ಗೋಮ್ಮಟೇಶ್ವರನ ಬಗ್ಗೆ ಅವಹೇಳನಾಕಾರಿ ಹೇಳಿಕೆ: ವಿಕೃತ ಮನಸಿನ ಮಾತು ಎಂದ ಭಟ್ಟಾರಕ ಸ್ವಾಮೀಜಿ
ಮತೀಯವಾಗಿ ಇತರ ಧರ್ಮಗಳ ಬಗ್ಗೆಯೂ ಸಹ ಅವಹೇಳನ ಸಂದೇಶಗಳನ್ನು ಬಿತ್ತರಿಸುವ ಪ್ರಯತ್ನಗಳು ನಡೆಯುತ್ತಿವೆ. ಮುಂದಿನ ದಿನಗಳಲ್ಲಿ ಇಂಥ ಘಟನೆಗಳು ನಡೆಯದಂತೆ ಕ್ರಮ ಜರುಗಿಸಬೇಕೆಂದು ಅವರು ಆಗ್ರಹಿಸಿದರು.
ಹಾಸನ: ಭಗವಾನ್ ಗೊಮ್ಮಟೇಶ್ವರನ (Gommateshwara Swamy) ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿರುವುದನ್ನು ಶಿವಮೊಗ್ಗ ಜಿಲ್ಲೆಯ ಶ್ರೀಕ್ಷೇತ್ರ ಹೊಂಬುಜ ಜೈನ ಮಠದ ದೇವೇಂದ್ರಕೀರ್ತಿ ಭಟ್ಟಾರಕ ಪಟ್ಟಾಚಾರ್ಯ ಸ್ವಾಮೀಜಿ ತೀವ್ರವಾಗಿ ಖಂಡಿಸಿದ್ದಾರೆ. ಗೊಮ್ಮಟೇಶ್ವರನ ಬಗ್ಗೆ ವಿಕೃತ ಮನಸ್ಸಿನಿಂದ ಮಾತನಾಡುವುದು ತಪ್ಪು. ಮುಂದೆ ಇಂಥ ಘಟನೆಗಳು ನಡೆಯದಂತೆ ಸರ್ಕಾರ ಕ್ರಮಕೈಗೊಳ್ಳಲಿ. ಅವಹೇಳನಕಾರಿ ಹೇಳಿಕೆ ನೀಡಿದ ನ್ಯೂ ಇಂಡಿಯನ್ ಕಾಂಗ್ರೆಸ್ ಅಧ್ಯಕ್ಷ ಅಯೂಬ್ ಖಾನ್ ವಿರುದ್ಧ ಕಠಿಣ ಕ್ರಮ ಅಗತ್ಯ ಎಂದು ಅವರು ಚನ್ನರಾಯಪಟ್ಟಣ ತಾಲ್ಲೂಕು ಶ್ರವಣಬೆಳಗೊಳದಲ್ಲಿ ತಿಳಿಸಿದರು. ಶಾಂತಿಯ ಪ್ರತಿರೂಪ ಗೊಮ್ಮಟೇಶ್ವರ ಸ್ವಾಮಿ ಬಗ್ಗೆ ಅವಹೇಳನಕಾರಿಯಾಗಿ ಕೆಲವರು ಮಾತನಾಡುತ್ತಿದ್ದಾರೆ ಬಾಹುಬಲಿ ಸ್ವಾಮಿಯು ಕೇವಲ ಜೈನರಿಗೆ ಮಾತ್ರ ಪವಿತ್ರ ಮೂರ್ತಿ ಮಾತ್ರ ಅಲ್ಲ. ಚಕ್ರವರ್ತಿಯಾದ ಭರತನನ್ನು ಗೆದ್ದವರು, ಈ ದೇಶದಲ್ಲೇ ಹುಟ್ಟಿದ ಮಹಾಪುರುಷ. ಇಂಥವರ ಬಗ್ಗೆ ಸರಿಯಾಗಿ ತಿಳಿಯದೆ ವಿಕೃತ ಮನಸ್ಸಿನಿಂದ ಮಾತಾಡೋದು ತಪ್ಪು. ಮತೀಯವಾಗಿ ಇತರ ಧರ್ಮಗಳ ಬಗ್ಗೆಯೂ ಸಹ ಅವಹೇಳನ ಸಂದೇಶಗಳನ್ನು ಬಿತ್ತರಿಸುವ ಪ್ರಯತ್ನಗಳು ನಡೆಯುತ್ತಿವೆ. ಮುಂದಿನ ದಿನಗಳಲ್ಲಿ ಇಂಥ ಘಟನೆಗಳು ನಡೆಯದಂತೆ ಕ್ರಮ ಜರುಗಿಸಬೇಕೆಂದು ಅವರು ಆಗ್ರಹಿಸಿದರು.
