ಬಸ್​ ನಿಲ್ಲಿಸಿ ನಮಾಜ್ ಮಾಡಿದ್ದ ಚಾಲಕ ಸಸ್ಪೆಂಡ್: ಕಾರ್ಮಿಕರ ದಿನಾಚರಣೆಯಂದೇ ಗೇಟ್​​ಪಾಸ್

ಕರ್ತವ್ಯದ ವೇಳೆ ಬಸ್‌ ನಿಲ್ಲಿಸಿ ನಮಾಜ್‌ ಮಾಡಿದ ಚಾಲಕನ ವಿಡಿಯೋ ಭಾರೀ ವೈರಲ್ ಆಗಿದ್ದು, ಡ್ರೈವರ್​ನ ಈ ನಡೆಗೆ ಸಾಮಾಜಿಕ ಜಾಲತಾಣಗಳಲ್ಲಿ ಪರ ವಿರೋಧದ ಚರ್ಚೆಗಳು ನಡೆಯುತ್ತಿವೆ. ಹೀಗಾಗಿ ಈ ಸಂಬಂಧ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ತನಿಖೆಗೆ ಸೂಚಿಸಿದ್ದಾರೆ. ಇದರ ಬೆನ್ನಲ್ಲೇ ಕಾರ್ಮಿಕರ ದಿನಾಚರಣೆಯಂದೇ ಡ್ರೈವರ್​ಗೆ ಹುದ್ದೆಯಿಂದ ಗೇಟ್ ಪಾಸ್ ನೀಡಲಾಗಿದೆ.

ಬಸ್​ ನಿಲ್ಲಿಸಿ ನಮಾಜ್ ಮಾಡಿದ್ದ ಚಾಲಕ ಸಸ್ಪೆಂಡ್: ಕಾರ್ಮಿಕರ ದಿನಾಚರಣೆಯಂದೇ ಗೇಟ್​​ಪಾಸ್
Ksrtc Driver Namaz

Updated on: May 01, 2025 | 3:39 PM

ಹಾವೇರಿ, (ಮೇ 01): ಕರ್ತವ್ಯದ ವೇಳೆಯಲ್ಲೇ ಮಾರ್ಗಮಧ್ಯ ಬಸ್ (Bus) ನಿಲ್ಲಿಸಿ ನಮಾಜ್ (Namaz) ಮಾಡಿದ್ದ ಚಾಲಕ ಎ.ಆರ್.ಮುಲ್ಲಾನನ್ನು ಅಮಾನತು (Suspend) ಮಾಡಲಾಗಿದೆ. ಹಾನಗಲ್ (Hangal) ಘಟಕದ ಚಾಲಕ ಎ.ಆರ್.ಮುಲ್ಲಾ (MR Mulla) ಕಾರ್ಯನಿರತ ವೇಳೆ ರಸ್ತೆ ಪಕ್ಕ ಬಸ್ ನಿಲ್ಲಿಸಿ ನಮಾಜ್ ಮಾಡಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿತ್ತು. ಇದರ ಬೆನ್ನಲ್ಲೇ ಇದೀಗ ಕರ್ತವ್ಯಲೋಪ ಆರೋಪದಲ್ಲಿ ಚಾಲಕ ಎ.ಆರ್.ಮುಲ್ಲಾನನ್ನು ಅಮಾನತುಗೊಳಿಸಿ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಶಿಸ್ತುಪಾಲನೆ ಅಧಿಕಾರಿ ಇಂದು (ಮೇ 01) ಆದೇಶ ಹೊರಡಿಸಿದ್ದಾರೆ. ವಿಚಾರಣೆ ಮುಗಿಯುವವರೆಗೂ ಅಮಾನತು ಮಾಡಿ ಆದೇಶಿಸಿದ್ದು, ಘಟನೆ ಬಗ್ಗೆ ಸಂಪೂರ್ಣ ವಿವರಣೆ ನೀಡುವಂತೆ ಸೂಚನೆ ನೀಡಿದ್ದಾರೆ.

ನಮಾಜ್ ಮಾಡುವ ವಿಡಿಯೋ ವೈರಲ್

ಏಪ್ರಿಲ್​ 29ರಂದು ಹುಬ್ಬಳ್ಳಿಯಿಂದ ಹಾವೇರಿ ನಡುವಿನ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಬಸ್‌ನ ಚಾಲಕ ಕಂ ನಿರ್ವಾಹಕ ಮುಲ್ಲಾ ಮಾರ್ಗಮಧ್ಯೆ ಬಸ್‌ ನಿಲ್ಲಿಸಿ ನಮಾಜ್‌ ಮಾಡಿದ್ದರು. ನಮಾಜ್ ಮಾಡುತ್ತಿರುವ ವಿಡಿಯೋವನ್ನು  ಪ್ರಯಾಣಿಕನೋರ್ವ ಸೆರೆಹಿಡಿದಿದ್ದ, ಬಳಿಕ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಫುಲ್ ವೈರಲ್ ಆಗಿದ್ದು, ಡ್ರೈವರ್​ ಮುಲ್ಲಾ ನಡೆಗೆ ವ್ಯಾಪಕ ಆಕ್ರೋಶಗಳು ವ್ಯಕ್ತವಾಗಿದ್ದವು.

