ಹಾಸನ, ಡಿಸೆಂಬರ್ 27: ಕೋಟಿ ಕೋಟಿ ಜನರ ಪ್ರೀತಿಯ ದಸರಾ ಆನೆ ಅರ್ಜುನ (Arjuna Elephant) ಅಗಲಿ ಒಂದು ವರ್ಷ ಕಳೆದಿದೆ. ಆದರೆ, ಅರ್ಜುನನ ಮೇಲಿನ ಅಭಿಮಾನ, ಪ್ರೀತಿ ಮಾತ್ರ ಇನ್ನೂ ಕಡಿಮೆಯಾಗಿಲ್ಲ. ಕಾಡಾನೆ ಸೆರೆ ಕಾರ್ಯಾಚರಣೆಯಲ್ಲಿ ಕಾಡಿನಲ್ಲಿ ವೀರ ಮರಣ ಹೊಂದಿದ ಅರ್ಜುನನಿಗೆ ಸ್ಮಾರಕ ನಿರ್ಮಾಣವಾಗಬೇಕೆಂಬ ಅಭಿಮಾನಿಗಳ ಕೋರಿಕೆ ಕಡೆಗೂ ಈಡೇರಿದೆ. ಅರ್ಜುನನ ಆಕರ್ಷಕವಾದ ಪುತ್ಥಳಿ ನಿರ್ಮಾಣವಾಗಿದೆ. ಕಲಾವಿದ ಧನಂಜಯ್ ಪಡು ಅವರ ಕೈ ಚಳಕಕ್ಕೆ ಜನರು ವ್ಹಾವ್ಹಾ ಎಂದಿದ್ದಾರೆ. ಅರ್ಜುನನ ಸಮಾಧಿ ಮೇಲೆ ಪುತ್ಥಳಿ ಪ್ರತಿಷ್ಠಾಪನೆಗೆ ದಿನಗಣನೆ ಆರಂಭವಾಗಿದೆ. ಅಂತಿಮ ಹಂತದ ನಿರ್ಮಾಣ ಕಾರ್ಯ ನಡೆದಿದೆ.
ಅರ್ಜುನ ಪ್ರಾಣ ಬಿಟ್ಟ ಸ್ಥಳದಲ್ಲೇ ಸಮಾಧಿ ಮಾಡಲಾಗಿದೆ. ಸಮಾಧಿ ಮೇಲೆ ಸ್ಮಾರಕ ನಿರ್ಮಾಣವಾಗಬೇಕೆನ್ನುವ ಕೋಟಿ ಕೋಟಿ ಅಭಿಮಾನಿಗಳ ಒತ್ತಾಯಕ್ಕೆ ಸರ್ಕಾರ ಮಣಿದಿದ್ದು, ಬಳ್ಳೆ ಆನೆ ಶಿಬಿರ ಮತ್ತು ಸಮಾಧಿ ಸ್ಥಳದಲ್ಲಿ ಸ್ಮಾರಕ ನಿರ್ಮಾಣಕ್ಕೆ ತೀರ್ಮಾನ ಮಾಡಿದೆ. ಈ ಕಾರ್ಯ ಆರಂಭವಾಗಿದೆ. ಅರ್ಜುನ ಮಡಿದು ವರ್ಷ ಕಳೆದರೂ ಸ್ಮಾರಕ ಪೂರ್ಣಗೊಂಡಿಲ್ಲ ಎಂದು ಆಕ್ರೋಶ ಕೂಡ ವ್ಯಕ್ತವಾಗಿತ್ತು. ಇದೀಗ ಸ್ಮಾರಕ ನಿರ್ಮಾಣ ಕಾರ್ಯ ಪೂರ್ಣಗೊಂಡಿದ್ದು, ಉದ್ಘಾಟನೆಗೆ ದಿನಗಣನೆ ಆರಂಭವಾಗಿದೆ.