ಸಿನಿಮಾಗಳಲ್ಲೇ ಆಗಲಿ, ಸಾಮಾಜಿಕ ಮಾದ್ಯಮಗಳಲ್ಲೇ ಆಗಲಿ ಯಾವುದೇ ಧರ್ಮದ ದೇವರುಗಳ ನಿಂದನೆ ಆಗಬಾರದು. ಸಿನಿಮಾಗಳಲ್ಲಿ ವ್ಯಂಗ್ಯವಾಗಿ ಬಳಸಿಕೊಳ್ಳುವ ಪ್ರಯತ್ನಗಳಿಗೂ ಕಡಿವಾಣ ಬೀಳಬೇಕು. ಈ ಬಗ್ಗೆ ಚಲನಚಿತ್ರ ವಾಣಿಜ್ಯ ಮಂಡಳಿ, ಸೆನ್ಸಾರ್ ಬೋರ್ಡ್ ಮತ್ತು ಕನ್ನಡ ಸಾಹಿತ್ಯ ಪರಿಷತ್ಗಳು ತಮ್ಮ ಅಭಿಪ್ರಾಯವನ್ನು ತಿಳಿಸಬೇಕು. ಇತಿಹಾಸ ತಿಳಿಯದೆ ಬೇಕಾಬಿಟ್ಟಿಯಾಗಿ ನಿಂದಿಸುವ ಪ್ರವೃತ್ತಿಗೆ ಕಡಿವಾಣ ಹಾಕಬೇಕು ಎಂದು ಒತ್ತಾಯಿಸಿದರು.
ಇತ್ತೀಚೆಗೆ ಬಾಹುಬಲಿ ಸ್ವಾಮಿ ಬಗ್ಗೆ ಮೈಸೂರಿನ ಮಾಜಿ ಕಾರ್ಪೊರೇಟರ್ ನ್ಯೂ ಇಂಡಿಯನ್ ಕಾಂಗ್ರೆಸ್ ಅಧ್ಯಕ್ಷ ಆಯೂಬ್ ಖಾನ್ ಆಡಿದ ನಿಂದನಾತ್ಮಕ ಹೇಳಿಕೆಯಿಂದ ನಮಗೆ ನೋವಾಗಿದೆ. ನಿಂದನೆ ಮಡಿರುವವರ ಬಗ್ಗೆ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕು. ಒಬ್ಬರಿಗೆ ಸರಿಯಾದ ರೀತಿಯಲ್ಲಿ ಸಂದೇಶ ಮುಟ್ಟಿಸಿದರೆ ಮುಂದೆ ಮಾತನಾಡುವವರು ಯೊಚಿಸುತ್ತಾರೆ. ಶಾಂತಿ ಸೌಹಾರ್ದಕ್ಕೆ ನೆಲೆಯಾದ ನಮ್ಮ ಭೂಮಿಯಲ್ಲಿ ಅದನ್ನು ಕಾಪಾಡಲು ಎಲ್ಲರೂ ಸಹಕರಿಸಬೇಕು ಎಂದು ಮನವಿ ಮಾಡಿದರು.
ಡಿಸಿ ಕಚೇರಿ ಎದುರು ಧರಣಿ
ಭಗವಾನ್ ಬಾಹುಬಲಿ ಸ್ವಾಮಿ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿರುವ ಮೈಸೂರಿನ ಮಾಜಿ ಕಾರ್ಪೊರೇಟರ್ ಅಯೂಬ್ ಖಾನ್ ವಿರುದ್ಧ ಜೈನ ಸಮುದಾಯದ ನೂರಾರು ಜನರು ಘೋಷಣೆ ಕೂಗುತ್ತಾ ಪ್ರತಿಭಟನೆ ನಡೆಸಿ, ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ನಡೆಸಿದರು. ಜೈನ ಧರ್ಮದ ಬಗ್ಗೆ ಅವಹೇಳನ ಮಾಡಿದವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕೆಂದು ಒತ್ತಾಯಿಸಿದರು. ವಿನಾಕಾರಣ ತಮ್ಮ ಸಮುದಾಯದ ಬಗ್ಗೆ ಅವಹೇಳನ ಮಾಡಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿ, ತಮ್ಮ ಆಕ್ರೋಶ ಹೊರಹಾಕಿದರು.
ಇದನ್ನೂ ಓದಿ: ಗೊಮ್ಮಟೇಶ್ವರ ಮೂರ್ತಿ ಬಗ್ಗೆ ಅವಹೇಳನಕಾರಿ ಹೇಳಿಕೆ: ಆಯೂಬ್ ಖಾನ್ ವಿರುದ್ಧ ಮೈಸೂರು, ಮಂಡ್ಯದಲ್ಲಿ ದೂರು ದಾಖಲಿಸಿದ ಜೈನ ಸಮಾಜ
ಇದನ್ನೂ ಓದಿ: ಕಲಬುರಗಿ ಮತ್ತು ಜೇವರ್ಗಿ ತಾಲ್ಲೂಕು ಕೇಂದ್ರಗಳಲ್ಲಿ ವಿವಿಧ ಮುಸ್ಲಿಂ ಸಂಘಟನೆಗಳಿಂದ ಹಿಜಾಬ್ ಬೆಂಬಲಿಸಿ ಪ್ರತಿಭಟನೆ