ಅಮೃತ ಮಹೋತ್ಸವದ ಅಂಗವಾಗಿ ಭಾರತದ ಗಡಿಗಳ ದರ್ಶನ: 7 ಸಾವಿರ ಕಿಮೀ ಬೃಹತ್ ಬೈಕ್ ಪ್ರವಾಸ, ಹಾಸನದ ಯುವಕರ ವಿಭಿನ್ನ ಸಾಹಸ
ಸ್ವಾತಂತ್ರೋತ್ಸವದ ಅಮೃತ ಮಹೋತ್ಸವದ ಅಂಗವಾಗಿ ಭಾರತದ ಗಡಿಗಳ ದರ್ಶನ ಮಾಡೋ ಮಹದಾಸೆಯೊಂದಿಗೆ ಜಿಲ್ಲೆಯ 15 ಜನರ ಯುವ ಉತ್ಸಾಹಿ ಯುವಕರು ಪ್ರಯಾಣ ಆರಂಭಿಸಿದ್ದಾರೆ.
ಹಾಸನ: ದೇಶಾಭಿಮಾನಕ್ಕಾಗಿ ಹಾಸನದ ಯುವಕರ ತಂಡವೋಂದು ವಿಭಿನ್ನ ಸಾಹಸಕ್ಕೆ ಕೈ ಹಾಕಿದ್ದು ಜನರ ಮೆಚ್ಚುಗೆಗೆ ಪಾತ್ರವಾಗಿದೆ. ದಿ ಆಫ್ ಬೀಟ್ ಎಕ್ಸಪ್ಲೋರರ್ ಹೆಸರಿನ ಬೈಕ್ ರೇಡರ್ಗಳು ಬರೊಬ್ಬರಿ 7 ಸಾವಿರ ಕಿಲೋಮೀಟರ್ ಬೃಹತ್ ಪ್ರವಾಸವನ್ನ ಬೈಕ್ನಲ್ಲಿ ಹೊರಡೋ ಮೂಲಕ ಅಚ್ಚರಿ ಮೂಡಿಸಿದ್ದಾರೆ. ಸ್ವಾತಂತ್ರೋತ್ಸವದ ಅಮೃತ ಮಹೋತ್ಸವದ ಅಂಗವಾಗಿ ಭಾರತದ ಗಡಿಗಳ ದರ್ಶನ ಮಾಡೋ ಮಹದಾಸೆಯೊಂದಿಗೆ ಜಿಲ್ಲೆಯ 15 ಜನರ ಯುವ ಉತ್ಸಾಹಿ ಯುವಕರು ಪ್ರಯಾಣ ಆರಂಭಿಸಿದ್ದಾರೆ. ಜಿಲ್ಲೆಯಲ್ಲಿ ವೈದ್ಯವೃತ್ತಿ, ಇಂಜಿನಿಯರ್, ಬ್ಯುಸಿನೆಸ್ ಹೀಗೆ ಬೇರೆ ಬೇರೆ ಕೆಲಸ ಮಾಡಿಕೊಂಡಿರೋ ಸಾಹಸಿಗರು ಒಟ್ಟುಗೂಡಿ ಇಂದು ಹಾಸನದಿಂದ ಪ್ರಯಾಣ ಆರಂಭಿಸಿದ್ದು 25 ದಿನಗಳು ವಿವಿದ ರಾಜ್ಯಗಳನ್ನು ಸಂಚಾರ ಮಾಡಿ ದೇಶದ ಹೆಮ್ಮೆಯ ತಾಣ, ಜಗತ್ತಿನ ಅತಿ ಎತ್ತರದ ರಸ್ತೆ ಉಮ್ಮನಿಂಗಲ ಪಾಸ್ನಲ್ಲಿ ತ್ರಿವರ್ಣ ಧ್ವಜ ಹಾರಿಸೋ ಸಂಕಲ್ಪದೊಂದಿಗೆ ಪ್ರಯಾಣ ಆರಂಭಿಸಿದ್ದಾರೆ.
