ಎರಡು ವರ್ಷದಿಂದ ಯುಡಿಐಡಿ ಕಾರ್ಡ್ಗೆ ಅಲೆದಾಟ: ಕಾರ್ಡ್ ಮಂಜೂರಿಗೆ ಉತ್ತರ ಕನ್ನಡ ವಿಕಲಚೇತನರ ಆಗ್ರಹ
ಜಿಲ್ಲೆಯಲ್ಲಿ ಸುಮಾರು 16 ಸಾವಿರಕ್ಕೂ ಹೆಚ್ಚು ಜನ ಅಂಗವಿಕಲರು ಯುಡಿಐಡಿ ಅರ್ಜಿಯನ್ನು ಸಲ್ಲಿಸಿದ್ದರು. ತಮಗೆ ನಡೆಯಲು ಕಷ್ಟವಾದರೂ ಆಯಾ ಸರ್ಕಾರಿ ಕಚೇರಿಗೆ ತೆರಳಿ ಅರ್ಜಿಯನ್ನು ಸಲ್ಲಿಸಿದರು. ಆದರೆ ಇನ್ನು ಈ ಯುಡಿಐಡಿ ಕಾರ್ಡ್ ಸಿಗದೆ ಹಲವು ಸವಲತ್ತುಗಳು ಕೈತಪ್ಪಿ ಹೋಗುತ್ತಿವೆ.
ಕಾರವಾರ: ಕಳೆದ ಎರಡು ವರ್ಷದಿಂದ ಯುಡಿಐಡಿ ಕಾರ್ಡ್ಗಾಗಿ (ಯುನಿಕ್ ಡಿಸೇಬಲ್ಸ್ ಐಡೆಂಟಿಟಿ ಕಾರ್ಡ್) ಅಂಗವಿಕಲರು ಅಲೆದರೂ ಈವರೆಗೂ ಕಾರ್ಡ್ ಮಂಜೂರಾಗದೇ ಅಂಗವಿಕಲರಿಗೆ ಸಿಗಬೇಕಾದ ಸವಲತ್ತು ಸಿಗುತ್ತಿಲ್ಲ. ಇದನ್ನೇ ನಂಬಿ ಬದುಕು ಕಟ್ಟಿಕೊಂಡಿರುವ ವಿಕಲಚೇತನರು ಸರ್ಕಾರದಿಂದ ತ್ರಿಚಕ್ರ ವಾಹನ ಸಿಕ್ಕರೂ ಅದಕ್ಕೆ ಪೆಟ್ರೋಲ್ ಹಾಕಲಾಗದೆ ಮತ್ತದೇ ಹಳೇ ಬೈಸಿಕಲ್ಗಳನ್ನೇ ಬಳಸುವಂತಾಗಿದ್ದು, ಕಚೇರಿಯಿಂದ ಕಚೇರಿಗೆ ಅಲೆಯುವಂತಾಗಿದೆ.
ಸೈಕಲ್ನ ಕೈ ಮೂಲಕ ತುಳಿದು ಸಂಚಾರ ರಾಜ್ಯದಲ್ಲಿ ಸುಗಮ ಆಡಳಿತಕ್ಕೆ ಡಿಜಿಟಲ್ ತಂತ್ರಜ್ಞಾನ ಅಳವಡಿಸಿಕೊಂಡಿದ್ದರೂ, ಉತ್ತರ ಕನ್ನಡ ಜಿಲ್ಲೆಯಲ್ಲಿ ಮಾತ್ರ ತಾಂತ್ರಿಕ ಸಮಸ್ಯೆಯಿಂದ ಎಲ್ಲವೂ ಅಯೋಮಯ. ಸರ್ಕಾರ ತರಾತುರಿಯಲ್ಲಿ ಅಂಗವಿಕಲರ ಯುಡಿಐಡಿ ಅರ್ಜಿಯನ್ನು ಸ್ವೀಕರಿಸಿತ್ತು. ಜಿಲ್ಲೆಯಲ್ಲಿ ಸುಮಾರು 16 ಸಾವಿರಕ್ಕೂ ಹೆಚ್ಚು ಜನ ಅಂಗವಿಕಲರು ಯುಡಿಐಡಿ ಅರ್ಜಿಯನ್ನು ಸಲ್ಲಿಸಿದ್ದರು. ತಮಗೆ ನಡೆಯಲು ಕಷ್ಟವಾದರೂ ಆಯಾ ಸರ್ಕಾರಿ ಕಚೇರಿಗೆ ತೆರಳಿ ಅರ್ಜಿಯನ್ನು ಸಲ್ಲಿಸಿದರು. ಆದರೆ ಇನ್ನು ಈ ಯುಡಿಐಡಿ ಕಾರ್ಡ್ ಸಿಗದೆ ಹಲವು ಸವಲತ್ತುಗಳು ಕೈತಪ್ಪಿ ಹೋಗುತ್ತಿವೆ. ಜೊತೆಗೆ ಹಲವು ಅಂಗವಿಕಲರಿಗೆ ಪ್ರತಿ ತಿಂಗಳ ಮಾಸಾಶನ ದೊರೆಯದೇ ಸರ್ಕಾರ ಕೊಟ್ಟ ತ್ರಿಚಕ್ರ ವಾಹನಕ್ಕೆ ಪೆಟ್ರೋಲ್ ಹಾಕಿಸಲಾಗದೇ ಹಳೆಯ ಸೈಕಲ್ನ ಕೈ ಮೂಲಕ ತುಳಿದು ಸಂಚರಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಇದರಿಂದ ತಕ್ಷಣ ಯುಡಿಐಡಿ ಕಾರ್ಡ್ ಮಂಜೂರು ಮಾಡಬೇಕೆಂದು ಆಗ್ರಹಿಸುತ್ತಿದ್ದಾರೆ.
