AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರಿನಲ್ಲಿ ಎಚ್.ಎಂ.ರೇವಣ್ಣ ಅಭಿನಂದನೆ ಸಮಾರಂಭ: ಸಿದ್ಧರಾಮಯ್ಯ, ವೀರಪ್ಪ ಮೊಯ್ಲಿ ಭಾಗಿ

ಕಾರ್ಯಕ್ರಮದಲ್ಲಿ ರೇವಣ್ಣ ಅವರ ಜೀವನ ಕುರಿತು ಅಭಿನಂದನಾ ಗ್ರಂಥ 'ಸಂಗತ'ವನ್ನು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಬಿಡುಗಡೆ ಮಾಡಿದರು. ರೇವಣ್ಣನವರ ಬದುಕನ್ನು ಪ್ರತಿಬಿಂಬಿಸುವ ಕಿರುಚಿತ್ರವನ್ನು ಈ ಕಾರ್ಯಕ್ರಮದಲ್ಲಿ ವಿಧಾನ ಪರಿಷತ್​ನ ಸಭಾಪತಿ ಬಸವರಾಜ ಹೊರಟ್ಟಿ ಬಿಡುಗಡೆ ಮಾಡಿದರು.

ಬೆಂಗಳೂರಿನಲ್ಲಿ ಎಚ್.ಎಂ.ರೇವಣ್ಣ ಅಭಿನಂದನೆ ಸಮಾರಂಭ: ಸಿದ್ಧರಾಮಯ್ಯ, ವೀರಪ್ಪ ಮೊಯ್ಲಿ ಭಾಗಿ
ಹೆಚ್​.ಎಂ ರೇವಣ್ಣ ಅವರ ಜೀವನ ಕುರಿತು ಅಭಿನಂದನಾ ಗ್ರಂಥ 'ಸಂಗತ' ಬಿಡುಗಡೆ
Follow us
preethi shettigar
| Updated By: ganapathi bhat

Updated on: Mar 21, 2021 | 7:39 PM

ಬೆಂಗಳೂರು: ಮಾಜಿ ಸಚಿವ ಎಚ್‌.ಎಂ ರೇವಣ್ಣ ಸಾರ್ವಜನಿಕ ಜೀವನದಲ್ಲಿ 40 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಅಭಿನಂದನೆ ಸಮಾರಂಭ ಕಾರ್ಯಕ್ರಮವನ್ನು ಇಂದು (ಮಾರ್ಚ್ 21) ಮೈಸೂರು ರಸ್ತೆಯ ಪೂರ್ಣಿಮಾ ಪ್ಯಾಲೇಸ್​ನಲ್ಲಿ ನಡೆಸಲಾಯಿತು. ಎಚ್.ಎಂ.ರೇವಣ್ಣ ಸಾಂಸ್ಕೃತಿಕ ಪ್ರತಿಷ್ಠಾನದಿಂದ ಈ ಕಾರ್ಯಕ್ರಮ ಆಯೋಜಿಸಲಾಗಿದ್ದು, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ವೀರಪ್ಪ ಮೊಯ್ಲಿ, ಸಭಾಪತಿ ಬಸವರಾಜ್ ಹೊರಟ್ಟಿ, ಮಾಜಿ ಸಚಿವರಾದ ರಾಮಲಿಂಗಾರೆಡ್ಡಿ, ಬಿಟಿ ಲಲಿತಾ ನಾಯಕ್, ದಲಿತ ಕವಿ ಪ್ರೊ.ಸಿದ್ದಲಿಂಗಯ್ಯ, ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮದ್ ಸೇರಿ ಹಲವು ಗಣ್ಯರು ಭಾಗಿಯಾಗಿದ್ದರು.

ಇದೇ ವೇಳೆ ರೇವಣ್ಣ ಅವರ ಜೀವನ ಕುರಿತು ಅಭಿನಂದನಾ ಗ್ರಂಥ ‘ಸಂಗತ’ವನ್ನು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಬಿಡುಗಡೆ ಮಾಡಿದರು. ರೇವಣ್ಣನವರ ಬದುಕನ್ನು ಪ್ರತಿಬಿಂಬಿಸುವ ಕಿರುಚಿತ್ರವನ್ನು ಈ ಕಾರ್ಯಕ್ರಮದಲ್ಲಿ ವಿಧಾನ ಪರಿಷತ್​ನ ಸಭಾಪತಿ ಬಸವರಾಜ ಹೊರಟ್ಟಿ ಬಿಡುಗಡೆ ಮಾಡಿದರು.

