆಗಳಿಂದಾಗಿ ಆದಾಯಕ್ಕೆ ಪೆಟ್ಟು ಬಿದ್ದಿದೆ. ಹಾಗಾಗಿ ಗ್ಯಾರಂಟಿ ಯೋಜನೆಗೆ ಸಿಎಜಿ ವರದಿಯಲ್ಲಿ ಆಕ್ಷೇಪ ವ್ಯಕ್ತವಾಗಿದ್ದು, ಭವಿಷ್ಯದ ನಿರೀಕ್ಷೆಗಳಿಗೆ ಹಾನಿಕಾರಕ ಎಂದು ಉಲ್ಲೇಖಿಸಲಾಗಿದೆ.

ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್​ ಭರ್ಜರಿ ಬಹುಮತ ಪಡೆಯಲು ಐದು ಉಚಿತ ಗ್ಯಾರಂಟಿಗಳೂ ನೆರವಾಗಿದ್ದವು. ಮಹಿಳೆಯರಿಗೆ ಉಚಿತ ಪ್ರಯಾಣದ ಶಕ್ತಿ ಗ್ಯಾರಂಟಿ, 200 ಯೂನಿಟ್ ವರೆಗೂ ವಿದ್ಯುತ್ ಉಚಿತ ಕೊಡುವ ಗೃಹಜ್ಯೋತಿ ಗ್ಯಾರಂಟಿ, ಮನೆ ಯಜಮಾನಿಯರಿಗೆ ತಿಂಗಳಿಗೆ 2,000 ರೂಪಾಯಿ ಕೊಡುವ ಗೃಹಲಕ್ಷ್ಮೀ ಗ್ಯಾರಂಟಿ, ಅನ್ನಭಾಗ್ಯ, ಯುವನಿಧಿ ಗ್ಯಾರಂಟಿ, ಹೀಗೆ ಭರ್ತಿ ಐದು ಗ್ಯಾರಂಟಿಗಳ ಅಸ್ತ್ರದಿಂದಲೇ ರಾಜ್ಯದಲ್ಲಿ ಕಾಂಗ್ರೆಸ್ ಪ್ರಚಂಡ ಬಹುಮತ ಪಡೆದು ಅಧಿಕಾರದ ಗದ್ದುಗೆಗೆ ಏರಿತ್ತು. ಅಧಿಕಾರಕ್ಕೆ ಏರಿದ ಕೆಲವೇ ತಿಂಗಳಲ್ಲಿ ಎಲ್ಲಾ ಗ್ಯಾರಂಟಿಗಳನ್ನ ಜಾರಿಗೊಳಿಸಿತ್ತು. ನಂತರ ಗ್ಯಾರಂಟಿ ವಿಚಾರದಲ್ಲಿ ಕಾಂಗ್ರೆಸ್ ಶಾಸಕರು, ಸಚಿವರಲ್ಲೇ ಅಪಸ್ವರ ಕೇಳಿ ಬಂದಿತ್ತು. ಗ್ಯಾರಂಟಿ ಯೋಜನೆಗಳು ಹೊರೆ ಆಗುತ್ತಿವೆ ಎಂದು ಅದೇ ಕಾಂಗ್ರೆಸ್ ಪಕ್ಷದ ನಾಯಕರು, ಸಚಿವರು ಹೇಳಿದ ಉದಾಹರಣೆಗಳು ಉಂಟು. ಅಷ್ಟೇ ಅಲ್ಲ ಗ್ಯಾರಂಟಿ ಯೋಜನೆಗಳಲ್ಲಿ ಮಾರ್ಪಾಡು ಮಾಡಬೇಕೆಂದು ಹೈಕಮಾಂಡ್ ಮೊರೆ ಹೋಗಿದ್ದರು.