ಅಮೃತ ಮಹೊತ್ಸವದ ಸಂಕಲ್ಪ
ಈ ಹಿಂದೆ ದೇಶದ ಹಲವೆಡೆಗೆ ಸಾವಿರಾರು ಕಿಲೋಮೀಟರ್ ಬೈಕ್ ಪ್ರಯಾಣ ಮಾಡಿರೋ ಈ ಉತ್ಸಾಹಿ ತಂಡ ದೇಶಕ್ಕೆ ಸ್ವತಂತ್ರ್ಯ ಸಿಕ್ಕಿ 75 ವರ್ಷಗಳಾಗಿರೋ ಶುಭ ಸಂದರ್ಭದ ಸವಿನೆನಪಿನಲ್ಲಿ ಏನಾದ್ರು ವಿಭಿನ್ನವಾಗಿ ಆಚರಣೆ ಮಾಡಬೇಕು ಎನ್ನೋ ಹಂಬಲ ತುಡಿತ ಕಾಡಿತ್ತು. ಅದಕ್ಕಾಗಿ ಅವರು ಆಯ್ಕೆಮಾಡಿಕೊಂಡ ಮಾರ್ಗ ಈ ಸುದೀರ್ಘ ಯಾತ್ರೆ. ಯಾತ್ರೆ ಹೊರಡಲು ಸಿದ್ದಗೊಂಡ 15 ಜನರ ತಂಡ ಸೇರಿ ಬೃಹತ್ ಪ್ರಯಾಣಕ್ಕೆ ತಯಾರಾಗಿದ್ದರು. ಇಂದು ಮುಂಜಾನೆ ಹಾಸನದ ಎಂಜಿ ರಸ್ತೆಯ ಗಣಪತಿ ದೇವಾಲಯದಲ್ಲಿ ಪೂಜೆ ಸಲ್ಲಿಸಿ ಬೈಕ್ ಏರಿ ಪ್ರಯಾಣ ಮಾಡಿದ ತಂಡ ಇನ್ನು 25 ದಿನಗಳು ಚಕ್ರಗಳ ಮೇಲೆ ತಿರುಗುತ್ತಲೇ ಜಗತ್ತು ದರ್ಶನ ಮಾಡಲಿದ್ದಾರೆ. ಅದ್ರಲ್ಲೂ ದೇಶದ 12 ರಾಜ್ಯಗಳನ್ನ ಹಾದು ಹೋಗಲಿರೋ ಈ ಬೈಕ್ ಯಾತ್ರೆ ಆಂದ್ರ, ತೆಲಂಗಾಣ, ಮದ್ಯಪ್ರದೇಶ್, ಉತ್ತರ ಪ್ರದೇಶ್, ದೆಹಲಿ, ಹಿಮಾಚಲ ಪ್ರದೇಶ ಮೂಲಕ ಸಾಗಿ ಜಮ್ಮು ಕಾಶ್ಮೀರ ತಲುಪಲಿದೆ. ಈ ಮಾರ್ಗಗಳಲ್ಲಿ ವಾಘಾ ಬಾರ್ಡರ್, ಲಡಾಕ್ ಹಾಗೂ ಜಗತ್ತಿನ ಅತಿ ಎತ್ತರದ ರಸ್ತೆ ಸಮುದ್ರಮಟ್ಟಕ್ಕಿಂತ 19300 ಅಡಿ ಎತ್ತರದಲ್ಲಿ ನಮ್ಮ ದೇಶದ ಹೆಮ್ಮೆಯ ಸೈನಿಕರೆ ನಿರ್ಮಾಣ ಮಾಡಿರೋ ರಸ್ತೆಗೆ ತೆರಳಿ ಅಲ್ಲಿ ತ್ರಿವರ್ಣ ಧ್ವಜದ ಜೊತೆಗೆ ಕನ್ನಡ ಧ್ವಜವನ್ನು ಹಾರಿಸಬೇಕು ಎನ್ನೋದು ಈ ತಂಡ ಸಂಕಲ್ಪವಾಗಿದೆ.