ರೇವಣ್ಣ ಮತ್ತು ಅವರ ಪತ್ನಿಗೆ ಶುಭವಾಗಲಿ. ಅವರು ಮತ್ತಷ್ಟು ಜನಮುಖಿ ಕೆಲಸಗಳನ್ನು ಮಾಡಲಿ. ನಾನು ಇನ್ನೂ ರಾಜಕೀಯ ಮಾಡಬೇಕು ಎಂದುಕೊಂಡಿದ್ದೇನೆ. ಹಾಗಾಗಿ, ರೇವಣ್ಣ ಸಹ ರಾಜಕಾರಣದಲ್ಲಿ ಮುಂದುವರಿಯಲಿ. ರಾಜಕೀಯದಲ್ಲಿ ಹಿನ್ನೆಲೆ ಅಥವಾ ಗಾಡ್‌ಫಾದರ್ ಇಲ್ಲದೆ ನಾನು ಮತ್ತು ರೇವಣ್ಣ ಇಷ್ಟು ಬೆಳದಿರುವುದು ಸಾಧನೆಯೇ ಆಗಿದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ನನಗೆ ರಾಜಕೀಯ ಆಸಕ್ತಿ ಬೆಳೆದಿದ್ದು ರೈತ ನಾಯಕ ಪ್ರೊ.ನಂಜುಂಡ ಸ್ವಾಮಿ ಅವರಿಂದ. ಆ ಬೆಳವಣಿಗೆ ಆಗಿರದಿದ್ದರೆ ನಾನು ಮುಖ್ಯ ಮಂತ್ರಿ ಆಗುತ್ತಿರಲಿಲ್ಲ. ನಿಮ್ಮ ಪ್ರೀತಿ-ವಿಶ್ವಾಸ ಗಳಿಸಲಾಗುತ್ತಿರಲಿಲ್ಲ. ಅವಕಾಶ ಬಳಸಿಕೊಂಡವರು ನಾಯಕರಾಗುತ್ತಾರೆ. ಇಲ್ಲವಾದರೆ ಆಗೊಲ್ಲ. ರಾಜಕಾರಣಕ್ಕೆ ಬರುವವರಿಗೆ ಸಿದ್ಧಾಂತದ ಸ್ಪಷ್ಟತೆ ಇರಬೇಕು. ಹಣ,ಅಧಿಕಾರಕ್ಕಾಗಿ ಬರಬಾರದು. ರೇವಣ್ಣನವರಿಗೆ ಆ ಸ್ಪಷ್ಟತೆ ಇದೆ ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.

