ಮಧು ಬಂಗಾರಪ್ಪ ಕಾಂಗ್ರೆಸ್​ ತೆಕ್ಕೆಗೆ, ಮುಂದಿನ ಚುನಾವಣೆಯಲ್ಲಿ ಅಣ್ಣ ಕುಮಾರ್​ಗೆ ​ಸವಾಲು ನೀಡಲು ತಯಾರು

ಮಧು ಬಂಗಾರಪ್ಪ ಕಾಂಗ್ರೆಸ್​ ಸೇರಿದ್ದಾರೆ. ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರಿಗೆ ಹೂಗುಚ್ಛ ನೀಡಿ ಸ್ವಾಗತಿಸಿದ್ದಾರೆ. ಮುಂದಿನ ಚುನಾವಣೆಯಲ್ಲಿ ಅಣ್ಣ ಕುಮಾರ್​ ಅವರನ್ನು ಎದುರಿಸಲು ತಯಾರಿ ಮಾಡುತ್ತಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಮಧು ಬಂಗಾರಪ್ಪ ಕಾಂಗ್ರೆಸ್​ ತೆಕ್ಕೆಗೆ, ಮುಂದಿನ ಚುನಾವಣೆಯಲ್ಲಿ ಅಣ್ಣ ಕುಮಾರ್​ಗೆ ​ಸವಾಲು ನೀಡಲು ತಯಾರು
ಮಧು ಬಂಗಾರಪ್ಪರನ್ನು ಕಾಂಗ್ರೆಸ್​ಗೆ ಬರಮಾಡಿಕೊಂಡ ವಿಪಕ್ಷ ನಾಯಕ ಸಿದ್ದರಾಮಯ್ಯ

ದಿವಂಗತ ಎಸ್. ಬಂಗಾರಪ್ಪ ಅವರ ಕಿರಿಯ ಪುತ್ರ ಮತ್ತು ಮಾಜಿ ಶಾಸಕ ಮಧು ಬಂಗಾರಪ್ಪ ಕಾಂಗ್ರೆಸ್ ಸೇರಿದ್ದಾರೆ. ಈಗಾಗಲೇ ಕರ್ನಾಟಕ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿ ಮಾಡಿ ಚರ್ಚಿಸಿದ್ದ ಮಧು ಬಂಗಾರಪ್ಪ ಇಂದು ಸಿದ್ದರಾಮಯ್ಯ ಅವರ ಮನೆಯಲ್ಲಿ ಕಾಂಗ್ರೆಸ್ ಸೇರಿದರು. ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಹೂಗುಚ್ಛ ನೀಡಿ ಮಧು ಬಂಗಾರಪ್ಪ ಅವರನ್ನು ಪಕ್ಷಕ್ಕೆ ಸ್ವಾಗತಿಸಿದರು. ಸಿದ್ದರಾಮಯ್ಯ ಅವರ ಮನೆಯಲ್ಲಿ ಮಾತನಾಡಿದ ಮಧು ಬಂಗಾರಪ್ಪ ತಾನು ಕಾಂಗ್ರೆಸ್‌ಗೆ ಸೇರಲು ಅಧಿಕೃತವಾಗಿ ತೀರ್ಮಾನಿಸಿದ್ದೇನೆ ಎಂದು ಘೋಷಿಸಿದರು. ಇಂದಿನಿಂದಲೇ ಕೆಲಸ ಮಾಡಲು ಸಿದ್ದರಾಮಯ್ಯ ಹೇಳಿದ್ದಾರೆ. ನಾಳೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಭೇಟಿಯಾಗ್ತೇನೆ ಎಂದು ಹೇಳಿದರು.

ಹೆಚ್.ಡಿ.ಕುಮಾರಸ್ವಾಮಿ ಆರೋಪದ ಬಗ್ಗೆ ಮಾತನಾಡಲ್ಲ, ನನಗೆ ಹೆಚ್‌ಡಿಕೆಯ ಬಗ್ಗೆ ವೈಯಕ್ತಿಕವಾಗಿ ಗೌರವ ಇದೆ. ಈ ಸಂದರ್ಭದಲ್ಲಿ ದೇಶಕ್ಕೆ ಕಾಂಗ್ರೆಸ್ ಪಕ್ಷದ ಅಗತ್ಯತೆ ಇದೆ. ನನ್ನ, ಕುಮಾರಸ್ವಾಮಿ ನಡುವೆ ವೈಯಕ್ತಿಕವಾಗಿ ಏನೂ ಇಲ್ಲ. ಇವತ್ತು ನಾನು ಮನಸಾರೆ ಕಾಂಗ್ರೆಸ್ ಪಕ್ಷಕ್ಕೆ ಸೇರುತ್ತಿದ್ದೇನೆ, ಎಂದು ಅವರು ಹೇಳಿದರು. ನಾಳೆ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಭೇಟಿ ಆಗ್ತಿನಿ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸುತ್ತ ಹೇಳಿದರು. ಜೆಡಿಎಸ್ ಪಕ್ಷಕ್ಕೆ ದ್ರೋಹ ಮಾಡಿದ್ದಾರೆ ಎಂಬ ಹೆಚ್ ಡಿ ಕುಮಾರಸ್ವಾಮಿ ಆರೋಪದ ವಿಚಾರ ಕುರಿತಾಗಿ ಪ್ರತಿಕ್ರಿಯಿಸಿದ ಅವರು, ನಾನು ಆ ಬಗ್ಗೆ ಏನು ಹೇಳೋದಿಲ್ಲ. ನನಗೆ ಅವರ ಬಗ್ಗೆ ವೈಯಕ್ತಿಕ ಗೌರವ ಇದೆ. ಈ ಸಂದರ್ಭದಲ್ಲಿ ದೇಶಕ್ಕೆ ಕಾಂಗ್ರೆಸ್ ಅಗತ್ಯತೆ ಇದೆ. ಹಾಗಾಗಿ ಈ ಪಕ್ಷ ಸೇರುತ್ತಿದ್ದೇನೆ ಎಂದರು.