ಇದನ್ನೂ ಓದಿ: Death During Sleep: ನಿದ್ರೆ ವೇಳೆ ಸಾವು ಸಂಭವಿಸುವುದನ್ನು ತಡೆಯಬಹುದೇ?
7 ಸಾವಿರ ಕಿಲೋಮೀಟರ್ 25 ದಿನಗಳ ಪ್ರಯಾಣ..
ದೇಶದ ಗಡಿಗಳನ್ನ ನೋಡೋದು ಅಂದ್ರೆ ಅಷ್ಟು ಸುಲಭದ ಮಾತಲ್ಲ. ವಿಮಾನದಲ್ಲಿಯಾದ್ರೆ ಅರಾಮಾಮವಾಗಿ ಹೋಗಿ ಬಂದು ಬಿಡಬಹುದೇನೋ. ಆದ್ರೆ, ಬೈಕ್ ಏರಿ ದೇಶದ ಪಾಕಿಸ್ತಾನ, ಚೀನಾ ಗಡಿಗಳನ್ನ ನೋಡಿ ಬರೋದು ಅಷ್ಟು ಸುಲಭವಲ್ಲ. ಅದಕ್ಕಾಗಿ ದೊಡ್ಡ ಸಾಹಸವನ್ನೇ ಮಾಡಬೇಕು. ಈಗ ಹಾಸನದಿಂದ ಹೊರಟಿರೋ ಈ ಸಾಹಸಿಗರು ಒಂದು ಕಡೆಗೆ ಕನಿಷ್ಟ 7 ಸಾವಿರ ಕಿಲೋಮೀಟರ್ ಬೈಕ್ ರೇಡ್ ಮಾಡಬೇಕು. ಹೀಗೆ ನಿತ್ಯ ಪ್ರಯಾಣ ಮಾಡಿದ್ರೆ ಇವರ ಪ್ರಯಾಣ ಗುರಿ ತಲುಪೋಕೆ 25 ದಿನಗಳು ಬೇಕು ಅದಕ್ಕಾಗಿ ಒಂದು ಟೈಂ ಟೇಬಲ್ ಸಿದ್ದಪಡಿಸಿಕೊಂಡಿರೋ ತಂಡ ನಿತ್ಯವೂ ಕನಿಷ್ಟ 700 ಕಿಲೋಮೀಟರ್ ರೇಡ್ ಮಾಡೋದು. ನಂತರ ರೆಸ್ಟ್ ಮಾಡೋದು ಮರುದಿನ ಮತ್ತೆ ಪ್ರಯಾಣ ಆರಂಭಿಸೋ ಪ್ಲಾನ್ ಮಾಡಿದ್ದಾರೆ. ಮಳೆ, ರಣ ಬಿಸಿಲು, ಸುರಿಯೋ ಹಿಮ ಹೀಗೆ ಡಿಫರೆಂಟ್ ಆದ ಹವಾಮಾನವನ್ನ ಎದುರಿಸಿ ಒಂದು ಹಂತದವರೆಗೆ ದಿನಕ್ಕೆ 700 ಕಿಲೋಮೀಟರ್ ನಂತರ ದಿನಕ್ಕೆ 100 -200 ಕಿಲೋಮೀಟರ್ ಪ್ರಯಾಣ ಮಾಡೋ ದುರ್ಗಮ ಹಾದಿಗಳಲ್ಲಿ ಸಾಗಿ ಕಡೆಗೆ ಗುರಿ ತಲುಪುತ್ತಾರೆ.
ಸುದೀರ್ಘ ಪ್ರಯಾಣಕ್ಕಾಗಿ ವಿಶೇಷ ತಯಾರಿ..