H M revanna function

ಎಚ್.ಎಂ.ರೇವಣ್ಣ ಅಭಿನಂದನೆ ಕಾರ್ಯಕ್ರಮದ ದೃಶ್ಯ

ಇಂದಿರಾಗಾಂಧಿ ಬಡವರ ಪರ ಇದ್ದವರು. ಅಸಮಾನತೆ ತೊಲಗಿಸುವುದು ಮತ್ತು ಸಮಾಜದ ನಿರ್ಮಾಣದ ಗುರಿ ರಾಜಕಾರಣಿಗಳಿಗೆ ಇರಬೇಕು. ಇಂದಿರಾಗಾಂಧಿ ಅವರಿಗೆ ಆ ಗುರಿ ಇತ್ತು. ನಾವು ಏನೇ ಹೇಳಿದರೂ ಜಾತಿ ವಾಸ್ತವ, ಜಾತಿ ವ್ಯವಸ್ಥೆ ಗಟ್ಟಿಯಾಗಿದೆ. ಜಾತಿ ವ್ಯವಸ್ಥೆ ಹೋಗದೆ ಬದಲಾವಣೆ ಅಸಾಧ್ಯ. ಅದರ ಬೇರುಗಳನ್ನು ಕತ್ತರಿಸುವ ಕಡೆಗೆ ನಾವು ಪ್ರಯತ್ನಿಸಬೇಕಿದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ಎಲ್ಲರಿಗೂ ಸಮಾನ ಅವಕಾಶಗಳು ಸಿಕ್ಕಾಗ ಮಾತ್ರ ದೇಶ ಪ್ರಗತಿ ಕಾಣಲು ಸಾಧ್ಯ. ಭ್ರಷ್ಟಾಚಾರ ಈಗ ಗಂಭೀರ ವಿಷಯವೇ ಆಗಿಲ್ಲ. ಇದು ಎಂತಹ ದುರಂತ. ಈಗ ರಾಜಕೀಯ ಕುಸಿಯುತ್ತದೆ. ಗುಣಾತ್ಮಕ ರಾಜಕಾರಣ ಮರೆಯಾಗುತ್ತಿದೆ. ಜನ ಎಚ್ಚೆತ್ತುಕೊಳ್ಳದಿದ್ದರೆ ದೇಶ ಅರಾಜಕತೆಗೆ ಸಿಲುಕುತ್ತದೆ. ಸಾಮಾಜಿಕ ನ್ಯಾಯಕ್ಕಾಗಿ ರೇವಣ್ಣನವರ ಕೊಡುಗೆ ದೊಡ್ಡದು. ಜನ ಮೌಲ್ಯಯುತ ರಾಜಕಾರಣಕ್ಕೆ ಬೆಂಬಲ ಕೊಡುವವರೆಗೆ,ಭ್ರಷ್ಟರನ್ನು ದೂರ ಇರಿಸುವವರೆಗೆ ದೇಶ ಉದ್ದಾರ ಆಗೊಲ್ಲ. ಜನಪರ ರಾಜಕಾರಣ ಮಾಡಲಾಗೊಲ್ಲ ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.

H M revanna function

ಎಚ್.ಎಂ.ರೇವಣ್ಣ ಅವರನ್ನು ಸನ್ಮಾನಿಸಿದ ಕ್ಷಣ

ಪ್ರಧಾನಿ ನರೇಂದ್ರ ಮೋದಿ ದೇಶದ ಜನರಿಗೆ ಟೋಪಿ ಹಾಕಿದ್ದಾರೆ. ಪೆಟ್ರೋಲ್ ಬೆಲೆ ನೂರು ರೂಪಾಯಿಗೆ ಏರಿಕೆಯಾಗಿದ್ದರೂ ಜನ ಪ್ರತಿಭಟಿಸುತ್ತಿಲ್ಲ.ಇದು ದುರಂತ. ರೇವಣ್ಣ ಸಂಘಟನಾ ಚತುರ. ಸಾಮಾಜಿಕ ನ್ಯಾಯದ ಪರ ಇರುವ ರಾಜಕಾರಣಿ ಎಂದು ಸಿದ್ದರಾಮಯ್ಯ ಅಭಿಪ್ರಾಯಪಟ್ಟಿದ್ದಾರೆ.

ರೇವಣ್ಣ ದಂಪತಿಗಳಿಗೆ ಅಭಿನಂದನೆ: ಸಿದ್ದರಾಮಯ್ಯ ಮತ್ತು ಎಂ.ವೀರಪ್ಪ ಮೊಯಿಲಿ ಅವರಿಂದ ರೇವಣ್ಣನವರೊಂದಿಗಿನ ಸ್ನೇಹವನ್ನು ಸ್ಮರಿಸಿದ ಬಸವರಾಜ ಹೊರಟ್ಟಿ ಇತ್ತೀಚಿನ ದಿನಗಳನ್ನು ನೋಡಿದರೆ ಪಕ್ಷಗಳ ಆಚೆಗೆ ರಾಜಕಾರಣಿಗಳ ನಡುವೆ ಸ್ನೇಹ ಉಳಿಯುವುದು ಕಷ್ಟ ಎನ್ನಿಸುತ್ತಿದೆ. ಆದರೆ ರೇವಣ್ಣ ಅತ್ಯಂತ ಸ್ನೇಹಮಯಿ ನಾಯಕ ಎಂದು ಹೇಳಿದ್ದಾರೆ.

