ಹಾಸನ: ಪ್ರಸಿದ್ಧ ಹಾಸನಾಂಬೆ ಹಾಗೂ ಸಿದ್ದೇಶ್ವರ ಸ್ವಾಮಿ ಜಾತ್ರಾ ಮಹೋತ್ಸವ ಅ.28ರಿಂದ ನ.6ರವರೆಗೆ ನಡೆಯಲಿದೆ. ಕೊರೊನಾ ಹಿನ್ನೆಲೆಯಲ್ಲಿ ಈ ಬಾರಿ ಸರಳವಾಗಿ ಜಾತ್ರೆ ನಡೆಸಲು ಜಿಲ್ಲಾಡಳಿತ ನಿರ್ಧರಿಸಿದ್ದು, ಹಾಸನಾಂಬೆ ದರ್ಶನಕ್ಕೆ ವಿಶೇಷ ಪಾಸ್ ವ್ಯವಸ್ಥೆ ಮಾಡಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಗೋಪಾಲಯ್ಯ ಹೇಳಿದರು.
ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಹಾಸನಾಂಬೆಯ ದರ್ಶನಕ್ಕೆ ₹ 300 ಹಾಗೂ ₹ 1000 ಮುಖಬೆಲೆಯ ಟಿಕೆಟ್ ನಿಗದಿ ಮಾಡಲಾಗಿದೆ. ಮೊದಲ ಹಾಗೂ ಕೊನೆಯ ದಿನ ಹೊರತುಪಡಿಸಿ ಉಳಿದೆಲ್ಲ ದಿನಗಳಲ್ಲಿ ಸಾರ್ವಜನಿಕರ ದರ್ಶನಕ್ಕೆ ಅವಕಾಶವಿದೆ ಎಂದು ಅವರು ತಿಳಿಸಿದರು.
ಉಪ ಚುನಾವಣೆ ಕುರಿತು ಪ್ರತಿಕ್ರಿಯಿಸಿದ ಅವರು, ಮುಖ್ಯಮಂತ್ರಿ ಒಂದೇ ಜಿಲ್ಲೆಯಲ್ಲಿ ನೆಲೆಸಿರುವ ಬಗ್ಗೆ ಕೆಲವರು ಅಪಸ್ವರ ವ್ಯಕ್ತಪಡಿಸಿರುವ ಕುರಿತು ಪ್ರಸ್ತಾಪಿಸಿದ ಅವರು, ಕಾಂಗ್ರೆಸ್ ನಾಯಕರಿಗೆ ಈಗಾಗಲೇ ನಡುಕ ಶುರುವಾಗಿದೆ. ಹಾಗಾಗಿ ಹೀಗೆಲ್ಲಾ ಹೇಳಿಕೆಗಳನ್ನು ಕೊಡ್ತಿದ್ದಾರೆ. ಮುಖ್ಯಮಂತ್ರಿ ಅದೇ ಜಿಲ್ಲೆಯವರು. ಆ ಜಿಲ್ಲೆಯಲ್ಲಿ ಇರಬಾರದು ಎಂದು ಸಂವಿದಾನದಲ್ಲಿ ಬರೆದಿದ್ದಾರಾ ಎಂದು ಪ್ರಶ್ನಿಸಿದರು.
ಮುಖ್ಯಮಂತ್ರಿ ಕೇವಲ ಚುನಾವಣೆ ಉದ್ದೇಶದಿಂದ ಅಲ್ಲಿ ಇಲ್ಲ. ಅಕ್ಕಪಕ್ಕದ ಜಿಲ್ಲೆಗಳ ಅಭಿವೃದ್ಧಿ ದೃಷ್ಟಿಯಿಂದಲೂ ಅವರು ಸಂಚರಿಸುತ್ತಿದ್ದಾರೆ. ಬಿಜೆಪಿ ಬಗ್ಗೆ ಕಾಂಗ್ರೆಸ್ ನಾಯಕ ಜಮೀರ್ ಅಹ್ಮದ್ ಆಡಿರುವ ಮಾತುಗಳ ಕುರಿತು ಪ್ರತಿಕ್ರಿಯಿಸಿದ ಅವರು, ಯಾವುದಾದರು ವಿಚಾರದಲ್ಲಿ ಪದ ಬಳಕೆ ಮಾಡುವಾಗ ಬೇರೆಯವರಿಗೆ ನೋವಾಗದಂತೆ ಎಚ್ಚರವಹಿಸಬೇಕು. ಬೇರೆಯವರಿಗೆ ನೋವಾಗದಂತೆ ಮಾತಾಡೋದು ನಮ್ಮ ಸಂಸ್ಕೃತಿ ಮತ್ತು ಸಂಸ್ಕಾರ ಎಂದರು.