25 ದಿನಗಳ ಬೈಕ್ ರೇಡಿಂಗ್ ಅಂದ್ರೆ ಅಷ್ಟು ಸುಲಭವಲ್ಲ. ಅದಕ್ಕಾಗಿ ಸಖತ್ ತಯಾರಿಕೂಡ ಬೇಕಾಗುತ್ತೆ. ಹೇಳಿ ಕೇಳಿ ದೇಶದ ಉತ್ತರ ಭಾಗದಲ್ಲಿ 40 ಡಿಗ್ರಿಗೂ ಹೆಚ್ಚು ಉಷ್ಣಾಂಶ ಇದ್ದರೆ, ದಕ್ಷಿಣದಲ್ಲಿ ಮಳೆಯ ರೌದ್ರನರ್ತನ ಇದೆ. ಇನ್ನು ಕೆಲವೆಡೆ ಅತಿಯಾದ ಹಿಮರಾಶಿ ಕೂಡ ಇರಲಿದೆ. ಹೀಗೆ ಎಲ್ಲಾ ರೀತಿಯ ಹವಾಮಾನ ಎದುರಿಸಿ ಅರೋಗ್ಯ ಕಾಪಾಡಿಕೊಂಡು ಗುರಿ ತಲುಪಲು ಈ ತಂಡ ಅಗತ್ಯ ತಯಾರಿಮಾಡಿಕೊಂಡಿದೆ. ಯೋಗ, ಪ್ರಾಣಯಾಮ, ವಾಕಿಂಗ್, ರನ್ನಿಂಗ್ ಮೂಲಕ ದೇಹವನ್ನ ಹದಗೊಳಿಸಿಕೊಂಡಿದ್ದಾರೆ. ಎಂತಹ ಪರಿಸ್ಥಿತಿಯಲ್ಲೂ ದೇಹ ದಣಿಯದಂತೆ ಕಾಪಾಡಿಕೊಳ್ಳಲು ಬೇಕಾದ ಆಹಾರ ಕ್ರಮಗಳನ್ನ ಅನುಸರಿಸಲು ತಯಾರಿಮಾಡಿಕೊಂಡಿದೆ. ಸೂಕ್ತ ಮಾರ್ಗದರ್ಶನ, ಟೈಂ ಟೇಬಲ್, ಬೈಕ್ಗಳ ಸಿದ್ದತೆ, ಸುರಕ್ಷತಾ ಡ್ರಸ್ಗಳು, ಹೆಲ್ಮೆಟ್ ಹೀಗೆ ಎಲ್ಲಾ ತಯಾರಿಮಾಡಿಕೊಂಡೇ ಇದೀಗ ಪ್ರಯಾಣ ಆರಂಭಿಸಿದ್ದು 25 ದಿನಗಳ ಬಳೀಕ ಗುರಿ ಮುಟ್ಟಲಿದ್ದಾರೆ.
ತಂತ್ರಜ್ಞಾನ ಬಳಕೆ..
ಇಷ್ಟು ಸುದೀರ್ಘ ಪ್ರಯಾಣ ಮಾಡಲು ಕೇವಲ ಧೈರ್ಯ, ಸಮಯ, ಹಣ ಇಷ್ಟಿದ್ದರೆ ಸಾಲದು ಅದಕ್ಕೆ ಬೇಕಾದ ಅಗತ್ಯ ತಯಾರಿಗಳು ಇರಬೇಕು. ಇಲ್ಲಿ ಸುಸ್ಥಿತಿಯಲ್ಲಿರೋ ಹಿಮಾಲಯ, ಬಿಎಂ ಡಬ್ಲ್ಕೂ. ಕವಾಸಕಿ ಹೀಗೆ ಹಲವು ಬಗೆಯ ಲಕ್ಷಾಂತರ ಬೆಲೆಬಾಳೋ ಬೈಕ್ಗಳ ಮೇಲೆ ಇವರು ಸವಾರಿ ಮಾಡಲಿದ್ದಾರೆ. ಜೊತೆಗೆ ಈ ಸುದೀರ್ಘ ಪ್ರಯಾಣಕ್ಕಾಗಿ ಇವರು ಅತ್ಯಾಧುನಿಕ ತಂತ್ರಜ್ಞಾನವನ್ನು ಅಳವಡಿಸಿಕೊಂಡಿದ್ದಾರೆ. ತಾವು ಹೋದ ಮಾರ್ಗದಲ್ಲೆಲ್ಲಾ ಸುಂದರ ತಾಣಗಳ ಚಿತ್ರೀಕರಣಕ್ಕಾಗಿ ಹೆಲ್ಮೆಟ್ ಕ್ಯಾಮೆರಾ ಅಳವಡಿಸಿಕೊಂಡಿದ್ದಾರೆ. ಇಷ್ಟೇ ಅಲ್ಲದೆ ಯಾವುದೇ ಮೊಬೈಲ್ ನೆಟ್ವರ್ಕ್ ಇಲ್ಲದೆ, ಮೊಬೈಲ್ ಇಲ್ಲದೆಯೂ ಒಂದು ಕಿಲೋಮೀಟರ್ ವ್ಯಾಪ್ತಿಯವರೆಗೆ ಒಬ್ಬರನ್ನೊಬ್ಬರು ಸಂಪರ್ಕಿಸಬಲ್ಲ, ಬ್ಲೂ ಟೂತ್ ಡಿವೈಸ್ನ್ನು ಹೆಲ್ಮೆಟ್ಗೆ ಅಳವಡಿಸಲಾಗಿದ್ದು, ಒಬ್ಬರ ಹಿಂದೆ ಒಬ್ಬರು ಸಾಗೋವಾಗ ಯಾರಿಗಾದ್ರು ಸಮಸ್ಯೆಯಾದ್ರೆ ಪರಸ್ಪರ ಮಾತನಾಡಿಕೊಳ್ಳೋ ತಂತ್ರಜ್ಞನವನ್ನು ಈ ಪ್ರಯಾಣದಲ್ಲಿ ಬಳಸಿಕೊಳ್ತಿರೋ ಈ ಯುವಕರ ತಂಡ ಅಗತ್ಯ ತಯಾರಿಗಳೊಂದಿಗೆ ಸಾಗಿ ತಮ್ಮ ಗುರಿ ತಲುಪೋ ಹಂಬಲದೊಂದಿಗೆ ಹೊರಟಿದ್ದಾರೆ.
ಒಟ್ಟಿನಲ್ಲಿ ದೇಶದೊಳಗೆ ನಾವು ಸುರಕ್ಷಿತವಾಗಿದ್ದೀವಿ ಎಂದರೆ ನಮ್ಮನ್ನ ಕಾಯೋ ಸೈನಿಕರು ತಮ್ಮಪ್ರಾಣ ಪಣಕ್ಕಿಟ್ಟು ದೇಶದ ಗಡಿಯಲ್ಲಿ ಹಗಲಿರುಳೆನ್ನದೆ ಪಹರೆ ಕಾಯುತ್ತಾರೆ. ಯಾವುದೇ ಶತ್ರುಪಡೆ ನಮ್ಮ ದೇಶದ ಒಂದು ಹುಲ್ಲುಕಡ್ಡಿಯನ್ನು ಅಲುಗಾಡಿಸಲು ಬಿಡದೆ ಗೋಡೆಗಳಂತೆ ನಿಂತು ತಮ್ಮ ಜೀವ ಒತ್ತೆಯಿಟ್ಟು ನಮ್ಮನ್ನ ಕಾಯುತ್ತಾರೆ ಅವರ ಪರಿಶ್ರಮ, ಅವರ ಛಲ, ಅವರ ಧೈರ್ಯ ಸಾಹಸಗಳನ್ನ ಕಣ್ಣಾರೆ ಕಾಣೊದು ನಿಜಕ್ಕೂ ಒಂದು ಸ್ಪೂರ್ತಿದಾಯಕ ಕ್ಷಣ ಅದಕ್ಕಾಗಿ ಗಡಿಗಳತ್ತ ಬೈಕ್ ಏರಿ ಹೊರಟಿರೋ ಈ ಯುವಕರ ತಂಡಕ್ಕೆ ಶುಭವಾಗಲಿ ಎನ್ನೋದೆ ಎಲ್ಲರ ಹಾರೈಕೆ.
ವರದಿ: ಮಂಜುನಾಥ್-ಕೆ.ಬಿ ಟಿವಿ 9 ಹಾಸನ
ರಾಜ್ಯದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.