Hassan News: ಗಾಂಧಿ ಶಿಲ್ಪದ ದೇಹಕ್ಕೂ ಮುಖಕ್ಕೂ ಹೋಲಿಕೆಯೇ ಇಲ್ಲ; ಗಾಂಧಿ ಭವನ ಆವರಣದ ಶಿಲ್ಪಗಳಿಗೆ ಕಲಾವಿದರ ಆಕ್ಷೇಪ
‘ನಾವು ಮಹಾತ್ಮಾ ಗಾಂಧಿ ಅವರ ಸಾವಿರಾರು ಫೋಟೊಗಳನ್ನು ನಾವು ನೋಡಿದ್ದೇವೆ. ಅವರನ್ನು ಈ ಪ್ರತಿಮೆಯ ರೂಪದಲ್ಲಿ ಒಪ್ಪಿಕೊಳ್ಳುವುದು ಕಷ್ಟವಾಗುತ್ತದೆ’ ಎಂದು ಕಲಾವಿದರು ಆಕ್ಷೇಪಿಸಿದ್ದಾರೆ.
ಹಾಸನ: ನಗರದ ಎಂ.ಜಿ.ರಸ್ತೆಯಲ್ಲಿರುವ ಗಾಂಧಿ ಭವನದಲ್ಲಿ (Hassan Gandhi Bhavan) ಗಣರಾಜ್ಯೋತ್ಸವ ದಿನದಂದು ಉದ್ಘಾಟಿಸಲೆಂದು ಇತಿಹಾಸ ಪ್ರಸಿದ್ಧ ದಂಡಿ ಯಾತ್ರೆಯ (Dandi March) ಶಿಲ್ಪಗಳನ್ನು ಸಿದ್ಧಪಡಿಸಲಾಗಿದೆ. ಆದರೆ ಈ ಪ್ರತಿಮೆಗಳ ಆಕಾರ ಮತ್ತು ಪ್ರಮಾಣಗಳು ಸರಿಯಿಲ್ಲ ಎಂದು ಕರ್ನಾಟಕದ ಹಿರಿಯ ಕಲಾವಿದರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಆಕರ್ಷಕ ಶಿಲ್ಪಕಲೆಯಿಂದ ವಿಶ್ವವಿಖ್ಯಾತವಾಗಿರುವ ಬೇಲೂರು, ಹಳೆಬೀಡು, ಶ್ರವಣಬೆಳಗೊಳದಂಥ ಐತಿಹಾಸಿಕ ಹಾಗೂ ಶಿಲ್ಪಕಲೆಗೆ ಹೆಸರುವಾಸಿಯಾಗಿರುವ ತಾಣಗಳಿರುವ ಹಾಸನದಲ್ಲಿ ಇಂಥ ಕಳಪೆ ಶಿಲ್ಪಗಳ ಪ್ರದರ್ಶನ ನಡೆಯಬಾರದು. ಮಹಾತ್ಮಾ ಗಾಂಧಿ ಅವರ ದೇಹದ ಆಕರವನ್ನು ಕಳಪೆಯಾಗಿ ರೂಪಿಸಿರುವುದು ರಾಷ್ಟ್ರಪಿತನಿಗೆ ಮಾಡಿದ ಅವಮಾನ ಎಂಬ ಹಲವು ಹಿರಿಯ ಕಲಾವಿದರ ಆಕ್ಷೇಪಗಳನ್ನು ‘ದಿ ಹಿಂದೂ’ ದಿನಪತ್ರಿಕೆ ವರದಿ ಮಾಡಿದೆ.
ಹಾಸನವೂ ಸೇರಿದಂತೆ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಗಾಂಧಿ ಭವನಗಳನ್ನು ನಿರ್ಮಿಸಲು ವಾರ್ತಾ ಮತ್ತು ಪ್ರಸಾರ ಇಲಾಖೆ ಮುಂದಾಗಿದೆ. ಭವನಗಳ ಮುಂದೆ ನಿಲ್ಲಿಸುವ ಪ್ರತಿಮೆ, ಶಿಲ್ಪಗಳಿಗಾಗಿ ಇಲಾಖೆಯು ₹ 3 ಕೋಟಿ ವೆಚ್ಚ ಮಾಡಿದೆ. ಹಾಸನದಲ್ಲಿ ನಿರ್ಮಿತ ಕೇಂದ್ರವು ಅನುಷ್ಠಾನದ ಹೊಣೆ ಹೊತ್ತುಕೊಂಡಿದೆ. ಜನವರಿ 26ರ ಗಣರಾಜ್ಯೋತ್ಸವ ದಿನದಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಗೋಪಾಲಯ್ಯ ಅವರು ಗಾಂಧಿ ಭವನವನ್ನು ಉದ್ಘಾಟಿಸಲಿದ್ದಾರೆ.
ಗಾಂಧಿ ಪ್ರತಿಮೆ ನೋಡಿ ಆಘಾತವಾಯಿತು: ಕೆಟಿ ಶಿವಪ್ರಸಾದ್
ಗಾಂಧಿ ಪ್ರತಿಮೆಯನ್ನು ನೋಡಿದ ಹಲವು ಕಲಾವಿದರು ಆಕ್ಷೇಪ ಮತ್ತು ಆಘಾತ ವ್ಯಕ್ತಪಡಿಸುತ್ತಿದ್ದಾರೆ. ಈ ಪ್ರತಿಮೆಯಲ್ಲಿ ಮುಖವು ದೇಹಕ್ಕೆ ಹೊಂದಿಕೆಯಾಗುತ್ತಿಲ್ಲ. ಒಟ್ಟಾರೆ ಶಿಲ್ಪದಲ್ಲಿ ಸಾಮರಸ್ಯ (Harmony) ಇಲ್ಲ. ಯಾರದೋ ತಲೆಯನ್ನು ಮತ್ಯಾರದೋ ದೇಹಕ್ಕೆ ಜೋಡಿಸಿದಂತೆ ಆಗಿದೆ ಎಂದು ಹಿರಿಯ ಕಲಾವಿದ ಕೆ.ಟಿ.ಶಿವಪ್ರಸಾದ್ ಆಕ್ಷೇಪಿಸಿದ್ದಾರೆ. ಶಿಲ್ಪಗಳನ್ನು ನೋಡಿದ ಹಾಸನದ ಹಲವು ಕಲಾವಿದರು ಸಹ ಇದೇ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
‘ನಾವು ಮಹಾತ್ಮಾ ಗಾಂಧಿ ಅವರ ಸಾವಿರಾರು ಫೋಟೊಗಳನ್ನು ನಾವು ನೋಡಿದ್ದೇವೆ. ಗಾಂಧಿ ಒಬ್ಬ ಜನಪ್ರಿಯ ನಾಯಕ. ಅವರನ್ನು ಈ ಪ್ರತಿಮೆಯ ರೂಪದಲ್ಲಿ ಒಪ್ಪಿಕೊಳ್ಳುವುದು ಕಷ್ಟವಾಗುತ್ತದೆ’ ಎಂಬ ವಿಜಯಪುರದ ಹಿರಿಯ ಕಲಾವಿದ ಪಿ.ಎಸ್.ಕಡೆಮನಿ ಅವರ ಹೇಳಿಕೆಯನ್ನು ‘ದಿ ಹಿಂದೂ’ ವರದಿ ಮಾಡಿದೆ.
ಪ್ರತಿಮೆ ಸಮರ್ಥಿಸಿಕೊಂಡ ಕಲಾ ಕೇಂದ್ರ
ಹಾಸನ ಗಾಂಧಿ ಭವನದಲ್ಲಿ ಗಾಂಧಿ ಪ್ರತಿಮೆ ಹಾಗೂ ಶಿಲ್ಪಕಲಾಕೃತಿಗಳನ್ನು ಸ್ಥಾಪಿಸುವ ಕಾರ್ಯ ನಿರ್ವಹಿಸಿದ್ದ ಕಲಾ ಕೌಸ್ತುಭ ಕರಕುಶಲ ಕೇಂದ್ರದ ಕಲಾವಿದರು ಈ ಕಲಾಕೃತಿಗಳನ್ನು ಸಮರ್ಥಿಸಿಕೊಂಡಿದ್ದಾರೆ. ‘ಸುಮಾರು 20 ತಿಂಗಳು ನಾವು ಕೆಲಸ ಮಾಡಿದ್ದೇವೆ. ಹಾಸನ ಜಿಲ್ಲಾಡಳಿತವೂ ನಮ್ಮ ವಿನ್ಯಾಸಗಳಿಗೆ ಅನುಮೋದನೆ ನೀಡಿದೆ’ ಎಂದು ಕೇಂದ್ರದ ಮುಖ್ಯಸ್ಥರು ಪ್ರತಿಕ್ರಿಯಿಸಿದ್ದಾರೆ.
ಇದನ್ನೂ ಓದಿ: ಗುಜರಾತ್ ಮಾದರಿಯಲ್ಲಿ ಅಭ್ಯರ್ಥಿ ಆಯ್ಕೆ: ಈ ಬಾರಿ ಹಾಸನ ಟಿಕೆಟ್ ಸಿಗುವ ಅನುಮಾನ ವ್ಯಕ್ತಪಡಿಸಿದ ಪ್ರೀತಂಗೌಡ
ಹಾಸನ ಜಿಲ್ಲೆಯ ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ
Published On - 1:36 pm, Wed, 25 January 23