ಇದನ್ನೂ ಓದಿ: ಕಾಡಾನೆ ಸೆರೆ ಕಾರ್ಯಾಚರಣೆ ವೇಳೆ ಅಂಬಾರಿ ಅರ್ಜುನ ಆನೆ ಹುತಾತ್ಮ ಪ್ರಕರಣ; ತನಿಖೆ ಆರಂಭಿಸಿದ ತನಿಖಾ ತಂಡ
9.8 ಅಡಿ ಎತ್ತರ 12.4 ಅಡಿ ಉದ್ದದ ಅರ್ಜುನನ ಪುತ್ಥಳಿ ನಿರ್ಮಾಣ ಮಾಡಲಾಗಿದೆ. ಎರಡೂವರೆ ತಿಂಗಳು ಮೈಸೂರು ಜಿಲ್ಲೆಯ ಬಳ್ಳೆ ಸಾಕಾನೆ ಶಿಬಿರದಲ್ಲಿ ದಕ್ಷಿಣ ಕನ್ನಡದ ಶಿಲ್ಪಿ ಧನಂಜಯ್ ಪಡು ಅವರ ನೇತೃತ್ವದ ತಂಡ ಶ್ರಮವಹಿಸಿ ಪ್ರತಿಮೆ ನಿರ್ಮಿಸಿದೆ. ಅರ್ಜುನನ ಸಮಾಧಿ ಮೇಲೆ ಪುತ್ಥಳಿಯನ್ನು ನಿಲ್ಲಿಸಲಾಗಿದ್ದು ಅಂತಿಮ ಹಂತದ ನಿರ್ಮಾಣ ಕಾರ್ಯ ನಡೆಯುತ್ತಿದೆ.
ಅರ್ಜುನ ಕರ್ನಾಟಕದಲ್ಲಿ ಕೋಟಿ ಕೋಟಿ ಅಭಿಮಾನಿಗಳನ್ನ ಹೊಂದಿದ್ದ ಆನೆ, ವಿಶ್ವವಿಖ್ಯಾತ ಮೈಸೂರು ದಸರಾದಲ್ಲಿ 8 ಬಾರಿ ಚಾಮುಂಡೇಶ್ವರಿಯನ್ನು ಹೊತ್ತು ಮೆರೆಸಿದ್ದನು. ಅರ್ಜುನನ ಸೌಮ್ಯ ಸ್ವಭಾವ, ಕಾಡಾನೆ ಕಾರ್ಯಾಚರಣೆಯಲ್ಲಿ ಅರ್ಜುನನ ಶೌರ್ಯ ನಾಡು ಹೆಮ್ಮೆಪಡುವಂತಿತ್ತು. ಹಾಗಾಗಿಯೇ ಎಲ್ಲೇ ಕಾಡಾನೆ ಸೆರೆ ಕಾರ್ಯಾಚರಣೆ ನಡೆದರೂ ಅಲ್ಲಿ ಅರ್ಜುನನದೇ ನೇತೃತ್ವ ಇರುತ್ತಿತ್ತು.
ಆದರೆ, ಡಿಸೆಂಬರ್ 4 ರಂದು ಮಾತ್ರ ಅರ್ಜುನನ ಆಯಸ್ಸು ಮುಗಿದಿತ್ತು. ಬಲಿಷ್ಠ ಕಾಡಾನೆ ಜೊತೆಗೆ ವೀರಾವೇಶದಿಂದ ಹೊರಾಡಿದ ಅರ್ಜುನ ತಾನು ಮಡಿದು ಹತ್ತಾರು ಜನರ ಪ್ರಾಣ ಉಳಿಸಿದ್ದನು. ರಣರಂಗದಲ್ಲಿ ಹೋರಾಡುತ್ತಲೇ ಹುತಾತ್ಮನಾದನು. ಅರ್ಜುನನ ಸಾವಿಗೆ ಕೋಟಿ ಕೋಟಿ ಕನ್ನಡಿಗರು ಕಂಬನಿ ಮಿಡಿದಿದ್ದರು. ಅಭಿಮಾನಿಗಳ ಒತ್ತಾಯದಿಂದ ಹಾಸನ ಹಾಗೂ ಮೈಸೂರಿನ ಬಳ್ಳೆಯಲ್ಲಿ ಸ್ಮಾರಕ ನಿರ್ಮಾಣಕ್ಕೆ ಸರ್ಕಾರ ತೀರ್ಮಾನ ಮಾಡಿತ್ತು.