ಸರ್ಕಾರದ ಸವಲತ್ತುಗಳು ಅಂಗವಿಕಲರಿಗೆ ಸಿಗಬೇಕು ಎಂದರೇ ಯುಡಿಐಡಿ ಕಾರ್ಡ್ ಕಡ್ಡಾಯ. ಆದರೆ ಜಿಲ್ಲಾಡಳಿತ ಮತ್ತು ಸರ್ಕಾರದ ಕೆಲವು ತಾಂತ್ರಿಕ ನ್ಯೂನತೆಯಿಂದಾಗಿ ಸಾವಿರಾರು ವಿಕಲಚೇತನರು ಕಾರ್ಡ್ ಸಿಗದೇ ಸಂಕಷ್ಟಕ್ಕೊಳಗಾಗಿದ್ದಾರೆ. ಇನ್ನು ಈ ಬಗ್ಗೆ ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿಯಾದ ರಾಘವೇಂದ್ರರವರ ಬಳಿ ಕೇಳಿದರೆ ಈಗಾಗಲೇ ಒಂಬತ್ತು ಸಾವಿರ ಜನರಿಗೆ ಕಾರ್ಡ್ ವಿತರಿಸಲಾಗಿದೆ. ಸುಮಾರು 8,500 ಕಾರ್ಡ್ನ ಇನ್ನೂ ನೀಡಬೇಕಾಗಿದೆ. ಅದಕ್ಕಾಗಿ ತಾಲೂಕು ಮಟ್ಟದಲ್ಲಿ ಕ್ಯಾಂಪ್ ಕೂಡ ಮಾಡುತ್ತಿದ್ದೇವೆ. ಆರೋಗ್ಯ ಇಲಾಖೆ ಸರ್ಟಿಫಿಕೇಟ್ ಸಿಕ್ಕ ನಂತರ ಸೇವಾಸಿಂಧು ಮೂಲಕ ಅಪ್ಲೇ ಮಾಡಿದರೆ ಎಲ್ಲವೂ ಸುಲಭ. ಏನಾದರೂ ತಾಂತ್ರಿಕ ಸಮಸ್ಯೆ ಇದ್ದರೆ ನೇರವಾಗಿ ತಮ್ಮ ಬಳಿ ಬರಬಹುದು ಎಂದು ತಿಳಿಸಿದರು.
ಒಂದೆಡೆ ದುಬಾರಿ ದುನಿಯಾ. ಮತ್ತೊಂದೆಡೆ ಕೈಗೆ ಸಿಗದ ಮಾಸಾಶನ. ಮಾತ್ರವಲ್ಲದೇ ಮನೆಯಲ್ಲಿಯೇ ಸರಿಯಾಗಿ ನಡೆದಾಡಲು ಸಾಧ್ಯವಾಗದ ದೈಹಿಕ, ಮಾನಸಿಕ ನ್ಯೂನ್ಯತೆಯಿರುವ ವಿಕಲಚೇತನರು ಜಿಲ್ಲೆಯ ಕಚೇರಿಗೆ ಅಲೆದಾಡುವಂತಾಗಿದ್ದು, ಅಧಿಕಾರಿಗಳು ಇತ್ತ ಗಮನಿಸಿ ಯುಡಿಐಡಿ ಕಾರ್ಡ್ ಮಾಡಿಕೊಟ್ಟು ಇವರ ನೋವಿಗೆ ಸ್ಪಂದಿಸಬೇಕಾಗಿದೆ.
ಇದನ್ನೂ ಓದಿ
ವಿಕಲಚೇತನನಾದ್ರೂ ಕೃಷಿ ಕಾಯಕದಲ್ಲಿ ತೊಡಗಿ ಇತರರಿಗೆ ಮಾದರಿ.. ಇಲ್ಲಿದೆ ನೋಡಿ ವಿಶೇಷ ರೈತನ ಕೃಷಿ ಬದುಕು
ದೇವರು ಕೊಟ್ಟರು ಪೂಜಾರಿ ಕೊಡಲಿಲ್ಲ.. ಧೂಳು ತಿನ್ನುತ್ತಾ, ಗೋದಾಮಿನಲ್ಲೇ ಬಿದ್ದಿವೆ ಅಂಗವಿಕಲರಿಗೆ ಸೇರಬೇಕಾದ ಬೈಕ್‌ಗಳು
Published On - 12:46 pm, Thu, 11 March 21