
ಹಾಸನ, ಮೇ 1: ಎತ್ತಿನಹೊಳೆ ಯೋಜನೆಗೆ (Yettinahole Project) ಇದ್ದ ಅರಣ್ಯ ಇಲಾಖೆಯ (Forest Department) ತೊಡಕು ಕೊನೆಗೂ ನಿವಾರಣೆಯಾಗಿದೆ. ಅರಣ್ಯ ಪ್ರದೇಶದಲ್ಲಿ ಕಾಲುವೆ ನಿರ್ಮಿಸಲು ಇದ್ದ ಅಡ್ಡಿಯನ್ನು ನಿವಾರಣೆ ಮಾಡುವಲ್ಲಿ ಸರ್ಕಾರ ಯಶಸ್ವಿಯಾಗಿದ್ದು, ಅರಣ್ಯ ಇಲಾಖೆಗೆ ಪರ್ಯಾಯ ಭೂಮಿ ನೀಡಲಿದೆ. ಅರಣ್ಯದಲ್ಲಿ ಕಾಲುವೆ ಸಾಗಲು ಕಡೆಗೂ ಮುಹೂರ್ತ ನಿಗದಿಯಾಗಿದೆ. ಈ ವರ್ಷದ ಮಳೆಗಾಲದಲ್ಲಿ ಅರಸೀಕೆರೆಯತ್ತ ಎತ್ತಿನಹೊಳೆ ನೀರು ಹರಿಯುವುದು ನಿಶ್ಚಿತವಾಗಿದೆ.
ಎತ್ತಿನಹೊಳೆ ಯೋಜನೆ ಆರಂಭದಲ್ಲಿ ಹಲವು ಅಪಸ್ವರಗಳಿಗೆ ಕಾರಣವಾಗಿತ್ತು. ಆದರೆ, ದಿನ ಕಳೆದಂತೆ ಯೋಜನೆ ಹಂತ ಹಂತವಾಗಿ ಯಶಸ್ಸಿನೆಡೆಗೆ ಸಾಗಿ, ಕಳೆದ ವರ್ಷ ಮೊದಲ ಹಂತದ ಯೋಜನೆಗೆ ಸರ್ಕಾರ ಚಾಲನೆಯನ್ನೂ ನೀಡಿತ್ತು. ಹೀಗಾಗಿ ಎತ್ತಿನಹೊಳೆ ನೀರು ಚಿತ್ರದುರ್ಗದ ವಾಣಿವಿಲಾಸ ಸಾಗರಕ್ಕೆ ಹರಿದದ್ದು ಈಗ ಇತಿಹಾಸ. ಆದರೆ ಚಿಕ್ಕಬಳ್ಳಾಪುರ, ಕೋಲಾರ, ತುಮಕೂರು,ಬೆಂಗಳೂರು ಗ್ರಾಮಾಂತರ ಭಾಗಕ್ಕೆ ಹರಿಯಬೇಕಾಗಿದ್ದ ನೀರಿಗೆ ಅರಣ್ಯ ಇಲಾಖೆಯ ಅನುಮತಿ ದೊರೆಯದಿರುವುದು ಅಡ್ಡಿಯಾಗಿತ್ತು. ಹಾಸನ ಬೇಲೂರು, ಅರಸೀಕೆರೆ ತಾಲ್ಲೂಕಿನ ಭಾಗದಲ್ಲಿ ಹರಡಿರೊ ಐದಳ್ಳ ಕಾವಲು ಅರಣ್ಯದಲ್ಲಿ ಸುಮಾರು 415 ಎಕರೆ ಪ್ರದೇಶದಲ್ಲಿ ಎತ್ತಿನಹೊಳೆ ಕಾಲುವೆ ನಿರ್ಮಾಣವಾಗಬೇಕಿತ್ತು. ಆದರೆ, ಅದಕ್ಕೆ ಅರಣ್ಯ ಇಲಾಖೆ ಅವಕಾಶ ನೀಡಿರಲಿಲ್ಲ.
