PSI Recruitment Scam: ಅಕ್ರಮದಲ್ಲಿ ಶಾಮೀಲಾಗಿ ಅಭ್ಯರ್ಥಿಗೆ ಕೆಲಸ ಕೊಡಿಸಿದ್ದ ಚನ್ನರಾಯಪಟ್ಟಣ ಪುರಸಭೆ ಸದಸ್ಯ ಬಂಧನ
ಪಿಎಸ್‌ಐ ನೇಮಕಾತಿ ಹಗರಣದ ಆರೋಪಿ ಶಶಿಧರನನ್ನು ವಿಚಾರಣೆಗಾಗಿ 10 ದಿನಗಳ ಅವಧಿಗೆ ಪೊಲೀಸ್ ಕಸ್ಟಡಿಗೆ ಪಡೆಯಲಾಗಿದೆ.
ಹಾಸನ: ಪಿಎಸ್‌ಐ ನೇಮಕಾತಿ ಹಗರಣಕ್ಕೆ ಸಂಬಂಧಿಸಿದಂತೆ ಚನ್ನರಾಯಪಟ್ಟಣ ಪುರಸಭೆಯ ಹಾಲಿ ಸದಸ್ಯ ಸಿ.ಎನ್.ಶಶಿಧರ್ ಅವರನ್ನು ಸಿಐಡಿ ಅಧಿಕಾರಿಗಳು ಬಂಧಿಸಿದ್ದಾರೆ. ಶಶಿಧರನನ್ನು ವಿಚಾರಣೆಗಾಗಿ 10 ದಿನಗಳ ಅವಧಿಗೆ ಪೊಲೀಸ್ ಕಸ್ಟಡಿಗೆ ಪಡೆಯಲಾಗಿದೆ. ಪಿಎಸ್‌ಐ ಹುದ್ದೆಗೆ ಆಯ್ಕೆಯಾಗಿದ್ದ ಬೆಕ್ಕ ಗ್ರಾಮದ ವೆಂಕಟೇಶ್ ಅವರಿಗೆ ಕೆಲಸ ಪಡೆಯಲು ಡೀಲ್ ಮಾಡಿಸಿದ್ದ ಆರೋಪದ ಮೇಲೆ ಶಶಿಯನ್ನು ಬಂಧಿಸಲಾಗಿದೆ. ಈ ಹಿಂದೆ ಜೆಡಿಎಸ್ನಲ್ಲಿದ್ದ ಶಶಿ, ನಂತರದ ದಿನಗಳಲ್ಲಿ ಜೆಡಿಎಸ್ ತೊರೆದು ಬಿಜೆಪಿ ನಾಯಕರ ಜೊತೆಗೆ ಸಖ್ಯ ಬೆಳೆಸಿಕೊಂಡರು.
ಶಶಿ ಸಂಬಂಧಿಯೂ ಆಗಿರುವ ಬೆಕ್ಕ ಗ್ರಾಮ ಪಂಚಾಯಿತಿಯ ಅಧ್ಯಕ್ಷ ಕೇಶವಮೂರ್ತಿ ಅವರನ್ನು ಮೂರು ದಿನಗಳ ಹಿಂದೆ ಬಂಧಿಸಲಾಗಿತ್ತು. ನಂತರ ಪಿಎಸ್‌ಐ ಆಗಿ ಆಯ್ಕೆ ಆಗಿದ್ದ ವೆಂಕಟೇಶ್ ಮತ್ತು ಆತನ ತಂದೆ ಚಂದ್ರಶೇಖರ್ ಅವರನ್ನು ಬಂಧಿಸಲಾಗಿತ್ತು. ಪ್ರಭಾವಿಗಳು ಮತ್ತು ಪೊಲೀಸ್ ಅಧಿಕಾರಿಗಳ ಜೊತೆ ಸಂಬಂಧ ಹೊಂದಿ ಡೀಲ್ ಕುದುರಿಸಿರುವ ಆರೋಪದ ಮೇಲೆ ಶಶಿಯನ್ನು ಸಿಐಡಿ ಅಧಿಕಾರಿಗಳು ಬಂಧಿಸಿದ್ದಾರೆ. ಶಶಿ ವಿಚಾರಣೆ ನಂತರ ಮತ್ತಷ್ಟು ವಿಚಾರ ಬಹಿರಂಗಗೊಳ್ಳುವ ಸಾಧ್ಯತೆಯಿದೆ.
