ಹಾಸನ: ಜಿಲ್ಲೆಯಲ್ಲಿ ಮತ್ತೊಂದು ವಾರ ಲಾಕ್‌ಡೌನ್ ವಿಸ್ತರಣೆ ಮಾಡಿ ಜಿಲ್ಲಾಧಿಕಾರಿ ಆರ್. ಗಿರೀಶ್ ಆದೇಶ ಹೊರಡಿಸಿದ್ದಾರೆ. ಜುಲೈ 12 ರವರೆಗೂ ಲಾಕ್‌ಡೌನ್ ವಿಸ್ತರಿಸಿ ಜಿಲ್ಲಾಧಿಕಾರಿ ಆದೇಶ ನೀಡಿದ್ದಾರೆ. ವಾರದಲ್ಲಿ 3 ದಿನ ಮಾತ್ರ ಅಗತ್ಯ ವಸ್ತು ಖರೀದಿಗೆ ಅವಕಾಶ ನೀಡಲಾಗಿದೆ. ಬೆಳಗ್ಗೆ 6 ರಿಂದ ಮಧ್ಯಾಹ್ನ 2ರವರೆಗೆ ವ್ಯಾಪಾರ ವಹಿವಾಟು ನಡೆಸಲು ಅನುಮತಿ ನೀಡಲಾಗಿದೆ. ಸೋಮವಾರ, ಬುಧವಾರ, ಶುಕ್ರವಾರ ಖರೀದಿಗೆ ಅವಕಾಶ ಕೊಡಲಾಗಿದೆ.
ಉಳಿದಂತೆ ವಾರದಲ್ಲಿ ನಾಲ್ಕು ದಿನ ಸಂಪೂರ್ಣ ಲಾಕ್‌ಡೌನ್ ಅನ್ವಯವಾಗಲಿದೆ. ಧಾರ್ಮಿಕ ಕೇಂದ್ರ ತೆರೆಯದಿರಲು ಜಿಲ್ಲಾಡಳಿತ ನಿರ್ಧಾರ ಕೈಗೊಂಡಿದೆ. ಮದುವೆಗಳಲ್ಲಿ 40 ಜನ ಮಾತ್ರ ಪಾಲ್ಗೊಳ್ಳಲು ಅವಕಾಶ ಕೊಡಲಾಗಿದೆ. ಈ ಆದೇಶ ಹಾಸನ ಜಿಲ್ಲೆಗೆ ಅನ್ವಯವಾಗಲಿದೆ. ಜಿಲ್ಲಾಧಿಕಾರಿಯ ಆದೇಶದಂತೆ ನಿರ್ಬಂಧಗಳನ್ನು ಮುಂದುವರಿಸಲಾಗಿದೆ.
ಜಿಲ್ಲೆಯಲ್ಲಿ ಇನ್ನೂ 5.06 ರಷ್ಟು ಕೊರೊನಾ ಪಾಸಿಟಿವಿಟಿ ರೇಟ್ ಇದೆ. ಈ ಹಿನ್ನೆಲೆಯಲ್ಲಿ ಮತ್ತೊಂದು ವಾರ ಬಿಗಿ ಲಾಕ್‌ಡೌನ್ ಕ್ರಮಕ್ಕೆ ಜಿಲ್ಲಾಡಳಿತ ಮುಂದಾಗಿದೆ. ಅದರಂತೆ, ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಘೋಷಿಸಿರುವ ಅನ್‌ಲಾಕ್ ಮಾರ್ಗಸೂಚಿಯ ನಿರ್ಧಾರಗಳು ಹಾಸನ ಜಿಲ್ಲೆಗೆ ಅನ್ವಯವಾಗುವುದಿಲ್ಲ. ಕೊರೊನಾ ನಿಯಂತ್ರಣಕ್ಕೆ ಮುಂದಿನ ಒಂದು ವಾರವೂ ಕಠಿಣ ಲಾಕ್‌ಡೌನ್ ಇರಲಿದೆ.
ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮೂರನೇ ಹಂತದ ಅನ್‌ಲಾಕ್ ಮಾರ್ಗಸೂಚಿಯನ್ನು ಶನಿವಾರ ಬಿಡುಗಡೆ ಮಾಡಿದ್ದರು. ಅದರಂತೆ, ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಅನ್‌ಲಾಕ್ 3.O ಜಾರಿಗೊಳಿಸಲಾಗುವುದು ಎಂದು ತಿಳಿಸಲಾಗಿತ್ತು. ಜುಲೈ 5ರ ಮುಂಜಾನೆ 5 ಗಂಟೆಯಿಂದ ಅನ್‌ಲಾಕ್ 3.O ಅನ್ವಯವಾಗಲಿದೆ. ಸರ್ಕಾರಿ, ಖಾಸಗಿ ಕಚೇರಿಗಳಲ್ಲಿ ಶೇ.100ರಷ್ಟು ಸಿಬ್ಬಂದಿಗಳೊಂದಿಗೆ ಕಾರ್ಯನಿರ್ವಹಿಸಲು ಅವಕಾಶ ನೀಡಲಾಗಿದೆ. ಎಲ್ಲಾ ಮಾಲ್‌ಗಳು ಓಪನ್ ಮಾಡಲು ಅವಕಾಶ ನೀಡಲಾಗಿತ್ತು. ರಾಜ್ಯದಲ್ಲಿ ದೇವಾಲಯಗಳನ್ನು ತೆರೆಯುವ ಬಗ್ಗೆ ಕೆಲವು ನಿರ್ಬಂಧಗಳೊಂದಿಗೆ ಅವಕಾಶ ನೀಡಲಾಗಿದೆ. ಭಕ್ತರಿಗೆ ದೇವಾಲಯ ಪ್ರವೇಶ, ದೇವರ ದರ್ಶನ ಮತ್ತು ಆರತಿ ಸೇವೆಗಷ್ಟೇ ಅವಕಾಶ ಮಾಡಿಕೊಡಲಾಗಿತ್ತು.
ಆದರೆ, ಹಾಸನ ಜಿಲ್ಲಾಡಳಿತದ ಆದೇಶದ ಪ್ರಕಾರ ಈ ನಿರ್ಧಾರಗಳು ಹಾಸನ ಜಿಲ್ಲೆಗೆ ಅನ್ವಯವಾಗುವುದಿಲ್ಲ. ಇನ್ನೂ ಒಂದು ವಾರಗಳ ಹಾಸನದಲ್ಲಿ ಲಾಕ್‌ಡೌನ್ ನಿಯಮಾವಳಿಗಳು ಜಾರಿಯಲ್ಲಿರಲಿದೆ.
ಇದನ್ನೂ ಓದಿ: ವೇದಿಕೆ ಮೇಲೆ ಕೂರುವ ವಿಚಾರಕ್ಕೆ ಬಿಜೆಪಿ- ಜೆಡಿಎಸ್ ಶಾಸಕರ ಜಟಾಪಟಿ; ಹಾಸನದಲ್ಲಿ ಸಚಿವರ ಮುಂದೆ ಮಾತಿನ ಚಕಮಕಿ
ಸಾವಿನಲ್ಲೂ ಒಂದಾದ ಹಾಸನ ದಂಪತಿ; ಪತ್ನಿ ಮೃತಪಟ್ಟು 15 ನಿಮಿಷದಲ್ಲಿ ಪತಿಗೆ ಹೃದಯಾಘಾತ