ನಾವು ರಾಜಕಾರಿಣಿಗಳು ಎಂಥ ಭಾಷೆ ಬಳಸುತ್ತೇವೆ ಎಂದು ರಾಜ್ಯದ ಜನರು ನೋಡುತ್ತಿರುತ್ತಾರೆ. ಅದನ್ನ ಅರ್ಥ ಮಾಡಿಕೊಂಡು ಮಾತಾಡಬೇಕು. ಗೋಪಾಲಯ್ಯ ಅವರನ್ನು ಬಿಜೆಪಿಗೆ ಕಳಿಸಿದ್ದು ನಾನೇ ಎಂಬ ಜಮೀರ್ ಹೇಳಿಕೆ ಕುರಿತು ಪ್ರತಿಕ್ರಿಯಿಸಿ, ನಾನು ಅವರು ಹಿಂದೆ ಜೆಡಿಎಸ್ನಲ್ಲಿದ್ದಾಗ ಒಳ್ಳೆ ಸ್ನೇಹಿತರಿದ್ದೆವು. ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರ ಹೋಗಬೇಕು ಎನ್ನೋದು ಅವರ ಭಾವನೆಯಾಗಿತ್ತು. ಈ ರಾಜ್ಯದಲ್ಲಿ ಅಭಿವೃದ್ಧಿ ಆಗ್ತಿಲ್ಲ ಎಂಬುದು ಅವರ ಅಸಮಾಧಾನವಾಗಿತ್ತು. ಬಿಜೆಪಿ ಬಂದರೆ ರಾಜ್ಯದ ಅಭಿವೃದ್ಧಿಗೆ ಒಳ್ಳೆಯದು ಎಂಬ ಭಾವನೆ ಅವರದ್ದಾಗಿತ್ತು ಎಂದು ಅವರು ಅಭಿಪ್ರಾಯಪಟ್ಟರು.
ಹಿಂದೆ ನಾವು ಒಳ್ಳೇ ಸ್ನೇಹಿತರಾಗಿದ್ದರಿಂದ ನಿನಗೆ ಎಲ್ಲಿ ಒಳ್ಳೆಯದಾಗುತ್ತೋ ಅಲ್ಲಿಗೆ, ಅಂದರೆ ಬಿಜೆಪಿಗೆ ಹೋಗು ಎಂದು ಅವರು ಹೇಳಿದ್ದು ನಿಜ ಎಂದು ನೆನಪಿಸಿಕೊಂಡರು. ಅವರು ಬಿಜೆಪಿಗೆ ಬಂದರೂ ನಾವು ಕರೆದುಕೊಳ್ತೀವಿ. ನಮ್ಮ ಪಕ್ಷದ ತತ್ವ ಸಿದ್ದಾಂತ ಒಪ್ಪಿ ಬಂದರೆ ವರಿಷ್ಠರು ತೀರ್ಮಾನ ಮಾಡಿ ಕರೆದುಕೊಳ್ತಾರೆ ಎಂದು ಹಾಸನದಲ್ಲಿ ಸಚಿವ ಗೋಪಾಲಯ್ಯ ಹೇಳಿದರು.
ಇದನ್ನೂ ಓದಿ: ಹಾಸನ: ವೃದ್ಧೆ ನಾಪತ್ತೆ; ತಾಯಿಯನ್ನು ಬಲವಂತವಾಗಿ ಮತಾಂತರ ಮಾಡಲಾಗಿದೆ ಎಂದು ಪುತ್ರನಿಂದ ದೂರು
ಇದನ್ನೂ ಓದಿ: ಅಪಾಯದಂಚಿನಲ್ಲಿರುವ ಮನೆ ಮಾಲೀಕರಿಗೆ ನೋಟಿಸ್ ನೀಡಿ: ಬಿಬಿಎಂಪಿ ಅಧಿಕಾರಿಗಳಿಗೆ ಸಚಿವ ಗೋಪಾಲಯ್ಯ ಸೂಚನೆ