ಅರ್ಜುನ ಮೃತಪಟ್ಟ ದಿನವೇ ಸ್ಮಾರಕ ಉದ್ಘಾಟನೆಗೆ ದಿನಾಂಕ ನಿಗದಿ ಮಾಡಲಾಗಿತ್ತಾದರೂ ಕೂಡ ಕಾಮಗಾರಿ ಮುಗಿಯದ ಕಾರಣ ಕಾರ್ಯಕ್ರಮ ಮುಂದೂಡಲಾಗಿತ್ತು. ಈಗ ಪುತ್ಥಳಿ ನಿರ್ಮಾಣ ಕಾರ್ಯ ಬಹುತೇಕ ಮುಗಿದಿದೆ. ಕಾಡಿನ ಮದ್ಯದಲ್ಲಿ ಸ್ಕಾರಕ ನಿರ್ಮಾಣ ಮಾಡಿರುವುದರಿಂದ ಕಾಡಾನೆಗಳ ಹಾವಳಿ ಆತಂಕ ಇದ್ದೇ ಇದೆ. ಹಾಗಾಗಿಯೇ ಸ್ಮಾರಕದ ಸುತ್ತ ಆನೆ ಕಂದಕ, ಸೋಲಾರ್ ಬೇಲಿಯನ್ನು ಅಳವಡಿಸಿ ಸ್ಮಾರಕಕ್ಕೆ ಸುರಕ್ಷತೆ ಒದಗಿಸಲಾಗಿದೆ. ಅರ್ಜುನನ ಉದ್ದ ಎತ್ತರ, ಅರ್ಜುನನಿಗಿದ್ದ ದಂತದದಷ್ಟೇ ಗಾತ್ರದ ಆಕರ್ಷಕ ದಂತಗಳು, ಥೇಟ್ ಅರ್ಜುನನೇ ಬಂದು ಕಾಡಿನ ನಡುವೆ ನಿಂತಿದ್ದಾನೇನೋ ಎಂದು ಭಾಸವಾಗುವಂತ ವಿಸ್ಮಯಕಾರಿ ರೀತಿಯಲ್ಲಿ ಪುತ್ಥಳಿ ಮೂಡಿ ಬಂದಿದೆ.
ಕೋಟಿ ಕೋಟಿ ಜನರ ಅಭಿಮಾನದ ಅರ್ಜುನನ ಪುತ್ಥಳಿ ನಿರ್ಮಾಣದ ಪುಣ್ಯ ಕಾರ್ಯ ನಮಗೆ ಸಿಕ್ಕಿದ್ದು ಪುಣ್ಯ ಎಂದು ಕಲಾವಿದರ ಅಭಿಪ್ರಾಯಪಟ್ಟಿದ್ದಾರೆ.
ಒಟ್ಟಿನಲ್ಲಿ ಅರ್ಜುನ ಮಡಿದ ಸ್ಥಳದಲ್ಲೇ ಸ್ಮಾರಕ ನಿರ್ಮಾಣವಾಗಬೇಕು ಎನ್ನುವ ಕೋಟಿ ಕೋಟಿ ಅಭಿಮಾನಿಗಳ ಕೋರಿಗೆ, ಬೇಡಿಕೆ ಈಡೇರುವ ಸಮಯ ಬಂದಿದೆ. ಹತ್ತಾರು ಗೊಂದಲ, ಪ್ರಶ್ನೆಗಳ ನಡುವೆ ಅರ್ಜುನನ ಆಕರ್ಷಕ ಮೂರ್ತಿ ಸಿದ್ದಗೊಂಡಿದ್ದು, ಇನ್ನೂ ಕೆಲವೇ ದಿನಗಳಲ್ಲಿ ಸ್ಮಾರಕ ಸಾರ್ವಜನಿಕರ ವೀಕ್ಷಣೆಗೆ ಮುಕ್ತವಾಗಲಿದೆ. ಅರ್ಜುನನ ಸಮಾಧಿಗೆ ಬರುವ ಜನರಿಗಾಗಿ ಅಗತ್ಯ ಮೂಲಭೂತ ಸೌಲಭ್ಯ ನೀಡುವ ಕೆಲಸ ಅರಣ್ಯ ಇಲಾಖೆ ಮಾಡಬೇಕಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 2:58 pm, Fri, 27 December 24