ಕಾಂಗ್ರೆಸ್ ಪಕ್ಷವನ್ನು ಮತ್ತೆ ಪ್ರಬಲವಾಗಿ ಕಟ್ಟಲು ವಿದ್ಯಾರ್ಥಿ ಕಾಂಗ್ರೆಸ್ ಮತ್ತು ಯುವ ಕಾಂಗ್ರೆಸ್​ಅನ್ನು ಸಂಘಟಿಸಬೇಕಿದೆ. ರೇವಣ್ಣನವರಿಗ ರಾಜಕೀಯವಾಗಿ ಸಿಕ್ಕ ಬೇಕಾದಷ್ಟು ಸ್ಥಾನ ಮಾನ ಲಭಿಸಿಲ್ಲ. ಮುಂದಿನ ದಿನಗಳಲ್ಲಿ ಅದು ಲಭಿಸಲಿ ಎಂದು ರೇವಣ್ಣನವರ ಕಾಲೇಜು ದಿನಗಳ ಗೆಳೆಯ ಮಾಜಿ ಸಚಿವ, ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ.

ಅಭಿನಂದನಾ ಗ್ರಂಥದ ಕುರಿತು ಮಾತನಾಡಿ, ರೇವಣ್ಣನವರ ಅಭಿನಂದನಾ ಗ್ರಂಥ ಕೇವಲ ರೇವಣ್ಣನವರ ಕುರಿತು ಮಾಹಿತಿ ಹೊಂದಿಲ್ಲ, ಅದು ರಾಜ್ಯದ ಜನ ಓದಲೇ ಬೇಕಾದ ಅತ್ಯುಪಯುಕ್ತ ಮಾಹಿತಿಗಳನ್ನು ಹೊಂದಿದೆ. ಈ ಸಂದರ್ಭದಲ್ಲಿ ಬ್ರಾಹ್ಮಣ ಯುವತಿಯರು ಬೇರೆ ಜಾತಿಯ ಹುಡುಗರನ್ನು ಮದುವೆಯಾಗದಂತೆ ನೀಡಿರುವ ಕರೆಯನ್ನು ಖಂಡಿಸಿದರು. ಅಂತಹ ಮದುವೆಗಳು ಪ್ರೀತಿಯಿಂದ ಆಗುತ್ತವೆ. ಅದನ್ನು ಯಾರಿಂದಲೂ ತಡೆಯುವುದು ಅಸಾಧ್ಯ ಎಂದು ಮಾಜಿ ಸಚಿವೆ ಬಿ.ಟಿ. ಲಲಿತಾ ನಾಯಕ್ ಹೇಳಿದ್ದಾರೆ.

ರಾಜಕಾರಣ ಮುಂದೆ ಬರಲು ಜಾತಿ ಬೆಂಬಲಕ್ಕಿಂತ ಜನರೊಂದಿಗಿನ ಉತ್ತಮ ಒಡನಾಟ ಅಗತ್ಯ. ಅನೇಕ ಜನ ಅತ್ಯುತ್ತಮ ಸಾಮರ್ಥ್ಯ ಹೊಂದಿದ್ದರೂ ಅವರು ರಾಜಕಾರಣದಿಂದ ಅಧಿಕಾರ ಪಡೆಯಲಾಗಿಲ್ಲ. ಆದರೆ, ನಾನು ಅಧಿಕಾರ ಅನುಭವಿಸುವಂತಾಗಿದ್ದರ ಬಗ್ಗೆ ಸಮಾಧಾನ ಇದೆ. ನಾನು ಎಷ್ಟೇ ಬೆಳೆದರೂ ನಾನು ಮಾಗಡಿ ರೇವಣ್ಣನೆ ಹೊರೆತು ಬೆಂಗಳೂರಿನ ರೇವಣ್ಣ ಅಲ್ಲ ಎಂದು ಎಚ್.ಎಂ.ರೇವಣ್ಣ ಖುಷಿಯನ್ನು ಹಂಚಿಕೊಂಡರು.

ಇದನ್ನೂ ಓದಿ: ಗುರುವಿಗೆ ತಿರುಮಂತ್ರ ಹಾಕಿ ಜೆಡಿಎಸ್‌ ಬಿಟ್ಟ ಸಿದ್ದರಾಮಯ್ಯ ತಿಂಗಳಲ್ಲಿ ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡ್ತಾರೆ -ನಳಿನ್ ಕುಮಾರ್ ಕಟೀಲ್