ಮಧು ಬಂಗಾರಪ್ಪ ಹಿನ್ನೆಲೆ
ಬಂಗಾರಪ್ಪ ಅವರನ್ನು ಕೊನೆಯ ಕಾಲದಲ್ಲಿ ನೋಡಿಕೊಂಡಿದ್ದ ಮಧು ಅವರು ತಾವು ಮಾತ್ರ ಬಂಗಾರಪ್ಪ ಅವರ ಅಧಿಕೃತ ವಾರಸುದಾರ ಎಂದು ಈಗಾಗಲೇ ಹೇಳಿಕೊಂಡಿದ್ದಾರೆ. ಅವರ ಹಿರಿಯಣ್ಣ ಕುಮಾರ್ ಬಂಗಾರಪ್ಪ ಈ ಮೊದಲು ಕಾಂಗ್ರೆಸ್ನಲ್ಲಿದ್ದರು. ಆದರೆ ಬದಲಾದ ಸನ್ನಿವೇಶದಲ್ಲಿ,ಅವರು ಬಿಜೆಪಿಗೆ ಸೇರಿ ಈಗ ಸೊರಬ ಕ್ಷೇತ್ರವನ್ನು ವಿಧಾನಸಭೆಯಲ್ಲಿ ಪ್ರತಿನಿಧಿಸುತ್ತಿದ್ದಾರೆ.

ತಮ್ಮ ವೃತ್ತಿ ಬದುಕನ್ನು ಸಿನಿಮಾ ಕ್ಷೇತ್ರದಿಂದ ಪ್ರಾರಂಭಿಸಿದ ಮಧು, ನಾಲ್ಕು ಚಲನಚಿತ್ರ ಮಾಡಿ, ಒಂದರಲ್ಲಿ ಅಭಿನಯಿಸಿದ್ದಾರೆ. ಒಂದು ಬಾರಿ (2013) ವಿಧಾನಸಭಾ ಸದಸ್ಯರಾಗಿ ಕೂಡ ಕೆಲಸ ಮಾಡಿದ್ದಾರೆ. ಆಗ ಬಿಜೆಪಿ ಮೂರು ಪಾಲಾಗಿತ್ತು. ಅದರ ಲಾಭವನ್ನು ಪಡೆದಿದ್ದ ಜೆಡಿಎಸ್ ಶಿವಮೊಗ್ಗ ಜಿಲ್ಲೆಯೊಂದರಲ್ಲೇ ಮೂರು ಸೀಟು ಗೆದ್ದು ದಾಖಲೆ ನಿರ್ಮಿಸಿತ್ತು. ಈ ಮಧ್ಯೆ, ಮಧು ಬಂಗಾರಪ್ಪ ಅವರು ಜೆಡಿಎಸ್ ಪಕ್ಷದ ರಾಜ್ಯಾಧ್ಯಕ್ಷರಾಗುತ್ತಾರೆ ಎಂಬ ಗುಸುಗುಸು ಇತ್ತು. ಅಧಿಕೃತವಾಗಿ ಯಾವ ಹೇಳಿಕೆ ಪಕ್ಷದಿಂದ ಅಥವಾ ಮಧು ಅವರಿಂದ ಬಂದಿರದಿದ್ದರೂ, ಅವರು ವಿಧಾನ ಪರಿಷತ್ ಸದಸ್ಯರಾಗಲು ಪ್ರಯತ್ನಿಸಿದ್ದರು. ಆದರೆ, ಜೆಡಿಎಸ್ ಪಕ್ಷ ಆ ಕೋರಿಕೆಯನ್ನು ನಯವಾಗಿ ತಿರಸ್ಕರಿಸಿತ್ತು. ಅಂದಿನಿಂದ ಮಧು ಬಂಗಾರಪ್ಪ ಮತ್ತು ಜೆಡಿಎಸ್ ಪಕ್ಷದ ಸಂಬಂಧ ಹಳಸಿತ್ತು. ಕೊನೆಗೆ ಅಲ್ಲಿ ಭವಿಷ್ಯ ಇಲ್ಲ ಎನ್ನುವುದು ಹೆಚ್ಚು ಕಡಿಮೆ ಗೊತ್ತಾದ ಮೇಲೆ ಅವರು ಕಾಂಗ್ರೆಸ್​ನತ್ತ ಮುಖ ಮಾಡಿದ್ದಾರೆ.

ಮುಂದಿನ ಚುನಾವಣೆಯಲ್ಲಿ ಸೊರಬದಿಂದ, ಬಿಜೆಪಿ ಶಾಸಕ ಮತ್ತು ಅಣ್ಣ ಕುಮಾರ್​ ಅವರ ಎದುರು ಸ್ಪರ್ಧಿಸಲು ಸನ್ನದ್ಧರಾಗುತ್ತಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

Click on your DTH Provider to Add TV9 Kannada