ಇದನ್ನೂ ಓದಿ: ಬಸ್​ ನಿಲ್ಲಿಸಿ ನಮಾಜ್​ ಮಾಡಿದ ಕೆಎಸ್​ಆರ್​ಟಿಸಿ ಚಾಲಕ, ವಿಡಿಯೋ ವೈರಲ್

ಈ ಸಂಬಂಧ ವಿಪಕ್ಷ ನಾಯಕ ಆರ್.ಅಶೋಕ್​ ಸರ್ಕಾರದ ವಿರುದ್ದ ಕಿಡಿಕಾರಿದ್ದರು. ಸಿದ್ದರಾಮಯ್ಯರ ಓಲೈಕೆಯ ಪರಿಣಾಮವಾಗಿ ಬಸ್​ನಲ್ಲಿ ನಮಾಜ್ ಮಾಡಿದ್ದಾನೆ ಎಂದು ಮುಖ್ಯಮಂತ್ರಿ ವಿರುದ್ಧ ವಾಗ್ದಾಳಿ ನಡೆಸಿದ್ದರು. ಅಲ್ಲದೇ ಸಾಮಾಜಿಕ ಜಾಲತಾಣಗಳಲ್ಲಿ ಪರ-ವಿರೋಧದ ಚರ್ಚೆಗಳು ಆಗುತ್ತಲೇ ಇವೆ. ಕೆಲವರು ಮುಲ್ಲಾ ನಡೆಯನ್ನು ಸರಿ ಎನ್ನುತ್ತಿದ್ದರೆ, ಇನ್ನೂ ಕೆಲವರು ವಿರೋಧ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ
ಬಸ್​ ನಿಲ್ಲಿಸಿ ನಮಾಜ್​ ಮಾಡಿದ NWKRTC ಚಾಲಕನ ವಿರುದ್ಧ ತನಿಖೆಗೆ ಆದೇಶ
ಬಸ್​ ನಿಲ್ಲಿಸಿ ನಮಾಜ್​ ಮಾಡಿದ ಕೆಎಸ್​ಆರ್​ಟಿಸಿ ಚಾಲಕ, ವಿಡಿಯೋ ವೈರಲ್
ಕಂಡಕ್ಟರ್​ನಿಂದ ಯುವತಿಗೆ ಲೈಂಗಿಕ ಕಿರುಕುಳ: ವಿಡಿಯೋ ವೈರಲ್

ಬಸ್​ಗಳಲ್ಲಿ ಹಿಂದೂ ಫೋಟೋಗಳನ್ನು ಹಾಕುತ್ತಾರೆ. ದೇವಸ್ಥಾನ ಬಂದಾಗ ಬಸ್​​ನಲ್ಲಿದ್ದುಕೊಂಡೇ ಕೈಮುಗಿಯುತ್ತಾರೆ. ದೇವನೊಬ್ಬ ನಾಮ ಹಲವು ಎಂದು ಕೆಲವರು ವಾದಿಸಿದ್ದಾರೆ.

ತನಿಖೆಗೆ ಸೂಚಿಸಿದ್ದ ಸಾರಿಗೆ ಸಚಿವ

ಏ.29ರಂದು ಹುಬ್ಬಳ್ಳಿಯಿಂದ ಹಾವೇರಿ ನಡುವಿನ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಬಸ್‌ನ ಚಾಲಕ ಕಂ  ನಿರ್ವಾಹಕ ಮಾರ್ಗಮಧ್ಯೆ ಬಸ್‌ ನಿಲ್ಲಿಸಿ ನಮಾಜ್‌ ಮಾಡಿರುವ ಕುರಿತು ವರದಿಯಾಗಿದೆ. ಪ್ರತಿ ವ್ಯಕ್ತಿಗೂ ಧಾರ್ಮಿಕ ಸ್ವಾತಂತ್ರ್ಯದ ಹಕ್ಕಿದೆ. ಆದರೆ, ಸಾರ್ವಜನಿಕ ಸೇವೆಯಲ್ಲಿರುವವರು ಕರ್ತವ್ಯ ವೇಳೆ ಹೊರತುಪಡಿಸಿ ತಮ್ಮ ಧರ್ಮವನ್ನು ಪಾಲಿಸಬಹುದಾಗಿದೆ. ಹೀಗಾಗಿ ಕರ್ತವ್ಯದ ಸಮಯದಲ್ಲಿ ಮಾರ್ಗ ಮಧ್ಯೆ ಬಸ್‌ ನಿಲ್ಲಿಸಿ ನಮಾಜ್‌ ಆಕ್ಷೇಪಾರ್ಹ. ಈ ವಿಡಿಯೋಗೆ ಸಂಬಂಧಿಸಿ ಸೂಕ್ತ ತನಿಖೆ ನಡೆಸಿ, ಸಿಬ್ಬಂದಿ ತಪ್ಪು ಮಾಡಿದ್ದರೆ ಶಿಸ್ತು ಕ್ರಮ ಕೈಗೊಳ್ಳುವಂತೆ ರಾಮಲಿಂಗಾರೆಡ್ಡಿ ಆದೇಶಿಸಿದ್ದರು. ಅಲ್ಲದೆ, ಇನ್ನು ಮುಂದೆ ಈ ರೀತಿಯ ಘಟನೆ ಮರುಕಳಿಸದಂತೆ ಎಚ್ಚರವಹಿಸಬೇಕು ಎಂದೂ ಸೂಚಿಸಿದ್ದರು.

ಇದರ ಬೆನ್ನಲ್ಲೇ ಇಂದು ಕಾರ್ಮಿಕರ ದಿನಾಚರಣೆಯಂದೇ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಶಿಸ್ತುಪಾಲನೆ ಅಧಿಕಾರಿ ಡ್ರೈವರ್​ ಮುಲ್ಲಾನನ್ನು ಕರ್ತವ್ಯದಿಂದ ಸಸ್ಪಂಡ್ ಮಾಡಿ ಆದೇಶ ಹೊರಡಿಸಿದ್ದಾರೆ. ಅಲ್ಲದೇ ಘಟನೆ ಬಗ್ಗೆ ಸಂಪೂರ್ಣ ವಿವರಣೆ ನೀಡುವಂತೆ ತಿಳಿಸಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:19 pm, Thu, 1 May 25