ಆರ್ಥಿಕತೆ ಮೇಲೆ ಹೊಡೆತ

ಗ್ಯಾರಂಟಿ ಯೋಜನೆಗಳಿಂದ ಕರ್ನಾಟಕದ ಆರ್ಥಿಕತೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಾರಂಭಿಸಿದೆ. ಬಂದ ಆದಾಯವನ್ನು ಸರ್ಕಾರ ಗ್ಯಾರಂಟಿಗಳಿಗೆ ಉಪಯೋಗಿಸುತ್ತಿದ್ದರಿಂದ ಆರ್ಥಿಕತೆ ಮೇಲೆ ಹೊಡೆತಬಿದ್ದಿದೆ.  ಗ್ಯಾರಂಟಿಗೆ ಹಣ ಒದಗಿಸುತ್ತಿರುವುದರಿಂದ ಅಭಿವೃದ್ಧಿ ಕಾರ್ಯಗಳು ಕುಂಠಿತಗೊಂಡಿವೆ. ಹಳ್ಳಿ, ನಗರಗಳಲ್ಲಿ ಮೂಲಸೌಕರ್ಯಗಳಿಗೆ ಅನುದಾನದ ಕೊರತೆ ಎದುರಾಗಿದೆ. ಈ ಸಂಬಂಧ ವಿಪಕ್ಷ ಬಿಜೆಪಿ ಹಾಗೂ ಜೆಡಿಎಸ್ ನಾಯಕರು ಸಹ ಈ ಗ್ಯಾರಂಟಿಗಳನ್ನು ಟೀಕಿಸುತ್ತಲೇ ಇದ್ದಾರೆ. ಆದ್ರೆ, ಆಡಳಿತ ಪಕ್ಷದ ನಾಯಕರು ಮಾತ್ರ ಗ್ಯಾರಂಟಿ ಯೋಜನೆಯಿಂದ ಬಡವರ ಮನೆ ಬೆಳಗುತ್ತಿದೆ. ಬಡವರಿಗೆ ಅನುಕೂಲವಾಗಬಾರದು ಎಂದು ವಿಪಕ್ಷಗಳು ಟೀಕಿಸುತ್ತಾರೆಂದು ಆಡಳಿತ ಪಕ್ಷದ ನಾಯಕರು ತಿರುಗೇಟು ನೀಡುತ್ತಲ್ಲೇ ಬಂದಿದ್ದಾರೆ.

ಆದ್ರೆ, ಆಡಳಿತ ಪಕ್ಷದ ಕೆಲ ನಾಯಕರೇ ಗ್ಯಾರಂಟಿಗಳ ಬಗ್ಗೆ ಅಸಮಾಧಾನ ಹಾಕಿದ್ದಾರೆ. ಖುದ್ದು ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರ ಬಸವರಾಜ್ ರಾಯರೆಡ್ಡಿ ಸಹ ಬೇಸರು ವ್ಯಕ್ತಪಡಿಸಿದ್ದರು. ಅಭಿವೃದ್ಧಿಗೆ ಹಣ ಕೊಡಲಾಗುತ್ತಿಲ್ಲ. ಎಲ್ಲಾ ಹಣ ಗ್ಯಾರಂಟಿಗಳಿಗೆ ಹೋಗುತ್ತಿದೆ ಎಂದು ಕೆಲವು ನಾಯಕರು ಬಹಿರಂಗವಾಗಿ ಹೇಳಿದ್ದು ಉಂಟು. ಆದ್ರೆ, ಇದೀಗ ಅಂತಿಮವಾಗಿ ಸಿಎಂ ಸಿದ್ದರಾಮಯ್ಯ ಮಂಡಿಸಿದ ಸಿಎಜಿ ವರದಿಯೇ ಗ್ಯಾರಂಟಿಯಿಂದ ರಾಜ್ಯದ ಆರ್ಥಿಕತೆ ಮೇಲೆ ಬೀರುತ್ತಿರುವ ಪರಿಣಾಮವನ್ನು ಬಹಿರಂಗಪಡಿಸಿದೆ.