ಇದೀಗ ಬೇಲೂರು, ಅರಸೀಕೆರೆ ತಾಲ್ಲೂಕಿನ ಹಲವು ಕಡೆ ಒಟ್ಟು 415 ಎಕರೆ ಕಂದಾಯ ಭೂಮಿಯನ್ನು ಅರಣ್ಯ ಇಲಾಖೆಗೆ ನೀಡಲಾಗಿದೆ. ಹೀಗಾಗಿ ಅರಣ್ಯ ಇಲಾಖೆಯು ಎತ್ತಿನಹೊಳೆ ಯೋಜನೆಗೆ ನಿರಾಕ್ಷೇಪಣಾ ಪತ್ರವನ್ನೂ ನೀಡಿದೆ. ಕೇಂದ್ರದ ನೋಡಲ್ ಅಧಿಕಾರಿಗಳು ಬಂದು ಪರಿಶೀಲನೆ ನಡೆಸಿದರೆ ಎಲ್ಲಾ ಪ್ರಕ್ರಿಯೆ ಪೂರ್ಣಗೊಳ್ಳಲಿದ್ದು ಯೋಜನೆಗೆ ಇದ್ದ ಅಡ್ಡಿ ನಿವಾರಣೆಯಾದಂತಾಗಿದೆ.
ಹಾಸನ ಜಿಲ್ಲೆಯ ಸಕಲೇಶಪುರ ಭಾಗದಿಂದ ಬಯಲುಸೀಮೆ ಪ್ರದೇಶಕ್ಕೆ ನೀರು ಹರಿಸೋದು ಎತ್ತಿನಹೊಳೆ ಯೋಜನೆಯ ಮುಖ್ಯ ಉದ್ದೇಶವಾಗಿದೆ. ಆರಂಭದಲ್ಲಿ 8 ಸಾವಿರ ಕೋಟಿ ರೂ. ವೆಚ್ಚದಲ್ಲಿ ಯೋಜನೆ ಜಾರಿಗೆ ಉದ್ದೇಶಿಸಲಾಗಿತ್ತು. ನಂತರ ಯೋಜನಾ ವೆಚ್ಚ 24 ಸಾವಿರ ಕೋಟಿ ರೂಪಾಯಿಗೆ ಮುಟ್ಟಿದೆ. ಬಹುತೇಕ ನೀರೆತ್ತುವ ಪ್ರದೇಶದ ಕಾಮಗಾರಿ ಮುಗಿದಿದ್ದು 8 ಫೀಡರ್ಗಳ ಮೂಲಕ ಒಟ್ಟು 24 ಟಿಎಂಸಿಯಷ್ಟು ನೀರನ್ನು ಮಳೆಗಾಲದಲ್ಲಿ ಬಯಲುಸೀಮೆ ಪ್ರದೇಶಕ್ಕೆ ಹರಿಸಬಹುದು ಎಂಬ ಲೆಕ್ಕಾಚಾರ ಇದೆ.
ಇದನ್ನೂ ಓದಿ: Yettinahole Project: ಎತ್ತಿನಹೊಳೆ ಯೋಜನೆ ಬಗ್ಗೆ ತಿಳಿಯಲೇಬೇಕಾದ ಅಂಶಗಳು
ಒಟ್ಟಿನಲ್ಲಿ, ಇಷ್ಟು ವರ್ಷ ಕುಂಟು ನೆಪ ಹೇಳಿ ಯೋಜನೆಗೆ ಅಡ್ಡಿ ಮಾಡುತ್ತಿದ್ದ ಅರಣ್ಯ ಇಲಾಖೆ ಇದೀಗ ಅರಣ್ಯ ಭೂಮಿಯಲ್ಲಿ ನೀರಾವರಿ ಯೋಜನೆಗೆ ಅಸ್ತು ಎಂದಿದೆ. ಅರಣ್ಯ ಇಲಾಖೆಯ ಭೂಮಿ ಹಸ್ತಾಂತರ ಪ್ರಕ್ರಿಯೆ ಮುಗಿದಿದ್ದು, ಕೇಂದ್ರದ ಅಧಿಕಾರಿಗಳ ಪರಿಶೀಲನೆ ಮುಗಿದರೆ ಯೋಜನೆ ಸಾಕಾರಗೊಳ್ಳುವ ದಿನ ದೂರವಿಲ್ಲ.