ಪಿಡಬ್ಲ್ಯುಡಿ ಪರೀಕ್ಷೆ ಅಕ್ರಮದಲ್ಲಿಯೂ ರುದ್ರಗೌಡ ಕಿಂಗ್ಪಿನ್
ಪಿಎಸ್‌ಐ ಹುದ್ದೆಗಳ ನೇಮಕಾತಿ ಅಕ್ರಮದಲ್ಲಿ ಭಾಗಿಯಾಗಿರುವ ಆರೋಪ ಹೊತ್ತಿರುವ ರುದ್ರಗೌಡ ಪಾಟೀಲ್ ಈ ಹಿಂದೆ ನಡೆದಿದ್ದ ಪಿಡಬ್ಲ್ಯುಡಿ ನೇಮಕಾತಿ ಅಕ್ರಮದಲ್ಲಿಯೂ ಮುಖ್ಯ ಪಾತ್ರ ವಹಿಸಿದ್ದ ಸಂಗತಿ ಬೆಳಕಿಗೆ ಬಂದಿದೆ. ಈ ಸಂಬಂಧ ಕಳೆದ ಡಿಸೆಂಬರ್ 14ರಂದು ಬೆಂಗಳೂರಿನ ಅನ್ನಪೂರ್ಣೇಶ್ವರಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪಿಡಬ್ಲ್ಯುಡಿ ನೇಮಕಾತಿ ಅಕ್ರಮ ಪ್ರಕರಣದಲ್ಲಿ ರುದ್ರಗೌಡ 7ನೇ ಆರೋಪಿಯಾಗಿದ್ದ. ಈ ಸಂಬಂಧ ಬೆಂಗಳೂರಿನ ಸೇಂಟ್ಜಾನ್ಸ್ ಶಾಲೆಯ ಸಿಬ್ಬಂದಿ ದೂರು ನೀಡಿದ್ದರು.
ಅಭ್ಯರ್ಥಿಯೊಬ್ಬ ಬ್ಲೂಟೂತ್ ಬಳಸಿ ಪರೀಕ್ಷೆ ಬರೆಯಲು ಯತ್ನಿಸಿದ್ದ ಸಂದರ್ಭದಲ್ಲಿ ಸಿಕ್ಕಿಹಾಕಿಕೊಂಡ ನಂತರ ಪ್ರಕರಣ ಬೆಳಕಿಗೆ ಬಂದಿತ್ತು. ಅನೇಕರಿಗೆ ಅಕ್ರಮವಾಗಿ ಪರೀಕ್ಷೆ ಬರೆಸಿರುವ ರುದ್ರಗೌಡನಿಗೆ ಇದೀಗ ಕೇಸ್ ರೀ ಓಪನ್ ಆದ ಹಿನ್ನೆಲೆಯಲ್ಲಿ ಹೊಸ ಸಂಕಷ್ಟ ಎದುರಾಗಿದೆ. ಬೆಂಗಳೂರಿನ ಅನ್ನಪೂರ್ಣೇಶ್ವರಿ ನಗರ ಠಾಣೆ ಪೊಲೀಸರು ರುದ್ರಗೌಡನನ್ನು ವಶಕ್ಕೆ ಪಡೆದುಕೊಳ್ಳಲು ಕಲಬುರಗಿಗೆ ಬಂದಿದ್ದಾರೆ. ಸದ್ಯ ಪಿಎಸ್‌ಐ ಅಕ್ರಮ ನೇಮಕಾತಿ ಅಕ್ರಮದ ಆರೋಪ ಹೊತ್ತಿರುವ ರುದ್ರಗೌಡ ಜೈಲು ಸೇರಿದ್ದಾರೆ.
ಇದನ್ನೂ ಓದಿ: ಪಿಎಸ್‌ಐ ನೇಮಕಾತಿ ಅಕ್ರಮ: ಬಂಧಿತ ಸಿಪಿಐ ಆನಂದ್ PSI ಪರೀಕ್ಷೆ ಬಳಿಕ ಬರೋಬ್ಬರಿ 22 ಎಕರೆ ಜಮೀನು ಖರೀದಿ ಮಾಡಿದ್ದ
Published On - 8:47 am, Tue, 10 May 22